ಕಂದಾಯ ಅಧಿಕಾರಿಗಳಿಗೆ ಛೀಮಾರಿ

ಮಂಗಳವಾರ, ಜೂಲೈ 23, 2019
20 °C
ಜಿಲ್ಲಾಧಿಕಾರಿ ವಿಜಯ್‌ ಶಂಕರ್‌ ವಿರುದ್ಧ ವಾರಂಟ್‌ ಹೊರಡಿಸಿ ವಾಪಸು

ಕಂದಾಯ ಅಧಿಕಾರಿಗಳಿಗೆ ಛೀಮಾರಿ

Published:
Updated:

ಬೆಂಗಳೂರು: ‘ಇವತ್ತು ನಮ್ಮ ನಡುವೆ ಆಲಿಬಾಬಾ ಇಲ್ಲದಿರಬಹುದು. ಆದರೆ ಚಾಲಿಸ್‌ ಚೋರ್‌ಗಳೆಲ್ಲಾ (ನಲವತ್ತು ಕಳ್ಳರು) ಕಂದಾಯ ಇಲಾಖೆ ಅಧಿಕಾರಿಗಳಾಗಿ ಉಸಿರಾಡುತ್ತಿದ್ದಾರೆ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಮಂಗಳಾರತಿ ಮಾಡಿದೆ.

ಸ್ಥಿರಾಸ್ತಿ ವ್ಯಾಜ್ಯ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್‌ ಶಂಕರ್ ಬುಧವಾರ ಬೆಳಗ್ಗೆ ಕೋರ್ಟ್‌ಗೆ ಖುದ್ದು ಹಾಜರಾಗ
ಬೇಕಿತ್ತು. ಆದರೆ, ಗೈರಾಗಿದ್ದರು. ನ್ಯಾಯಮೂರ್ತಿ ಎಸ್‌.ಎನ್‌.ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಜಯ್‌ ಶಂಕರ್ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್‌ ಹೊರಡಿಸಿತು.

ವಿಜಯ್ ಶಂಕರ್‌ ಮಧ್ಯಾಹ್ನ ಕೋರ್ಟ್‌ಗೆ ದೌಡಾಯಿಸಿದರು. ಸರ್ಕಾರದ ಪರ ವಕೀಲ ವೆಂಕಟೇಶ್‌ ಎಚ್‌.ದೊಡ್ಡೇರಿ, ವಾರಂಟ್‌ ಆದೇಶ ಹಿಂಪಡೆಯಲು ಮನವಿ ಮಾಡಿದರು.

ಇದಕ್ಕೆ ಕ್ರುದ್ಧರಾದ ನ್ಯಾಯಮೂರ್ತಿ ಸತ್ಯನಾರಾಯಣ ಅವರು, ‘ಜಿಲ್ಲಾಧಿಕಾರಿ ಇಂದು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ನ್ಯಾಯಾಂಗ ನಿಂದನೆ ಆಗುವಂತಹ ಅಂಶಗಳಿವೆ. ಆದ್ದರಿಂದ ಅವರು ಮುಂದಿನ ವಿಚಾರಣೆ ದಿನದಂದೇ ಹಾಜರಾಗಲಿ. ಬೆಳಗ್ಗೆ ಹೊರಡಿಸಿರುವ ಆದೇಶ 
ಹಿಂಪಡೆಯುವುದಿಲ್ಲ’ ಎಂದು ಗುಡುಗಿದರು.

ವಿಜಯ್‌ ಶಂಕರ್ ಅವರನ್ನು ಉದ್ದೇಶಿಸಿ, ‘ಕಂದಾಯ ಇಲಾಖೆ ಅಧಿಕಾರಿಗಳು ಜನರನ್ನು ಕಡಲೆಬೀಜ, ಹುಣಸೆಬೀಜದಂತೆ ಹುರಿದು ಮುಕ್ಕಿ ತಿನ್ನುತ್ತಿದ್ದಾರೆ. ಅವರಿಗೆ ಸ್ವಲ್ಪವೂ ಮನುಷ್ಯತ್ವವೇ ಇಲ್ಲ. ದಕ್ಷಿಣೆಕೊಡದೇ ಇದ್ದರೆ ಯಾವ ಕೆಲಸವೂ ಆಗೋದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇಂತಹ ಆದೇಶಗಳನ್ನು ಮಾಡಿ ನಾನೇನೂ ಖುಷಿಯಿಂದ ಮನೆಗೆ ಹೋಗುವುದಿಲ್ಲ. ಅಧಿಕಾರಿಗಳು ಹಣ ಮಾಡುವ ಯಂತ್ರಗಳಂತಾಗಿದ್ದಾರೆ. ಸಮಾಜದ ಇಂದಿನ ದುಃಸ್ಥಿತಿಯನ್ನು ಕಂಡು ವ್ಯಥೆಯಾಗುತ್ತಿದೆ. ಏನೊ ನಾನು ನನ್ನ ಪಾಲಿನ ಕೆಲಸ ಮಾಡುತ್ತಿದ್ದೇನೆ’ ಎಂದರು. ವಾರಂಟ್‌ ಆದೇಶ ಹಿಂಪಡೆದು ವಿಚಾರಣೆ ಮುಂದೂಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !