ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಿ ಸಭೆ: ಬಿಜೆಪಿಯಲ್ಲಿ ತುಸು ಧಗೆ

Last Updated 29 ಮೇ 2020, 19:18 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯ ಹಿರಿಯ ಶಾಸಕ ಉಮೇಶ‌ ಕತ್ತಿ ನೇತೃತ್ವದಲ್ಲಿ ಕೆಲವು ಶಾಸಕರು ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದು ಅತೃಪ್ತರ ಸಭೆಯೋ ಅಥವಾ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ನಡೆಸಿದ ಸಭೆಯೋ ಎಂಬ ಗೊಂದಲ ಪಕ್ಷದ ನಾಯಕರಲ್ಲೇ ಮೂಡಿದೆ. ಸಭೆಯ ಸುದ್ದಿ ಮಾಧ್ಯಮಗಳಲ್ಲಿ ಪ್ರಮುಖವಾಗಿ ಬಿತ್ತರವಾಗುತ್ತಿದ್ದಂತೆಸಚಿವರು ಮತ್ತು ಬಿಜೆಪಿ ಶಾಸಕರು ಈ ಕುರಿತು ವಿವಿಧ ರೀತಿಯ ಹೇಳಿಕೆಗಳನ್ನು ನೀಡಿದರು. ‘ಸರ್ಕಾರ ಸುಭದ್ರವಾಗಿದೆ, ಯಡಿಯೂರಪ್ಪನವರೇ ನಮ್ಮ ನಾಯಕರು, ಮುಂದಿನ ಮೂರುವರ್ಷ ಅವರೇ ಮುಖ್ಯಮಂತ್ರಿ’ ಎಂದು ಬಲವಾಗಿ ಸಮರ್ಥಿಸಿಕೊಂಡರು. ಬಸನಗೌಡ ಪಾಟೀಲ ಯತ್ನಾಳ ತಮ್ಮ ಅಸಮಾಧಾನ ಹೊರಹಾಕಿದರು.

ಈ ಬೆಳವಣಿಗೆ ಬೆನ್ನಲ್ಲೇ, ಯಡಿಯೂರಪ್ಪ ಅವರು ತಮ್ಮ ಆಪ್ತ ಶಾಸಕರ ಸಭೆ ಕರೆದಿದ್ದಾರೆ ಎಂಬ ಸುದ್ದಿ ಹರಿದಾಡಿತು. ತಕ್ಷಣವೇ ಟ್ವೀಟ್ ಮಾಡಿದ ಅವರು, ಅಂತಹ ಯಾವುದೇ ಸಭೆ ಕರೆದಿಲ್ಲ ಎಂದು ಸ್ಪಷ್ಟನೆ ನೀಡಿದರು. ಈ ಬೆಳವಣಿಗೆಗಳ ಬಗ್ಗೆ ಬಹಿರಂಗ ಹೇಳಿಕೆ ನೀಡದ ಯಡಿಯೂರಪ್ಪ,ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸುವಲ್ಲಿ ಮಗ್ನರಾದರು.

ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ‌ ಅಂಗಡಿ, ‘ಕತ್ತಿ ಸಹೋದರರಿಗೆ ಸಮಸ್ಯೆಗಳಿದ್ದಲ್ಲಿ ಮುಖ್ಯಮಂತ್ರಿ ಬಳಿಗೆ ಹೋಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಪಕ್ಷದ ಆಂತರಿಕ ವಿಷಯಗಳನ್ನು ಮಾಧ್ಯಮದ ಮುಂದೆ ಹೇಳಿಕೊಳ್ಳುವ ವ್ಯವಸ್ಥೆ ನಮ್ಮ ಪಕ್ಷದಲ್ಲಿಲ್ಲ’ ಎಂದಿದ್ದಾರೆ.

ಕೊಳ್ಳೇಗಾಲದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ , ‘ಲಾಕ್‌ಡೌನ್‌ನಿಂದ ಶಾಸಕರು ಪರಸ್ಪರ ಭೇಟಿಯಾಗಲು ಆಗಿರಲಿಲ್ಲ. ಈಗ ಸಭೆ ಸೇರಿದರೆ ತಪ್ಪೇನು ಇಲ್ಲ. ಅದರಿಂದ ಸರ್ಕಾರಕ್ಕೆ ಯಾವುದೇ ಸಂಕಷ್ಟ ಇಲ್ಲ. ನಮ್ಮ ನಾಯಕ ಯಡಿಯೂರಪ್ಪ ಹೇಳಿದರೆ ವಾರದಲ್ಲಿ ಕಾಂಗ್ರೆಸ್‌ನ ಐವರು ಶಾಸಕ ರಾಜೀನಾಮೆ ಕೊಡಿಸುತ್ತೇನೆ’ ಎಂದರು.

‘ಮಂತ್ರಿ ಮಾಡಿ ಅಂತ ಕೈಚಾಚುವ ಅಯೋಗ್ಯ ನಾನಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವವರೆಗೂ ಮಂತ್ರಿ ಮಾಡಿ ಎಂದು ಕೇಳುವುದಿಲ್ಲ. ಮೋದಿ, ಅಮಿತ್ ಶಾ ಮತ್ತು ನಡ್ಡಾ ನಮ್ಮ ನಾಯಕರು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದ್ದಾರೆ.

ಪ್ರತಿಕ್ರಿಯೆ

ಇನ್ನಷ್ಟು ಉತ್ತಮ ಆಡಳಿತ ನಡೆಸಬೇಕು. ಯಡಿಯೂರಪ್ಪ ವಯಸ್ಸಿಗೆ ಮೀರಿ ಕೆಲಸ ಮಾಡುತ್ತಿದ್ದಾರೆ. ಕೆಲವು ಸಚಿವರು ಅಭಿವೃದ್ಧಿ ಬಗ್ಗೆ ಗಮನಹರಿಸಿಲ್ಲ ಎಂದುಚಿತ್ರದುರ್ಗ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

ನಾನು ಕೆಲವು ಶಾಸಕರ ಸಭೆ ಕರೆದಿದ್ದೇನೆ ಎಂದು ಸುದ್ದಿಯಾಗಿದೆ. ಸತ್ಯಕ್ಕೆ ದೂರವಾದ ವಿಚಾರ, ಯಾವುದೇ ಸಭೆ ಕರೆದಿಲ್ಲ ಎಂದು ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪಸ್ಪಷ್ಟಪಡಿಸಿದರು.

ಉಮೇಶ ಕತ್ತಿ ಏನು ಹೇಳಿದರೂ ಲೆಕ್ಕಕ್ಕೆ ಇಲ್ಲ. ಸರ್ಕಾರ ಬೀಳುತ್ತದೆ ಎಂಬ ಗುಲ್ಲು ಬಹಳ ದಿನದಿಂದಲೂ ಇದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT