ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಅಸಂತೋಷ: ವಿಜಯೇಂದ್ರ ನಡೆಗೆ ಆಕ್ಷೇಪ

ಸಂತೋಷ್‌ಗೆ ದೂರು ನೀಡಿದ ಶಾಸಕರು
Last Updated 20 ಫೆಬ್ರುವರಿ 2020, 20:28 IST
ಅಕ್ಷರ ಗಾತ್ರ

ಬೆಂಗಳೂರು: ಕೈತಪ್ಪಿದ ಸಚಿವ ಸ್ಥಾನ, ಸಿಗದ ಅನುದಾನದಿಂದ ಸಿಟ್ಟಾಗಿರುವ ಬಿಜೆಪಿ ಶಾಸಕರ ಗುಂಪುಗೂಡುವಿಕೆ ಬಿರು
ಸುಗೊಳ್ಳುತ್ತಿದ್ದು, ಈ ಪೈಕಿ ಕೆಲವು ಶಾಸಕರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭೇಟಿಯಾಗಿ ದೂರು ನೀಡಿರುವುದು ನಾನಾ ವಿಶ್ಲೇಷಣೆಗೆ ದಾರಿ ಮಾಡಿಕೊಟ್ಟಿದೆ.

‘ಪಕ್ಷದ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಎಂಟಕ್ಕೂ ಹೆಚ್ಚಿನ ಶಾಸಕರ ಜತೆ ತಲಾ ಐದಾರು ನಿಮಿಷ ಮಾತನಾಡಿದ ಸಂತೋಷ್‌, ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ ಅವರನ್ನು ಭೇಟಿಯಾಗಿ ಹೆಚ್ಚಿನ ವಿವರ ನೀಡಿ ಎಂದು ಸೂಚಿಸಿದರು’ ಎಂದು ಪಕ್ಷದ ಮೂಲಗಳು ಹೇಳಿವೆ.

‘ಇಡೀ ರಾಷ್ಟ್ರದಲ್ಲಿ ಪಕ್ಷ ಕಟ್ಟುವ ಅತ್ಯುನ್ನತ ಜವಾಬ್ದಾರಿ ಹೊಂದಿರುವ ಸಂತೋಷ್ ಅವರು ರಾಜ್ಯ ರಾಜಕಾರಣದ ಮೇಲೆ ತಮ್ಮ ಆಕರ್ಷಣೆ ಕಳೆದುಕೊಂಡಿಲ್ಲ. ಈ ನಡೆಗಳು ರಾಜ್ಯ ರಾಜಕಾರಣದತ್ತ ಅವರು ಮುಖ ಮಾಡಿರುವುದರ ಸೂಚನೆಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವ ಬಗ್ಗೆ ಸಣ್ಣ ಪ್ರಮಾಣದಲ್ಲಿ ಶುರುವಾಗಿರುವ ಅಸಹನೆ ಹೆಪ್ಪುಗಟ್ಟಿ ಬೃಹದಾಕಾರವಾಗಿ ಬೆಳೆದರೆ ರಾಜ್ಯ ರಾಜಕೀಯಕ್ಕೆ ಬರುವ ಲೆಕ್ಕಾಚಾರ ಅವರಲ್ಲಿದೆ. ಇತ್ತೀಚಿನ ವಿದ್ಯಮಾನಗಳು ಈ ಬೆಳವಣಿಗೆಗಳನ್ನು ಸೂಚಿಸುವಂತಿವೆ’ ಎಂದು ಪಕ್ಷದ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಜಯೇಂದ್ರ ವಿರುದ್ಧ ದೂರು: ‘ಸಂತೋಷ್ ಭೇಟಿಯಾಗಿದ್ದ ಶಾಸಕರು ಸಚಿವ ಸ್ಥಾನ ಕೈತಪ್ಪಿದ್ದರಿಂದ ಆಗಿರುವ ಅನ್ಯಾಯ, ವಿಜಯೇಂದ್ರ ಹಸ್ತಕ್ಷೇಪದ ಕುರಿತು ನಿರ್ದಿಷ್ಟವಾಗಿ ದೂರು ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಸಚಿವ ಸ್ಥಾನ ಕೊನೆಗಳಿಗೆಯಲ್ಲಿ ಕೈತಪ್ಪಿದ ಕಾರಣಕ್ಕೆ ಅಸಹನೆಯಿಂದ ಕುದಿಯುತ್ತಿರುವ ಸಿ.ಪಿ. ಯೋಗೇಶ್ವರ್ ಅವರು ಈ ಶಾಸಕರನ್ನು ಕರೆದೊಯ್ದಿದ್ದರು. ಶಾಸಕರ ದೂರುಗಳನ್ನು ಸಹನೆಯಿಂದ ಸಂತೋಷ್ ಆಲಿಸಿದರು.

‘‍ಪಕ್ಷದ ಶಾಸಕರ ಬೇಡಿಕೆಗೆ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನು
ದಾನ, ಯೋಜನೆಗೆ ಅನುಮೋದನೆ ನೀಡುವಂತೆ ಕೋರಿಕೆ ಮಂಡಿಸಿದರೆ ತಮ್ಮ ಮಗ ಬಿ.ವೈ. ವಿಜಯೇಂದ್ರ ಗಮನಕ್ಕೆ ತನ್ನಿ ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪನವರ ಮೇಲೆ ನಮಗೆ ಅಪಾರ ಗೌರವ ಇದೆ. ಶಾಸಕರಾಗಿ ಗೆದ್ದು ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದವರಿಗೂ ಅಷ್ಟೇ ಆದ್ಯತೆ ಸಿಗಬೇಕು. ನಾಲ್ಕೈದು ಬಾರಿ ಶಾಸಕರಾಗಿ ಆಯ್ಕೆಯಾದವರು ಕೂಡ ‘ನೆರವಿ’ಗಾಗಿ ವಿಜಯೇಂದ್ರ ಮುಂದೆ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ ಎಂದು ಸಂತೋಷ್‌ ಮುಂದೆ ಅಳಲು ತೋಡಿಕೊಂಡಿದ್ದಾರೆ’ ಎಂದುಮೂಲಗಳು ತಿಳಿಸಿವೆ.

ಹಸ್ತಕ್ಷೇಪ ಮಾಡಿಲ್ಲ: ವಿಜಯೇಂದ್ರ
‘ಸರ್ಕಾರದ ಆಡಳಿತದಲ್ಲಿ ನಾನು ಹಸ್ತಕ್ಷೇಪ ಮಾಡುತ್ತಿದ್ದೇನೆ ಎಂಬ ಆರೋಪ ಆಧಾರ ರಹಿತ. ಮುಖ್ಯಮಂತ್ರಿ ಮಗ ಎಂಬ ಒಂದೇ ಕಾರಣಕ್ಕೆ ಸುಖಾಸುಮ್ಮನೇ ಟೀಕೆ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಹೇಳಿದರು.

‘ಐದು ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಅನುಭವ ಇರುವ ಯಡಿಯೂರಪ್ಪನವರು ಸಮರ್ಥವಾಗಿ ಆಡಳಿತ ನಡೆಸುವ ಶಕ್ತಿ ಹೊಂದಿದ್ದಾರೆ. ಸರ್ಕಾರ ನಡೆಸಲು ಸಚಿವರು, ಅಧಿಕಾರಿಗಳು ಇದ್ದಾರೆ. ಅಂತಹ ಹೊತ್ತಿನಲ್ಲಿ ಮಕ್ಕಳ ಸಲಹೆ–ಸಹಕಾರ ಪಡೆದು ಅಧಿಕಾರ ನಡೆಸುವ ಅಗತ್ಯವೂ ನನ್ನ ಅಪ್ಪಾಜಿಗೆ ಇಲ್ಲ. ಸುಳ್ಳು ಆರೋಪ ಮಾಡುತ್ತಿರುವವರು ನಾನು ಹಸ್ತಕ್ಷೇಪ ಮಾಡಿರುವ ಒಂದೇ ಒಂದು ನಿದರ್ಶನ ತೋರಿಸಲಿ’ ಎಂದು ಹೇಳಿದರು.

ಶಾ–ನಡ್ಡಾಗೂ ಅಹವಾಲು
ಸಚಿವ ಸ್ಥಾನ ಆಕಾಂಕ್ಷಿಯಾಗಿರುವ ಉಮೇಶ ಕತ್ತಿ ಅವರು ಇತ್ತೀಚೆಗೆ ದೆಹಲಿಗೆ ಹೋಗಿದ್ದರು. ಈ ವೇಳೆ ಯೋಗೇಶ್ವರ್ ಕೂಡ ಜತೆಗಿದ್ದರು.

‘ಶಾಸಕರಲ್ಲಿರುವ ಅಸಮಾಧಾನ, ಸರ್ಕಾರ ಹಾದಿ ತಪ್ಪುತ್ತಿರುವ ಕುರಿತು ನಡ್ಡಾ ಅವರ ಮುಂದೆ ಕತ್ತಿ ವಿವರ ನೀಡಿದರು. ಇದನ್ನು ಗೃಹ ಸಚಿವ ಅಮಿತ್ ಶಾ ಗಮನಕ್ಕೆ ತನ್ನಿ ಎಂದು ಸೂಚಿಸಿದ ನಡ್ಡಾ, ಶಾ ಭೇಟಿಗೆ ಅವಕಾಶ ಕೊಟ್ಟರು. ಶಾ ಮುಂದೆ ಇದನ್ನೇ ಮಂಡಿಸಿದಾಗ, ‘ಅಂತಹ ದೂರುಗಳು ಸಾಕಷ್ಟು ಬಂದಿವೆ. ಯಡಿಯೂರಪ್ಪನವರು ಹಿರಿಯ ನಾಯಕರು. ಅವರ ಹಿಂದೆ ದೊಡ್ಡ ಸಮುದಾಯ ಇದೆ. ಅವರಿಗೆ ಪರ್ಯಾಯ ನಾಯಕ ಸದ್ಯಕ್ಕೆ ಕರ್ನಾಟಕದಲ್ಲಿ ಇಲ್ಲ. ಭ್ರಷ್ಟಾಚಾರ ರಹಿತ ಸರ್ಕಾರ ನಡೆಸುವಂತೆ ಒಂದೇ ಸೂಚನೆ ನೀಡಿ, ಸಂಪೂರ್ಣ ಅಧಿಕಾರವನ್ನು ಅವರಿಗೆ ನೀಡಿದ್ದೇವೆ. ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ’ ಎಂದು ಗೃಹ ಸಚಿವರು ಹೇಳಿದರು’ ಎಂದು ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT