ಶುಕ್ರವಾರ, ಸೆಪ್ಟೆಂಬರ್ 17, 2021
26 °C

‘ಮಳೆಯೇ ಇಳಿದು ಬಾ..’ಎಂದಿರಿ ನೀವು; ‘ಜಲವಾಗಿ ನೆಲವ ತಬ್ಬಿದೆ ನಾ..’ ತಪ್ಪು ಯಾರದು?

ಶಿವಕುಮಾರ ಜಿ.ಎನ್. Updated:

ಅಕ್ಷರ ಗಾತ್ರ : | |

‘ಮಳೆರಾಯನಿಗೆ ಒಂದೊಮ್ಮೆ ಮಾತನಾಡಲು ಬರುವಂತಿದ್ದರೆ. ಅವನು ನಮಗೆ ಏನು ಹೇಳುತ್ತಿದ್ದ?’ ಈ ಪ್ರಶ್ನೆಗೆ ಉತ್ತರದಂತಿದೆ ಈ ಬರಹ. ಶಿವಕುಮಾರ್ ಜಿ.ಎನ್. ತಾವು ಕೇಳಿಸಿಕೊಂಡ ಮಳೆರಾಯನ ಪಿಸುಮಾತುಗಳನ್ನು ಇಲ್ಲಿ ಆಸ್ಥೆಯಿಂದ ದಾಖಲಿಸಿದ್ದಾರೆ.

---

ಪ್ರಿಯ ಮಾನವರೇ,

ನಾನು ಆಗಸದಲ್ಲಿ ತೇಲುತ್ತಾ ನಿಮ್ಮ ಕರುನಾಡನ್ನು ನೋಡುತ್ತಿರುತ್ತೇನೆ. ಈಚೀಚೆಗಂತೂ ನೀವು ಎಲ್ಲ ಕಾಲಗಳನ್ನೂ ಶಪಿಸುತ್ತಿದ್ದೀರಿ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ... ಹೀಗೆ ಎಲ್ಲವೂ ನಿಮಗೆ ಸಮಸ್ಯೆ ಎನಿಸುತ್ತಿದೆ. ಚಳಿ ಹೆಚ್ಚಾಗಿ ನಡುಕ ಉಂಟಾದರೂ ಸಹಿಸುವ ಶಕ್ತಿ ಇಲ್ಲ. ಬೇಸಿಗೆಯಲ್ಲಿ ಬಿಸಿಲ ಝಳ ಹೆಚ್ಚಾದಾಗ ತಾಪವನ್ನು ತಾಳಿಕೊಳ್ಳುವಷ್ಟು ಜಲ ಸಮೃದ್ಧಿಯು ದೇಹ ಮತ್ತು ಪ್ರಕೃತಿಯಲ್ಲಿ ಕಾಣಿಸುತ್ತಿಲ್ಲ. ಮಳೆಗಾಲದ ಬಗ್ಗೆ ನೀವು ಶಪಿಸುವುದನ್ನು ಹೇಳಲೂ ನನಗೆ ಬಾಯಿ ಬರಲ್ಲ.

ಮುಂಗಾರು ಮಳೆ ಬರುವುದು ತುಸು ತಡವಾದರೂ ‘ಬಾರೋ ಬಾರೋ ಮಳೆರಾಯ’, ‘ಎಲ್ಲಿಗೆ ಓಡುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ’ ಎಂದು ಗೋಗರೆಯುತ್ತೀರಿ. ಇಷ್ಟಾದರೂ ಮಳೆ ಬಾರದಿದ್ದರೆ ‘ಕೃಪೆ ತೋರದ ವರುಣ’, ‘ವರುಣನ ಮುನಿಸು’, ‘ಬಾಯಾರಿದ ಭೂಮಿ’, ‘ಬರಿದಾದ ನದಿ ಒಡಲು ತುಂಬುವುದೆಂತು?’, ಕುಡಿಯುವ ನೀರಿಗೂ ಬರ’ ನಿಮ್ಮ ಮಾಧ್ಯಮಗಳು ಬೊಬ್ಬೆ ಹೊಡೆಯುತ್ತವೆ. ಮಳೆಗಾಗಿ ಹೋಮ–ಹವನ, ಪೂಜೆ, ಕತ್ತೆ, ಕಪ್ಪೆ ಮದುವೆ, ಮಳೆ ಮಲ್ಲಪ್ಪ... ಏನೆಲ್ಲಾ ಆಚರಣೆಗಳು.

ನಿಮ್ಮ ಮಾಧ್ಯಮಗಳ ಅರಚಾಟ, ಜನರ ಪ್ರಾರ್ಥನೆ ಕಿವಿಗಪ್ಪಳಿಸಿ, ಮಳೆ ಸುರಿಸಿದರೆ ಅದಕ್ಕೂ ನನ್ನನ್ನೇ ಬಯ್ಯುವಿರಿ. ತುಸು ಮಳೆ ಬಂದರೆ ಬಿತ್ತಿ ಬೆಳೆಯಲಾಗುವ‌‌‌‌ಷ್ಟು ಬೇಕೆನ್ನುತ್ತೀರಿ. ಬೇಕು ಬೇಕು, ಇನ್ನೂ ಬೇಕು, ಮಳೆ ಬೇಕು ಎಂದು ಕತ್ತೆತ್ತಿ ಕೂಗುತ್ತೀರಿ. ನಿಮಗೆ ತಥಾಸ್ತು ಎನ್ನುವುದೇ ಒಮ್ಮೊಮ್ಮೆ ತಪ್ಪಾಗುತ್ತೆ ಅನ್ಸುತ್ತೆ.

ಕೃಷ್ಣೆಯ ಶಕ್ತಿ ಅರ್ಥ ಮಾಡಿಕೊಳ್ಳಿ

ನಿಮ್ಮ ರಾಜಕೀಯ ಹಗ್ಗಜಗ್ಗಾಟದಲ್ಲಿ ನಾನು ಬೇಡದ ನಾಣ್ಯದಂತೆ ಆಗಿಬಿಟ್ಟಿದ್ದೀನಿ. ನಾನು ಮಳೆರಾಯ, ಬರುತ್ತೇನೆಂದು ಗೊತ್ತಿದ್ದರೂ ಮಾಡಿಕೊಳ್ಳಬೇಕಾದ ಸಿದ್ಧತೆ ಮಾಡಿಕೊಳ್ಳುವುದಿಲ್ಲ. ಇನ್ನು ನನ್ನ ಮಗಳು ಕೃಷ್ಣೆ (ನದಿ) ಪ್ರತಿ ಮಳೆಗಾಲದಲ್ಲೂ ತುಂಬು ಹರೆಯದ ಚೆಲ್ಲು ಯುವತಿಯಂತೆ ಮುನ್ನುಗ್ಗುತ್ತಾಳೆ. ಅವಳನ್ನು ಅಣೆಕಟ್ಟೆಗಳಲ್ಲಿ ಕಟ್ಟಿ ಹಾಕಿರುವ ನಿಮಗೆ ಅದಕ್ಕೊಂದು ಮಿತಿ ಇದೆ ಎಂಬ ಪರಿಜ್ಞಾನ ಇಲ್ಲವೇ? ಬರುವ ಮಳೆ, ಉಕ್ಕುವ ನದಿಯ ನೀರನ್ನು ಲೆಕ್ಕ ಹಾಕಿ ಅಣೆಕಟ್ಟೆಗಳಿಂದ ಸಕಾಲಕ್ಕೆ ನೀರು ಬಿಟ್ಟರೆ ಇಂಥ ಅನಾಹುತ ಆಗುತ್ತಿತ್ತೆ? ನನ್ನ ಮಗಳು ಕೃಷ್ಣೆಯನ್ನು ನಾಲ್ಕು ರಾಜ್ಯಗಳಿಗೆ ಇಂತಿಷ್ಟು ಎಂದು ಹಂಚಿಹಾಕಿದ್ದೀರಿ. ಮೊದಲು ಅವಳನ್ನು ಇಡಿಯಾಗಿ ಗಮನಿಸುವ ಕೆಲಸ ಶುರು ಮಾಡಿ. ಅವಳ ಶಕ್ತಿಗೆ ಬೆಲೆಕೊಡಿ.

ತಾಳಿತಾಳಿ, ಇನ್ನೂ ನಾನು ಹೇಳಬೇಕಾದ್ದು ಬಹಳಷ್ಟಿದೆ. ಸುರಿದ ಮಳೆ ಹನಿ ಭರ್ರನೆ ಓಡದೆ, ನೆಲದಡಿಗೆ ಇಂಗಲು ಏನು ವ್ಯವಸ್ಥೆ ಮಾಡಿಕೊಂಡಿದ್ದೀರಿ? ಮಳೆಗಾಲದಲ್ಲಿ ಪ್ರವಾಹ ಎಂದು ಬೊಬ್ಬೆ ಹೊಡೆಯುವ ಮಲೆನಾಡು ಬೇಸಿಗೆಯಲ್ಲಿ ಬಾಯಾರಿ ಕಂಗಾಲಾಗುವುದೇಕೆ? ಒಂದಾದರೂ ಹಳ್ಳ, ಝರಿ, ತೊರೆ, ನದಿಗಳನ್ನು ಸಹಜವಾಗಿ ಇರಿಸಿದ್ದೀರಾ? ನೀರಿನ ಪ್ರಾಕೃತಿಕ ಹರಿವಿಗೆ ತಡೆಯೊಡ್ಡಿ ‘ಪ್ರವಾಹ ಪ್ರವಾಹ, ಎಲ್ಲೆಲ್ಲೂ ನೀರು’ ಅಂದ್ರೆ ನಾನೇನು ಮಾಡಲಿ?

ಅಷ್ಟೆಲ್ಲಾ ಯಾಕೆ, ನಿಮ್ಮ ಬೆಂಗಳೂರನ್ನು ಒಮ್ಮೆ ನೋಡಿಕೊಳ್ಳಿ. ‘ಬೆಂಗಳೂರಿಗೆ ಎಂದೆಂದೂ ಮಳೆಯೇ ಬರಬಾರದು’ ಎನ್ನುವಂತೆ ರಸ್ತೆಗಳನ್ನು ಮಾಡಿಕೊಂಡಿದ್ದೀರಿ. ಬಿದ್ದ ನೀರು ಹರಿಯಲು ವ್ಯವಸ್ಥೆ ಬೇಡವೇ? ಅದೆಂಥಾ ಜನರಪ್ಪಾ ನೀವು?


ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದ ದೃಶ್ಯ

ಹೊಸ ತಲೆಮಾರಿನ ನೀವು ನಿಮ್ಮನ್ನು ಬುದ್ಧಿವಂತರು ಎಂದುಕೊಂಡು ಬೀಗುತ್ತಿದ್ದೀರಿ. ನಿಮ್ಮಂಥ ಅದೆಷ್ಟೋ ತಲೆಮಾರುಗಳನ್ನು ನೋಡಿರುವ ನಾನು ಹೇಳುತ್ತೇನೆ ಕೇಳಿ, ಕೆರೆ ಕಟ್ಟೆಗಳನ್ನು ಹಾಳು ಮಾಡಿರುವ ನೀವು ದಡ್ಡಾತಿದಡ್ಡರು. ನೀರನ್ನು ಗೌರವಿಸುತ್ತಿದ್ದ ನಿಮ್ಮ ಹಿರೀಕರು ನಿಜವಾದ ಬುದ್ಧಿವಂತರು. ಹೌದು ನೀವು ಸರಿಯಾಗಿ ಮಣ್ಣು ನೋಡಿ ಎಷ್ಟುದಿನಗಳಾದವು ಹೇಳಿ?

ಕಳೆದ ವರ್ಷ ಏನಾಯ್ತು ನೆನಪಿದೆಯೇ? 2018ರ ಮಾರ್ಚ್ 18 ಯುಗಾದಿ. ಕೊಡಗಿನಲ್ಲಿ ‘ಹೊನ್ನಾರು ಉತ್ಸವ’ದ ಹೆಸರಲ್ಲಿ ಮೊದಲ ಬೇಸಾಯಕ್ಕೆ ರೈತರು ಸಜ್ಜಾಗಿದ್ದರು. ಆದರೆ ವರುಣನ ಅವಕೃಪೆಯಿಂದಾಗಿ ನೀರಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ರೈತಾಪಿ ಜನ ‘ನಮ್ಮ ಆತಂಕ ದೂರ ಮಾಡು’ ಎಂದು ದೇವರಲ್ಲಿ ಪ್ರಾರ್ಥಿಸಿ ಈ ಹಬ್ಬ ಆಚರಿದ್ದರು. ಏಪ್ರಿಲ್‌, ಮೇನಲ್ಲಿ ನೀರಿನ ಕೊರತೆಯನ್ನೂ ಎದುರಿಸಿದರು. 2018ರ ಮಾರ್ಚ್‌ ಎರಡನೇ ವಾರ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಸಂಪೂರ್ಣ ಕ್ಷೀಣಗೊಂಡಿತ್ತು. ನದಿಪಾತ್ರದ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಆತಂಕ ಎದುರಾಗಿತ್ತು.

ಆದರೆ ಆಮೇಲೆ ಆಗಿದ್ದೇನು? 2018ರ ಆಗಸ್ಟ್‌ನಲ್ಲಿ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯಿತು. ದೊಡ್ಡ ಪ್ರಮಾಣದಲ್ಲಿ ಪ್ರವಾಹ, ಭೂ ಕುಸಿತ ಆದವು. ಆಗ ಅಲ್ಲಿಇಲ್ಲಿ ಕೊಡಗಿನ ಭೂ ಚಹರೆ ಬದಲಾದ ಬಗ್ಗೆ ಚರ್ಚೆಯಾಯಿತು. ನಂತರ ಪರಿಸ್ಥಿತಿ ಸುಧಾರಿಸಿತೆ? ನೀವೇ ಉತ್ತರ ಹೇಳಬೇಕು.

ಈಗ ಈ ವರ್ಷದ ಬಗ್ಗೆ ಮಾತಾಡೋಣ ಬನ್ನಿ. ಹಿಂದಿನ ನೋವಿನಿಂದ ಮೇಲೇಳುವ ಮುನ್ನವೇ ಮತ್ತೆ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭೂ ಕುಸಿತ ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ಪ್ರವಾಹ ಎದುರಾಗಿದೆ. 17 ಜಿಲ್ಲೆಗಳ 80 ತಾಲ್ಲೂಕುಗಳನ್ನು ಪ್ರವಾಹಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಣೆಯನ್ನೂ ಮಾಡಿದೆ. ನಿಮ್ಮೆಲ್ಲ ಸಂಕಟಗಳಿಗೆ ನಾನೊಬ್ಬನೇ ಕಾರಣನೇ?


ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕಮತಗಿ ಪಟ್ಟಣ ಮಲಪ್ರಭಾ ನದಿ ಪ್ರವಾಹದಿಂದ ಆವೃತವಾಗಿದ್ದ ದೃಶ್ಯ.

ಸಂಕಟಗಳಿಗೆ ಯಾರು ಕಾರಣ?

ನಾನು ಮಹಾರಾಷ್ಟ್ರದ ಮೇಲೆ ಕೃಪೆತೋರಿದ್ದೇ ತಪ್ಪಾಯಿತೆ? ಕೊಯ್ನಾ ಜಲಾಶಯ, ರಾಜಾಪುರ ಬ್ಯಾರೇಜ್‌ನಿಂದ ಲಕ್ಷ ಲಕ್ಷ ಕ್ಯುಸೆಕ್ ಹಾಗೂ ದೂಧ್‌ಗಂಗಾ ನದಿಯಿಂದ ಸಾವಿರಾರು ಕ್ಯುಸೆಕ್‌ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿ ಸೇರಿತು. ಕೃಷ್ಣಾ ಮತ್ತು ಉಪನದಿಗಳು ಉಕ್ಕಿಹರಿದ ಪರಿಣಾಮ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಜನಜೀವನ ಅಕ್ಷರಶಃ ಅಸ್ತವ್ಯಸ್ತಗೊಂಡಿತು. ಸಾವಿರಾರು ಎಕರೆ ಜಮೀನು ಮುಳುಗಡೆಯಾದವು. ಈಗಲೂ ನನ್ನದು ಅದೇ ಪ್ರಶ್ನೆ, ನಿಮ್ಮೆಲ್ಲ ಸಂಕಟಗಳಿಗೆ ನಾನೊಬ್ಬನೇ ಕಾರಣನೇ?

ಕೃಷ್ಣಾ, ಮಲಪ್ರಭಾ ನದಿಗಳು ಮೈದುಂಬಿ ಹರಿದವು. ಅಪಾಯಮಟ್ಟ ಮೀರಿ ಹರಿದು ನದಿ ಪಾತ್ರದಲ್ಲಿನ ಊರಿಗೆ ಊರೇ, ನಗರಕ್ಕೆ ನಗರವೇ ಜಲಾವೃತವಾದವು. ಜನ ಪ್ರವಾಹ ಸಂಕಷ್ಟಕ್ಕೆ ಸಿಲುಕಿದರು. ಪ್ರವಾಹದಲ್ಲಿ ಕೊಚ್ಚಿಹೋದವರು, ಮನೆಗಳು ಕುಸಿದು ಜೀವ ತೆತ್ತವರು ಸೇರಿದಂತೆ  47 ಜನ ಮೃತಪಟ್ಟಿದ್ದಾರೆ (ಆ.11ರ ವರೆಗಿನ ಮಾಹಿತಿ ಪ್ರಕಾರ). ಪ್ರವಾಹ ಸ್ಥಳಗಳಲ್ಲಿ ಸಂಕಷ್ಟಕ್ಕೆ ಸಿಲುಕಿದವರನ್ನು ಏರ್‌ಲಿಫ್ಟ್‌ ಹಾಗೂ ಎನ್‌ಡಿಆರ್‌ಎಫ್‌, ಸೇನೆ, ಅಗ್ನಿ ಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯ ಜನರು ರಕ್ಷಿಸುತ್ತಿದ್ದಾರೆ. ತಿನ್ನಲು ಮೇವು ಇಲ್ಲದೆ ಸಂಕಷ್ಟದಲ್ಲಿರುವ ಜಾನುವಾರುಗಳ ಕಷ್ಟ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ನನ್ನ ಮಗಳು ಕೃಷ್ಣೆಯನ್ನು ನಿಮ್ಮ ಪಾಲಿಗೆ ‘ಕಣ್ಣೀರ ನದಿ’ ಆಗಿಸಿದವರು ಯಾರು?


ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಉದಗಟ್ಟಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶದಲ್ಲಿ ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ ದೃಶ್ಯ.

ತಪ್ಪು ಯಾರದು?

ನಾನು ಬಾರದೇ ಇದ್ದಾಗ ‘ವರುಣ ಮುನಿಸಿಕೊಂಡಿದ್ದಾನೆ’ ಎನ್ನುತ್ತೀರಿ. ನಿಮ್ಮ ಬೆಳೆ ಒಣಗಿದಾಗ, ಕುಡಿಯಲು ನೀರಿಲ್ಲದಿದ್ದಾಗ ‘ದಾಹ’ ಎನ್ನುತ್ತಾ ‘ಈ ಮಳೆ ಯಾಕ ಬರ್ವಲ್ದು’ ಎಂದು ನನ್ನನ್ನೇ ಶಪಿಸುತ್ತೀರಿ. ‘ಬಾ ಮಳೆಯೇ ಬಾ’, ‘ಇಳಿದು ಬಾ ತಾಯಿ...’ ಎಂದು ಗೋರೆಯುತ್ತೀರಿ, ಅಂಗಲಾಚುತ್ತೀರಿ. ನಿಮ್ಮ ಒಡಲಾಳದ ಸಂಕಟ, ನೋವುಗಳನ್ನು ನೋಡಿ ನನಗೂ ಮರುಕವಾಗುತ್ತದೆ, ಕರುಳು ಹಿಂಡಿದಂತಾಗುತ್ತದೆ. ನಿಮ್ಮ ಪ್ರಾರ್ಥನೆಗೆ ಸ್ಪಂದಿಸಿ, ‘ಜಲವಾಗಿ ನೆಲವ ತಬ್ಬಿದೆ ನಾನು’.

ನಾನು ಹಳ್ಳ, ತೊರೆ, ನದಿಯಾಗಿ ಮೈದುಂಬಿ ಭೋರ್ಗರೆದೆ. ಆಗ ನನ್ನದು ಇನ್ನಿಲ್ಲದ ಸೆಳವು. ಅದು ತಿಳಿದಿದ್ದೂ ಹಲವರು ಹುಚ್ಚು ಸಾಹಸಕ್ಕೆ ಮುಂದಾಗುತ್ತೀರಿ. ನನ್ನ ಪ್ರವಾಹದ ವಿರುದ್ಧ ಈಜುವ ದುಸ್ಸಾಹಸಕ್ಕೆ ಕೈಹಾಕಿ ನನ್ನೊಡಲಲ್ಲಿ ಲೀನವಾಗುತ್ತೀರಿ. ನಾ ಧರೆಗಿಳಿದಾಗ ಹನಿಹನಿಯನ್ನೂ ಭುವಿಯೊಡಲು ಸೇರಿಸುವ ದಟ್ಟ ಕಾಡನ್ನೂ ಕಡಿದಿರಿ. ಗುಡ್ಡ ಕೊರೆದು ರಸ್ತೆ ಮಾಡಿದಿರಿ. ಬೇರುಗಾಡಿಲ್ಲದ ಗುಡ್ಡ–ಬೆಟ್ಟಗಳು ನಾ ಬಂದ ರಭಸಕ್ಕೆ ಕುಸಿದವು. ಮಣ್ಣಲ್ಲಿ ಮಣ್ಣಾಗಿ ಜೀವಂತ ಸಮಾಧಿಯೂ ಆದಿರಿ.

‌ಗುಡುಗು, ಸಿಡಿಲು ನನ್ನ ಆಭರಣಗಳು. ಆರ್ಭಟ ನನ್ನ ಹುಟ್ಟುಗುಣ. ಜಿಟಿಜಿಟಿ ತುಂತುರು, ಧಾರಾಕಾರ ಅಬ್ಬರ ನನ್ನ ವೈಖರಿ. ನೀವು ಕರೆದಿರಿ, ನಾನು ಬಂದೆ. ಹಿಂದೆಲ್ಲಾ ನನ್ನನ್ನು ಶಪಿಸಿದೆ ಒಪ್ಪಿಕೊಳ್ಳುತ್ತಿದ್ದೀರಿ. ಆದರೆ ‘ವರುಣಾಸುರ’ ಎಂದು ಸಲ್ಲದ ಮಾತನಾಡುತ್ತಿದ್ದೀರಿ. ನಾನು ಹಿಂದೆ ಹೇಗಿದ್ದೆನೋ ಇಂದಿಗೂ ಹಾಗೆಯೇ ಇದ್ದೇನೆ. ಆದರೆ ನೀವು ಹೇಗಾಗಿದ್ದೀರಿ? 

ತಪ್ಪು ಯಾರದು? ಇನ್ನಾದರೂ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ.

ನೀವು ಅಂದರೂ, ಆಡಿದರೂ ಮತ್ತೆ ಬರುವೆ. ಬರುತ್ತಲೇ ಇರುವೆ...

ಇತಿ ನಿಮ್ಮೆಲ್ಲರ ಪ್ರೀತಿಯ 

ಮಳೆರಾಯ


* ಇವನ್ನೂ ಓದಿ...

* ಕಾವೇರಿಗೆ ಮತ್ತೆ ಮತ್ತೆ ಪ್ರವಾಹ ಭೀತಿ

* ತೋರದಲ್ಲಿ ಮುನಿದ ‘ಆಸರೆ’ ತಾಣ

* ತಣಿದ ವರುಣ: ಚುರುಕುಗೊಂಡ ಪರಿಹಾರ; ಹಂಪಿ, ನಂಜನಗೂಡು,ತಲಕಾಡಿನಲ್ಲಿ ಪ್ರವಾಹದ ಆರ್ಭಟ

* 2018- ಕೇರಳದ ಭಾರೀ ಪ್ರವಾಹ, ಭೂಕುಸಿತಕ್ಕೆ ಒಟ್ಟು 373 ಜನರ ಸಾವು

* ಕೊಡಗು: ಮಳೆಗೆ 4 ಸಾವಿರ ಎಕರೆ ಕಾಫಿ ತೋಟಕ್ಕೆ ಹಾನಿ, ₹2 ಸಾವಿರ ಕೋಟಿ ನಷ್ಟ

* ಕೊಡಗು ಪ್ರವಾಹ: ಪ್ರವಾಸೋದ್ಯಮಕ್ಕೂ ಪೆಟ್ಟು, ಚೇತರಿಕೆಗೆ ಬೇಕು ವರ್ಷ
 


ಕಾವೇರಿ ಆವರಿಸಿಕೊಂಡಿರುವ ಮೈಸೂರು ಜಿಲ್ಲೆ ತಿ.ನರಸೀಪುರ‌ ಪಟ್ಟಣ ಸೋಮವಾರ ಕಂಡು ಬಂದಿದ್ದು ಹೀಗೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು