ಸೋಮವಾರ, ಫೆಬ್ರವರಿ 24, 2020
19 °C

ನಿಷ್ಕ್ರಿಯತೆ: ಶಾಸ್ತ್ರೀಯ ಭಾಷೆಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನಮಾನದಡಿ ಕೇಂದ್ರದ ಸೌಲಭ್ಯಗಳನ್ನು ಪಡೆದು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಲು ರಾಜ್ಯ ಸರ್ಕಾರದ ನಿಷ್ಕ್ರಿಯತೆಯೇ ಮುಖ್ಯ ಕಾರಣ’.

ಹೀಗೆಂದು ಭಾರತೀಯ ಮಹಾಲೇಖಪಾಲರ ವರದಿ (ಸಿಎಜಿ) ಸ್ಪಷ್ಟ ಮಾತುಗಳಲ್ಲಿ ಚಾಟಿ ಬೀಸಿರುವುದರಿಂದ ರಾಜ್ಯ ಸರ್ಕಾರ ಈಗಎಚ್ಚೆತ್ತುಕೊಂಡಿದೆ.

2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡದಿದ್ದರೆ, ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಿತು. ಇದರ ಹಿಂದೆ ಸಾಹಿತಿಗಳ ದೊಡ್ಡ ಹೋರಾಟವೇ ನಡೆದಿತ್ತು.

ಶಾಸ್ತ್ರೀಯ ಸ್ಥಾನಮಾನ ಪಡೆದ ಬಳಿಕ ಯಾವುದೇ ಸರ್ಕಾರ ಹೆಚ್ಚಿನ ಆಸಕ್ತಿ ತೋರಲಿಲ್ಲ. ಕೇಂದ್ರ ಬಿಡುಗಡೆ ಮಾಡಿದ ಹಣವನ್ನೂ ಸರಿಯಾಗಿ ಬಳಸಿಕೊಳ್ಳಲಿಲ್ಲ. 2011–12ರಿಂದ 2016–17ರ ಅವಧಿಯಲ್ಲಿ ಕೇಂದ್ರ ಸರ್ಕಾರ ₹8.91 ಕೋಟಿ ಹಣ ಬಿಡುಗಡೆ ಮಾಡಿತ್ತು. ಆದರೆ ಖರ್ಚು ಮಾಡಿದ್ದು ಕೇವಲ ₹2.78 ಕೋಟಿ ಎಂದು ವರದಿ ಹೇಳಿದೆ.

ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಈ ಕುರಿತು ತಜ್ಞರ ಸಭೆಯೊಂದನ್ನು ನಡೆಸಿ, ಶಾಸ್ತ್ರೀಯ ಭಾಷೆ ಸ್ಥಾನಮಾನದಡಿ ಆಗಬೇಕಿರುವ ಕೆಲಸಗಳಿಗೆ ಚುರುಕು ನೀಡುವುದಾಗಿ ವಾಗ್ದಾನ ಮಾಡಿದ್ದಾರೆ.

ನವೆಂಬರ್‌ 1ರ ಒಳಗೆ ಪ್ರತ್ಯೇಕ ಆಡಳಿತ ಮಂಡಳಿ, ಹಣಕಾಸು ಸಮಿತಿ ಮತ್ತು ಪಂಡಿತ ಮಂಡಳಿ ರಚನೆ, ಜಮೀನು ಗುರುತಿಸುವಿಕೆಯಂತಹ ಕ್ರಮಗಳನ್ನು ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದರೂ ಈ ಕಾರ್ಯದಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ.

‘2008ರಿಂದ ಈಚೆಗೆ ಶಾಸ್ತ್ರೀಯ ಸ್ಥಾನಮಾನ ಪಡೆದ ನಂತರ ಕನ್ನಡದ ಹಲವು ಯೋಜನೆಗಳಿಗಾಗಿ ಕೇಂದ್ರ ಸರ್ಕಾರ ₹10 ಕೋಟಿ ಅನುದಾನವನ್ನು ಮಾತ್ರ ಬಿಡುಗಡೆ ಮಾಡಿದೆ. ಆದರೆ ಸೂಕ್ತ ಮೂಲಸೌಲಭ್ಯ ಇಲ್ಲದ ಕಾರಣ ವಾರ್ಷಿಕ ₹84 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುವುದು ರಾಜ್ಯಕ್ಕೆ ಸಾಧ್ಯವಾಗಿಲ್ಲ. ಉಳಿದ ಹಣ ಕೇಂದ್ರಕ್ಕೆ ವಾಪಸ್‌ ಹೋಗುವಂತಾಗಿದೆ’ ಎಂಬುದನ್ನು ರವಿ ಒಪ್ಪಿಕೊಂಡಿದ್ದಾರೆ.

‘ಶಾಸ್ತ್ರೀಯ ಕನ್ನಡ ಅಧ್ಯಯನದ ಉತ್ಕೃಷ್ಟತಾ ಕೇಂದ್ರ’ ಎಲ್ಲಿ ಇರಬೇಕು ಎಂಬ ತಿಕ್ಕಾಟಕ್ಕೆ ಕೊನೆಗೂ ತೆರೆ ಬೀಳುವ ಹಂತವನ್ನು ತಲುಪಿದೆ. ಈ ಕೇಂದ್ರಕ್ಕೆ ಅಗತ್ಯವಾಗಿ 5 ಎಕರೆ ಜಮೀನು ಬೇಕಿದ್ದು, ಮೈಸೂರು ವಿಶ್ವವಿದ್ಯಾಲಯವು ಜಮೀನು ನೀಡುವುದಾಗಿ ಹೇಳಿದೆ. ಬೆಂಗಳೂರು ವಿಶ್ವವಿದ್ಯಾಲಯ 3 ಎಕರೆ ಜಮೀನು ನೀಡಲು ಒಪ್ಪಿದೆ. ತಜ್ಞರ ಅಭಿಮತದಂತೆ ಮೈಸೂರಿನಲ್ಲೇ ಸ್ಥಾಪಿಸಲು ತೀರ್ಮಾನಿಸಿರುವುದಾಗಿಯೂ ಸಚಿವ ರವಿ ಹೇಳಿದ್ದಾರೆ.

ತಮಿಳುನಾಡಿನಲ್ಲಿ ತಮಿಳು ಶ್ರೇಷ್ಠತಾ ಕೇಂದ್ರ ಸ್ವಾಯತ್ತವಾಗಿರುವಂತೆ ಇಲ್ಲೂ ಸ್ವಾಯತ್ತ ಕೇಂದ್ರದ ಸ್ಥಾಪನೆ ಆಗಬೇಕು. ಈಗ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಿಬ್ಬಂದಿ ಮತ್ತು ಮೂಲ ಸೌಕರ್ಯವನ್ನೂ ಕಲ್ಪಿಸಬೇಕಿದೆ.

ಕೇಂದ್ರವು 2004ರಲ್ಲಿ ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದರೆ, 2005ರಲ್ಲಿ ಸಂಸ್ಕೃತ, 2008ರಲ್ಲಿ ಕನ್ನಡ ಮತ್ತು ತೆಲುಗು, 2013ರಲ್ಲಿ ಮಲಯಾಳ, 2014ರಲ್ಲಿ ಒಡಿಯಾ ಭಾಷೆಗಳಿಗೆ ಈ ಸ್ಥಾನಮಾನ ನೀಡಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು