ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿಯಲ್ಲಿ 200 ವರ್ಷದಿಂದ ಕನ್ನಡದಲ್ಲಿ ಪ್ರಾರ್ಥನೆ

200 ವರ್ಷಗಳಿಂದ ಕನ್ನಡದಲ್ಲಿಯೇ ಪ್ರಾರ್ಥನೆ
Last Updated 31 ಅಕ್ಟೋಬರ್ 2019, 19:15 IST
ಅಕ್ಷರ ಗಾತ್ರ

ಹಂಸಭಾವಿ (ಹಾವೇರಿ ಜಿಲ್ಲೆ): ಸಾಮಾನ್ಯವಾಗಿ ಮುಸ್ಲಿಮರು ಮಸೀದಿಯಲ್ಲಿ ಉರ್ದು ಭಾಷೆಯಲ್ಲಿ ಪ್ರಾರ್ಥನೆ ಮಾಡುತ್ತಾರೆ. ಆದರೆ, ರಟ್ಟೀಹಳ್ಳಿ ತಾಲ್ಲೂಕಿನ ಚಿಕ್ಕಕಬ್ಬಾರ ಗ್ರಾಮದ ಮಸೀದಿಯಲ್ಲಿ ಪ್ರಾರ್ಥನೆ ನಡೆಯುವುದು ಅಪ್ಪಟ ಕನ್ನಡದಲ್ಲಿ. ಇದು ಕೇಳುವುದಕ್ಕೂ ಇಂಪಾಗಿದ್ದು, ದಾರಿಹೋಕರು ಸ್ವಲ್ಪ ಹೊತ್ತು ಪ್ರಾರ್ಥನೆ ಆಲಿಸಿಯೇ ಮುಂದೆ ಹೆಜ್ಜೆ ಇಡುತ್ತಾರೆ.

10 ಸಾವಿರ ಜನರಿರುವ ಈ ಗ್ರಾಮದಲ್ಲಿ 480 ಮುಸ್ಲಿಂ ಹಾಗೂ 400 ಹಿಂದೂ ಕುಟುಂಬಗಳಿವೆ. 200 ವರ್ಷಗಳ ಹಿಂದೆಯೇ ಮಸೀದಿ ನಿರ್ಮಾಣವಾಗಿದ್ದು, ಆಗಿನಿಂದಲೂ ಇಲ್ಲಿ ಪ್ರಾರ್ಥನೆ ನಡೆಯುವುದು ಕನ್ನಡದಲ್ಲೇ ಎನ್ನುತ್ತಾರೆ ಗ್ರಾಮಸ್ಥರು. ಕನ್ನಡವೇ ಮಾತೃಭಾಷೆ; ವಿಶೇಷವೆಂದರೆ ಅವರಿಗೆ ಉರ್ದು ಮಾತನಾಡುವುದಕ್ಕೂ ಬರುವುದಿಲ್ಲ!

‘ಮುಸ್ಲಿಂ ಕುಟುಂಬಗಳು ಜಾತ್ರೆಗಳಲ್ಲಿ ಹಿಂದೂಗಳ ದೇವರಿಗೆ ದೇಣಿಗೆ ನೀಡುತ್ತವೆ. ಚೌಡೇಶ್ವರಿ ದೇವರಿಗೆ ಹರಕೆ (ಮಾಂಸಾಹಾರ) ತೀರಿಸುತ್ತವೆ. ಹಬ್ಬ- ಹರಿದಿನಗಳಲ್ಲಿ ದೇವಸ್ಥಾನಗಳಲ್ಲಿ ಹಣ್ಣು– ಕಾಯಿ, ನೈವೇದ್ಯ ಮಾಡುವುದು ಮುಸ್ಲಿಂ ಮಿತ್ರರೇ! ಶನಿವಾರ ಬೆಳಿಗ್ಗೆಯೇ ಸ್ನಾನ ಮಾಡಿ ಆಂಜನೇಯನ ದರ್ಶನ ಪಡೆದು ಬರುತ್ತಾರೆ. ಯುಗಾದಿಯಲ್ಲಿ ವರ್ಷದ ಹೊಸ ಬೇಸಾಯದ ಅಂಗವಾಗಿ ಎತ್ತು ಹಾಗೂ ಭೂಮಿ ಪೂಜೆ ಮಾಡುತ್ತಾರೆ. ದವನದ ಹುಣ್ಣಿಮೆಗೆ ಆಂಜನೇಯನ ರಥವನ್ನು ಅವರೇ ಮುಂದೆ ನಿಂತು ಎಳೆಯು
ತ್ತಾರೆ’ಎನ್ನುತ್ತಾರೆ ಗ್ರಾಮದ ವೀರನಗೌಡ ಪಾಟೀಲ.

ಬೆಸೆದ ಬಂಧುತ್ವ:ಈ ಊರಿನಲ್ಲಿ 12 ಅಂತರಧರ್ಮೀಯ ವಿವಾಹಗಳು ನಡೆದಿವೆ. ಇದು ಇಲ್ಲಿಯ ಹಿಂದೂ– ಮುಸ್ಲಿಮರ ನಡುವೆ ಇರುವಂತಹ ಬಂಧುತ್ವವನ್ನು ತೋರಿಸುತ್ತದೆ.

‘ನಮ್ಮಲ್ಲಿ ಈವರೆಗೂ ಯಾವುದೇ ದ್ವೇಷ ಹುಟ್ಟಿಲ್ಲ. ಏನೇ ಸಮಸ್ಯೆ ಬಂದರೂ ಹೊಂದಾಣಿಕೆಯಿಂದ ಬಗೆಹರಿಸಿಕೊಳ್ಳುತ್ತೇವೆ.ಗ್ರಾಮದ ವೀರನಗೌಡ ಪಾಟೀಲರು ಮಸೀದಿ ನಿರ್ಮಾಣಕ್ಕೆ 3 ಗುಂಟೆ ಜಾಗ ದಾನ ಮಾಡಿದ್ದಾರೆ. ಅಲ್ಲದೇ ಮೊಹರಂ ಹಬ್ಬದಲ್ಲಿ ಹಿಂದೂಗಳೂ ಸಿಹಿ ಅಡುಗೆ, ಕಿಚಡಿ, ಶರಬತ್ ಮಾಡಿ ಜೊತೆಯಾಗುತ್ತಾರೆ. ನಾವೆಲ್ಲರೂ ಕನ್ನಡದ ಕಲಿಗಳು‌’ ಎಂದು ಹೆಮ್ಮೆಯಿಂದ ಹೇಳುತ್ತಾರೆ ‘ಗೌಡ್ರು’ ಎಂದು ಕರೆಯಿಸಿಕೊಳ್ಳುವ ಟಿಪ್ಪುಸಾಬ್ ಕೋಟಿಹಾಳ.

ಕನ್ನಡದ ಪ್ರಾರ್ಥನೆ ಸಾರಾಂಶ

‘ನನ್ನ ಪ್ರೀತಿಯ ಮುಸ್ಲಿಂ ಬಂಧುಗಳೇ, ನೀವೆಂದೂ ಕಪಟದಿಂದ ಭಕ್ತಿ ತೋರಿಸದಿರಿ. ಧರ್ಮ ಹರಡುವುದು ಪ್ರೀತಿಯಿಂದ. ಸೈತಾನ ಎಂಬುವನು ಮಾನವನಲ್ಲಿ ಕೆಟ್ಟ ವಿಚಾರಗಳನ್ನು ಬಿತ್ತಿ ಕೆಡುಕು ಮಾಡಲು ಪ್ರಯತ್ನಿಸುತ್ತಾನೆ. ಆದರೆ, ಅಲ್ಲಾ ತನ್ನ ಅನುಯಾಯಿಗಳನ್ನು ದುಷ್ಟ ಮಾರ್ಗದಿಂದ ಬದಲಿಸಿ ಸನ್ಮಾರ್ಗದತ್ತ ಎಳೆಯುತ್ತಾನೆ. ಸಿಟ್ಟು, ಆವೇಶದ ಸಂದರ್ಭದಲ್ಲಿ ಪ್ರವಾದಿ ವಚನದ ಮೂಲಕ ನಮಾಜು ಮಾಡಿದರೆ, ಸಿಟ್ಟು ಮಂಜಿನಂತೆ ಕರಗಿ ಹೋಗುತ್ತದೆ. ಈಗಿನ ಪೀಳಿಗೆ ‘ದಳ್ಳುರಿ’ಯ ಬೇಗೆಯಲ್ಲಿ ಬೇಯು
ತ್ತಿದೆ. ಯಾರು ಅಲ್ಲಾನ ಧ್ಯಾನದಲ್ಲಿರುತ್ತಾರೋ ಅವರ ಜೀವನ ಪಾವನವಾಗುತ್ತದೆ. ಕಡ್ಡಾಯವಾಗಿ ನಮಾಜು ಮಾಡಿದರೆ ಅಲ್ಲಾ ನಮ್ಮ ತಪ್ಪುಗಳನ್ನು ಕ್ಷಮಿಸುತ್ತಾನೆ’

ಮಹ್ಮದ್ ಸಮೀವುಲ್ಲಾ,ಮೌಲ್ವಿ

ನಮಗೆ ನಾಡು– ನುಡಿಯ ಬಗ್ಗೆ ಅಪಾರ ಪ್ರೀತಿ ಇದೆ. ಉಸಿರು ಇರುವವರೆಗೂ ಕನ್ನಡದಲ್ಲೇ ಮಾತನಾಡುತ್ತೇವೆ, ವ್ಯವಹರಿಸುತ್ತೇವೆ
ಹುಸೇನ್‌ ಸಾಬ್ ಬಿಲ್ಲಳ್ಳಿ
-ಅಂಜುಮನ್ ಕಮಿಟಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT