ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯ ದೂರು: ಕೌನ್ಸೆಲಿಂಗ್ ಮಾಡದೆ ಎಫ್‌ಐಆರ್‌ ಇಲ್ಲ

ಕೌಟುಂಬಿಕ ಸೌಖ್ಯ: ಈ ಅವಕಾಶ ಮತ್ತೆ ಸಿಗದು * ದೌರ್ಜನ್ಯ ದೂರು: ಪ್ರಮೀಳಾ ನಾಯ್ಡು ಹೇಳಿಕೆ
Last Updated 27 ಏಪ್ರಿಲ್ 2020, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಲಾಕ್‌ಡೌನ್‌ ಅವಧಿಯಲ್ಲಿ ಕೌಟುಂಬಿಕ ಸಂಘರ್ಷ ಜಾಸ್ತಿಯಾಗುತ್ತಿದೆ ಎಂಬ ವರದಿಯಾಗುತ್ತಿದೆ. ಆಯೋಗಕ್ಕೂ ದೂರುಗಳು ಬರುತ್ತಿವೆ. ಕೌಟುಂಬಿಕ ನೆಮ್ಮದಿ ಕಂಡುಕೊಳ್ಳಲು ಲಾಕ್‌ಡೌನ್‌ ನೀಡಿದಂಥ ಅವಕಾಶವನ್ನು ಇನ್ನೆಂದೂ ಪಡೆಯಲು ಸಾಧ್ಯವಿಲ್ಲ. ಹೀಗಾಗಿ, ಇದನ್ನು ಬಳಕೆ ಮಾಡಿಕೊಳ್ಳಿ..'

ಹೀಗೆ ಸಲಹೆ ನೀಡಿದವರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು. ‘ಪ್ರಜಾವಾಣಿ ’ ಕಚೇರಿಯಲ್ಲಿ ಸೋಮವಾರ ನಡೆದ ‘ಫೋನ್‌ ಇನ್‌’ನಲ್ಲಿ ಮಾತನಾಡಿದ ಅವರು, ‘ಲಾಕ್‌ಡೌನ್ ಅವಧಿಯಲ್ಲಿ ಕುಟುಂಬದ ಎಲ್ಲರೂ ಸಂವೇದನೆಯಿಂದ ವರ್ತಿಸಬೇಕು. ಕೆಲಸದ ನಡುವೆ ಸಾಕಷ್ಟು ವಿಚಾರಗಳನ್ನು ಮರೆತಿರುತ್ತೀರಿ. ಆರೋಗ್ಯದ ಕಡೆ ಗಮನ ಹರಿಸಿ. ಪ್ರತಿನಿತ್ಯ ಒಳ್ಳೆಯ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಖುಷಿಯಾಗಿರಿ. ಒಳ್ಳೆಯ ಪುಸ್ತಕಗಳನ್ನು ಓದಿ. ಹಿರಿಯರೊಟ್ಟಿಗೆ ಸಮಾಲೋಚನೆ ನಡೆಸಿ. ಟಿವಿ ನೋಡಿ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಇದು ಸುಸಮಯ' ಎಂದರು.

* ಮಹಿಳೆಯರಿಗೆ ಆಗುವ ದೌರ್ಜನ್ಯವಷ್ಟೇ ಕೌಟುಂಬಿಕ ದೌರ್ಜನ್ಯವೇ?
- ಕೊಟ್ಟಿ ಗೋವಿಂದಪ್ಪ, ತುಮಕೂರು

ಉತ್ತರ: ಖಂಡಿತ ಅಲ್ಲ, ಯಾವುದೇ ದೌರ್ಜನ್ಯ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವ ಮೊದಲು ಗಂಡ–ಹೆಂಡತಿಯನ್ನು ಕರೆಸಿ ಕೌನ್ಸೆಲಿಂಗ್ ಮಾಡುತ್ತೇವೆ. ಪುರುಷರನ್ನಷ್ಟೇ ಬಲಿಪಶು ಮಾಡುವ ಉದ್ದೇಶ ಆಯೋಗಕ್ಕೆ ಇಲ್ಲ.

* ಮೈದುನನ ಹೆಂಡತಿಯಿಂದ ಬೆದರಿಕೆ ಇದೆ, ದಯವಿಟ್ಟು ನ್ಯಾಯ ಕೊಡಿ
ಶಂಕರಮ್ಮ, ಬೆಂಗಳೂರು

ಉತ್ತರ: ಆಯೋಗಕ್ಕೆ ದೂರು ಕೊಡಿ, ಈಗಿನ ಲಾಕ್‌ಡೌನ್ ಮುಗಿದ ಕೂಡಲೇ ವಿಚಾರಣೆ ನಡೆಸುತ್ತೇವೆ. ಅಲ್ಲಿಯವರೆಗೆ ಸೌಹಾರ್ದದಿಂದ ಇರಿ.

*ದೇವದಾಸಿ ಮಹಿಳೆಯರಿಗೆ ವಸತಿಯಿಲ್ಲ. ಅವರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬಹುದಲ್ಲವೇ?
- ಮಹಂತೇಶ, ದಾವಣಗೆರೆ

ಉತ್ತರ: ದೇವದಾಸಿಯರು ಎಲ್ಲೆಡೆ ಇದ್ದಾರೆ. ಬಾಗಲಕೋಟೆ ಕಡೆ ಹೆಚ್ಚಾಗಿದ್ದಾರೆ. ಈ ಬಗ್ಗೆ ಸಮೀಕ್ಷೆ ಮಾಡಲಾಗಿದೆ. ಅವರಿಗೆ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಪುನರ್ವಸತಿ ಕಾರ್ಯಕ್ರಮಗಳಿವೆ. ಇನ್ಫೊಸಿಸ್ ಸುಧಾ ಮೂರ್ತಿ ಅವರೂ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.

*ಮದುವೆಯಾಗಿ 15 ವರ್ಷ ಆಗಿದೆ. ಮನೆಯಲ್ಲಿ ಸಣ್ಣ–ಪುಟ್ಟ ವಿಚಾರಕ್ಕೆ ಜಗಳವಾದರೂ ನನ್ನ ಪತಿ ವರದಕ್ಷಿಣೆ ವಿಚಾರವಾಗಿ ಚುಚ್ಚು ಮಾತನಾಡುತ್ತಾರೆ. ನಾನು ಏನ್‌ ಮಾಡ್ಬೇಕು?
-ರಮಾ, ಯಶವಂತಪುರ

ಉತ್ತರ: ನೀವು ಅಳಲು ತೋಡಿಕೊಂಡಿದ್ದು ತುಂಬಾ ಒಳ್ಳೆಯದು. ಏಕೆಂದರೆ ಹೆಚ್ಚಿನವರು ಈ ವಿಚಾರವನ್ನು ಹೇಳಿಕೊಳ್ಳುವುದಿಲ್ಲ. ಯಾವುದೇ ಕಾರಣಕ್ಕೂ ಆತ್ಮಹತ್ಯೆ ಯೋಚನೆ ಮಾಡಬೇಡಿ. ಗುಡಿಸಲಿ ನಲ್ಲಿರುವ ಮಹಿಳೆಯರೂ ತಮ್ಮ ಮಕ್ಕಳನ್ನು ಓದಿಸಿ ದೊಡ್ಡವರನ್ನಾಗಿ ಮಾಡಿದ ಉದಾಹರಣೆಗಳಿವೆ.

* ಚಿಕ್ಕಪ್ಪ ನಮ್ಮ ನ್ಯಾಯಯುತ ಆಸ್ತಿ ಕೊಡುತ್ತಿಲ್ಲ, ದಯವಿಟ್ಟು ಕೊಡಿಸಿ
-ಶಾರದಮ್ಮ, ದಾವಣಗೆರೆ

ಉತ್ತರ: ಮಹಿಳಾ ಆಯೋಗಕ್ಕೆ ದೂರು ಕೊಡಿ, ಕೌನ್ಸಲಿಂಗ್ ನಡೆಸಲಾಗುವುದು. ನಿಮ್ಮ ಸಮಸ್ಯೆಗೆ ಖಂಡಿತ ಪರಿಹಾರ ಸಿಗುತ್ತದೆ.

* ಆಸ್ತಿಯಲ್ಲಿ ಪಾಲು ಕೊಡುತ್ತಿಲ್ಲ, ಮಗ–ಸೊಸೆಯ ಜಗಳದಲ್ಲಿ ಮಕ್ಕಳು ಬಡವಾಗಿವೆ, ಅಪ್ರಾಪ್ತೆ ತಂಗಿಯ ಅಪಹರಣ ಆಗಿದೆ, ಅವಳಿಗೆ ನ್ಯಾಯ ಕೊಡಿಸಿ, ಮದುವೆಯಾಗದೆ ಯುವತಿಗೆ ಮಗುವಾಗಿದೆ, ಆಕೆಗೆ ಜೀವನಾಂಶ ಸಿಗುತ್ತದೆಯೇ?.. ಇಂತಹ ಹಲವು ಪ್ರಶ್ನೆಗಳನ್ನು ಕೇಳಲಾಯಿತು.

ಉತ್ತರ: ಮಹಿಳಾ ಆಯೋಗಕ್ಕೆ ಪತ್ರ ಬರೆಯಿರಿ. ಆಯೋಗದ ವತಿಯಿಂದ ಉಚಿತ ಕಾನೂನು ನೆರವು ಮತ್ತು ಉಚಿತ ಕಾನೂನು ಸಲಹೆ ನೀಡಲಾಗುತ್ತದೆ. 9902110455 ಗೆ ಕರೆ ಮಾಡಿ.‌‌

‘ಲಿವ್‌ –ಇನ್‌ ರಿಲೇಷನ್’ ಎಂಬ ಫ್ಯಾಷನ್‌–ಕಳವಳ
‘ಮಹಿಳಾ ಆಯೋಗವೆಂದರೆ ಮಹಿಳೆಯರಿಗೆ ಮಾತ್ರ ಎನ್ನುವುದು ತಪ್ಪು ಕಲ್ಪನೆ. ಪತಿ–ಪತ್ನಿ ನಡುವೆ ಹೊಂದಾಣಿಕೆ, ಸಹಬಾಳ್ವೆಯ ದೀಪ ಬೆಳಗಿಸುವುದು ಉದ್ದೇಶ. ನಮ್ಮ ಬಳಿ ಬಂದ ದೂರುಗಳಿಗೆ ಆ ದೃಷ್ಟಿಕೋನದಲ್ಲೇ ಪರಿಹಾರ ಒದಗಿಸಲಾಗುತ್ತದೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್‌.ಪ್ರಮೀಳಾ ನಾಯ್ದು ಹೇಳಿದರು.

‘ರಾಜ್ಯದ ಪ್ರತಿ ಮನೆಯಲ್ಲೂ ಕಾನೂನು ಅರಿವು ಮೂಡಬೇಕಿದೆ. ಜೊತೆಗೆ, ಸಂತ್ರಸ್ತ, ಅಸಹಾಯಕ ಮಹಿಳೆಯರಿಗೆ ಉಚಿತವಾಗಿ ಇದರ ನೆರವು ಸಿಗಬೇಕಿದೆ. ಅದು ಹಕ್ಕು ಕೂಡಾ. ಆಯೋಗದ ಕಾರ್ಯಯೋಜನೆಗಳನ್ನು ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಲಾಗಿದೆ’ ಎಂದರು.

‘ಕೌಟುಂಬಿಕ ದೌರ್ಜನ್ಯ ಸಂಬಂಧಿಸಿದ ದೂರುಗಳಲ್ಲಿ ಇಬ್ಬರನ್ನೂ 2–3 ಬಾರಿ ಕರೆಸಿ (ಗಂಡ–ಹೆಂಡತಿ) ಆಪ್ತ ಸಮಾಲೋಚನೆ ಮೂಲಕ ಮತ್ತೆ ಒಂದಾಗಿಸುವುದೇ ನಮ್ಮ ಆದ್ಯತೆ. ಆದರೆ, ಇತ್ತೀಚೆಗೆ ಕಾಲೇಜು ದಿನಗಳಲ್ಲೇ ‘ಲಿವ್‌ - ಇನ್‌ ರಿಲೇಷನ್‌’ (ಸಹಜೀವನ) ಎನ್ನುವಂಥದ್ದು ಫ್ಯಾಷನ್‌ ಆಗಿಬಿಟ್ಟಿದೆ. ಕೌಟುಂಬಿಕ ಬದುಕಿನ ವಾಸ್ತವಿಕತೆಯ ಅರಿವು, ಭವಿಷ್ಯದ ಬಗೆಗಿನ ಕಲ್ಪನೆ ಇಲ್ಲದಿರುವುದೇ ಈ ತಪ್ಪು ಹೆಜ್ಜೆಗೆ ಕಾರಣ. ಈ ಬಗ್ಗೆ ಕಾಲೇಜುಗಳಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT