ಮಂಗಳವಾರ, ಆಗಸ್ಟ್ 20, 2019
21 °C

ಕೆಪಿಎಸ್‌ಸಿ ನೇಮಕಾತಿ ಅಕ್ರಮ ಅರ್ಜಿದಾರನಿಗೆ ಜೀವಬೆದರಿಕೆ

Published:
Updated:

ಬೆಂಗಳೂರು: ಕೆಪಿಎಸ್‌ಸಿ ನಡೆಸಿದ 1998, 99, 2004ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಕದ ತಟ್ಟಿದ ದೂರುದಾರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯೂ ಆಗಿರುವ ಖಲೀಲ್ ಅಹ್ಮದ್ ಅವರಿಗೆ ಜೀವಬೆದರಿಕೆ ಎದುರಾಗಿದೆ.

ಈ ಸಂಬಂಧ ಇದೇ 27ರಂದು ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌. ರಾಜು ಅವರಿಗೆ ದೂರು ನೀಡಿರುವ ಖಲೀಲ್‌ ಅಹ್ಮದ್‌, ‘ಅಪರಿಚಿತರು ನನ್ನ ಮನೆಗೆ ಮತ್ತು ಕಚೇರಿಗೆ ಬಂದು ಹೆದರಿಸುತ್ತಿದ್ದಾರೆ. ಸಿಸಿಬಿ ಪೊಲೀಸರೆಂದು ಹೇಳಿಕೊಂಡು ಬಂದಿದ್ದ ಕೆಲವರು ಸಿಸಿಬಿ ಕಚೇರಿಗೆ ಬರಬೇಕು ಎಂದು ಒತ್ತಾಯಿಸಿದ್ದರು. ಇದರಿಂದ ನನ್ನ ಕುಟುಂಬದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ’ ಎಂದು ವಿವರಿಸಿದ್ದಾರೆ.

ನೇಮಕಾತಿಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರತ್ಯೇಕ ಪ್ರಕರಣದಲ್ಲಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಡಾ.ಎಚ್.ಎನ್. ಕೃಷ್ಣ, ಆರೋಪಿಯಾಗಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿರುವ ಮಧ್ಯೆಯೇ ಖಲೀಲ್‌ ಅಹ್ಮದ್‌ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ರಾಯಚೂರಿಗೆ ವರ್ಗ ಮಾಡಲಾಗಿದೆ.

ಇದೇ 31ರಂದು ಪೊಲೀಸ್‌ ಕಮಿಷನರ್‌ ಅಲೋಕ್‌ಕುಮಾರ್‌ಗೆ ದೂರು ನೀಡಿದ್ದಾರೆ. ‘ನನ್ನ ಹೋರಾಟಕ್ಕೆ ಅಡ್ಡಿಪಡಿಸಲು ಜೀವಬೆದರಿಕೆ ಒಡ್ಡಲಾಗುತ್ತಿದೆ. ಇದೇ ಕಾರಣಕ್ಕೆ ವರ್ಗ ಆಗಿದೆ’ ಎಂದು ಖಲೀಲ್‌ ಆರೋಪಿಸಿದರು.

Post Comments (+)