ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ, ಮೆಣಸು, ಏಲಕ್ಕಿ ಇಳುವರಿ ಕುಸಿತ

ಕೊಡಗಿನಲ್ಲಿ ಪ್ರಕೃತಿ ವಿಕೋಪದ ಪರಿಣಾಮ; ಬೆಳೆಗಾರರಿಗೆ ಮತ್ತೊಂದು ಹೊಡೆತ
Last Updated 2 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಕೃತಿ ವಿಕೋಪದ ಸಂಕಷ್ಟದಲ್ಲಿರುವ ಕೊಡಗಿನ ಕಾಫಿ ಬೆಳೆಗಾರರಿಗೆ ಮತ್ತೊಂದು ಹೊಡೆತ ಬಿದ್ದಿದೆ. ಕಾಫಿ ಕೊಯ್ಲು ಆರಂಭಗೊಂಡಿದ್ದು, ಇಳುವರಿ ಕುಸಿತವು ಗಾಯದ ಮೇಲೆ ಬರೆ ಎಳೆದಿದೆ.

ಪ್ರತಿವರ್ಷ ಸುಗ್ಗಿಯ ವೇಳೆ ಬೆಳೆಗಾರರು ಸಂತಸದ ‘ಅಲೆ’ಯಲ್ಲಿ ತೇಲುತ್ತಿದ್ದರು. ಆದರೆ, ಈ ಬಾರಿ ಕೊಡಗಿನ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳುಮೆಣಸು, ಏಲಕ್ಕಿ ಬೆಳೆಗಾರರ ಕೈಹಿಡಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.

ಜೂನ್‌, ಜುಲೈ ಹಾಗೂ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಗೆ ಕಾಫಿ ಗಿಡ, ಕಾಳುಮೆಣಸಿನ ಬಳ್ಳಿಗಳು ಕೊಳೆರೋಗಕ್ಕೆ ತುತ್ತಾಗಿದ್ದವು. 4,500 ಎಕರೆಯಷ್ಟು ಕಾಫಿ ತೋಟ ಭೂಕುಸಿತಕ್ಕೆ ತುತ್ತಾಗಿತ್ತು. 1,000 ಹೆಕ್ಟೇರ್‌ ಭತ್ತದ ಗದ್ದೆಯಲ್ಲಿ ಹೂಳು ತುಂಬಿ ಪೈರೂ ಮೇಲೆದ್ದಿಲ್ಲ. ಹೀಗಾಗಿ, ಶೇ 50ರಷ್ಟು ಇಳುವರಿ ಕುಸಿಯಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ತೇವಾಂಶ ಹೆಚ್ಚಳದಿಂದ ಹೀಚುಕಟ್ಟುವ ಹಂತದಲ್ಲೇ ಕಾಫಿ ಕಾಯಿಗಳು ಮಣ್ಣು ಪಾಲಾಗಿದ್ದವು. ಅದು ಇಳುವರಿ ಮೇಲೂ ಪರಿಣಾಮ ಬೀರಿದ್ದು, ಮಾಡಿದ ಖರ್ಚೂ ಸಿಗುತ್ತಿಲ್ಲವೆಂದು ರೈತರು ನೋವು ತೋಡಿಕೊಳ್ಳುತ್ತಿದ್ದಾರೆ.

ಜೇಬು ತುಂಬಿಸುತ್ತಿಲ್ಲ: ಸೋಮವಾರಪೇಟೆ, ಕೊಡ್ಲಿಪೇಟೆ, ಶನಿವಾರಸಂತೆ ಭಾಗದಲ್ಲಿ ಅರೇಬಿಕಾ ಕಾಫಿಯನ್ನು ಬೆಳೆಯಲಾಗುತ್ತಿದ್ದು, ಕೊಯ್ಲು ಆರಂಭವಾಗಿದೆ. ದಕ್ಷಿಣ ಕೊಡಗಿನಲ್ಲಿ ಬೆಳೆಯುವ ರೋಬಸ್ಟಾ ಜನವರಿ ವೇಳೆಗೆ ಕೊಯ್ಲಿಗೆ ಬರಲಿದೆ. ಆದರೆ, ಎರಡು ವಿಧದ ಕಾಫಿಯೂರೈತರ ಜೇಬು ತುಂಬಿಸುತ್ತಿಲ್ಲ.

ನೂರು ಚೀಲ ಕಾಫಿ ಬೆಳೆಯುತ್ತಿದ್ದವರಿಗೆ ಕೇವಲ 50 ಚೀಲ ಫಸಲು ಸಿಗುವ ಸಾಧ್ಯತೆಯಿದೆ. ‘ಇತ್ತ ಫಸಲೂ ಇಲ್ಲ; ಅತ್ತ ಬೆಲೆಯೂ ಇಲ್ಲ’ ಎನ್ನುವ ಸ್ಥಿತಿ ಬೆಳೆಗಾರರದ್ದು. ಜಿಲ್ಲೆಯ ಯಾವ ಕಾಫಿ ತೋಟ ನೋಡಿದರೂ ಗಿಡಗಳು ಬರಿದಾಗಿ ನಿಂತಿರುವ ದೃಶ್ಯ ಕಣ್ಣಿಗೆ ಬೀಳುತ್ತಿದ್ದು ಭವಿಷ್ಯದ ಚಿಂತೆ ಕಾಡುತ್ತಿದೆ.

‘ಕಾಫಿ ಮಾತ್ರವಲ್ಲದೇ ಕಾಳುಮೆಣಸಿನ ಬಳ್ಳಿಗಳಲ್ಲೂ ಕಾಳು ಇಲ್ಲ. ಬಳ್ಳಿಗಳು ಕಂದುಬಣ್ಣಕ್ಕೆ ತಿರುಗಿದ್ದು ಮುಂದಿನ ವರ್ಷಕ್ಕೆ ಉಳಿಸಿಕೊಳ್ಳುವುದೇ ಸವಾಲಾಗಿದೆ. ಪ್ರವಾಹದ ವೇಳೆ ವಾರಗಟ್ಟಲೇ ತೋಟದಲ್ಲಿ ನೀರು ನಿಂತಿದ್ದರ ಪರಿಣಾಮ ಬಳ್ಳಿಗಳನ್ನೇ ಕಳೆದುಕೊಳ್ಳುವ ಸ್ಥಿತಿಯಿದೆ. ಹತ್ತು ವರ್ಷಗಳಿಂದ ಬೆಳೆಸಿದ್ದ ಬಳ್ಳಿಗಳು ಕಣ್ಣೆದುರೇ ಸೊರಗುತ್ತಿವೆ. ಜನವರಿಯಲ್ಲಿ ಕಾಳುಮೆಣಸು ಕೊಯ್ಲಿಗೆ ಬರುತ್ತಿದ್ದು ಬದುಕಿಗೆ ಆಸರೆಯಾಗುವ ನಿರೀಕ್ಷೆಯಲ್ಲಿದ್ದೆವು’ ಎಂದು ಚೆಯ್ಯಂಡಾವಣೆ ಕಾಫಿ ಬೆಳೆಗಾರರ ನಂದ ಅವರು ನೋವು ತೋಡಿಕೊಂಡರು.

ರೈತರು ಅತಂತ್ರ: ‘ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವುದು ಇನ್ನೂ ಅಂತಿಮವಾಗಿಲ್ಲ. ಆದರೆ, ನೆಲೆ ಕಳೆದುಕೊಂಡವರಿಗೆ ₹ 10 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ’ ಎಂದು ಪುನರ್ವಸತಿ ಅಧಿಕಾರಿಯೊಬ್ಬರು ತಿಳಿಸಿದರು.

**

ಹುಸಿಯಾದ ಪ್ಯಾಕೇಜ್‌ ಘೋಷಣೆ

‘ಭೂಕುಸಿತದಿಂದ ಬದುಕಿಗೆ ಆಧಾರವಾಗಿದ್ದ ಕಾಫಿ ತೋಟವನ್ನೇ ನೂರಾರು ಬೆಳೆಗಾರರು ಕಳೆದುಕೊಂಡಿದ್ದರು. ಕೇಂದ್ರ ಸರ್ಕಾರವು ದೊಡ್ಡಮೊತ್ತದ ಪ್ಯಾಕೇಜ್‌ ಘೋಷಿಸಿ ರೈತರಿಗೆ ನೆರವಾಗಲಿದೆ ಎಂಬ ಧೈರ್ಯದಲ್ಲಿದ್ದೆವು. ಆದರೆ, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಸೇರಿ ₹ 546 ಕೋಟಿ ನೆರವು ಘೋಷಿಸಿರುವುದು ರೈತರನ್ನು ನಿರಾಸೆಗೊಳಿಸಿದೆ. ಕೊಡಗಿನಲ್ಲಿ ದೊಡ್ಡಮಟ್ಟದ ಹಾನಿಯಾಗಿದ್ದು ಪ್ರತ್ಯೇಕ ಪ್ಯಾಕೇಜ್‌ ನೀಡಬೇಕಿತ್ತು’ ಎಂದು ರೈತ ಸಂಘದ ಮುಖಂಡ ಸುಬ್ಬಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT