ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಲಸ್ಫೋಟ’ದ ಮುನ್ಸೂಚನೆ ಬಂದಿಲ್ಲ, ಭೀತಿ ಹುಟ್ಟಿಸಿದರೆ ಕ್ರಮ: ಕೊಡಗು ಜಿಲ್ಲಾಡಳಿತ

Last Updated 10 ಮೇ 2019, 13:09 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ವರ್ಷವೂ ಭಾರಿ ಮಳೆ ಸುರಿದು ಜಲಸ್ಫೋಟ, ಪ್ರವಾಹ ಹಾಗೂ ಭೂಕುಸಿತ ಸಂಭವಿಸಲಿದೆ ಜನರಲ್ಲಿ ಭೀತಿ ಹುಟ್ಟಿಸುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

‘ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವೇ ಅಧಿಕೃತ ಸಂಸ್ಥೆಯಾಗಿದೆ. ವಿಪತ್ತಿನ ಯಾವ ಸೂಚನೆಯನ್ನೂ ಕೇಂದ್ರವು ಇದುವರೆಗೂ ನೀಡಿಲ್ಲ. ಜಿಲ್ಲೆಯ ಜನರು ಭೀತಿಗೆ ಒಳಗಾಗುವುದು ಬೇಡ’ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಕೊಡಗು ಆಪತ್ತಿನಲ್ಲಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ಹಬ್ಬಿಸಿದರೆ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

‘ಕಳೆದ ವರ್ಷದಂತೆ ಕೇರಳ ಮಾದರಿಯಲ್ಲಿ ಕೊಡಗಿನಲ್ಲೂ ಪ್ರಾಕೃತಿಕ ವಿಕೋಪ ಮರುಕಳಿಸಲಿದೆ ಎಂದು ನಿವೃತ್ತ ಉಪ ಮಹಾ ನಿರ್ದೇಶಕರೊಬ್ಬರು ನೀಡಿರುವ ಹೇಳಿಕೆಯು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು ಅವರನ್ನು ಅಧ್ಯಯನಕ್ಕೆ ಸರ್ಕಾರ ನೇಮಿಸಿಲ್ಲ. ಅವರು ಖಾಸಗಿಯಾಗಿ ಅಧ್ಯಯನ ನಡೆಸಿರಲೂಬಹುದು. ಅಧಿಕೃತ ಸಂಸ್ಥೆಯಿಂದ ಮುನ್ಸೂಚನೆ ಲಭಿಸಿದರೆ ಜನರ ಸುರಕ್ಷತೆಗೆ ಜಿಲ್ಲಾಡಳಿತ ಬದ್ಧವಾಗಿದೆ’ ಎಂದೂ ತಿಳಿಸಿದ್ದಾರೆ.

‘ಜ್ವಾಲಾಮುಖಿ ಸ್ಫೋಟದ ಪರಿಣಾಮ ಆಗಿಲ್ಲ’: ‘ಕಳೆದ ವರ್ಷ ಕೊಡಗು ಜಿಲ್ಲೆ ಮತ್ತು ಕೇರಳದಲ್ಲಿ ಅಸಹಜ ರೀತಿಯಲ್ಲಿ ಭಾರಿ ಮಳೆ ಸುರಿದಿತ್ತು. ಮಳೆ ಹಾಗೂ ಬೇರೆ ಭಾಗಗಳಲ್ಲಿ ಉಂಟಾಗುವ ಜ್ವಾಲಾಮುಖಿ ಸ್ಫೋಟಕ್ಕೂ ಸಂಬಂಧವಿರುವ ಬಗ್ಗೆ ವೈಜ್ಞಾನಿಕ ಸಂಶೋಧನೆಗಳಿಂದ ಇನ್ನಷ್ಟೇ ದೃಢಪಡಬೇಕಿದೆ. ಕಳೆದ ವಾರ ಕೊಡಗಿನಲ್ಲಿ ಬಿದ್ದ ಮಳೆಯು ಮುಂಗಾರು ಪೂರ್ವ ಮಳೆ. ಸಾಮಾನ್ಯವಾದ ಗುಡುಗು, ಮಿಂಚಿನಿಂದ ಕೂಡಿದ್ದು ಯಾವುದೇ ರೀತಿಯ ಜ್ವಾಲಾಮುಖಿ ಸ್ಫೋಟದ ಪರಿಣಾಮ ಆಗಿಲ್ಲ’ ಎಂದು ನೈಸರ್ಗಿಕ ವಿಕೋಪದ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್‌. ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

‘ಒಂದು ವರ್ಷ ಜೈಲು’: ರಾಜ್ಯದ ಯಾವುದೇ ಭಾಗದಲ್ಲಿ ಈ ವರ್ಷ ಅತಿವೃಷ್ಟಿ, ಪ್ರವಾಹದ ಮುನ್ಸೂಚನೆ ಇಲ್ಲ. ನೈಸರ್ಗಿಕ ವಿಪತ್ತಿನ ಮಾಹಿತಿ ಸಿಕ್ಕರೆ ಮೊದಲೇ ತಿಳಿಸುತ್ತೇವೆ. ಜನರು ಭೀತಿಗೆ ಒಳಗಾಗುವುದು ಬೇಡ. ಹವಾಮಾನ, ಭೌಗೋಳಿಕ ವೈಪರೀತ್ಯದಿಂದ ಉಂಟಾಗಬಹುದಾದ ಪ್ರಕೃತಿ ವಿಕೋಪದ ಬಗ್ಗೆ ಅಧಿಕೃತವಾಗಿ ತಿಳಿಸುತ್ತೇವೆ’ ಎಂದೂ ಶ್ರೀನಿವಾಸ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಆತಂಕಕ್ಕೆ ಕಾರಣವಾಗಿದ್ದು ಏನು?: ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ಈ ವರ್ಷವೂ ಭಾರಿ ಮಳೆ ಸುರಿದು ಮತ್ತೆ ಅನಾಹುತ ಸಂಭವಿಸಲಿದೆ ಎಂದು ಹಿರಿಯ ಭೂಗರ್ಭ ವಿಜ್ಞಾನಿಯೊಬ್ಬರು ಹೇಳಿದ್ದು ಜಿಲ್ಲೆಯಲ್ಲೂ ಆತಂಕಕ್ಕೆ ಕಾರಣವಾಗಿತ್ತು. ಕೆಲವು ಬಡಾವಣೆ ನಿವಾಸಿಗಳು ಮನೆ ಖಾಲಿ ಮಾಡಿದ್ದ ಘಟನೆಗಳೂ ನಡೆದಿದ್ದವು.

‘ಕಳೆದ ವರ್ಷ ಕೊಡಗಿನಲ್ಲಿ ಮುಂಗಾರು ಪ್ರವೇಶಕ್ಕೂ ಮೊದಲೇ ದೊಡ್ಡ ಮಳೆ ಸುರಿದಿತ್ತು. ಆಗಸ್ಟ್‌ ನಲ್ಲಿ ಪದೇ ಪದೇ ಮಳೆಯಾಗಿದ್ದರ ಪರಿಣಾಮ ನೀರನ್ನು ಹಿಡಿದಿಟ್ಟುಕೊಳ್ಳಲು ಭೂಮಿಗೆ ಸಾಧ್ಯವಾಗದೇ ಅನಾಹುತ ಉಂಟಾಗಿತ್ತು. ಈ ವರ್ಷವೂ ಕೊಡಗು ಹಾಗೂ ಕೇರಳದಲ್ಲಿ ಎರಡು ದಿನ ದೊಡ್ಡ ಪ್ರಮಾಣದ ಮಳೆಯಾಗಿದೆ. ಕಳೆದ ವರ್ಷದ ಮಳೆಯ ವಾತಾವರಣವೇ ಈ ವರ್ಷವೂ ಕಂಡುಬಂದಿದೆ’ ಎಂದು ಖಾಸಗಿಯಾಗಿ ನಡೆದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

‘ಕಳೆದ ವರ್ಷದ ಮಳೆಗೆ ಭೂಮಿಯ ಮೇಲ್ಪದರ ಸಂಪೂರ್ಣ ಹಾಳಾಗಿದೆ. ಹಳ್ಳ, ನದಿಗಳಲ್ಲಿ ಮಣ್ಣು ನಿಂತಿದೆ. ಆದ್ದರಿಂದ ಕಳೆದ ವರ್ಷಕ್ಕಿಂತ ಅನಾಹುತ ಹೆಚ್ಚಾಗಲಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಿಂಗಳಾಂತ್ಯಕ್ಕೆ ಭೂವಿಜ್ಞಾನಿಗಳ ವರದಿ:2018ರಲ್ಲಿ ಕೊಡಗಿನಲ್ಲಿ ಸಂಭವಿಸಿದ್ದ ಭೂಕುಸಿತಕ್ಕೆ ಕಾರಣ ಕಂಡುಹಿಡಿಯಲು ರಾಜ್ಯ ಸರ್ಕಾರವು ನೇಮಿಸಿದ್ದ ಭಾರತೀಯ ಭೂಸರ್ವೇಕ್ಷಣಾ ಇಲಾಖೆ ಹಿರಿಯ ವಿಜ್ಞಾನಿಗಳ ತಂಡವು ಈ ತಿಂಗಳಾಂತಕ್ಕೆ ಅಂತಿಮ ವರದಿ ಸಲ್ಲಿಸಲಿದೆ ಎಂದೂ ಅನೀಸ್‌ ಕಣ್ಮಣಿ ಜಾಯ್ ತಿಳಿಸಿದ್ದಾರೆ.

‘ಎರಡು ದಿನಗಳ ಹಿಂದೆ ಪ್ರಾಥಮಿಕ ವರದಿ ಸಲ್ಲಿಸಿದ್ದು ಅರು ಸ್ಥಳಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿದೆ. ಅಲ್ಲಿ ಮಾತ್ರ ಅನಾಹುತದ ಸಾಧ್ಯತೆಯ ಎಚ್ಚರಿಕೆ ನೀಡಿದ್ದು ಜನರ ಸುರಕ್ಷತೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಭೂಸರ್ವೇಕ್ಷಣಾ ಇಲಾಖೆ ನಿರ್ದೇಶಕರಾಗಿದ್ದ ಕೆ.ವಿ.ಮಾರುತಿ, ಹಿರಿಯ ಭೂವಿಜ್ಞಾನಿ ಅಂಕುರ್‌ ಕುಮಾರ್‌ ಶ್ರೀವಾಸ್ತವ್‌, ಭೂವಿಜ್ಞಾನಿ ಸುನಂದನ್‌ ಬಸು ಅವರನ್ನು ಒಳಗೊಂಡ ತಂಡವು ಭೂಕುಸಿತ, ಪ್ರವಾಹ ಉಕ್ಕೇರಿದ್ದ ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿತ್ತು. ಮಡಿಕೇರಿ, ಸೋಮವಾರಪೇಟೆ ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ 39 ಗ್ರಾಮಗಳು ಪ್ರಕೃತಿ ವಿಕೋಪದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವು. ಈ ಗ್ರಾಮಗಳು ಭವಿಷ್ಯದಲ್ಲಿ ವಾಸಕ್ಕೆ ಯೋಗ್ಯವೇ ಎಂಬ ನಿಟ್ಟಿನಲ್ಲೂ ಅಧ್ಯಯನ ಮಾಡಲಾಗಿತ್ತು.

ಮಂಗಳೂರು ರಸ್ತೆಯ 2ನೇ ಮೊಣ್ಣಂಗೇರಿ, ಜೋಡುಪಾಲದಲ್ಲಿ ದೊಡ್ಡ ಪ್ರಮಾಣದ ಭೂಕುಸಿತವಾಗಿತ್ತು. ಅಲ್ಲಿನ ಭೂಮಿ ವಾಸಕ್ಕೆ ಯೋಗ್ಯವಾಗಿಲ್ಲ ಎಂದು ಆರಂಭದಲ್ಲಿ ಭೂವಿಜ್ಞಾನಿಗಳು ಹೇಳಿದ್ದರು. ಆ ಗ್ರಾಮಗಳ ಮಣ್ಣಿನ ಮೂಲ ಪದರ, ಭೂರಚನೆ ಕುರಿತು ಸಮಗ್ರ ಅಧ್ಯಯನ ನಡೆಸಿರುವ ವಿಜ್ಞಾನಿಗಳು ತಿಂಗಳ ಕೊನೆಯಲ್ಲಿ ಅಂತಿಮ ವರದಿ ಸಲ್ಲಿಕೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT