ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಕಂಪು ಪಸರಿಸಿದ ಮಲ್ಲೋರಹಟ್ಟಿ

ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಸೇವೆ
Last Updated 31 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಶನಿವಾರಸಂತೆ: ಕನ್ನಡ ನಾಡು, ನುಡಿಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಒಲವು ಮೂಡಿಸಿಕೊಂಡು ಕನ್ನಡ ಪರ ಕಾರ್ಯಕ್ರಮ ನಡೆಸಿದವರು ಚಂದ್ರಶೇಖರ್ ಮಲ್ಲೋರಹಟ್ಟಿ.

1981ರಿಂದ 2007ರ ವರೆಗೆ 26 ವರ್ಷಗಳ ಕಾಲ ಕೊಡ್ಲಿಪೇಟೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಶಾಖೆ ಮೇಲ್ವಿಚಾರಕರಾಗಿದ್ದು ನಂತರ 2014ರವರೆಗೂ ಕೊಡ್ಲಿಪೇಟೆಯಲ್ಲಿ ನೆಲೆಸಿದ್ದ ಚಂದ್ರಶೇಖರ್ ಮಲ್ಲೋರ ಹಟ್ಟಿ ಅವರಿಂದ ಶನಿವಾರಸಂತೆ - ಕೊಡ್ಲಿಪೇಟೆ ಹೋಬಳಿಯಾದ್ಯಂತ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಅಭಿಮಾನ ಮೂಡಿತ್ತು. ಎಲೆಮರೆಯ ಕಾಯಿಗಳಂತಿದ್ದ ಎಷ್ಟೋ ಉದಯೋನ್ಮುಖ ಪ್ರತಿಭೆಗಳು ಬೆಳಕಿಗೆ ಬಂದವು. ಈ ಪ್ರತಿಭೆಗಳು ಇಂದು ಕೊಡಗಿನ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿವೆ.

ಮಲ್ಲೋರಹಟ್ಟಿ ಅವರು 1972ರಲ್ಲಿ ಮಂಗಳೂರಿನ ಭಾವುಟಗುಡ್ಡೆಯ ಕಾರ್ನಾಡ ಸದಾಶಿವ ರಾವ್ ಸ್ಮಾರಕ ಜಿಲ್ಲಾ ಗ್ರಂಥಾಲಯದ ಮೇಲ್ವಿಚಾರಕರಾಗಿ ತಮ್ಮ ಉದ್ಯೋಗ ಪರ್ವ ಆರಂಭಿಸಿದರು. ಅಲ್ಲಿ ಕವಿಗಳಾದ ಪರಮೇಶ್ವರ ಭಟ್ ಹಾಗೂ ವಾಮನ ನಂದಾವರ ಅವರ ಪರಿಚಯವಾಗಿ ಸಾಹಿತ್ಯದಲ್ಲಿ ಆಸಕ್ತಿ ಮೂಡಿತು. ಉಪನ್ಯಾಸಕ ಕಲಾವಿದ ಸಿ.ಎನ್.ಭಟ್ ಅವರಿಂದ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸಿಕೊಂಡು ಕಲಾವಿದರೂ ಆಗಿದ್ದಾರೆ.

1976ರಲ್ಲಿ ಮಡಿಕೇರಿಯ ಜಿಲ್ಲಾ ಗ್ರಂಥಾಲಯದಲ್ಲಿ 1 ವರ್ಷ ಕರ್ತವ್ಯ ನಿರ್ವಹಿಸಿ, 1978ರಲ್ಲಿ ಕುಶಾಲನಗರಕ್ಕೆ ಬಂದು ಅಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕಾಗಿ ಅಭಿನವ ಕಲಾ ರಂಗ ಸಂಘ ಕಟ್ಟಿ ನಾಟಕ ಪ್ರದರ್ಶನ ನೀಡಿ ₹ 5 ಸಾವಿರ ಸಂಗ್ರಹಿಸಿದರು.

ಇವರ ಕಾರ್ಯ ಚಟುವಟಿಕೆ ಗಮನಿಸಿ, 1981ರಲ್ಲಿ ಕೊಡ್ಲಿಪೇಟೆಯ ಸಾರ್ವಜನಿಕ ಗ್ರಂಥಾಲಯ ಶಾಖೆಗೆ ವರ್ಗಾವಣೆ ಮಾಡಲಾಗಿತ್ತು. ಮೇಲ್ವಿಚಾರಕರಾಗಿದ್ದುಕೊಂಡೇ ಗ್ರಂಥಾಲಯ ಅಭಿವೃದ್ಧಿ ಜತೆಯಲ್ಲೇ ಸಾಹಿತ್ಯ ಕೃಷಿಯಲ್ಲೂ ಪ್ರಗತಿ ಸಾಧಿಸಿದರು.

ಕನ್ನಡ ನಾಡು-ನುಡಿಯ ಅಭಿವೃದ್ಧಿಗಾಗಿ ಕನ್ನಡದ ಕಂಪನ್ನು ಗ್ರಾಮೀಣ ಪ್ರದೇಶದಲ್ಲಿ ಪಸರಿಸಲು ‘ಕನ್ನಡ ಯುವಕ ಸಂಘ’ ಎಂಬ ಸಂಘ ಕಟ್ಟಿದರು. ಮಂಗಳಾ ಕಲಾ-ಸಾಹಿತ್ಯ ವೇದಿಕೆ ಸ್ಥಾಪಿಸಿಕೊಂಡರು. 10 ಜನ ಯುವಕರನ್ನು ಸದಸ್ಯರನ್ನಾಗಿಸಿ ಪ್ರತಿತಿಂಗಳು ‘ಚಿಂತನಾ-ಮಂಥನಾ’ ಹಾಗೂ ಕವಿಗೋಷ್ಠಿ ಇತ್ಯಾದಿ ಕನ್ನಡಪರ ಕಾರ್ಯಕ್ರಮಗಳನ್ನು ನಡೆಸಿದರು. ಉತ್ಸಾಹ ತೋರಿದವರಿಗೆ ಕತೆ, ಕವನ, ಲೇಖನ ರಚನೆಗೆ ಪ್ರೋತ್ಸಾಹ ನೀಡಿದರು.

ನಂತರ, ಮಲ್ಲೋರಹಟ್ಟಿ ಮಂಗಳಾ ಕಲಾ-ಸಾಹಿತ್ಯ ವೇದಿಕೆಯ ಜಿಲ್ಲಾ ಅಧ್ಯಕ್ಷರಾದರು. ಸಾಕ್ಷರ ಆಂದೋಲನದ ಪಂಚಾಯಿತಿ ನೋಡೆಲ್ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದರು. ಜಿಲ್ಲಾಮಟ್ಟದ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿದ್ದರು.

ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿದ್ದು, ಚಿಕ್ಕಮಗಳೂರು-ಮಂಡ್ಯ ವಿಭಾಗೀಯಮಟ್ಟದ ರಾಜ್ಯ ಯುವಜನ ಮೇಳದ ತೀರ್ಪುಗಾರರಾಗಿ, ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿ, ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ನೌಕರರ ಸಂಘದ ಅಧ್ಯಕ್ಷರಾಗಿಯೂ ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ್ದಾರೆ.

ಬೀದರ್‌ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚಿಸಿದ ಚಂದ್ರಶೇಖರ್ ಮಲ್ಲೋರಹಟ್ಟಿ ಗೋವಾದಲ್ಲಿ ನಡೆದ ಅಖಿಲ ಭಾರತ ಗ್ರಂಥಾಲಯ ಸಮ್ಮೇಳನದಲ್ಲಿ ರಾಜ್ಯ ಪ್ರತಿನಿಧಿಯಾಗಿ ಭಾಗವಹಿಸಿದ್ದರು. 2017ರಲ್ಲಿ ಸೋಮವಾರಪೇಟೆಯಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡಭಿಮಾನ ಮೆರೆದರು. ಅಭಿನವ ಕಲಾ ರಂಗ ಸಂಘ ಕಟ್ಟಿ ಕಿರಿಯ ಪ್ರತಿಭೆಗಳಿಗೆ, ವಿದ್ಯಾರ್ಥಿಗಳಿಗೆ ಸಾಹಿತ್ಯಕ ಮಾರ್ಗದರ್ಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT