ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಲು ಆಗ್ರಹಿಸಿ ಸಿಎಂಗೆ ಡಿಕೆಶಿ ಪತ್ರ

Last Updated 21 ಮೇ 2020, 10:36 IST
ಅಕ್ಷರ ಗಾತ್ರ

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಸಾಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಪಡಿಸುವಂತೆ ಮತ್ತು ಎಫ್‌ಐಆರ್‌ ದಾಖಲಿಸಿದಪೊಲೀಸ್‌ ಅಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ.

‘ಕಾಂಗ್ರೆಸ್‌ನ ಟ್ವೀಟ್‌ಗೆ ಸಂಬಂಧಿಸಿದಂತೆ ವಕೀಲ, ಬಿಜೆಪಿ ಕಾರ್ಯಕರ್ತ ಕೆ.ವಿ ಪ್ರವೀಣ್‌ ಕುಮಾರ್‌ ಸುಳ್ಳು ಮಾಹಿತಿ ನೀಡಿ ಸಾಗರ ಪೊಲೀಸ್‌ ಠಾಣೆಯಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧ ದಾಖಲಿಸಿರುವ ದೂರು ರಾಜಕೀಯ ಪ್ರೇರಿತ. ಪಿಎಂ ಕೇರ್ಸ್‌ ಹಣವನ್ನು ದೇಶದ ಜನರ ಒಳಿತಿಗಾಗಿ ಬಳಕೆ ಮಾಡುವಂತೆ ಕಾಂಗ್ರೆಸ್‌ ಮಾಡಿದ್ದ ಟ್ವೀಟ್‌ ಅನ್ನು ತಪ್ಪಾಗಿ ವ್ಯಾಖ್ಯಾನಿಸಿ ದೂರು ನೀಡಲಾಗಿದೆ. ದೂರನ್ನು ಪರಿಶೀಲಿಸದೇ ಸಾಗರ ಪೊಲೀಸರು ಸೋನಿಯಾ ಗಾಂಧಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಇದು ಕಾನೂನು ಪ್ರಕ್ರಿಯೆಯ ದುರುಪಯೋಗ. ಅಲ್ಲದೆ, ಆರೋಗ್ಯಕರ ಟೀಕೆಯನ್ನು ಹತ್ತಿಕ್ಕುವ ಪ್ರಯತ್ನ,’ ಎಂದು ಡಿಕೆ ಶಿವಕುಮಾರ್‌ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಸೋನಿಯಾ ಗಾಂಧಿ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಅನ್ನು ಕೂಡಲೇ ರದ್ದುಗೊಳಿಸಬೇಕು. ಎಫ್‌ಐಆರ್‌ ದಾಖಲಿಸಿದ ಪೊಲೀಸ್‌ ಅಧಿಕಾರಿಯನ್ನು ಅಮಾನತುಗೊಳಿಸಬೇಕು. ಅಲ್ಲದೆ, ಕಾನೂನು ಪ್ರಕ್ರಿಯೆಯಲ್ಲಿ ದೋಷವೆಸಗಿದ ಪೊಲೀಸ್‌ ಅಧಿಕಾರಿ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು,’ ಎಂದು ಡಿಕೆಶಿ ಆಗ್ರಹಿಸಿದ್ದಾರೆ.

ದೂರಿನಲ್ಲಿ ಏನಿತ್ತು?

‘ಸೋನಿಯಾ ಗಾಂಧಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪಿ.ಎಂ. ಕೇರ್ಸ್ ನಿಧಿಗೆ ಸಂದಾಯವಾಗುತ್ತಿರುವ ಹಣ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ ಎಂದು ಪ್ರಕಟಿಸಿದ್ದಾರೆ. ಈ ಸಂದೇಶ ನಾಗರಿಕರಲ್ಲಿ ಅಪನಂಬಿಕೆ ಹುಟ್ಟಿಸಿ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ಹುನ್ನಾರವಾಗಿದೆ,’ ಎಂದು ವಕೀಲ ಪ್ರವೀಣ್‌ ಕುಮಾರ್‌ ದೂರಿದ್ದರು.

ಇದೇ ಆಧಾರದಲ್ಲಿ ಸಾಗರ ಪೊಲೀಸರು ಭಾರತೀಯ ದಂಡ ಸಂಹಿತೆ ಕಲಂ 153 (ದಂಗೆ ಏಳಲು ಪ್ರಚೋದನೆ), 505 (1), (ಬಿ) ( ಸರ್ಕಾರದ ವಿರುದ್ಧ ಅಪನಂಬಿಕೆ ಹುಟ್ಟಿಸುವುದು) ರ ಅನ್ವಯ ಎಫ್‌ಐಆರ್‌ ದಾಖಲಿಸಿದ್ದಾರೆ.

ಸಿಎಂ ಭೇಟಿಯಾಗಲಿರುವ ಡಿಕೆಶಿ

ಸೋನಿಯಾ ಗಾಂಧಿ ಅವರ ವಿರುದ್ಧ ಸಾಗರ ಪೊಲೀಸರು ಕೇಸು ದಾಖಲಿಸಿರುವ ಸಂಬಂಧ ಇಂದು (ಗುರುವಾರ) ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಿ.ಎಸ್‌ ಯಡಿಯೂರಪ್ಪ ಅವರನ್ನು ಭೇಟಿಯಾಗುತ್ತಿದ್ದಾರೆ ಎಂದು ಕಾಂಗ್ರೆಸ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT