ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌.ಪುರ ಅಖಾಡದಲ್ಲೊಂದು ಸುತ್ತು| ವ್ಯಕ್ತಿ ನಿಷ್ಠೆ–ಪಕ್ಷ ನಿಷ್ಠೆಯ ಪೈಪೋಟಿ

ಕೆ.ಆರ್‌.ಪುರ ಪರಸ್ಪರ ಬೈದುಕೊಳ್ಳುತ್ತಿದ್ದವರು ಈಗ ದೋಸ್ತಿಗಳು
Last Updated 1 ಡಿಸೆಂಬರ್ 2019, 10:51 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಪೂರ್ವದ ಹೆಬ್ಬಾಗಿಲಿನಂತಿರುವ ಕೆ.ಆರ್‌.ಪುರ ಕ್ಷೇತ್ರದ ಉಪಚುನಾವಣೆ ‘ಪಕ್ಷ ನಿಷ್ಠೆ’ ಹಾಗೂ ‘ವ್ಯಕ್ತಿ ನಿಷ್ಠೆ’ಯನ್ನು ಪಣಕ್ಕಿಟ್ಟಿದೆ.

2018ರ ವಿಧಾನಸಭಾ ಚುನಾವ ಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ.ಎ.ಬಸವರಾಜು (ಬೈರತಿ ಬಸವರಾಜು) ಈ ಬಾರಿ ಬಿಜೆಪಿ ಅಭ್ಯರ್ಥಿ. ಕಳೆದ ಚುನಾವಣೆಯಲ್ಲಿ ಅವರು ಬಿಜೆಪಿಯ ಎನ್‌.ಎಸ್‌.ನಂದೀಶ್ ರೆಡ್ಡಿ ಅವರನ್ನು 32,729 ಮತಗಳ ಅಂತರದಿಂದ ಸೋಲಿಸಿದ್ದರು. ಪಾಲಿಕೆ ಸದಸ್ಯರಾಗಿದ್ದ ಬಸವರಾಜು 2013ರ ಚುನಾವಣೆಯಲ್ಲಿ ಮೊದಲ ಬಾರಿ ನಂದೀಶ್ ರೆಡ್ಡಿ ವಿರುದ್ಧ ಗೆದ್ದ ಬಳಿಕ ಕ್ಷೇತ್ರದಲ್ಲಿ ಬಲವಾಗಿ ತಳವೂರಿದ್ದಾರೆ.

ಬಸವರಾಜು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಕ್ಕೆ ಮುನಿಸಿ ಕೊಂಡಿದ್ದ ನಂದೀಶ್‌ ರೆಡ್ಡಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧ್ಯಕ್ಷ ಸ್ಥಾನ ನೀಡುವ ಮೂಲಕ ಬಿಜೆಪಿ ಸಮಾಧಾನಪಡಿಸಿದೆ. ಈಗ ಬೈರತಿ ಹಾಗೂ ರೆಡ್ಡಿ ಜೊತೆಯಲ್ಲೇ ಮತ ಯಾಚಿಸುತ್ತಿದ್ದಾರೆ. ‘ಬೈರತಿ ದಬ್ಬಾಳಿಕೆ ನಡೆಸುತ್ತಾರೆ’ ಎಂದು ದೂರುತ್ತಿದ್ದ ಈ ಕ್ಷೇತ್ರದ ಬಿಜೆಪಿಯ ಪಾಲಿಕೆ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಈಗ ಅವರ ಗೆಲುವಿಗಾಗಿ ಬೆವರು ಹರಿಸಬೇಕಾಗಿ ಬಂದಿದೆ.

ವಿಧಾನ ಪರಿಷತ್‌ ಸದಸ್ಯ ಎಂ.ನಾರಾಯಣ ಸ್ವಾಮಿ ಅವರು ಇಲ್ಲಿ ಕಾಂಗ್ರೆಸ್‌ ಹುರಿಯಾಳು. ಈ ಕ್ಷೇತ್ರದ ಒಂಬತ್ತು ಮಂದಿ ಪಾಲಿಕೆ ಸದಸ್ಯರ ಪೈಕಿ ಆರು ಮಂದಿ ಕಾಂಗ್ರೆಸ್‌ನಿಂದ ಗೆದ್ದವರು. ಅವರಲ್ಲಿ ನಾಲ್ಕು ಮಂದಿ ಬೈರತಿ ಜೊತೆಗಿದ್ದಾರೆ. ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟನೆ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರ ಪಡೆಯೇ ಬೈರತಿ ಅವರ ಹಿಂದೆ ಹೋಗುವ ಮೂಲಕ ‘ವ್ಯಕ್ತಿ ನಿಷ್ಠೆ’ಗೆ ಮಣೆ ಹಾಕಿದೆ. ಪಕ್ಷ ನಿಷ್ಠ ಕಾರ್ಯಕರ್ತರು ಇದರಿಂದ ಧೃತಿಗೆಟ್ಟಿಲ್ಲ. ಕಠಿಣ ಸವಾಲಿನ ನಡುವೆಯೂ ಅವರು ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಬೆವರು ಹರಿಸುತ್ತಿದ್ದಾರೆ.

ಬೈರತಿ ಬಸವರಾಜು ಅವರು ಕ್ಷೇತ್ರದಾದ್ಯಂತ ಚುರುಕಿನಿಂದ ಓಡಾಡಿ ಕೊಂಡು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಕಾರ್ಯಕರ್ತರ ಗುಂಪು, ಅಬ್ಬರದ ಪ್ರಚಾರವನ್ನೇ ಬೊಟ್ಟು ಮಾಡಿ ತೋರಿಸುವ ಬಿಜೆಪಿ ಕಾರ್ಯಕರ್ತರು ‘ನಮ್ಮ ಅಭ್ಯರ್ಥಿ ದಾಖಲೆ ಅಂತರದಲ್ಲಿ ಜಯಗಳಿಸುತ್ತಾರೆ’ ಎಂದು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ. ಬಿಜೆಪಿಯ ಅಬ್ಬರ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಉತ್ಸಾಹವನ್ನು ಕಡಿಮೆ ಮಾಡಿಲ್ಲ. ಕಾಂಗ್ರೆಸ್‌ ಕಾರ್ಯಕರ್ತರು ರ‍್ಯಾಲಿ, ರೋಡ್‌ ಶೋಗಳ ಬದಲು ಮನೆ ಮನೆಗೆ ತೆರಳಿ ಮತ ಯಾಚಿಸುವುದಕ್ಕೆ ಒತ್ತು ಕೊಟ್ಟಿದ್ದಾರೆ. ತಮ್ಮ ಹಳೆಯ ನಾಯಕನ ವಿರುದ್ಧವೇ ಕೆಲಸ ಮಾಡಬೇಕಾಗಿ ಬಂದಿರುವ ಬಗ್ಗೆ ಅವರಲ್ಲಿ ಬೇಸರವಿದೆ.

‘ಬೈರತಿ ಅವರು ಇಲ್ಲಿ ಎರಡು ಬಾರಿ ಗೆಲ್ಲುವುದಕ್ಕೇ ಪಕ್ಷದ ನಿಷ್ಠಾ ವಂತ ಕಾರ್ಯಕರ್ತರು ಬೆವರು ಹರಿಸಿ ದ್ದರು. ಅವರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದರು. ಬಿಜೆಪಿಯವರ ಪ್ರಚಾರದಲ್ಲಿ ಅಬ್ಬರ ಇರಬಹುದು. ಮತದಾರರು ಅಷ್ಟೇ ಬುದ್ಧಿವಂತರಿದ್ದಾರೆ. ಈ ಉಪ ಚುನಾವಣೆ ಬರಲು ಕಾರಣರಾದವರಿಗೆ ಖಂಡಿತಾ ಪಾಠ ಕಲಿಸಲಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಬಷೀರ್‌ ಹೇಳಿದರು.

ಸಿ.ಕೃಷ್ಣಮೂರ್ತಿ ಇಲ್ಲಿ ಜೆಡಿಎಸ್‌ ಅಭ್ಯರ್ಥಿ. ಈ ಕ್ಷೇತ್ರದಲ್ಲಿ ನೇರ ಹಣಾಹಣಿ ಇರುವುದು ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ನಡುವೆ. ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟರ ಪ್ರಾಬಲ್ಯವಿದೆ. ಒಕ್ಕಲಿಗರ ಹಾಗೂ ಕುರುಬರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಉಪಚುನಾವಣೆ ಬಗ್ಗೆ ಕ್ಷೇತ್ರದ ಮತದಾರರಿಗೆ ಸಿಟ್ಟಿದೆ. ‘ಗೆದ್ದವರು ತಮ್ಮ ಅಭಿವೃದ್ಧಿಗೆ ಶ್ರಮಿಸುತ್ತಾರೆಯೇ ವಿನಃ ಕ್ಷೇತ್ರದ ಅಭಿವೃದ್ಧಿಗಲ್ಲ. ಚುನಾವಣೆಗೆ ವ್ಯರ್ಥ ಹಣಪೋಲು ಮಾಡಲಾಗುತ್ತಿದೆ’ ಎಂದು ದೇವಸಂದ್ರದ ಸುರೇಶ್‌ ಕೋರೆ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಕೆರೆ ಅಭಿವೃದ್ಧಿ ಮರೀಚಿಕೆ

‘ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೆ.ಆರ್‌.ಪುರ, ಯಶವಂತಪುರ ಹಾಗೂ ಆರ್‌.ಆರ್‌.ನಗರ ಕ್ಷೇತ್ರಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಮಂಜೂರು ಮಾಡಿ, ಉಳಿದ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ’ ಎಂದು ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದರು. ಆದರೆ, ಕೆ.ಆರ್‌.ಪುರ ಕ್ಷೇತ್ರ ಸುತ್ತಾಡಿದಾಗ ‘ಅಭಿವೃದ್ಧಿ’ಯ ಕುರುಹುಗಳು ಕಾಣಿಸುವುದಿಲ್ಲ.

ಕ್ಷೇತ್ರದ ವಿಜಿನಾಪುರ, ಬಸವನಪುರ, ಕೆ.ಆರ್‌.ಪುರ, ರಾಮಮೂರ್ತಿನಗರ, ಹೊರಮಾವು ವಾರ್ಡ್‌ಗಳು ಲಂಗು ಲಗಾಮಿಲ್ಲದೆ ಬೆಳೆದಿವೆ. ಇಲ್ಲಿನ ಇಕ್ಕಟ್ಟಾದ ರಸ್ತೆಗಳಲ್ಲಿನ ಸಂಚಾರ ದಟ್ಟಣೆಯಿಂದ ಸ್ಥಳೀಯರು ಹೈರಾಣಾಗಿದ್ದಾರೆ. ಇಲ್ಲಿ ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ವಾರಕ್ಕೆರಡು ಬಾರಿಯೂ ನೀರು ಸಿಗುವುದೂ ಕಷ್ಟ ಎಂದು ಅನೇಕರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಕೆ.ಆರ್‌.ಪುರವಿಧಾನ ಸಭಾ ಕ್ಷೇತ್ರ

2018ರ ವಿಧಾನಸಭಾ ಚುನಾವಣೆ ಫಲಿತಾಂಶ

ಕಾಂಗ್ರೆಸ್‌: ಬಿ.ಎ.ಬಸವರಾಜು; 1,35,404

ಬಿಜೆಪಿ;– ಎನ್‌.ಎಸ್‌.ನಂದೀಶ ರೆಡ್ಡಿ; 1,02,675

ಜೆಡಿಎಸ್; ಡಿ.ಎ.ಗೋಪಾಲ; 6,565


ಮತದಾರರ ವಿವರ

ಪುರುಷರು;2,55,465‌

ಮಹಿಳೆಯರು;2,32,228

ಇತರರು;164

ಒಟ್ಟು ಮತದಾರರು;4,87,857

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT