ಗುರುವಾರ , ಜನವರಿ 21, 2021
16 °C

ಕೆಎಸ್‌ಆರ್‌ಟಿಸಿ ನೌಕರರಿಗೆ ರೊಟೇಷನ್ ಪದ್ಧತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್ ಸಡಿಲಗೊಳಿಸಿದ ನಂತರವೂ ಬಸ್‌ ಪ್ರಯಾಣಿಕರ ಸಂಖ್ಯೆ ಏರಿಕೆಯಾಗದ ಕಾರಣ ಚಾಲಕ ಮತ್ತು ನಿರ್ವಾಹಕರನ್ನು ರೊಟೇಷನ್ ಆಧಾರದಲ್ಲಿ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.

ನಿಗಮದ 8,200 ಬಸ್‌ಗಳ ಪೈಕಿ 3,500 ಬಸ್‌ಗಳು ಮಾತ್ರ ಕಾರ್ಯಾಚರಣೆಯಲ್ಲಿವೆ. ಶೇ 40ರಷ್ಟು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡುವುದು ನಿಗಮಕ್ಕೆ ಕಷ್ಟವಾಗಿದೆ.

ಚಾಲಕ ಮತ್ತು ನಿರ್ವಾಹಕರು ಘಟಕದಲ್ಲಿ ಕುಳಿತುಕೊಳ್ಳುವ ಬದಲು ರೊಟೋಷನ್ ಆಧಾರದಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡುವಂತೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಆದೇಶಿಸಿದ್ದಾರೆ.

‘ಬಸ್‌ಗಳ ಕಾರ್ಯಾಚರಣೆಗೆ ಅನುಗುಣವಾಗಿ ಅಗತ್ಯ ಇರುವಷ್ಟು ಸಿಬ್ಬಂದಿಯನ್ನಷ್ಟೇ ಕರ್ತವ್ಯಕ್ಕೆ ನೇಮಿಸಿ ಉಳಿದವರಿಗೆ ರಜೆ ನೀಡಬೇಕು. ಘಟಕಗಳಲ್ಲಿ ಹೆಚ್ಚುವರಿಯಾಗಿ 5 ಸಿಬ್ಬಂದಿಯನ್ನು ಮಾತ್ರ ನಿಯೋಜಿಸಿಕೊಳ್ಳಬೇಕು. 55 ವರ್ಷ ಮೇಲ್ಪಟ್ಟವರು ಮತ್ತು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆದ್ಯತೆ ಮೇರೆಗೆ ರಜೆ ನೀಡಬೇಕು’ ಎಂದು ಸೂಚನೆ ನೀಡಿದ್ದಾರೆ.

ಸಂಬಳ ಕಡಿತ ಇಲ್ಲ

‘ರೊಟೇಷನ್ ಆಧಾರದಲ್ಲಿ ಕೆಲಸಕ್ಕೆ ನಿಯೋಜನೆಗೊಂಡರೂ ಸಿಬ್ಬಂದಿಯ ಸಂಬಳ ಕಡಿತ ಆಗುವುದಿಲ್ಲ. ಎಲ್ಲರಿಗೂ ಸಮಾನವಾಗಿ ಕೆಲಸ ಸಿಗುವಂತೆ ನೋಡಿಕೊಳ್ಳಲಾಗುವುದು. ಅಲ್ಲದೇ ಪೂರ್ಣ ಪ್ರಮಾಣದ ಸಂಬಳ ನೀಡಲಾಗುವುದು’ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ನಿಗಮಕ್ಕೆ ಬರುತ್ತಿರುವ ಆದಾಯ ಡೀಸೆಲ್ ವೆಚ್ಚಕ್ಕೂ ಸಾಕಾಗುತ್ತಿಲ್ಲ. 30 ಸೀಟುಗಳ ಮಿತಿಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ಆದರೂ, ಪ್ರಯಾಣಿಕರು ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.

ಇಂದಿನಿಂದ ಎ.ಸಿ ಬಸ್‌ಗಳ ಸಂಚಾರ

ಹವಾ ನಿಯಂತ್ರಿತ (ಎ.ಸಿ) ಬಸ್‌ಗಳ ಕಾರ್ಯಾಚರಣೆಯನ್ನು ಗುರುವಾರದಿಂದ (ಜೂ.25) ಆರಂಭಿಸಲು ಕೆಎಸ್ಆರ್‌ಟಿಸಿ ನಿರ್ಧರಿಸಿದೆ. ಬೆಂಗಳೂರಿನಿಂದ ಮೈಸೂರು, ಮಂಗಳೂರು, ಕುಂದಾಪುರ, ಚಿಕ್ಕಮಗಳೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ವಿರಾಜಪೇಟೆಗೆ ಎ.ಸಿ ಬಸ್‌ಗಳು ಸಂಚರಿಸಲಿವೆ.

‘ಕೊರೊನಾ ಸೋಂಕು ಹರಡುವುದನ್ನು ತಡೆಯಲು ರಾತ್ರಿ ಪ್ರಯಾಣದಲ್ಲಿ ಹೊದಿಕೆ ನೀಡದಿರಲು ನಿರ್ಧರಿಸಲಾಗಿದೆ’ ಎಂದು ಕೆಎಸ್ಆರ್‌ಟಿಸಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು