ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಿಗೆ ಕೋಟಿ ಕೋಟಿ ಆಮಿಷ: ಬಿಜೆಪಿ ವಿರುದ್ಧ ಕಾಂಗ್ರೆಸ್–ಜೆಡಿಎಸ್ ಆರೋಪ

Last Updated 19 ಜುಲೈ 2019, 20:11 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕರಿಗೆ ಕೋಟಿ ಕೋಟಿ ಆಮಿಷವೊಡ್ಡಿ ಖರೀದಿ ಮಾಡಲಾಗುತ್ತಿದೆ ಎಂದು ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಹಲವು ಸದಸ್ಯರು ವಿಧಾನಸಭೆಯಲ್ಲಿ ಗಂಭೀರ ಆರೋಪ ಮಾಡಿದರು.

ವಿಶ್ವಾಸಮತ ನಿರ್ಣಯದ ಚರ್ಚೆಯ ವೇಳೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ನಮ್ಮ ಶಾಸಕ ಮಹದೇವು (ಪಿರಿಯಾಪಟ್ಟಣ) ಅವರಿಗೆ ಬಿಜೆಪಿಯವರು ಕರೆ ಮಾಡಿ ₹40 ಕೋಟಿಯಿಂದ ₹50 ಕೋಟಿಯ ಆಮಿಷ ಒಡ್ಡಿದ್ದರು. ಕಾಂಗ್ರೆಸ್‌ನ ಬಿ.ಸಿ.ಪಾಟೀಲ ಅವರು ಆಡಿಯೊವನ್ನೇ ಬಿಡುಗಡೆ ಮಾಡಿದ್ದರು. ಅದು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶ್ರೀನಿವಾಸ ಗೌಡರಿಗೆ ₹5 ಕೋಟಿ ಕಳುಹಿಸಿದ್ದರು’ ಎಂದು ಪ್ರಸ್ತಾಪಿಸಿದರು.

ಈ ವೇಳೆ ಮಹದೇವ್‌ ಎದ್ದು ನಿಂತು, ‘ಜನರ ಸೇವೆ ಮಾಡಲೆಂದು ನಾವು ಇಲ್ಲಿಗೆ ಬಂದಿದ್ದೇವೆ. ಜನರು ನಮ್ಮನ್ನು ಅನುಮಾನದಿಂದ ನೋಡುತ್ತಿದ್ದಾರೆ. ಮಾರಾಟದ ಸರಕನ್ನಾಗಿ ಮಾಡಲು ಹೊರಟಿದ್ದಾರೆ. ಇದಕ್ಕೆ ಕಡಿವಾಣ ಹಾಕಲೇಬೇಕು’ ಎಂದು ಅವರು ಆಗ್ರಹಿಸಿದರು. ಬಿಜೆಪಿಯವರು ಮನೆಯಲ್ಲಿ ₹5 ಕೋಟಿ ಇಟ್ಟು ಹೋಗಿದ್ದರು ಎಂದು ಜೆಡಿಎಸ್‌ನ ಶ್ರೀನಿವಾಸ ಗೌಡ ಮತ್ತೊಮ್ಮೆ ಸದನದಲ್ಲಿ ಪ್ರಸ್ತಾಪಿಸಿದರು. ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ‘ಇದು ದಾಖಲೆಗೆ ಹೋಗಲಿ. ಮುಂದೆ ಕಾನೂನು ಹೋರಾಟ ಮಾಡುತ್ತೇವೆ’ ಎಂದರು. ‘ಇಲ್ಲಿ ಪ್ರಸ್ತಾಪಿಸಿದ ಎಲ್ಲ ವಿಚಾರಗಳು ದಾಖಲೆಗೆ ಹೋಗಲಿದೆ. ಎಲ್ಲರೂ ಮಾತನಾಡಲಿ. ಎಲ್ಲ ಹೊಲಸು ಹೊರಗೆ ಬರಲಿ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್ ಹೇಳಿದರು.

‘ಬಿಜೆಪಿಯವರು ನಮಗೂ ಆಮಿಷ ಒಡ್ಡಿದ್ದಾರೆ’ ಎಂದು ಹರಿಹರದ ರಾಮಪ್ಪ, ಶೃಂಗೇರಿಯ ಟಿ.ಡಿ.ರಾಜೇಗೌಡ ಸೇರಿದಂತೆ ಹಲವು ಸದಸ್ಯರು ಆರೋಪಿಸಿದರು. ಆಡಳಿತ ಪಕ್ಷದ ಸದಸ್ಯರು ಈ ವೇಳೆ ಗದ್ದಲ ಎಬ್ಬಿಸಿದರು.

‘ಶಾಸಕರಿಗೆ ₹30 ಕೋಟಿ ಆಮಿಷ’
‘ಬಿಜೆಪಿಗೆ ಸೇರಲು ಪ್ರತಿ ಶಾಸಕರಿಗೆ ₹30 ಕೋಟಿ ಆಮಿಷ ಒಡ್ಡಲಾಗುತ್ತಿದೆ. ಈ ಹಣ ಎಲ್ಲಿಂದ ಬಂದಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.

‘ಈ ಕಾಲದಲ್ಲಿ ಸರಿಯಾಗಿ ಮಳೆಯೇ ಆಗುತ್ತಿಲ್ಲ. ಹಣವೇನೂ ಆಕಾಶದಿಂದ ಬೀಳುತ್ತಿದೆಯೇ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

‘₹5 ಕೋಟಿ ಕೊಟ್ಟ ಬಿಜೆಪಿ ಶಾಸಕರು’
‘ಬಿಜೆಪಿ ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಎಸ್‌.ಆರ್.ವಿಶ್ವನಾಥ್‌ ಹಾಗೂ ಆ ಪಕ್ಷದ ಮುಖಂಡ ಸಿ.ಪಿ.ಯೋಗೇಶ್ವರ ಅವರು ಬೆಂಗಳೂರಿನ ನನ್ನ ಮನೆಗೆ ಬಂದು ₹5 ಕೋಟಿ ಇಟ್ಟು ಹೋಗಿದ್ದರು’ ಎಂದು ಜೆಡಿಎಸ್‌ನ ಶ್ರೀನಿವಾಸ ಗೌಡ ಮತ್ತೊಮ್ಮೆ ಆರೋಪಿಸಿದರು.

‘ನಾನು ಬೇಡ ಎಂದರೂ ಹಣ ಇಟ್ಟುಹೋದರು. ಈಗ ಮತ್ತೆ ₹30 ಕೋಟಿ ಕೊಡಲು ಮುಂದೆ ಬಂದಿದ್ದಾರೆ. ಬಿಜೆಪಿಗೆ ಬನ್ನಿ ಎಂದು ಹೇಳುತ್ತಿದ್ದಾರೆ. ಜನ ಇದಕ್ಕೋಸ್ಕರ ಮತ ಹಾಕಿದ್ದಾ’ ಎಂದು ಅವರು ಪ್ರಶ್ನಿಸಿದರು.

‘ಶ್ರೀನಿವಾಸ ಗೌಡರಿಗೆ ವಯಸ್ಸಾಗಿದೆ. ಅರಳೋ ಮರಳೋ. ಸದನದ ದಿಕ್ಕು ತಪ್ಪಿಸಲು ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ’ ಎಂದು ವಿಶ್ವನಾಥ್‌ ಹೇಳಿದರು. ಶ್ರೀನಿವಾಸ ಗೌಡ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಅವಕಾಶ ಕೋರಿ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಅವರಿಗೆ ವಿಶ್ವನಾಥ್ ಪತ್ರ ಬರೆದಿದ್ದಾರೆ.

ವಿಶ್ವನಾಥ್‌ಗೆ ₹28 ಕೋಟಿ: ಸಾ.ರಾ.ಮಹೇಶ್‌ ಆಪಾದನೆ
‘ಜೆಡಿಎಸ್‌ನ ಸದಸ್ಯ ಎಚ್‌.ವಿಶ್ವನಾಥ್‌ ಅವರಿಗೆ ಬಿಜೆಪಿಯವರು ₹28 ಕೋಟಿ ಕೊಟ್ಟಿದ್ದಾರೆ. ಇದರ ಹಿಂದಿರುವ ರೂವಾರಿ ಪತ್ರಕರ್ತ ಕಮ್‌ ಅರ್ಧ ರಾಜಕಾರಣಿ’ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಆಪಾದನೆ ಮಾಡಿದರು.

*ನಾನು ಅಮೆರಿಕಕ್ಕೆ ಹೋಗುವ ಮುನ್ನ ವಿಶ್ವನಾಥ್‌ ಅವರನ್ನು ತೋಟದ ಮನೆಗೆ ಕರೆಸಿದ್ದೆ. ಏನು ಸಮಸ್ಯೆ ಎಂದು ಪ್ರಶ್ನಿಸಿದ್ದೆ. ಮಂತ್ರಿಯಾಗಬೇಕು ಎಂಬ ಆಸೆ ಇತ್ತು. ಅದು ಈಡೇರಲಿಲ್ಲ ಎಂದರು. ಚುನಾವಣೆಗಾಗಿ ಸಾಕಷ್ಟು ಸಾಲ ಮಾಡಿದ್ದು, ಅದನ್ನು ತೀರಿಸಬೇಕು ಎಂದು ಹೇಳಿಕೊಂಡರು. ಅದಕ್ಕೆ ತಲೆ ಬಿಸಿ ಮಾಡಬೇಡಿ. ಕಂತು ಕಂತಿನಲ್ಲಿ ನಾನು ಕೊಡುತ್ತೇನೆ ಎಂದು ಭರವಸೆ ನೀಡಿದ್ದೆ.

*ಬಿಜೆಪಿಯವರ ಸಹವಾಸಕ್ಕೆ ಹೋಗುವುದಿಲ್ಲ ಎಂದೂ ಹೇಳಿದ್ದರು. ಅಮೆರಿಕದಿಂದಲೇ ಜುಲೈ 5ರಂದು ಅವರಿಗೆ ಕರೆ ಮಾಡಿದ್ದೆ. ಮೊದಲ ಕಂತಿನ ದುಡ್ಡು ಎಲ್ಲಿಗೆ ಕಳುಹಿಸಿಕೊಡಲಿ ಎಂದು ಪ್ರಶ್ನೆ ಮಾಡಿದ್ದೆ. ಈಗೇನೂ ಬೇಡ ಎಂದರು. ಮರುದಿನವೇ ವಿಶೇಷ ವಿಮಾನದಲ್ಲಿ ಮುಂಬೈಗೆ ಹಾರಿದರು.

*ನನಗೆ ಸಚಿವನಾಗಬೇಕು ಎಂಬ ಆಸೆ ಇತ್ತು. ಆ ಆಸೆ ಈಡೇರಿದೆ. ಒಳ್ಳೆ ಖಾತೆಯನ್ನು ಕುಮಾರಸ್ವಾಮಿ ಕೊಡುತ್ತಾರೆ ಎಂಬ ವಿಶ್ವಾಸದಲ್ಲಿದ್ದೆ. ಪ್ರವಾಸೋದ್ಯಮ ಖಾತೆಯನ್ನು ಕೊಟ್ಟರು. ನಾನು ಒಂದು ರೀತಿಯಲ್ಲಿ ಗೈಡ್‌ ಇದ್ದಂತೆ. ಒಳ್ಳೆ ಖಾತೆ ಕೊಡಲು ಎಚ್‌.ಡಿ.ರೇವಣ್ಣ ಬಿಡಲಿಲ್ಲ.

ಧೈರ್ಯವಿದ್ದರೆ ಹೊರಗಡೆ ಬರಲಿ: ವಿಶ್ವನಾಥ್‌ ಸವಾಲು
ಸಚಿವ ಸಾ.ರಾ.ಮಹೇಶ್ ಮಾಡಿರುವ ಆರೋಪಕ್ಕೆಎಚ್.ವಿಶ್ವನಾಥ್ ಕಿಡಿ ಕಾರಿದ್ದಾರೆ.

ಮುಂಬೈನಲ್ಲಿರುವ ಅವರು ಮಾಧ್ಯಮಪ್ರತಿನಿಧಿಗಳ ಜತೆ ಮಾತನಾಡಿ, ‘ಸದನದಲ್ಲಿ ಕುಳಿತು ಗಾಳಿಯಲ್ಲಿ ಗುಂಡು ಹಾರಿಸುವುದು ಸರಿಯಲ್ಲ. ಧೈರ್ಯವಿದ್ದರೆ ಹೊರಗೆ ಬಂದು ಹೋರಾಡಲಿ. ನಾನು ಸದನದಲ್ಲಿ ಇಲ್ಲದ ಸಮಯದಲ್ಲಿ ಹಣ ತೆಗೆದುಕೊಂಡ ಆರೋಪ ಮಾಡಿದ್ದಾರೆ.ಎಲ್ಲರೂ ಸಾಲ ಮಾಡಿಯೇ ಚುನಾವಣೆ ಎದುರಿಸುತ್ತಾರೆ. ತಮ್ಮ ಇತಿಮಿತಿಯಲ್ಲಿ ಸಾಲ ತೀರಿಸುವ ಮಾರ್ಗಗಳ ಕುರಿತು ಯೋಚಿಸಿ ಸಾಲ ಮಾಡುತ್ತಾರೆ. ನಾನೂ ಸಹ ನನ್ನ ಮಿತಿಯಲ್ಲಿ ಸಾಲ ಮಾಡಿದ್ದೇನೆ’ ಎಂದು ತಿಳಿಸಿದರು.

‘ಸಾಲ ತೀರಿಸಲು ಯಾರ ಬಳಿಯೂ ಬೇಡುವ ಸ್ಥಿತಿ ಬಂದಿಲ್ಲ.ಸಾಲ ಮಾಡಿದ್ದರೆ ಅದಕ್ಕೆ ನನ್ನ ಕುಟುಂಬ ಜವಾಬ್ದಾರಿಯಾಗುತ್ತದೆ. ₹28 ಕೋಟಿ ಸಾಲವನ್ನು ತೀರಿಸಿ ಎಂದು ಮಹೇಶ್ ಬಳಿ ಕೇಳಲು ಸಾಧ್ಯವೇ. ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಸಿಕೊಂಡಿರುವ ಅವರು, ನನ್ನ ಸಾಲ ತೀರಿಸಲು ಮುಂದೆ ಬರುತ್ತಾರೆಯೆ’ ಎಂದು ಕುಟುಕಿದರು.

ರಾಮಲಿಂಗಾರೆಡ್ಡಿ ಜತೆ ಹೋಗಲ್ಲ: ಸ್ಪಷ್ಟನೆ
ರಾಮಲಿಂಗಾರೆಡ್ಡಿ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆದಿದ್ದರೂ ನಾವು ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಮುಂಬೈನಲ್ಲಿ ತಂಗಿರುವ ಅತೃಪ್ತ ಶಾಸಕರು ಸ್ಪಷ್ಟಪಡಿಸಿದ್ದಾರೆ.

ಎಚ್.ವಿಶ್ವನಾಥ್ ಸೇರಿದಂತೆ ಮುಂಬೈನಲ್ಲಿ ತಂಗಿರುವ ಇತರರ ಪರವಾಗಿ ಎಂ.ಟಿ.ಬಿ.ನಾಗರಾಜ್ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ರಾಮಲಿಂಗಾರೆಡ್ಡಿ ನಿರ್ಧಾರದಿಂದನಮಗೆ ಆಘಾತವಾಗಿದೆ. ಅವರ ನಾಯಕತ್ವದಲ್ಲೇ ಬೆಂಗಳೂರು ನಗರದ ಕಾಂಗ್ರೆಸ್ ಶಾ ಸಕರ ಸಭೆ ನಡೆದು, ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗಿದ್ದು ಎಲ್ಲರೂ ಒಟ್ಟಾಗಿರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದೆವು. ಇದೀಗ ಅವರು ತಮ್ಮ ನಿಲುವಿನಿಂದ‌ ಹಿಂದೆ ಸರಿದಿರುವುದು‌ನಮಗೆ ಆಘಾತ‌ ಉಂಟುಮಾಡಿದೆ’ ಎಂದು ಹೇಳಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT