ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೋಸ್ತಿ’ ಮನೆಗೆ: ಅಧಿಕಾರ ಬಿಎಸ್‌ವೈಗೆ

ವಿಶ್ವಾಸಮತ: ಬಿಜೆಪಿಗೆ 105 l ಮೈತ್ರಿಗೆ 99 l ಗೈರು 20 l ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ನಾಳೆ ಪ್ರಮಾಣ? l ನಗರದತ್ತ ಅತೃಪ್ತ ಶಾಸಕರು?
Last Updated 23 ಜುಲೈ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕರ ಸಾಮೂಹಿಕ ರಾಜೀನಾಮೆಯಿಂದ ಶುರುವಾದ ರಾಜಕೀಯ ಸಂಕ್ಷೋಭೆ ವಿಶ್ವಾಸಮತದ ನಿರ್ಣಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಲು ಕಾಣುವ ಮೂಲಕ ಕೊನೆಗೊಂಡಿದ್ದು, 14 ತಿಂಗಳ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನಗೊಂಡಿದೆ.

‘ದೋಸ್ತಿ’ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪತನದ ದಿನಗಳಿಗೆ ಕಾಯುತ್ತಾ, ಆರು ಬಾರಿ ಈ ಯತ್ನಕ್ಕೆ ಕೈ ಹಾಕಿ ವಿಫಲರಾಗಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಈ ಬಾರಿ ರಹಸ್ಯದಿಂದ ನಡೆಸಿದ್ದ ಏಳನೇ ಕಾರ್ಯಾಚರಣೆಯಲ್ಲಿ ಕೊನೆಗೂ ಯಶ ಕಂಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ, ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಹೊಸ್ತಿಲಿಗೆ ಅವರು ಬಂದು ನಿಂತಂತಾಗಿದೆ.

2018ರಲ್ಲಿ104 ಸ್ಥಾನ ಗೆದ್ದು ಮೇ ತಿಂಗಳಲ್ಲಿ ಮುಖ್ಯಮಂತ್ರಿಯಾಗಿ ಪ‍್ರಮಾಣ ವಚನ ಸ್ವೀಕರಿಸಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ರಾಜೀನಾಮೆ ಕೊಟ್ಟಿದ್ದ ಯಡಿಯೂರಪ್ಪ 14 ತಿಂಗಳು ಕಾಲ ವಿರೋಧ ಪಕ್ಷದ ನಾಯಕರಾಗಿದ್ದರು. ವಿಶ್ವಾಸಮತ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ನಾಲ್ಕು ದಿನಗಳ ಕಾಲ ಆಡಳಿತ ಪಕ್ಷದ ಸದಸ್ಯರಿಂದ ಹಿಗ್ಗಾ ಮುಗ್ಗಾ ಬೈಯಿಸಿಕೊಂಡು, ಮೌನಕ್ಕೆ ಶರಣಾಗಿದ್ದ ಬಿಜೆಪಿ ಪಡೆಯಲ್ಲಿ ಈಗ ಸಂತಸ ಮನೆ ಮಾಡಿದೆ.

ಸಿಗದ ವಿಶ್ವಾಸ: 15 ಶಾಸಕರು ರಾಜೀನಾಮೆ ಹಾಗೂ ಇಬ್ಬರು ಪಕ್ಷೇತರರು ಕೈ ಕೊಟ್ಟ ಬಳಿಕವೂ ಸರ್ಕಾರ ಉಳಿಸಿಕೊಳ್ಳುವ ವಿಫಲ ಯತ್ನವನ್ನು ಮೈತ್ರಿಕೂಟ ನಡೆಸಿತು. ಬಿಜೆಪಿ ತೆಕ್ಕೆಯಲ್ಲಿ ಸಿಕ್ಕಿಕೊಂಡಿದ್ದಾರೆ ಎನ್ನಲಾದ ‘ಅತೃಪ್ತ’ ಶಾಸಕರು ವಾಪಸ್‌ ಬರುವ ನಿರೀಕ್ಷೆ ನಾಯಕರಲ್ಲಿತ್ತು. ಈ ಕಾರಣಕ್ಕಾಗಿಯೇ ನಾಲ್ಕು ದಿನಗಳ ಕಾಲ ಕಲಾಪವನ್ನು ಮುಂದೂಡುತ್ತಲೇ ಬರಲಾಯಿತು.

ತಕ್ಷಣವೇ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುವಂತೆ ಪಕ್ಷೇತರರು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ತಮಗೆ ವರದಾನವಾಗಬಹುದು ಎಂಬ ಲೆಕ್ಕಾಚಾರವೂ ಮೈತ್ರಿಯಲ್ಲಿ ಇತ್ತು. ಅದನ್ನು ಗಂಭೀರವಾಗಿ ಪರಿಗಣಿಸದ ನ್ಯಾಯಪೀಠ,‘ಮಂಗಳವಾರ ಸಂಜೆಯವರೆಗೆ ವಿಶ್ವಾಸಮತ ನಿರ್ಣಯ ಕೈಗೊಳ್ಳುವುದಾಗಿ ವಿಧಾನಸಭಾಧ್ಯಕ್ಷರು ಆಶಾಭಾವ ವ್ಯಕ್ತಪಡಿಸಿದ್ದಾರೆ. ಈ ಕುರಿತ ನಿರ್ಧಾರ ಹೊರಬೀಳಲಿ’ ಎಂದು ಅಭಿಪ್ರಾಯಪಟ್ಟು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು. ಅಲ್ಲಿಗೆ ಕೊನೆಯ ಆಸರೆಯೂ ಕೈತಪ್ಪಿದಂತಾಯಿತು. ಸರ್ಕಾರ ಉಳಿಸಿಕೊಳ್ಳುವ ಎಲ್ಲ ದಾರಿಗಳು ಮುಚ್ಚಿದೆ ಎಂದು ಸ್ಪಷ್ಟವಾಗುತ್ತಿದ್ದಂತೆ ಸದನಕ್ಕೆ ಹಾಜರಾದ ಕುಮಾರಸ್ವಾಮಿ, ಸರ್ಕಾರದ ಸಾಧನೆಯ ವಿವರ‌ಗಳನ್ನು ಸದನದ ಮೂಲಕವೇ ರಾಜ್ಯದ ಮುಂದಿಡುವ ಯತ್ನ ಮಾಡಿದರು. ಅಧಿಕಾರಕ್ಕೇರಿದ ದಿನದಿಂದ ಸರ್ಕಾರ ಪತನಕ್ಕೆ ಬಿಜೆಪಿ ನಾಯಕರು ನಡೆಸಿದ ಯತ್ನಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ‘ಅಧಿಕಾರ ದಾಹ ನನಗಿಲ್ಲ. ಸಂತೋಷದಿಂದ ರಾಜೀನಾಮೆ ಕೊಟ್ಟು ಹೋಗಲು ಸಿದ್ಧನಿದ್ದೇನೆ. ನಾನು ಮಾಡಿದ ತಪ್ಪೇನು ಎಂಬುದು ಜನರಿಗೆ ಗೊತ್ತಾಗಲಿ ಎಂಬ ಕಾರಣಕ್ಕೆ ಚರ್ಚೆ ನಡೆಸುತ್ತಿದ್ದೇನೆ’ ಎಂದರು.

ಬಳಿಕ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುವಂತೆ ಕೋರಿದರು. ಆಗ ಯಡಿಯೂರಪ್ಪ ಅವರು ಮತ ವಿಭಜನೆ ಮಾಡುವಂತೆ ಕೇಳಿದರು. ಮತದ ಪರ 99 ಹಾಗೂ ವಿರುದ್ಧ 105 ಮತಗಳು ಬಿದ್ದವು. ಆರು ಮತಗಳಿಂದ ವಿಶ್ವಾಸ ಮತಕ್ಕೆ ಸೋಲುಂಟಾಯಿತು.

ಶುರುವಾಯಿತು ಖಾತೆ ಹಂಚಿಕೆ ಲೆಕ್ಕಾಚಾರ

ಸರ್ಕಾರ ರಚನೆಯ ಉತ್ಸುಕತೆಯಲ್ಲಿರುವ ಬಿಜೆಪಿಯಲ್ಲಿ ಯಾರಿಗೆಲ್ಲ ಸಚಿವ ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.

ಸದ್ಯದ ಅಂದಾಜಿನಂತೆ ಯಡಿಯೂರಪ್ಪ ಒಬ್ಬರೇ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವರಿಷ್ಠರು ಸೂಚಿಸಿದರೆ ಇಬ್ಬರು ಪಕ್ಷೇತರರು ಹಾಗೂ ರಾಜೀನಾಮೆ ಕೊಟ್ಟು ಬಿಜೆಪಿ ಬೆನ್ನಿಗೆ ನಿಂತಿರುವ 15 ಶಾಸಕರ ಪೈಕಿ ಕೆಲವರಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗಲಿದೆ ಎಂದು ಮೂಲಗಳು ಹೇಳಿವೆ.

ಇಬ್ಬರು ಉಪಮುಖ್ಯಮಂತ್ರಿಗಳಿರಬೇಕೇ ಎಂಬ ಚರ್ಚೆಯೂ ಶುರುವಾಗಿದೆ. ರಾಜೀನಾಮೆ ಕೊಟ್ಟ ಶಾಸಕರನ್ನು ಅನರ್ಹಗೊಳಿಸಿದರೆ ಸದ್ಯಕ್ಕೆ ಅವರಿಗೆ ಸಚಿವ ಸ್ಥಾನ ಸಿಗುವುದು ಅನುಮಾನ. ಆ ಹಂತದಲ್ಲಿ, ಪಕ್ಷದ ಹಿರಿಯರು ಹಾಗೂ ಸಂಘದ ಹಿನ್ನೆಲೆಯವರಿಗೆ ಮೊದಲ ಅವಕಾಶ ಸಿಗಲಿದೆ. ಪ್ರಾದೇಶಿಕ ಪ್ರಾತಿನಿಧ್ಯಕ್ಕೂ ಆದ್ಯತೆ ನೀಡಿ ಸಚಿವ ಸಂಪುಟ ರಚನೆ ಮಾಡಲಾಗುತ್ತದೆ. ಈ ಬಾರಿ ವರಿಷ್ಠರ ತೀರ್ಮಾನವೇ ಅಂತಿಮವಾಗಿರಲಿದೆ ಎಂದು ಮೂಲಗಳು ವಿವರಿಸಿವೆ.

ಇನ್ಮುಂದೆ ಅಭಿವೃದ್ಧಿ ಪರ್ವ: ಬಿಎಸ್‌ವೈ

ರಾಜ್ಯದಲ್ಲಿ ರೈತರು ಬರದಿಂದ ತತ್ತರಿಸಿದ್ದು, ಅವರ ಪರವಾದ ಕೆಲಸಗಳು ನಡೆಯಲಿವೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ಶಾಸಕಾಂಗ ಪಕ್ಷದ ಸಭೆ ಬುಧವಾರ ನಡೆಯಲಿದ್ದು, ಅಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಬಳಿಕ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೇನೆ. ಅದಾದ ನಂತರವೇ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸುತ್ತೇನೆ’ ಎಂದು ತಿಳಿಸಿದರು.

ಪಕ್ಷೇತರರಿಗಾಗಿ ಬಿಜೆಪಿ, ಕಾಂಗ್ರೆಸ್‌ ಜಿದ್ದಾಜಿದ್ದಿ

ಇಬ್ಬರು ಪಕ್ಷೇತರ ಶಾಸಕರಿಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲೇ ಘರ್ಷಣೆಗೆ ಇಳಿದು, ‍ಪರಸ್ಪರರ ವಿರುದ್ಧವೇ ಪ್ರತಿಭಟನೆಗೆ ಮುಂದಾದ ಘಟನೆ ಮಂಗಳವಾರ ಸಂಜೆ ನಡೆಯಿತು. ಹೀಗಾಗಿ, ಪಕ್ಷೇತರರು ಕಲಾಪಕ್ಕೆ ಹಾಜರಾಗಲು ಸಾಧ್ಯವಾಗಲೇ ಇಲ್ಲ.

ವಿಶ್ವಾಸಮತ ನಿರ್ಣಯದ ವೇಳೆ ಸದನಕ್ಕೆ ಬರುವ ಸಲುವಾಗಿ ಎಚ್.ನಾಗೇಶ್‌ ಹಾಗೂ ಆರ್.ಶಂಕರ್‌ ಅವರನ್ನು ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯ ನಿತೇಶ್‌ ಅಪಾರ್ಟ್‌ಮೆಂಟ್ಸ್‌ನಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ತಿಳಿದ ಕಾಂಗ್ರೆಸ್‌ನವರು ಅಲ್ಲಿ ಜಮಾಯಿಸಿ ಘೋಷಣೆ ಕೂಗತೊಡಗಿದರು. ಬಿಜೆಪಿ ವಿರುದ್ಧವೂ ಧಿಕ್ಕಾರ ಕೂಗಿದರು. ಇದು ಗೊತ್ತಾದ ಕೂಡಲೇ ಅಲ್ಲಿಗೆ ದೌಡಾಯಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ನವರ ವಿರುದ್ಧ ಏರುಧ್ವನಿಯಲ್ಲಿ ಮಾತನಾಡಿದರು. ಸಂಘರ್ಷದ ವಾತಾವರಣ ಸೃಷ್ಟಿಯಾಯಿತು. ಮಧ್ಯಪ್ರವೇಶಿಸಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.

ಬಿಎಸ್‌ಪಿಯಿಂದ ಎನ್‌.ಮಹೇಶ್ ಉಚ್ಚಾಟನೆ

ಮೈತ್ರಿ ಸರ್ಕಾರದ ವಿಶ್ವಾಸಮತ ಸಾಬೀತು ವೇಳೆ ಸದನಕ್ಕೆ ಗೈರುಹಾಜರಾಗಿದ್ದ ಬಿಎಸ್‌ಪಿ ಶಾಸಕ ಎನ್‌.ಮಹೇಶ್ ಅವರನ್ನು ಪಕ್ಷವು ಉಚ್ಚಾಟಿಸಿದೆ. ‘ಕುಮಾರಸ್ವಾಮಿ ಅವರ ಸರ್ಕಾರದ ಪರ ಮತ ಚಲಾಯಿಸುವಂತೆ ಪಕ್ಷವು ನಿರ್ದೇಶನ ನೀಡಿತ್ತು. ಆದರೆ ಸದನಕ್ಕೆ ಗೈರುಹಾಜರಾಗುವ ಮೂಲಕ ಪಕ್ಷದ ನಿರ್ದೇಶನ ಉಲ್ಲಂಘಿಸಿದ್ದಾರೆ. ಈ ಅಶಿಸ್ತನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿ ಉಚ್ಚಾಟಿಸಲಾಗಿದೆ’ ಎಂದು ಮುಖ್ಯಸ್ಥೆ ಮಾಯಾವತಿ ಟ್ವೀಟ್ ಮಾಡಿದ್ದಾರೆ.

* ಲಜ್ಜೆಗೆಟ್ಟವರು, ಮಾನ ಮರ್ಯಾದೆ ಇಲ್ಲದವರು ಸರ್ಕಾರ ಮಾಡಲು ಹೊರಟಿದ್ದಾರೆ. ಅಧಿಕಾರಕ್ಕಾಗಿ ಶಾಸಕರ ಖರೀದಿ ಮಾಡಿರುವವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ.

– ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

* ರಾಜ್ಯದಲ್ಲಿ ಬಹಳಷ್ಟು ಜನ ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. ಕುಮಾರಸ್ವಾಮಿ ಶಾಶ್ವತ ಅಲ್ಲ. ನನ್ನನ್ನು ಅಧಿಕಾರದಿಂದ ಇಳಿಸಲು ನಾನು ಮಾಡಿರುವ ತಪ್ಪಾದರೂ ಏನು ಹೇಳಿ

– ಎಚ್.ಡಿ. ಕುಮಾರಸ್ವಾಮಿ, ನಿರ್ಗಮಿತ ಮುಖ್ಯಮಂತ್ರಿ

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT