ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ತಾರತಮ್ಯವನ್ನು ಸಂವಿಧಾನದಲ್ಲಿ ಸರಿಪಡಿಸುವ ಅಗತ್ಯವಿದೆ: ಬನವಾಸಿ ಆನಂದ್

ಕಳವಳ ವ್ಯಕ್ತಪಡಿಸಿದ ಬನವಾಸಿ ಬಳಗದ ಆನಂದ್‌
Last Updated 27 ಜನವರಿ 2020, 3:45 IST
ಅಕ್ಷರ ಗಾತ್ರ

ಬೆಂಗಳೂರು: ‘ಹುಟ್ಟಿದ ಸ್ಥಳ, ಜಾತಿ, ಧರ್ಮ, ಜನಾಂಗ, ಲಿಂಗದ ಕಾರಣಕ್ಕೆ ತಾರತಮ್ಯ ಮಾಡುವ ಹಾಗಿಲ್ಲ ಎಂದು ಪ್ರತಿಪಾದಿಸುವ ಸಂವಿಧಾನ ಭಾಷೆಯ ತಾರತಮ್ಯದ ಬಗ್ಗೆ ಸೊಲ್ಲು ಎತ್ತಿಲ್ಲ. ಈ ಲೋಪವನ್ನು ಸರಿಪಡಿಸಬೇಕಾದ ಅಗತ್ಯವಿದೆ’ ಎಂದು ಬನವಾಸಿ ಬಳಗದ ಆನಂದ್‌ ಅಭಿಪ್ರಾಯಪಟ್ಟರು

ಮುನ್ನೋಟ ವತಿಯಿಂದ ಭಾನುವಾರ ಏರ್ಪಡಿಸಿದ್ದ ತಿಂಗಳ ಅಂಗಳ ಕಾರ್ಯಕ್ರಮದಲ್ಲಿ ಅವರು ಕರ್ನಾಟಕದ ಜನಲಕ್ಷಣ ಮತ್ತು ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡಿದರು.

‘ಯಾರು ಯಾವ ಪ್ರದೇಶಕ್ಕೆ ಬೇಕಾದರೂ ಹೋಗಿ ನೆಲೆಸುವ, ಉದ್ಯಮ ನಡೆಸುವ ಹಕ್ಕಿನ ಬಗ್ಗೆ 19ನೇ ವಿಧಿಯಲ್ಲಿ ಚರ್ಚಿಸಲಾಗಿದೆ. ಇದು ವಲಸೆಯನ್ನು ಉತ್ತೇಜಿಸುತ್ತಿದೆ. ನಮ್ಮ ರಾಜ್ಯದಲ್ಲಿ ವಲಸಿಗರಿಂದಾಗಿ ಇಲ್ಲಿನ ನೆಲೆಸಿಗರು ಉದ್ಯೋಗಾವಕಾಶ ಕಳೆದುಕೊಳ್ಳುವ ಕಳವಳ ಎದುರಿಸುತ್ತಿದ್ದಾರೆ. ಕನ್ನಡದ ನೆಲ, ಜಲ, ನುಡಿ, ಸಂಸ್ಕೃತಿ, ಅನನ್ಯತೆ, ವೈವಿಧ್ಯಗಳನ್ನುಹೊರಗಿನ ಜನ, ನುಡಿ, ಸಂಸ್ಕೃತಿ, ಆಕ್ರಮಣಗಳಿಂದ ಕಾಪಾಡಿಕೊಳ್ಳುವುದೂ ಸವಾಲಿನ ವಿಷಯ’ ಎಂದರು.

‘ಭಾರತದ ಅತ್ಯಂತ ವೈವಿಧ್ಯಮಯ ಪ್ರದೇಶಗಳ ಅನನ್ಯತೆಯನ್ನು ಕಾಪಾಡಿಕೊಳ್ಳಲು ದೇಶಕ್ಕೆ ಗಡಿ ಇರುವಂತೆಯೇ ಅದರೊಳಗಿನ ವಿವಿಧ ಪ್ರದೇಶಗಳು ತಮ್ಮ ವೈವಿಧ್ಯ ಕಾಪಾಡಲು ಕೋಟೆ ಅಗತ್ಯ. ಹಲವಾರು ರಾಜ್ಯಗಳಿಗೆ ಇಂತಹ ರಕ್ಷಣೆಯನ್ನು ನೀಡಲಾಗಿದೆ. ಈಶಾನ್ಯದ ನಾಗಾಲ್ಯಾಂಡ್‌, ಅರುಣಾಚಲ ಪ್ರದೇಶ, ತ್ರಿಪುರಾ ರಾಜ್ಯಗಳಲ್ಲಿ ಹೊರಗಿನವರು ನೆಲೆಸಬೇಕಾದರೆ ಸ್ಥಳೀಯ ಸರ್ಕಾರದಿಂದ ಅನುಮತಿ (ಐಎಲ್‌ಪಿ) ಪಡೆಯಬೇಕಿದೆ. ಅಸ್ಸಾಮ್‌ ಜೊತೆ ಮಿಜೋರಾಮ್‌ ಹಾಗೂ ಮೇಘಾಲಯ ಸ್ವಾಯತ್ತ ಆಡಳಿತ ವ್ಯವಸ್ಥೆ ಹೊಂದಿವೆ. ಕೇಂದ್ರ ಸರ್ಕಾರದ ಹಲವಾರು ಕಾಯ್ದೆ, ನಿಯಮಗಳಿಂದ ವಿನಾಯಿತಿಯನ್ನೂ ಪಡೆದಿವೆ. ಅಂತಹದ್ದೇ ರಕ್ಷಣೆ ಎಲ್ಲ ರಾಜ್ಯಗಳಿಗೂ ಏಕಿಲ್ಲ’ ಎಂದು ಪ್ರಶ್ನಿಸಿದರು.

‘ದಕ್ಷಿಣ ರಾಜ್ಯಗಳಿಗೆ ಹೋಲಿಸಿದರೆ ಉತ್ತರದ ರಾಜ್ಯಗಳಲ್ಲಿ ಒಟ್ಟು ಫಲವಂತಿಕೆ ಅನುಪಾತ (ಟಿಎಫ್‌ಆರ್‌) ಹೆಚ್ಚಿದೆ. ಉತ್ತರದಿಂದ ದಕ್ಷಿಣದ ರಾಜ್ಯಗಳಿಗೆ ವಲಸೆ ಪ್ರಮಾಣವೂ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ರಾಜ್ಯದ ವೈವಿಧ್ಯವನ್ನು ಉಳಿಸಿಕೊಳ್ಳಲು ವಿಶೇಷ ಅಧಿಕಾರ ಅಗತ್ಯ. ನಮ್ಮ ರಾಜ್ಯಕ್ಕೆ ಬರುವ ವಲಸಿಗರು ಇಲ್ಲಿನ ಸರ್ಕಾರದಿಂದ ಅನುಮತಿ ಪಡೆಯುವ ವ್ಯವಸ್ಥೆ ರೂಪಿಸುವಂತೆ ಕನ್ನಡಿಗರು ಒತ್ತಾಯ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT