ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Phone-in| ಪರೀಕ್ಷೆಯ ಭಯ ಬಿಟ್ಟು ಹಬ್ಬದಂತೆ ಸಂಭ್ರಮಿಸಿ: ಮಾನಸಿಕ ತಜ್ಞ ಬಿ.ವಿನಯ್‌

ಒಳ್ಳೆ ಆಹಾರ, ಜೀವನ ಶೈಲಿ, ಓದಿನ ತಂತ್ರಗಳಿಂದ ಉತ್ತಮ ಫಲಿತಾಂಶ: ವ್ಯಾಯಾಮ, ಪ್ರಾಣಾಯಾಮ ಮತ್ತು ಧ್ಯಾನದಂತಹ ಅಭ್ಯಾಸ ರೂಢಿಸಿಕೊಳ್ಳಿ
Last Updated 13 ಫೆಬ್ರುವರಿ 2020, 1:44 IST
ಅಕ್ಷರ ಗಾತ್ರ

ಬೆಂಗಳೂರು: ‘ಪರೀಕ್ಷೆ ಎಂದರೆ ಭಯಪಡಬೇಕಿಲ್ಲ, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕು’ ಎನ್ನುತ್ತಾರೆ ನಿಮ್ಹಾನ್ಸ್‌ನ ಮಾನಸಿಕ ತಜ್ಞ ಡಾ.ಬಿ.ವಿನಯ್‌.

ಪರೀಕ್ಷೆ ಕುರಿತು ಏರ್ಪಡಿಸಿದ್ದ ‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಅನುಸರಿಸ ಬೇಕಾದ ಮಾರ್ಗವನ್ನು ಅವರು ವಿವರಿಸಿದರು.

ಪರೀಕ್ಷೆಗಾಗಿ ಸಕಾರಾತ್ಮಕ (ಪಾಸಿಟಿವ್‌) ಒತ್ತಡ ಇರಬೇಕು. ಅದರಿಂದ ಉತ್ತಮ ನಿರ್ವಹಣೆ ಸಾಧ್ಯ. ಆದರೆ, ನಕಾರಾತ್ಮಕ(ನೆಗೆಟಿವ್‌) ಒತ್ತಡ ಇರಬಾರದು. ಅದರಿಂದ ಸಮಸ್ಯೆಗಳೇ ಹೆಚ್ಚು. ನಕಾರಾತ್ಮಕ ಒತ್ತಡ ಬಿಡಬೇಕು. ಅದಕ್ಕಾಗಿ ಉತ್ತಮ ಜೀವನ ಶೈಲಿ, ಆಹಾರ–ವಿಹಾರ, ವ್ಯಾಯಾಮ, ಪ್ರಾಣಾಯಾಮ ಮತ್ತು ಧ್ಯಾನದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳ ಬೇಕು ಎಂದು ಹೇಳಿದರು.

ಪೋಷಕರು ತಾವು ಜೀವನದಲ್ಲಿ ಸಾಧಿಸಲಾಗದಿರುವುದನ್ನು ತಮ್ಮ ಮಕ್ಕಳು ಸಾಕಾರಗೊಳಿಸಬೇಕು ಎಂಬ ಕನಸು ಕಟ್ಟಿಕೊಳ್ಳುತ್ತಾರೆ. ಇದಕ್ಕಾಗಿ ವಿದ್ಯಾರ್ಥಿಗಳ ಮೇಲೆ ಅನಗತ್ಯವಾಗಿ ಒತ್ತಡ ಹೇರುತ್ತಾರೆ. ಅತಿಯಾದ ನಿರೀಕ್ಷೆಗಳನ್ನೂ ಇಟ್ಟುಕೊಳ್ಳುತ್ತಾರೆ. ತಮ್ಮ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳು ನಿರ್ವಹಣೆ ಮಾಡದೇ ಇದ್ದರೆ, ಇತರ ಮಕ್ಕಳ ಜತೆ ಹೋಲಿಕೆ ಮಾಡುತ್ತಾರೆ. ನಿಂದಿಸುವುದು ಮತ್ತು ದೂಷಿಸುವುದೂ ಸಾಮಾನ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳು ಭಯ ಬೆಳೆಸಿಕೊಳ್ಳುತ್ತಾರೆ ಎಂದು ವಿನಯ್‌ ತಿಳಿಸಿದರು.

ಪ್ರತಿಯೊಬ್ಬ ವಿದ್ಯಾರ್ಥಿಯ ಮಿದುಳಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆ ಪ್ರಮಾಣ (ಐಕ್ಯೂ) ಭಿನ್ನವಾಗಿರುತ್ತದೆ. ಮಾಹಿತಿಯ ಗ್ರಹಿಕೆ ಮತ್ತು ಅದನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವೂ ಭಿನ್ನವಾಗಿರುತ್ತದೆ. ಇದಕ್ಕೆ ವಂಶವಾಹಿ ರಚನೆಯೂ ಕಾರಣವಾಗಿರುತ್ತದೆ. ಹೀಗಾಗಿ ಎಲ್ಲ ವಿದ್ಯಾರ್ಥಿಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಬಾರದು. ಪ್ರತಿ ವಿದ್ಯಾರ್ಥಿಯ ಕಲಿಕೆ ಮತ್ತು ಗ್ರಹಿಕೆ ವಿಧಾನ ಭಿನ್ನವಾಗಿರುತ್ತದೆ. ಅದಕ್ಕೆ ತಕ್ಕಂತೆ ಪರೀಕ್ಷೆಗೆ ತಯಾರಿ ನಡೆಸಬೇಕು ಎಂದು ಅವರು ವಿವರಿಸಿದರು.

ಪರೀಕ್ಷೆಯಲ್ಲಿ ಉತ್ತರ ಬರೆಯಲು ಕುಳಿತಾಗ ಓದಿದ್ದೆಲ್ಲ ಮರೆತು ಹೋಗಿ ಸಂಪೂರ್ಣ ಖಾಲಿತನ (ಬ್ಲಾಂಕ್‌) ಆವರಿಸುತ್ತದೆ. ಈ ರೀತಿ ಆದ ತಕ್ಷಣ ಗಾಬರಿಪಟ್ಟುಕೊಂಡು ಪರೀಕ್ಷಾ ಹಾಲ್‌ನಿಂದ ಎದ್ದು ಹೋಗಬೇಕಿಲ್ಲ. ಶಾಂತವಾಗಿ ಕುಳಿತು ಮನಸ್ಸನ್ನು ನಿರಾಳ ಮಾಡಿಕೊಳ್ಳಬೇಕು. ಕುಳಿತಲ್ಲೇ ಉಸಿರಾಟದ ಕ್ರಿಯೆ (ಲಘು ಪ್ರಾಣಾಯಾಮ) ನಡೆಸಬೇಕು. ಇದರಿಂದ ಮಿದುಳಿನ ಕೋಶಗಳು ಕ್ರಿಯಾಶೀಲವಾಗುತ್ತವೆ. ಓದಿದ್ದು ನೆನಪಿಗೆ ಬರಲು ಸಹಾಯಕಾರಿಯಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಓದಿನಲ್ಲಿ ಒಂದು ಕ್ರಮವನ್ನು ರೂಢಿಸಿಕೊಳ್ಳಬೇಕು. ಪರೀಕ್ಷೆಗಾಗಿ ಓದುವುದಕ್ಕಿಂತ ಶೈಕ್ಷಣಿಕ ವರ್ಷದ ಆರಂಭದಿಂದಲೇ ವಿಷಯವನ್ನು ತಿಳಿದುಕೊಳ್ಳಬೇಕು ಎಂಬ ಆಸಕ್ತಿಯಿಂದಲೇ ಓದಬೇಕು ಎಂದು ಅವರು ತಿಳಿಸಿದರು.

ಪ್ರಾಣಾಯಾಮದಿಂದ ದಿಢೀರ್‌ ರಿಲೀಫ್‌

ಪರೀಕ್ಷೆಗೆ ಹೋಗುವುದಕ್ಕೆ ಮೊದಲು ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ಭಯ ಇರುತ್ತದೆ. ಈ ಭಯದಿಂದ ಎಷ್ಟೋ ಸಲ ಓದಿದ್ದೆಲ್ಲ ಮರೆತು ಹೋಗುತ್ತದೆ. ಕೈಕಾಲು ನಡುಗಿ,
ಬೆವರಲಾರಂಭಿಸುತ್ತಾರೆ. ಎಷ್ಟೊ ಬುದ್ಧಿವಂತ ವಿದ್ಯಾರ್ಥಿಗಳೂ ಚೆನ್ನಾಗಿ ಉತ್ತರ ಬರೆಯಲು ಸಾಧ್ಯವಾಗುವುದಿಲ್ಲ.

ಇದರಿಂದ ಪಾರಾಗಲು ಇರುವ ಉಪಾಯವೆಂದರೆ, ಲಘು ಪ್ರಾಣಾಯಾಮ ನಡೆಸುವುದು. ಪರೀಕ್ಷೆ ಆರಂಭವಾಗುವುದಕ್ಕೆ ಮುನ್ನ ನಿಧಾನಕ್ಕೆ ಮೂಗಿನ ಹೊಳ್ಳೆಗಳಿಂದ ಉಸಿರು ತೆಗೆದುಕೊಳ್ಳಬೇಕು. ಉಸಿರು ಶ್ವಾಸಕೋಶದಲ್ಲಿ ನಿಂತ ಅನುಭವ ಆಗಬೇಕು. ಬಳಿಕ ನಿಧಾನವಾಗಿ ಶ್ವಾಸಕೋಶದಲ್ಲಿದ್ದ ಗಾಳಿಯನ್ನು ಬಾಯಿಯಿಂದ ಹೊರಹಾಕಬೇಕು. ಇದರಿಂದ ಮಿದುಳಿನ ನರ ತಂತುಗಳಲ್ಲಿ ವಿದ್ಯುತ್ ಸಂಚಲನ ಆದಂತಾಗುತ್ತದೆ. ಮನಸ್ಸು ನಿರಾಳವಾಗುತ್ತದೆ ಮತ್ತು ಏಕಾಗ್ರತೆಯೂ ಮೂಡುತ್ತದೆ. ಇದನ್ನು ನಿತ್ಯದ ಅಭ್ಯಾಸವನ್ನಾಗಿ ರೂಢಿಸಿಕೊಳ್ಳಬೇಕು. ಮೈಂಡ್‌ಫುಲ್‌ ಆಗಿ ಇದನ್ನು ಮಾಡಬೇಕು ಎನ್ನುತ್ತಾರೆ ಡಾ.ವಿನಯ್‌.

ನೆನಪಿನಲ್ಲಿಡಬೇಕಾದ ಅಂಶಗಳು

l ಓದಲು ನಿರ್ದಿಷ್ಟ ಸಮಯ ಮತ್ತು ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಆ ಸಮಯ ಮತ್ತು ಸ್ಥಳದಲ್ಲೇ ಪ್ರತಿ ನಿತ್ಯ ಓದಬೇಕು. ಸ್ಥಳ ಪ್ರಶಾಂತತೆಯಿಂದ ಕೂಡಿರಬೇಕು.

l ಏಕಾಗ್ರತೆಯಿಂದ ಓದಲು ಸಾಧ್ಯವಾಗುವುದು 30 ರಿಂದ 45 ನಿಮಿಷಗಳು ಮಾತ್ರ. ಓದಿದನ್ನು ಅರ್ಥ ಮಾಡಿಕೊಳ್ಳಬೇಕು. ಮುಖ್ಯಾಂಶಗಳನ್ನು ನೆನಪಿನಿಂದ ಬರೆಯಿರಿ.

l ಆ ಬಳಿಕ ಎರಡು ನಿಮಿಷ ವಿಶ್ರಮಿಸಬೇಕು. ಎದ್ದು ಓಡಾಡಬಹುದು ಅಥವಾ ಸಣ್ಣ ಧ್ಯಾನ ಮಾಡಬಹುದು. ದೀರ್ಘವಾಗಿ ಉಸಿರಾಡಿ, ಮತ್ತೆ ಓದಲು ಕುಳಿತುಕೊಳ್ಳ
ಬಹುದು. ಓದಲು, ಅದೇ ವಿಷಯಕ್ಕಿಂತ ಬೇರೆ ವಿಷಯ ತೆಗೆದುಕೊಳ್ಳಬಹುದು.

l ಓದಿದ್ದನ್ನು ಮತ್ತೆ ಮತ್ತೆ ಸ್ಮರಣೆ ಮಾಡಿಕೊಳ್ಳಬೇಕು. ನಿನ್ನೆ ಓದಿದ್ದು, ಮೊನ್ನೆ ಓದಿದ್ದು, ವಾರದ ಹಿಂದೆ ಓದಿದ್ದನ್ನು ಸ್ಮರಿಸಬೇಕು. ಮರೆತು ಹೋಗಿದ್ದರೆ, ಅದನ್ನು ನೆನಪಿಗೆ ತಂದುಕೊಳ್ಳಬೇಕು.

l ಪ್ರಶ್ನೆ ಪತ್ರಿಕೆಗಳಿಗೆ ನಿಗದಿತ ಕಾಲಮಿತಿಯಲ್ಲಿ ಉತ್ತರ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

l ಸರಿಯಾದ ಸಮಯಕ್ಕೆ ಊಟ–ತಿಂಡಿ ಮಾಡಬೇಕು. ಉಪವಾಸ ಇರಬಾರದು. ಹೆಚ್ಚು ಪೌಷ್ಟಿಕ ಆಹಾರಗಳನ್ನೇ ಸೇವಿಸಬೇಕು.

l ದಿನಕ್ಕೆ 6 ರಿಂದ 8 ಗಂಟೆ ನಿದ್ದೆ ಮಾಡಬೇಕು. ಇದರಿಂದ ಮಿದುಳಿಗೆ ವಿಶ್ರಾಂತಿ

l ವ್ಯಾಯಾಮ, ಯೋಗ, ಸೈಕ್ಲಿಂಗ್‌, ಜಾಗಿಂಗ್‌, ಸಂಗೀತ ಆಲಿಸುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು.

ನಿಮ್ಹಾನ್ಸ್‌ಗೇ ಬರಬೇಡಿ

ಸಣ್ಣ ಪುಟ್ಟ ಮಾನಸಿಕ ಸಮಸ್ಯೆಗಳಿಗೆ ಖಂಡಿತವಾಗಿಯೂ ಬೆಂಗಳೂರಿನ ನಿಮ್ಹಾನ್ಸ್‌ವರೆಗೂ ಬರುವ ಅಗತ್ಯ ಇಲ್ಲ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಯೋಜನೆಯ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುವ ಒಂದೊಂದು ತಂಡವನ್ನು ರಚಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ತಂಡ ಇದೆ. ಅವರನ್ನೇ ಭೇಟಿ ಮಾಡಿದರೆ ಸಾಕು.

ಮಿದುಳೂ ಬರಿದಾಗುತ್ತದೆ..

40 ನಿಮಿಷಕ್ಕೊಮ್ಮೆ ಓದಿಗೆ ಬಿಡುವು ಕೊಡಿ, 10 ನಿಮಿಷ ಆರಾಮವಾಗಿ ಓಡಾಡಿ ಎಂದು ಹೇಳುವುದೇಕೆಂದರೆ, ಮಿದುಳಿನ ಶಕ್ತಿ ವರ್ಧನೆಗೆ. ನ್ಯೂರಾನ್‌ನಲ್ಲಿ ಬರಿದಾಗುವ ಸೆನಾಕ್ಸ್‌ ಅಸೆಟಕೊಯಿನ್ ಎಂಬ ಅಂಶ ಮರುಭರ್ತಿ ಆಗುವುದು ಇಂತಹ ವಿರಾಮದಿಂದ. ಒಂದಿಷ್ಟು ನಡೆಯುವುದು, ಇತರೊಂದಿಗೆ ಮಾತನಾಡುವುದು ಒಳ್ಳೆಯದು. ರಿಲ್ಯಾಕ್ಸ್ ಆಗುವ ನೆಪ ಹೇಳಿ ಖಂಡಿತ ದುರಾಭ್ಯಾಸ ಅಂಟಿಸಿಕೊಳ್ಳಬೇಡಿ, ಕೆಟ್ಟ ಚಟ ಹತ್ತಿರಕ್ಕೆ ತರಿಸಬೇಡಿ.

ನೆನಪಿನ ಶಕ್ತಿಗೆ ಔಷಧ ಇಲ್ಲ

‘ಈ ಔಷಧ ಸೇವಿಸಿ, ನಿಮ್ಮ ನೆನಪಿನ ಶಕ್ತಿ ವೃದ್ಧಿಸುತ್ತದೆ’ ಎಂಬ ಮಾತನ್ನು ನಂಬಬೇಡಿ. ನೆನಪಿನ ಶಕ್ತಿ ವೃದ್ಧಿಗೆ ಸಿದ್ಧೌಷಧ ಇಲ್ಲ ಎಂಬುದನ್ನು ನೆನಪಿಡಿ. ಒಂದೇ ಬಾರಿ ಓದಿ ನೆನಪಿನಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯ ತೀರಾ ಕಡಿಮೆ ಮಂದಿಗೆ ಇರಬಹುದಷ್ಟೇ. ಮರೆವು ಎಂಬುದು ಸಹಜ. ನಾವು ಒಮ್ಮೆ ಓದಿದ್ದರೆ ಶೇ40ರಷ್ಟನ್ನು 24 ಗಂಟೆಯಲ್ಲಿ ಮರೆತಿರುತ್ತೇವೆ. ಮತ್ತೆ ಓದುತ್ತಿರಬೇಕು, ಆದರೂ ಪ್ರತಿ ವಾರ ಶೇ10ರಷ್ಟು ಮರೆತು ಹೋಗುತ್ತಿರುತ್ತದೆ. ನಾವು ಪುನರ್‌ ಮನನ ಮಾಡದೆ ಹೋದರೆ ಒಂದು ತಿಂಗಳ ಅವಧಿಯಲ್ಲಿ ನಾವು ಓದಿದ ಶೇ 80ರಿಂದ 90ರಷ್ಟು ಅಂಶಗಳು ಮರೆತು ಹೋಗಿರುತ್ತವೆ. ಹೀಗಾಗಿ ಪುನರ್ ಮನನವೇ ನೆನಪಿನ ಶಕ್ತಿ ವೃದ್ಧಿಗೆ ಇರುವ ಏಕೈಕ ಮಾರ್ಗ.

40 ನಿಮಿಷಕ್ಕೊಮ್ಮೆ ವಿರಾಮ ಕೊಡಿ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಬಹುತೇಕ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಈಗಾಗಲೇ ಪರೀಕ್ಷೆ ಭಯ ಆವರಿಸಿದೆ. ಭಯ ಬಿಟ್ಟು ಶಾಂತ ಮನಸ್ಥಿತಿಯಿಂದ ಉತ್ತರ ಬರೆದಾಗ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ. ಪರೀಕ್ಷಾ ಭಯ ನಿವಾರಣೆಗಾಗಿ ಫೋನ್‌ ಇನ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಹುತೇಕ ಪ್ರಶ್ನೆಗಳು, ಓದಿದ್ದು ನೆನಪಿಗೆ ಬರುವುದಿಲ್ಲ. ಏಕಾಗ್ರತೆಗೆ ಏನು ಮಾಡಬೇಕು ಎಂಬುದಾಗಿತ್ತು. ಇದಕ್ಕೆ ಸರಳ ಉಪಾಯಗಳನ್ನು ವೈದ್ಯರು ತಿಳಿಸಿಕೊಟ್ಟಿದ್ದಾರೆ.

ಸುಭಾಷ್‌, ಬೆಂಗಳೂರು

l ನೆನಪಿನ ಶಕ್ತಿ ವೃದ್ಧಿಗೆ ಏನು ಮಾಡಬೇಕು?

ಓದಿದ್ದನ್ನು ಮನಸ್ಸು ದಾಖಲಿಸಿಕೊಳ್ಳಬೇಕು. ಅದನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಸಾಮರ್ಥ್ಯ ಬೇಕು, ಅಗತ್ಯ ಬಿದ್ದಾಗ ಆ ಸಂಗ್ರಹದಿಂದ ಹೊರತೆಗೆದು ಪರೀಕ್ಷೆ ಬರೆಯುವ ಸಾಮರ್ಥ್ಯ ಬರಬೇಕು. ಸರಿಯಾದ, ಪೋಷಕಾಂಶದಿಂದ ಕೂಡಿದ ಊಟ, ಕನಿಷ್ಠ 6 ರಿಂದ 8 ಗಂಟೆ ನಿದ್ದೆ, ಶಿಸ್ತಿನ ಜೀವನಶೈಲಿಯೇ ಇದಕ್ಕೆ ಉತ್ತರ. ನಡಿಗೆ, ಈಜು ಮಾಡುವುದರಿಂದ ಎಂಡಾರ್ಸಿಂಗ್ ಎಂಬ ಹಾರ್ಮೊನ್‌ ಉತ್ಪತ್ತಿಯಾಗುತ್ತದೆ. ನೆನಪಿನ ಶಕ್ತಿ ವೃದ್ಧಿಸಲು ಇದು ಬಹಳ ಪ್ರಯೋಜನಕಾರಿ.

ಸುಜಾತಾ, ಬನಹಟ್ಟಿ

l ಮಗ ದ್ವಿತೀಯ ಪಿಯು ಓದುತ್ತಿದ್ದಾನೆ, 10–15 ನಿಮಿಷ ಓದುತ್ತಾನೆ, ಹೊರಗೆ ಬರುತ್ತಾನೆ. ಓದುವುದರಲ್ಲಿ ಗಮನವೇ ಇಲ್ಲವಲ್ಲ?

ಎಲ್ಲರಿಗೂ ಏಕಾಗ್ರತೆ ಒಂದೇ ರೀತಿ ಇರುವುದಿಲ್ಲ. ಸಾಮಾನ್ಯವಾಗಿ 35 ರಿಂದ 40 ನಿಮಿಷಕ್ಕೊಮ್ಮೆ ಓದು ನಿಲ್ಲಿಸಿ, ಐದೋ, ಹತ್ತೋ ನಿಮಿಷ ಅಡ್ಡಾಡುವುದು, ಇನ್ನೊಬ್ಬರೊಂದಿಗೆ ಮಾತನಾಡುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ. 10–15 ನಿಮಿಷಕ್ಕೊಮ್ಮೆ ಓದು ಸ್ಥಗಿತಗೊಳಿಸುವುದು ದೊಡ್ಡ ಸಮಸ್ಯೆಯೇನಲ್ಲ. ಆಗ ಮಕ್ಕಳಿಗೆ ಖಂಡಿತ ಗದರಬೇಡಿ, ಒತ್ತಡ ಹಾಕಬೇಡಿ, ಮಕ್ಕಳ ಸ್ವತಂತ್ರ ಚಿಂತನೆಗೆ ಅವಕಾಶ ಕೊಡಿ. ಒಂದಿಷ್ಟು ಸಮಯ ಬಿಡುವು ಪಡೆದುಕೊಂಡ ಅವರು ಮತ್ತೆ ಓದಿನತ್ತ ಗಮನ ಹರಿಸುವಂತೆ ಮನವೊಲಿಸಿ.

(ಇಂತಹದೇ ಮಾದರಿಯ ಪ್ರಶ್ನೆಗಳನ್ನು ಗುಂಡೂರಿನ ಮಂಜು, ದಾವಣಗೆರೆಯ ಕವನಾ, ವಿಜಯಪುರದ ನಸ್ರಿತ್ ಬೇಗಂ, ಚಿತ್ರದುರ್ಗದ ರಮಹತುಲ್ಲಾ, ಮಣಿಪಾಲದ ರೋಶನಿ, ಹಾಸನದ ಮಂಜುಳಾ ಕೇಳಿದ್ದಾರೆ)

ಕೊಟ್ಟ ಗೋವಿಂದಪ್ಪ, ಶಿರಾ

l ನನ್ನ ಇಬ್ಬರು ಮಕ್ಕಳೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎರಡೆರಡು ಬಾರಿ ಫೇಲ್ ಆದರು. ಚೆನ್ನಾಗಿ ಓದುತ್ತಿದ್ದರೂ ಪರೀಕ್ಷೆಯಲ್ಲಿ ಉತ್ತರ ಬರೆಯುವಾಗ ಸೋಲುತ್ತಿದ್ದಾರೆ. ಏನು ಕಾರಣ?

ಕೆಲವರು ಚೆನ್ನಾಗಿಯೇ ಓದುತ್ತಿರುತ್ತಾರೆ, ಆದರೆ ಪರೀಕ್ಷೆಯಲ್ಲಿ ಅವರಿಗೆ ಓದಿದ್ದು ನೆನಪಿಗೆ ಬರುವುದಿಲ್ಲ ಅಥವಾ ಪರೀಕ್ಷೆಯ ನಿಗದಿತ ಸಮಯದೊಳಗೆ ತಮ್ಮ ಮನದಲ್ಲಿ ಇರುವುದನ್ನು ಅಕ್ಷರ ರೂಪಕ್ಕೆ ಇಳಿಸುವುದು ಅವರಿಗೆ ಸಾಧ್ಯವಾಗುತ್ತಿಲ್ಲ. ಮರೆವು ಎಂಬುದು ಶಾಪವಲ್ಲ, ಅದನ್ನು ನಮ್ಮ ಹಿಡಿತಕ್ಕೆ ತರುವ ಪ್ರಯತ್ನ ನಾವು ಮಾಡಬೇಕು. ಉದ್ವಿಗ್ನತೆಯ ಕಾರಣ ತಿಳಿಯುವುದು, ನಕಾರಾತ್ಮಕ ಆಲೋಚನೆ ಹತ್ತಿಕ್ಕಲು ಪ್ರಯತ್ನಿಸುವುದು ಮುಖ್ಯ.

ಪ್ರೀತಂ, ಚಿಕ್ಕಮಗಳೂರು

l 10ನೇ ತರಗತಿ ಸಿಬಿಎಸ್‌ಸಿಯಲ್ಲಿ ಓದುತ್ತಿದ್ದೇನೆ. ಪರೀಕ್ಷೆ ಬರೆಯಲು ಸಮಯದ ನಿರ್ವಹಣೆ ಹೇಗೆ?

ಅಣಕು ಪರೀಕ್ಷೆ ಬರೆಯುವುದನ್ನು ರೂಢಿಸಿಕೊಳ್ಳಿ. ಪರೀಕ್ಷೆಯ ಸಮಯವನ್ನು ಸರಿಯಾಗಿ ಲೆಕ್ಕ ಹಾಕಿಕೊಂಡು, ಕೊನೆಯ ಹತ್ತು ನಿಮಿಷ ಬಿಟ್ಟು ಪರೀಕ್ಷೆ ಬರೆಯುವ ಸಿದ್ಧತೆ ಮಾಡಿಕೊಳ್ಳಬೇಕು. ಗೊತ್ತಿರುವ ಪ್ರಶ್ನೆಗಳನ್ನು ಮೊದಲಿಗೇ ಬರೆಯಿರಿ.

ಒತ್ತಡ ಒಂದಿಷ್ಟು ಇರಬೇಕು. ಅದರಿಂದಲೇ ಸಾಧನೆ ಮಾಡುವುದು ಸಾಧ್ಯವಾಗುತ್ತದೆ. ಒತ್ತಡ ಅತಿಯಾಗಿ ಆಗಬಾರದು. ಕೊನೆಯ ಹಂತದಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡರೆ ಕಷ್ಟ. ಹೀಗಾಗಿ ವರ್ಷದ ಆರಂಭದಿಂದಲೇ ಸಮಯದ ನಿರ್ವಹಣೆಯತ್ತ ಗಮನ ಹರಿಸಿದರೆ ಅಂತಿಮ ಹಂತದಲ್ಲಿ ಸಮಸ್ಯೆ ಆಗುವುದಿಲ್ಲ.

ಭಾಗ್ಯ, ಸಾರಕ್ಕಿ, ಬೆಂಗಳೂರು

l ಮಗ ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿದ್ದಾನೆ, ಕೈಬರಹ ಚೆನ್ನಾಗಿಲ್ಲ, ಏನು ಮಾಡಲಿ?

ಅಣಕು ಪರೀಕ್ಷೆ ಬರೆಯುತ್ತಿದ್ದರೆ, ಪರೀಕ್ಷೆಯ ವಾತಾವರಣದಲ್ಲೂ ಅಕ್ಷರ ದುಂಡಗೆ ಮಾಡುವ ಪ್ರಯತ್ನವನ್ನು ಮಾಡುವುದು ಸಾಧ್ಯವಾಗುತ್ತದೆ. ಚಿಕ್ಕ ವಯಸ್ಸಿನಿಂದಲೇ ಕಾಪಿ ಬರೆಯುವುದು, ಸರಿಯಾದ ಮಾರ್ಗದರ್ಶನ ನೀಡಿದರೆ ಮಾತ್ರ ಪರೀಕ್ಷೆಯಲ್ಲಿ ಸಹ ಕೈಬರಹ ಉತ್ತಮಗೊಳ್ಳಲು ಸಾಧ್ಯವಿದೆ. ಕೊನೆಯ ಹಂತದಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಕಷ್ಟ.

ಶಿವಕುಮಾರ್, ಮೈಸೂರು

l ಪರೀಕ್ಷೆ ಹತ್ತಿರವಾಗುತ್ತಿದ್ದಂತೆಯೇ ಪೋಷಕರ ಪಾತ್ರ ಹೇಗಿರಬೇಕು?

ಮಕ್ಕಳ ಕಲಿಕಾ ಸಾಮರ್ಥ್ಯದ ಬಗ್ಗೆ ಪೋಷಕರಿಗೆ ಖಂಡಿತ ತಿಳಿದಿರುತ್ತದೆ. ಕಲಿಕೆಯಲ್ಲಿ ಹಿಂದೆ ಬಿದ್ದವರನ್ನು ಮುಂದೆ ತರುವುದಕ್ಕೆ ಸಮಾಧಾನ ಬೇಕು. ಶೇ 50ರಷ್ಟು ಅಂಕ ಗಳಿಸಬಹುದಾದ ವಿದ್ಯಾರ್ಥಿಗೆ ಶೇ 55ರಷ್ಟು ಅಥವಾ ಶೇ 60ರಷ್ಟು ಅಂಕ ಗಳಿಸಲು ಉತ್ತೇಜಿಸಬಹುದೇ ಹೊರತು, ಶೇ 90ರಷ್ಟಲ್ಲ. ಈ ವಾಸ್ತವ ಪೋಷಕರಿಗೆ ತಿಳಿದಿರಬೇಕು ಮತ್ತು ಅದರಂತೆ ವರ್ತಿಸಬೇಕು. ಕಲಿಕೆಗೆ ಅಗತ್ಯವಾದ ಸೌಲಭ್ಯ ಒದಗಿಸಿಕೊಡಿ. ಮಕ್ಕಳು ಖಿನ್ನತೆಗೆ ಒಳಗಾಗದ ರೀತಿಯಲ್ಲಿ ಅವರ ಮನಸ್ಸಿನ ಭಾವನೆ ಅರಿಯಲು ಸದಾ ಪ್ರಯತ್ನಿಸಿ, ಎಲ್ಲೂ ಅವರಿಗೆ ಕೀಳರಿಮೆ ಆಗುವಂತೆ ನಡೆದುಕೊಳ್ಳದೆ, ಅವರನ್ನು ಉತ್ತೇಜಿಸಲು ಪ್ರಯತ್ನಿಸಿ.

ಸಚಿನ್‌, ತುಮಕೂರು

l ತುಂಬಾ ಓದುತ್ತೇನೆ, ಪರೀಕ್ಷೆ ಬರೆಯುವಾಗ ಮರೆತು ಹೋಗುತ್ತದೆ, ಏನು ಮಾಡಲಿ?

ಮನಸ್ಸಿಗೆ ಒತ್ತಡ ಮಾಡಿಕೊಳ್ಳಬೇಡಿ. ಸುಲಭವಾಗಿ ಅರ್ಥವಾಗುವ ಪಾಠವನ್ನು ಚೆನ್ನಾಗಿ ಓದಿ, ಕಷ್ಟದ ಪಾಠಗಳಲ್ಲಿ ಕೆಲವನ್ನು ಓದುವ ಪ್ರಯತ್ನ ಮಾಡಿ. ಅಣಕು ಪರೀಕ್ಷೆ ಬರೆಯಿರಿ, ಊಟ, ನಿದ್ದೆಯತ್ತ ಗಮನ ಕೊಡಿ. ರಾತ್ರಿ ಬಹಳ ಹೊತ್ತು ಓದುವುದರ ಬದಲಿಗೆ ಬೆಳಿಗ್ಗೆ ಬೇಗ ಎದ್ದು ಓದುವ ಅಭ್ಯಾಸ ರೂಢಿಸಿಕೊಳ್ಳಿ.

(ಇಂತಹದೇ ಪ್ರಶ್ನೆಗಳನ್ನು ಸುಲಿಪೇಟೆಯ ಸಂತೋಷ್ ಜಾಬಿನ್‌, ಬಾಗಲಕೋಟೆಯ ನಿಹಾಲ್‌, ವಿಲ್ಸನ್‌ ಗಾರ್ಡ್‌ನ್‌ನ ಸುಮಾ, ಹಾವೇರಿಯ ಬಸವರಾಜ್, ವಿಜಯಪುರದ ಸಂತೋಷ್‌, ದಾವಣಗೆರೆಯ ಶೋಭಾ, ನೂತನ, ಸಿಂದಗಿಯ ಮಾಷ್‌, ಬೆಂಗಳೂರಿನ ರಾಧಾ, ಸಾಗರದ ಉಷಾ, ಮಂಡ್ಯದ ಲತಾ, ಶಹಾಪುರದ ಹನುಮಂತ, ಉತ್ತರಹಳ್ಳಿಯ ಪವಿತ್ರಾ,
ಕಲಬುರ್ಗಿಯ ವಾಣಿ, ಮದ್ದೂರಿನ ಶಿವಕುಮಾರ, ಗುಟ್ಟಹಳ್ಳಿಯ ಲಕ್ಷ್ಮಿ, ಲಗ್ಗರೆಯ ಅಂಬಿಕಾ ಕೇಳಿದ್ದಾರೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT