ಶುಕ್ರವಾರ, ಜುಲೈ 1, 2022
26 °C

ಲಘು ಸ್ಫೋಟ: ಶಾಸಕ ಹ್ಯಾರಿಸ್‌ ಕಾಲಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರ್ಯಕ್ರಮವೊಂದರಲ್ಲಿ ಲಘು ಸ್ಫೋಟ ಸಂಭವಿಸಿ ಶಾಂತಿನಗರ ಕ್ಷೇತ್ರದ ಶಾಸಕ ಎನ್‌.ಎ. ಹ್ಯಾರಿಸ್‌ ಸೇರಿದಂತೆ ಹಲವರು ಗಾಯಗೊಂಡ ಘಟನೆ ಅಶೋಕನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎಂಜಿಆರ್‌ ಜನ್ಮದಿನ ಆಚರಣೆ ಅಂಗವಾಗಿ ಅಭಿಮಾನಿಗಳು ವನ್ನಾರ್ ಪೇಟೆಯ ಬಜಾರ್ ಸ್ಟ್ರೀಟ್‌ನಲ್ಲಿ ಬುಧವಾರ ರಾತ್ರಿ ಸಂಗೀತ ರಸಮಂಜರಿ ಆಯೋಜಿಸಿದ್ದರು. ಆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಹ್ಯಾರಿಸ್‌ ಭಾಗವಹಿಸಿದ್ದರು. ಈ ವೇಳೆ ಲಘು ಸ್ಫೋಟ ಸಂಭವಿಸಿದೆ. ಹ್ಯಾರಿಸ್‌ ಸೇರಿದಂತೆ ಎಲ್ಲ ಗಾಯಾಳುಗಳಿಗೆ ಸಮೀಪದ ಸೇಂಟ್‌ ಫಿಲೋಮಿನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

‘ಹ್ಯಾರಿಸ್‌ ಕುಳಿತಿದ್ದ ಜಾಗಕ್ಕೆ ರಾಕೆಟ್‌ ಪಟಾಕಿ ಬಂದು ಬಿದ್ದಿದೆ. ಇದರಿಂದ ಅವರ ಕಾಲಿಗೆ ಗಾಯವಾಗಿದೆ. ಅಲ್ಲದೆ, ಪಕ್ಕದಲ್ಲಿ ಕುಳಿತಿದ್ದ ಕೆಲವರಿಗೂ ಗಾಯಗಳಾಗಿವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಅಶೋಕನಗರ ಮತ್ತು ವಿವೇಕನಗರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ವಿಷಯ ಗೊತ್ತಾಗುತ್ತಿದ್ದಂತೆಯೇ ಶಾಸಕರ ಅಭಿಮಾನಿಗಳು ಆಸ್ಪತ್ರೆ ಬಳಿ ಸೇರಿದ್ದರು.

‘ಉದ್ದೇಶಪೂರ್ವವಾಗಿ ಯಾರೊ ಈ ಕೃತ್ಯ ಎಸಗಿರುವ ಸಂಶಯವಿದೆ. ಇಷ್ಟು ವರ್ಷಗಳಲ್ಲಿ ಈ ರೀತಿಯ ಘಟನೆ ಎಂದೂ ಆಗಿಲ್ಲ. ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಹೇಳಿದರು.

‘ಸ್ಫೋಟ ಸಂಭವಿಸಿದೆ ಎಂದು ಮಾಹಿತಿ ಬಂದಿದೆ. ಆದರೆ, ಸ್ಫೋಟವೊ ಅಥವಾ ಪಟಾಕಿ ಸಿಡಿದಿದೆಯೇ ಎಂದು ಸ್ಪಷ್ಟವಾಗಿಲ್ಲ. ಘಟನೆಯಲ್ಲಿ ಹ್ಯಾರಿಸ್‌ ಮತ್ತು ಕೆಲವರಿಗೆ ಗಾಯವಾಗಿದೆ’ ಎಂದು ಹೆಚ್ಚುವರಿ ಪೊಲೀಸ್‌ ಕಮಿನರ್‌ (ಪಶ್ಚಿಮ) ಉಮೇಶ್ ಕುಮಾರ್ ತಿಳಿಸಿದರು.

ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಚೇತನ್‌ ರಾಥೋರ್‌ ಭೇಟಿ ನೀಡಿದರು.

ವಿಧಿವಿಜ್ಞಾನ ತಜ್ಞರ ತಂಡ ಕೂಡಾ ಸ್ಥಳಕ್ಕೆ ತೆರಳಿ ಸ್ಫೋಟ ನಡೆದ ಸ್ಥಳದ ಮಾದರಿಗಳನ್ನು ಸಂಗ್ರಹಿಸಿದೆ.


ಎನ್‌.ಎ. ಹ್ಯಾರಿಸ್‌ ಅವರು ಗಾಯಗೊಂಡ ಮಾಹಿತಿ ತಿಳಿದು ಅವರ ಪುತ್ರ ಮೊಹಮ್ಮದ್‌ ಮತ್ತು ಬೆಂಬಲಿಗರು ಆಸ್ಪತ್ರೆಗೆ ಧಾವಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು