ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದಲ್ಲಿರುವುದು ಅಪಾಯಕಾರಿ ಸರ್ಕಾರ’

ಸೈದ್ಧಾಂತಿಕ ಅನುಸಂಧಾನ ಕಾರ್ಯಾಗಾರದಲ್ಲಿ ಕುಂ.ವಿ
Last Updated 10 ಮಾರ್ಚ್ 2019, 19:43 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶದಲ್ಲಿ ಈಗಿರುವ ಸರ್ಕಾರ ಅಪಾಯಕಾರಿಯಾದುದು. ಪ್ರಾದೇಶಿಕ ಭಾಷೆಗಳನ್ನು ತುಳಿಯುತ್ತಿದೆ. ಸಂಸ್ಕೃತಿಯನ್ನು ಹತ್ತಿಕ್ಕುತ್ತಿದೆ’ ಎಂದು ಕಾದಂಬರಿಕಾರ ಕುಂ. ವೀರಭದ್ರಪ್ಪ ಹೇಳಿದರು.

‘ಬಂಡಾಯ ಸಾಹಿತ್ಯ ಸಂಘಟನೆ–ಕರ್ನಾಟಕ’ 40ನೇ ವರ್ಷಾಚರಣೆ ಅಂಗವಾಗಿ ಭಾನುವಾರ ಇಲ್ಲಿ ಆಯೋಜಿಸಿದ್ದ ಸೈದ್ಧಾಂತಿಕ ಅನುಸಂಧಾನ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಒಂದೇ ಧರ್ಮ, ಭಾಷೆ ಹಾಗೂ ಬಣ್ಣ (ಕೇಸರಿ) ಇರಬೇಕು ಎನ್ನುವುದು ಅಪಾಯಕಾರಿಯಾದುದು. ಸಂವಿಧಾನ ಸುಡುತ್ತೇವೆ ಎನ್ನುತ್ತಾರೆ. ಅದೇನು ಅವರಪ್ಪನ ಮನೆ ಆಸ್ತಿಯೇ? ಈ ಸರ್ಕಾರದಲ್ಲಿ, ಪ್ರಶ್ನಿಸುವವರನ್ನು ಬಂಧಿಸಲಾಗುತ್ತಿದೆ. ಇದೇ ಸರ್ಕಾರ ಮುಂದುವರಿದರೆ ನಾವೆಲ್ಲ ಅರೆಸ್ಟ್ ಆಗಬಹುದು. ವಿಶೇಷ ನ್ಯಾಯಾಲಯದಿಂದ ಶಿಕ್ಷಿಸಲೂಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

‘ಬಂಡಾಯ ಸಾಹಿತ್ಯಕ್ಕೆ ಅವಸಾನವಿಲ್ಲ. ಅದನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ. ದಮನಿತರ ದನಿಗೆ ಅವಕಾಶ ಮಾಡಿಕೊಟ್ಟಿದ್ದೇ ಬಂಡಾಯ ಸಾಹಿತ್ಯ ಸಂಘಟನೆ. ಇಲ್ಲವಾಗಿದ್ದರೆ ಕೋಸಂಬರಿ, ಪಾನಕಗಳೇ ವಿಜೃಂಭಿಸುತ್ತಿದ್ದವು’ ಎಂದು ಮಾರ್ಮಿಕವಾಗಿ ಹೇಳಿದರು.

‘ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿ ಈಗ ಇದೆ. ಹೀಗಾಗಿ ಬಂಡಾಯ ಸಂಘಟನೆ ಹೆಚ್ಚು ಕ್ರಿಯಾಶೀಲವಾಗಬೇಕು. ಶ್ರೇಷ್ಠ ಸಾಹಿತ್ಯಕ್ಕಿಂತ ನಮ್ಮ ಅನುಭವ ಪ್ರಪಂಚ ಮುಖ್ಯ. ದುಡಿಯುವ ವರ್ಗದ ನೋವು ಬರೆಯುವ ಹಾಗೂಬಂಡಾಯ ಸಾಹಿತ್ಯ ಸಂಘಟನೆಯ ಪರಿಧಿಯಲ್ಲಿ ಬರುವ ನಾವೇ ಶ್ರೇಷ್ಠ ಸಾಹಿತಿಗಳು’ ಎಂದು ಪ್ರತಿಪಾದಿಸಿದರು.

ಚಿತ್ರನಟಿ ಸುಮಲತಾ ಬಗ್ಗೆ ಸಚಿವ ಎಚ್‌.ಡಿ. ರೇವಣ್ಣ ಹೇಳಿಕೆ ಪ್ರಸ್ತಾಪಿಸಿದ ಅವರು, ‘ಚಿಲ್ಲರೆ ರಾಜಕಾರಣಿ ಕೊಡುವ ಹೇಳಿಕೆ ಇದು. ಹೀಗಾಗಿ, ಇಂದು ನಾಲಿಗೆಗಳನ್ನು ನಿಯಂತ್ರಿಸಬೇಕಾಗಿದೆ’ ಎಂದರು.

ಚಿಂತಕ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಪ್ರಜಾಪ್ರಭುತ್ವದಲ್ಲಿ ರಚನಾತ್ಮಕ ಭಿನ್ನಾಭಿಪ್ರಾಯಗಳು ಇರಬೇಕಾಗುತ್ತದೆ. ವ್ಯಕ್ತಿ ನಿಷ್ಠತೆಗಿಂತ ಸೈದ್ಧಾಂತಿಕ ನಿಷ್ಠೆ ಅಗತ್ಯ. ಮೂಲಭೂತವಾದಿಗಳಿಗೆ ಅನುಕೂಲ ಮಾಡಿಕೊಡುವ ವಿಚಾರಗಳನ್ನು ಮುಂಚೂಣಿಗೆ ತರಬಾರದು. ಪ್ರಗತಿಪರ ವಲಯದಲ್ಲಿರುವ ವಿಚಾರಗಳನ್ನು ‌ಹೈಜಾಕ್ ಮಾಡುತ್ತಿರುವ ಈ ಕಾಲದಲ್ಲಿ ಎಚ್ಚರದಿಂದಿರಬೇಕು. ಸಮಕಾಲೀನ ‌ವಿವೇಕವನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಭಿನ್ನಾಭಿಪ್ರಾಯಗಳ ಕಾರಣಗಳಿಂದಾಗಿ ಬಲಿಪೀಠ‌ ನಿರ್ಮಾಣ ಮಾಡಿಕೊಡುವ ಭಾರತ ನಮಗೆ ಬೇಕಾಗಿಲ್ಲ. ಈ ಕಾರಣಕ್ಕಾಗಿಯೇ ದಮನಿತರ ಸಂವೇದನೆಯನ್ನು ಸತ್ವಯುತವಾಗಿ ಉಳಿಸಬೇಕಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT