ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಲ್‌ಗೆ ಮೂರು ತಿಂಗಳು ಕಾಯಬೇಕು!

ಸಾರ್ವಜನಿಕ ಸಾರಿಗೆ ಕೊರತೆ, ಸ್ವಂತ ವಾಹನ ಬಳಸದ ಸ್ಥಿತಿಯಲ್ಲಿ ಹೊಸ ಸವಾರರು
Last Updated 8 ಜುಲೈ 2020, 20:34 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ಕಲಿಕಾ ಪರವಾನಗಿ (ಎಲ್‌ಎಲ್ಆರ್‌‌) ಮತ್ತು ಚಾಲನಾ ಪರವಾನಗಿಗೆ (ಡಿಎಲ್‌) ಮೂರು ತಿಂಗಳಿಗೂ ಹೆಚ್ಚು ದಿನ ಕಾಯಬೇಕಾದ ಪರಿಸ್ಥಿತಿ ಉದ್ಭವಿಸಿದೆ.

ಲಾಕ್‌ಡೌನ್ ಅವಧಿಯಲ್ಲಿನ ಅರ್ಜಿಗಳ ವಿಲೇ ಬಾಕಿ ಇರುವ ಕಾರಣ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಅವಕಾಶ ನೀಡಲಾಗುತ್ತಿಲ್ಲ ಎನ್ನುವುದು ಸಾರಿಗೆ ಇಲಾಖೆ ಸಮರ್ಥನೆ.

‘ಕಳೆದ ವಾರ ಎಲ್‌ಎಲ್‌ಆರ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದೆ. ಸೆಪ್ಟೆಂಬರ್‌ಗೆ ಸಮಯ ನಿಗದಿ ಮಾಡಿದ್ದಾರೆ (ಸ್ಲಾಟ್‌).ಸಾರ್ವಜನಿಕ ಬಸ್, ರೈಲು ಸಂಚಾರ ಕಡಿಮೆಯಾಗಿದೆ. ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಸ್ವಂತ ವಾಹನದಲ್ಲಿ ಸಂಚರಿಸಿ ಎಂದು ಸರ್ಕಾರ ಹೇಳುತ್ತಿದೆ. ಎಲ್‌ಎಲ್‌ ಅಥವಾ ಡಿಎಲ್‌ ಇಲ್ಲದೆ ಸ್ವಂತ ವಾಹನ ಚಲಾಯಿಸಲೂ ಆಗದೆ ತೊಂದರೆ ಅನುಭವಿಸುತ್ತಿದ್ದೇವೆ’ ಎಂದು ಜಯನಗರದ ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಿದರೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಸ್ವಂತ ವಾಹನದಲ್ಲಿ ಸುರಕ್ಷತೆ ಹೆಚ್ಚು. ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಅರ್ಜಿಗಳನ್ನು ಸಾರಿಗೆ ಇಲಾಖೆ ಬೇಗ ವಿಲೇವಾರಿ ಮಾಡಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಯಶವಂತಪುರದ ತಿಪ್ಪೇಶ್.

ಕೊರೊನಾ ಪರಿಣಾಮ:

‘ಲಾಕ್‌ಡೌನ್‌ ಸಂದರ್ಭದಲ್ಲಿ ಸಲ್ಲಿಸಿದ್ದ ಅರ್ಜಿಗಳ ದಿನಾಂಕವನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಹೀಗಾಗಿ, ಈಗ ಅರ್ಜಿ ಸಲ್ಲಿಸುತ್ತಿರುವವರಿಗೆ ಆಗಸ್ಟ್‌ ಅಥವಾ ಸೆಪ್ಟೆಂಬರ್‌ ‘ಸ್ಲಾಟ್‌’ ಸಿಕ್ಕಿರಬಹುದು. ಹೆಚ್ಚು ಜನ ಸೇರಬಾರದು ಎಂಬ ಕಾರಣಕ್ಕೆ ದಿನಕ್ಕೆ 50 ಜನರಿಗೆ ಮಾತ್ರ ಪರೀಕ್ಷೆಗೆ ಆಹ್ವಾನಿಸಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಆರ್‌ಟಿಒ ಅಧಿಕಾರಿಯೊಬ್ಬರು ತಿಳಿಸಿದರು.

‘ದೇವನಹಳ್ಳಿ ಆರ್‌ಟಿಒ, ಎಲೆಕ್ಟ್ರಾನಿಕ್‌ ಸಿಟಿ ಮತ್ತು ರಾಜರಾಜೇಶ್ವರಿನಗರ ಕಚೇರಿ ಸೀಲ್‌ಡೌನ್‌ ಆಗಿದೆ. ಇಬ್ಬರು ನೌಕರರು ಕೋವಿಡ್‌ನಿಂದ ಮೃತಪಟ್ಟರು. ಹೆಚ್ಚು ಜನರಿಗೆ ಪರೀಕ್ಷೆಗೆ ಆಹ್ವಾನಿಸಿ, ಯಾರಿಗಾದರೂ ಸೋಂಕು ಇದ್ದರೆ ಮತ್ತೆ ಸೀಲ್‌ಡೌನ್‌ ಮಾಡಬೇಕಾಗುತ್ತದೆ. ಅದಕ್ಕೆ ಕಡಿಮೆ ಜನರಿಗೆ ಅವಕಾಶ ನೀಡಲಾಗುತ್ತಿದೆ’ ಎಂದು ಹೇಳಿದರು.

‘ತೀರಾ ತುರ್ತು ಇರುವ ಒಬ್ಬರು ಅಥವಾ ಇಬ್ಬರಿಗೆ ವಾರಕ್ಕೆ ಸ್ಲಾಟ್‌ ನೀಡಿ, ಪರವಾನಗಿಯನ್ನು ನೀಡಲು ಅವಕಾಶವಿದೆ. ಕೊರೊನಾ ಸಮಸ್ಯೆ ಬಗೆಹರಿದ ನಂತರ ಅರ್ಜಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು’ ಎಂದು ಅವರು ಹೇಳಿದರು.

‘ವಿಡಿಯೊ ನೋಡಿ, ಡಿಎಲ್‌ ನೀಡಿ’

‘ಲಿಖಿತ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿಯೇ ತೆಗೆದುಕೊಳ್ಳಲಾಗುತ್ತಿದೆ. ಅದೇ ರೀತಿ ವಾಹನ ಚಾಲನಾ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿಯೇ ನಡೆಸಲಿ’ ಎನ್ನುತ್ತಾರೆ ವಾಹನ ಸವಾರ ರಮೇಶ್.

‘ಅರ್ಜಿಯಲ್ಲಿ ನಮ್ಮ ಭಾವಚಿತ್ರ ಇದ್ದೇ ಇರುತ್ತದೆ. ನಾವು ಬೈಕ್‌ ಅಥವಾ ಕಾರ್‌ ಓಡಿಸುವುದನ್ನು ವಿಡಿಯೊ ಮಾಡಿ, ಇಲಾಖೆಯ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುತ್ತೇವೆ. ಅದನ್ನು ನೋಡಿ ಪರವಾನಗಿ ನೀಡುವ ವ್ಯವಸ್ಥೆ ತಂದರೆ ಅನುಕೂಲವಾಗುತ್ತದೆ. ಇದರಿಂದ ಜನ ಸೇರುವುದು ತಪ್ಪುತ್ತದೆಯಲ್ಲದೆ, ಅಲೆದಾಡುವ ಕಷ್ಟವೂ ಇರುವುದಿಲ್ಲ’ ಎಂದು ಅವರು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT