ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ ಕಾರ್ಯಕರ್ತರಿಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ: ಸಚಿವ ಎಸ್.ಟಿ.ಸೋಮಶೇಖರ್

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನದ ಚೆಕ್‌ ವಿತರಿಸಿದ ಸಹಕಾರ ಸಚಿವ ಸೋಮಶೇಖರ್‌
Last Updated 12 ಜೂನ್ 2020, 12:34 IST
ಅಕ್ಷರ ಗಾತ್ರ

ದಾವಣಗೆರೆ: ‘ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ ಹೇಳಿದರು.

ಜಿಲ್ಲಾಡಳಿತ, ಸಹಕಾರ ಇಲಾಖೆ ಹಾಗೂ ಜಿಲ್ಲೆಯ ಸಹಕಾರ ಸಂಘಗಳ ಆಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನದ ಚೆಕ್‌ ವಿತರಿಸುವಸಮಾರಂಭದಲ್ಲಿ ಅವರು ಮಾತನಾಡಿದರು.

‘ಸ್ತ್ರೀಶಕ್ತಿ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದ್ದು, ಅವು ಪ್ರಾಮಾಣಿಕತೆಯಿಂದ ಮರುಪಾವತಿ ಮಾಡುತ್ತಿವೆ. ‘ಬಡವರ ಬಂಧು’ ಯೋಜನೆಯಡಿ ಫುಟ್‌ಪಾತ್‌ ವ್ಯಾಪಾರಿಗಳಿಗೆ ₹ 10 ಸಾವಿರ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಆಶಾ ಕಾರ್ಯಕರ್ತೆಯರಿಗೂ ಸಾಲ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿ ಜೊತೆಗೆ ಚರ್ಚಿಸಿದ್ದೇವೆ. 15 ದಿನಗಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಡಿಸಿಸಿ ಬ್ಯಾಂಕ್‌ನಿಂದ ಸಾಲ ನೀಡಲಾಗುವುದು’ ಎಂದು ತಿಳಿಸಿದರು.

‘ಇದೇ ರೀತಿ ವೈದ್ಯರು ಹಾಗೂ ನರ್ಸ್‌ಗಳಿಗೂ ಸೌಲಭ್ಯ ಕಲ್ಪಿಸುವ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಸಚಿವ ಡಾ. ಸುಧಾಕರ್‌ ಜೊತೆಗೆ ಚರ್ಚಿಸಿದ್ದೇನೆ’ ಎಂದೂ ಹೇಳಿದರು.

‘ಸಹಕಾರ ಸಂಘಗಳಿಗೆ ಬಂದ ಲಾಭದ ಹಣವನ್ನು ಸಂಗ್ರಹಿಸಿ ಸಹಕಾರ ಇಲಾಖೆಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 52 ಕೋಟಿ ದೇಣಿಗೆ ನೀಡಲಾಗಿದೆ. ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ತಲಾ ₹ 3000 ಪ್ರೋತ್ಸಾಹಧನ ನೀಡಲು ₹ 12.75 ಕೋಟಿ ಹಣ ಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದಾಗ, ಸಹಕಾರ ಸಂಘಗಳಿಂದ ಕೊಡಿಸಲು ನಾವು ಮುಂದೆ ಬಂದೆವು. ಈಗಾಗಲೇ 12 ಜಿಲ್ಲೆಗಳ 11 ಸಾವಿರ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಿಸಲಾಗಿದೆ. ಆಯಾ ಜಿಲ್ಲೆಯ ಡಿಡಿಸಿ ಬ್ಯಾಂಕ್‌ಗಳ ಲಾಭಾಂಶದಲ್ಲಿ ಪ್ರೋತ್ಸಾಹಧನ ಕೊಡಿಸಲಾಗುತ್ತಿದೆ. ಯಾವುದೇ ಆಶಾ ಕಾರ್ಯಕರ್ತರಿಗೆ ಹಣ ಸಿಗದಿದ್ದರೆ ಸಹಕಾರ ಇಲಾಖೆಯ ಉಪನಿಬಂಧಕರನ್ನು ಸಂಪರ್ಕಿಸಬೇಕು’ ಎಂದು ಸಚಿವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ‘ಜೀವವನ್ನು ಲೆಕ್ಕಿಸದೇ ಪ್ರತಿ ಮನೆಗೆ ತೆರಳಿ ಜನರ ಆರೋಗ್ಯ ಸಮೀಕ್ಷೆ ನಡೆಸಿದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡುತ್ತಿರುವುದು ಹೆಮ್ಮೆಯ ಸಂಗತಿ. ₹ 3,000 ಮೊತ್ತ ಕಡಿಮೆ ಎನಿಸಿದರೂ, ಗೌರವ ವಂದನೆ ಸಲ್ಲಿಸುತ್ತಿರುವುದು ಅದಕ್ಕಿಂತಲೂ ಮುಖ್ಯ ವಿಚಾರ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಶಾಸಕರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಗೌರವಿಸುವ ಕೆಲಸವನ್ನು ಮಾಡುತ್ತಿದ್ದರು. ಇದರ ನಡುವೆಯೇ ರಾಜ್ಯದಲ್ಲಿ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಲು ಮುಂದೆ ಬಂದ ಸಹಕಾರ ಸಚಿವರನ್ನು ಅಭಿನಂದಿಸುತ್ತೇನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ‘ಕೋವಿಡ್‌ ಪರಿಹಾರ ನಿಧಿಗೆ ಸಹಕಾರ ಸಂಘಗಳ ಲಾಭಾಂಶದಲ್ಲಿ ₹ 52 ಕೋಟಿ ನೀಡಿರುವುದು ಹಾಗೂ ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡುತ್ತಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಪ್ರೋತ್ಸಾಹಧನ ನೀಡುತ್ತಿರುವ ಡಿಡಿಸಿ ಬ್ಯಾಂಕ್‌ ಅನ್ನು ಅಭಿನಂದಿಸುತ್ತೇನೆ. ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರ ಸಹಕಾರದಿಂದ ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡುವ ವಿಶ್ವಾಸವನ್ನು ಜಿಲ್ಲಾಡಳಿತ ವ್ಯಕ್ತಪಡಿಸಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಿಸಿಸಿ ಬ್ಯಾಂಕ್‌ನ ಜೆ.ಆರ್‌. ಷಣ್ಮುಖಪ್ಪ, ‘ಯೋಧರು ದೇಶವನ್ನು ರಕ್ಷಣೆಗೆ ಮಾಡಿದಂತೆ ಆಶಾ ಕಾರ್ಯಕರ್ತೆಯರು ಜನರ ರಕ್ಷಣೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ನಿಂದ 1,224 ಆಶಾ ಕಾರ್ಯಕರ್ತೆಯರಿಗೆ ತಲಾ ₹ 3,000 ಪ್ರೋತ್ಸಾಹಧನ ನೀಡಲಾಗುತ್ತಿದೆ’ ಎಂದು ಹೇಳಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಮಾಡಾಳ್‌ ವಿರೂಪಾಕ್ಷಪ್ಪ, ಎಸ್‌. ರಾಮಪ್ಪ, ಮೇಯರ್‌ ಬಿ.ಜೆ. ಅಜಯಕುಮಾರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್‌, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಬಿ.ವಿ. ಚಂದ್ರಶೇಖರ್‌, ಶಿಮೂಲ್‌ ಉಪಾಧ್ಯಕ್ಷ ಎಚ್‌.ಕೆ. ಬಸಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಹಾಗೂ ಅಧಿಕಾರಿಗಳು ಹಾಜರಿದ್ದರು.

ಭೈರತಿ ಆಕ್ಟೋಪಸ್‌ ಇದ್ದಂತೆ!

‘ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವ ಭೈರತಿ ಬಸವರಾಜ ಅವರು ಆಕ್ಟೋಪಸ್‌ ಇದ್ದಂತೆ. ಒಮ್ಮೆ ಹಿಡಿದರೆ ಬಿಡುವುದೇ ಇಲ್ಲ. ಶಾಸಕರಾಗಿದ್ದಾಗಲೂ ಅವರು ಹಿಡಿದ ಕೆಲಸ ಮುಗಿಯುವವರೆಗೂ ಬಿಡುತ್ತಿರಲಿಲ್ಲ. ಸಚಿವ ಸಂಪುಟದಲ್ಲಿ ಸಭೆಯಲ್ಲಿ ದಾವಣಗೆರೆ ಜಿಲ್ಲೆಗೆ ಬೇಕಾಗಿದ್ದನ್ನು ಅವರೇ ಮೊದಲು ಮುಖ್ಯಮಂತ್ರಿ ಬಳಿ ಪ್ರಸ್ತಾಪಿಸುತ್ತಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ಲ್ಯಾಬ್‌ ಮಂಜೂರು ಮಾಡಿಸುವಲ್ಲೂ ಅವರ ಪರಿಶ್ರಮ ಇದೆ’ ಎಂದು ಸಚಿವ ಎಸ್‌.ಟಿ. ಸೋಮಶೇಖರ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT