ಸೋಮವಾರ, ಜುಲೈ 13, 2020
29 °C
ದೇಶದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ

ನರೇಗಾ ಯೋಜನೆಯಡಿ ಒಂದೇ ದಿನ 9 ಲಕ್ಷ ಜನರಿಗೆ ಉದ್ಯೋಗ: ಸಚಿವ ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನರೇಗಾದಿಂದ ಹಳ್ಳಿ ಜನರ ಬದುಕು ಹಸನಾಗುತ್ತಿದೆ. ಸೋಮವಾರ (ಮೇ 25) ಒಂದೇ ದಿನ ರಾಜ್ಯದಲ್ಲಿ 9,19,638 ಜನ ನರೇಗಾದಡಿ ಕೆಲಸ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಸೋಮವಾರ ನಗರದಲ್ಲಿ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಈಶ್ವರಪ್ಪ ‘ನರೇಗಾ ಮೂಲಕ ರಾಜ್ಯದ 6,021 ಗ್ರಾಮ ಪಂಚಾಯ್ತಿಯಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಕಲ್ಯಾಣಿ, ಚೆಕ್‌ ಡ್ಯಾಮ್‌ ನಿರ್ಮಾಣ ಹೀಗೆ ಹಲವಾರು ಕೆಲಸಗಳು ನಡೆಯುತ್ತಿವೆ. ನರೇಗಾ ಯೋಜನೆ ಸಮರ್ಥ ಅನುಷ್ಠಾನದ ವಿಷಯದಲ್ಲಿ ‌ದೇಶದಲ್ಲಿ ಚತ್ತೀಸಗಡ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ’ ಎಂದು ವಿವರಿಸಿದರು.

‘ನರೇಗಾದಡಿ ಕೆಲಸ ಮಾಡಿದ ಕಾರ್ಮಿಕರಿಗೆ ಮೊದಲು ಒಂದು ದಿನಕ್ಕೆ ₹249 ಸಿಗುತ್ತಿತ್ತು. ಈಗ ₹275 ಲಭಿಸುತ್ತದೆ. ಕೂಲಿ ಹಣ ಮತ್ತು ಕಾಮಗಾರಿ ಸಾಮಗ್ರಿಗಳಿಗೆ ವೆಚ್ಚ ಮಾಡಿದ ಹಣ ಬರುವುದು ಬಾಕಿಯಿತ್ತು. ಈಗಾಗಲೇ ₹1,861 ಕೋಟಿ ಬಂದಿದ್ದು, ₹1,000 ಕೋಟಿ ಉಳಿದಿದೆ. ನರೇಗಾ ಯೋಜನೆಯಡಿ ಚುನಾಯಿತ ಪ್ರತಿನಿಧಿಗಳು, ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರು ಈ ಮೂವರನ್ನು ಬಿಟ್ಟು ಬೇರೆ ಯಾರೇ ಬಂದರೂ ಎಲ್ಲರಿಗೂ ಜಾಬ್‌ಕಾರ್ಡ್‌ ಕೊಡುತ್ತೇವೆ. ರಾಜ್ಯದ ಯಾವುದೇ ಭಾಗದಿಂದ ಬಂದು ಎಲ್ಲಿ ಬೇಕಾದರೂ ಕೆಲಸ ಮಾಡಬಹುದು’ ಎಂದರು.

ಹಂತಹಂತವಾಗಿ ವಿಸ್ತರಣೆ: ಆರ್ಟ್‌ ಆಫ್‌ ಲಿವಿಂಗ್‌ ಸಹಯೋಗದಲ್ಲಿ ಒಂಬತ್ತು ಜಿಲ್ಲೆಗಳಲ್ಲಿ ಕೈಗೊಂಡಿರುವ ಅಂತರ್ಜಲ ಚೇತನ ಯೋಜನೆಯನ್ನು ಹಂತಹಂತವಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಈಶ್ವರಪ್ಪ ಹೇಳಿದರು.

ಆರ್ಟ್‌ ಆಫ್‌ ಲಿವಿಂಗ್‌ ಜೊತೆ ಈ ಕುರಿತು ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅವರು ತಾಂತ್ರಿಕ ಸಲಹೆ, ಉಸ್ತುವಾರಿ ಮತ್ತು ಮಾರ್ಗದರ್ಶನ ಮಾಡುತ್ತಾರೆ. ಅವರಿಗೆ ಸರ್ಕಾರದ ವತಿಯಿಂದ ಯಾವುದೇ ಹಣ ಕೊಡುವುದಿಲ್ಲ ಎಂದರು.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿರುವುದು ನಿಜವೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಕುಡಿದವರು ಇದರ ಬಗ್ಗೆ ಮಾತನಾಡ್ತಾರೆ ಬಿಡ್ರೀ...’ ಎಂದು ಎದ್ದು ಹೋದರು.

ಯಾವಾಗ ಚುನಾವಣೆ ನಡೆದರೂ ಸಿದ್ಧ

ಗ್ರಾಮ ಪಂಚಾಯ್ತಿಗಳಿಗೆ ಯಾವಾಗ ಚುನಾವಣೆ ನಡೆದರೂ ಎದುರಿಸಲು ಸಿದ್ಧರಿದ್ದೇವೆ ಎಂದು ಈಶ್ವರಪ್ಪ ಹೇಳಿದರು.

ಈ ಕುರಿತು ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಅವರು ನೀಡುವ ವರದಿಯ ಆಧಾರದ ಮೇಲೆ ಆಯೋಗ ಕ್ರಮ ಕೈಗೊಳ್ಳುತ್ತದೆ ಎಂದರು.

ಜೂನ್‌ನಲ್ಲಿ 2,600 ಗ್ರಾಮ ಪಂಚಾಯ್ತಿಗಳ ಅಧಿಕಾರವಧಿ ಪೂರ್ಣಗೊಳ್ಳುತ್ತದೆ. ಡಿಸೆಂಬರ್‌ ವೇಳೆ ಹಂತಹಂತವಾಗಿ ಈ ಸಂಖ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ ನೇಮಕ, ಆಡಳಿತ ಸಮಿತಿ ನೇಮಕ ಅಥವಾ ಇರುವ ಸದಸ್ಯರನ್ನೇ ಮುಂದುವರಿಸುವುದು ಹೀಗೆ ಮೂರು ಅಂಶಗಳನ್ನು ಮುಂದಿಟ್ಟು ಚರ್ಚಿಸುತ್ತಿದ್ದೇವೆ. ಆಡಳಿತ ಸಮಿತಿ ನೇಮಕ ಮಾಡುವುದೇ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದು, ಶೀಘ್ರದಲ್ಲಿ ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು