ಶುಕ್ರವಾರ, ಫೆಬ್ರವರಿ 21, 2020
29 °C
ಸಮಕಾಲೀನ ಸಂದರ್ಭದಲ್ಲಿ ಲೋಹಿಯಾವಾದದ ನಿರ್ವಚನ: ಡಾ.ರಾಜಾರಾಮ ತೋಳ್ಪಾಡಿ

ಅಸಹಕಾರಕ್ಕೂ ಅವಕಾಶ ನೀಡಿ: ಡಾ.ರಾಜಾರಾಮ ತೋಳ್ಪಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯದ ಜೊತೆ ಅಸಹಕಾರದ ಅಭಿವ್ಯಕ್ತಿಗೂ ಅವಕಾಶ ಬಹುಮುಖ್ಯ ಎಂದು ಸಮಾಜವಾದಿ ಚಿಂತಕ ಲೋಹಿಯಾ ಪ್ರಬಲವಾಗಿ ಪ್ರತಿಪಾದಿಸಿದ್ದರು’ ಎಂದು ಮಂಗಳೂರು ವಿಶ್ವವಿದ್ಯಾಲಯದ ನೆಹರೂ ಚಿಂತನ ಕೇಂದ್ರದ ಪ್ರಭಾರ ನಿರ್ದೇಶಕ ಡಾ.ರಾಜಾರಾಮ ತೋಳ್ಪಾಡಿ ಹೇಳಿದರು. 

ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ. ರಾಮ ಮನೋಹರ ಲೋಹಿಯಾ ಅಧ್ಯಯನ ಪೀಠದ ಸಹಯೋಗದಲ್ಲಿ ನಗರದ ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗವು ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಸಮಕಾಲೀನ ಸಂದರ್ಭದಲ್ಲಿ ಲೋಹಿಯಾವಾದದ ನಿರ್ವಚನ’ ಕುರಿತು ಅವರು ಉಪನ್ಯಾಸ ನೀಡಿದರು.

‘ಸಿಎಎ, ಎನ್‌ಆರ್‌ಸಿ, ಹಿಂದೂ ರಾಷ್ಟ್ರವಾದದ ಆಕ್ರಮಣ ಶೀಲತೆಯಿಂದಾಗಿ ಪ್ರಜಾಪ್ರಭುತ್ವವೇ ಸಂಕಟಕ್ಕೆ ಸಿಲುಕಿದೆ. ಸ್ವಾತಂತ್ರ್ಯ ಹೋರಾಟದ ರಾಷ್ಟ್ರವಾದದಲ್ಲಿ ಬಹುತ್ವ ಮತ್ತು ದೇಶದ ಹಿತ ಇತ್ತು. ಆದರೆ, ಈಗ ಕಾರ್ಪೊರೇಟ್ ಹಿತಾಸಕ್ತಿ ಕಾಯುವ ‘ಕಾರ್ಪೊರೇಟ್ ರಾಷ್ಟ್ರವಾದ’ ಇದೆ. ಜನಹಿತ ಗೌಣವಾಗಿದೆ. ಇಲ್ಲಿ ಆರ್ಥಿಕ ವಸಾಹತುಶಾಹಿ ಇದ್ದು, ಪ್ರಜಾಪ್ರಭುತ್ವವನ್ನು ಅಗೌರವಿಸಲಾಗುತ್ತಿದೆ’ಎಂದು ಅವರು ವಿಶ್ಲೇಷಿಸಿದರು.

‘ಅಸಮಾನ ಸಮಾಜದಲ್ಲಿ ಸಮಾನತೆ ಆಶಯವಿಲ್ಲದೇ ಯಶಸ್ಸು ಅಸಾಧ್ಯ. ಅದಕ್ಕೆ ಪ್ರಜಾತಾಂತ್ರಿಕ ಸಂಸ್ಕೃತಿ ಬೇಕು. ಆದರೆ, ಭಾರತದಲ್ಲಿ ಪ್ರಜಾತಂತ್ರದ ತಾತ್ವಿಕತೆ ಬಗ್ಗೆ ಚಿಂತನೆ ನಡೆದದ್ದೇ ವಿರಳ. ಇದರಿಂದಾಗಿ ಇಂದು ಸಂಕಟಕ್ಕೆ  ಸಿಲುಕಿದೆ. ವ್ಯಕ್ತಿತ್ವದ ಅನನ್ಯತೆ ಮೇಲೆ ಸಾಮುದಾಯಿಕ ಆಕ್ರಮಣಶೀಲತೆ ನಡೆಯುತ್ತಿದೆ. ಪ್ರತಿಫಲನಶೀಲತೆ ಮಸುಕಾಗಿದೆ. ಅಸಮಾನತೆಯನ್ನೂ ಜನ ಅರಿವಿಲ್ಲದೇ ಒಪ್ಪಿಕೊಳ್ಳುತ್ತಿದ್ದಾರೆ’ ಎಂದು ವಿವರಿಸಿದರು.

‘ಲೋಹಿಯಾ ರಾಷ್ಟ್ರವಾದ, ಸಮಾನತಾವಾದ ಹಾಗೂ ಸಾಂಸ್ಕೃತಿಕ ನೆಲೆಯ ಪ್ರಜಾಪ್ರಭುತ್ವದ ಬಗ್ಗೆ ಚಿಂತನೆ ನಡೆಸಿದ್ದರು. ಹೋರಾಟವನ್ನೂ ಮಾಡಿದ್ದರು’ ಎಂದರು. 

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಮಾತನಾಡಿ, ‘ದಾವೋಸ್‌ ಸಮಾವೇಶಕ್ಕೆ ಮೊದಲು ಆ್ಯಕ್ಸ್ ಫ್ಯಾಮ್ ಸಂಸ್ಥೆ ವರದಿ ನೀಡಿದ್ದು, ‘ಭಾರತದ 63 ಶ್ರೀಮಂತರ ಸಂಪತ್ತು ದೇಶದ ಬಜೆಟ್‌ಗಿಂತ ಹೆಚ್ಚಿದೆ. ದೇಶದ ಶೇ 70ರಷ್ಟು ಜನರ ಸಂಪತ್ತಿನ ನಾಲ್ಕು ಪಟ್ಟಿಗಿಂತಲೂ ಹೆಚ್ಚು ಶೇ 1ರಷ್ಟಿರುವ ಕುಬೇರರ ಕೈಯಲ್ಲಿದೆ’ ಎಂದು ಹೇಳಿದೆ. ಈ ಅಸಮಾನತೆಯು ಕಳವಳಕಾರಿಯಾಗಿದ್ದು, ಲೋಹಿಯಾ ಚಿಂತನೆ ಪ್ರಸ್ತುವಾಗಿದೆ’ ಎಂದರು. 

‘ಲೋಹಿಯಾ ವಿಕೇಂದ್ರೀಕರಣ, ಬಡವರು, ದಲಿತರು, ಶೋಷಿತರು, ಮಹಿಳೆಯರ ಪರವಾಗಿದ್ದರು. ಅಸಮಾನತೆಯನ್ನು ಬದಲು ಮಾಡುವ ನಂಬಿಕೆ ಇತ್ತು. ಕಾಗೋಡು ಭೂ ಹೋರಾಟಕ್ಕೂ ಬಂದಿದ್ದರು. ಆದರೆ, ಇಂದು ಆರ್ಥಿಕ ಅಸಮಾನತೆ ಜೊತೆಗೆ ಕೃಷಿಯೂ ನೆಲಕಚ್ಚುತ್ತಿದೆ. ರೈತರು ಪರಾವಲಂಬಿಗಳಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಭಾಷೆಯಲ್ಲೇ ಸಂಸ್ಕೃತಿ ಇರುವುದರಿಂದ ಆಡಳಿತ ಭಾಷೆಯು ಪ್ರಭಾವ ಬೀರುತ್ತದೆ. ಹೀಗಾಗಿ, ಎಲ್ಲರೂ ಕನ್ನಡಕ್ಕೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು. 

ವಿಶ್ವವಿದ್ಯಾಲಯದ ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ಅಧ್ಯಯನ ಪೀಠದ ಸಂಚಾಲಕ ಡಾ.ಯರ್ರೀಸ್ವಾಮಿ ಈ,  ಕಾಲೇಜು ಪ್ರಾಚಾರ್ಯ ಡಾ.ಪ್ರವೀಣ್ ಮಾರ್ಟೀಸ್, ಕುಲಸಚಿವ ಡಾ.ಆಲ್ವಿನ್ ಡೇಸಾ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸರಸ್ವತಿ ಕುಮಾರಿ ಕೆ., ಪ್ರಾಧ್ಯಾಪಕ ಡಾ.ವಿಶ್ವನಾಥ ಬದಿಕಾನ, ದಿನೇಶ್, ಗಾಯತ್ರಿ ಇದ್ದರು.

 

‘ಸಂಮ್ಮೋಹನದಿಂದ ಸುಳ್ಳನ್ನು ನಂಬುವ ಜನ’

‘ಫ್ಯಾಸಿಸಂ ಒಬ್ಬ ವ್ಯಕ್ತಿ ಅಥವಾ ಐಕಾನ್ ಅನ್ನು ಮೈ ಮೆರೆಸುತ್ತದೆ. ವಿವೇಚನ ಇಲ್ಲದೇ ಜನ ಆತನ ಹಿಂದೆ ಹೋಗುತ್ತಾರೆ. ಸಂಮ್ಮೋಹನಗೊಳ್ಳುತ್ತಾರೆ. ಅರಿವಿಲ್ಲದೇ ಸುಳ್ಳನ್ನೂ ನಂಬುತ್ತಾರೆ. ಆಗ ಪ್ರಜ್ಞಾವಂತ ಸಮಾಜವು ‘ಮೌನ’ ಹಾಗೂ ಚಿಂತಕರು ‘ಶುಷ್ಕ’ ಆಗುತ್ತಾರೆ. ದೇಶ ಅವನತಿಗೆ ಸಾಗುತ್ತದೆ’ ಎಂದು ಡಾ.ರಾಜಾರಾಮ ತೋಳ್ಪಾಡಿ ಹೇಳಿದರು. 

‘1929–34ರ ತನಕ ಜರ್ಮನಿಯಲ್ಲಿ ಫಾಸಿಸಂ ಬೆಳವಣಿಗೆಯನ್ನು ಹತ್ತಿರದಿಂದ ಕಂಡ ಲೋಹಿಯಾ ಇದನ್ನು ದಾಖಲಿಸಿದ್ದಾರೆ. ಅದಕ್ಕಾಗಿ, ನಮಗೆ ಯಾವುದೇ ನಾಯಕ ಅಥವಾ ಐಕಾನ್ ಬಗ್ಗೆ ಭಾವಾತಿರೇಕ, ಜೀತ ಬೇಡ. ಪ್ರಸ್ತುತ ಸಂದರ್ಭಕ್ಕೆ ಚಿಂತಕರ ತತ್ವನ್ನು ಮರು ಸಂಘಟಿಸಿಕೊಂಡು ವಾಸ್ತವಕ್ಕೆ ಅನ್ವಯಿಸಬೇಕಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು