ಬೆಂಗಳೂರು: ಗ್ರಾಹಕರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 200 ತಲುಪಿರುವುದರ ನಡುವೆಯೇ ಸಗಟು ಹಾಗೂ ಸಣ್ಣ ವರ್ತಕರ ಮೇಲೆ ರಾಜ್ಯ ಸರ್ಕಾರ ಮತ್ತು ಲೋಕಾಯುಕ್ತ ಪೊಲೀಸರು ದಾಳಿ ಆರಂಭಿಸಿದ್ದಾರೆ. ದಿಢೀರನೆ ನಡೆಯುತ್ತಿರುವ ದಾಳಿಯಿಂದಾಗಿ ವರ್ತಕರು ಆತಂಕಗೊಂಡಿದ್ದಾರೆ.
ಕಳೆದ 10 ದಿನಗಳಿಂದ ದಾಳಿ ಕಾರ್ಯಾಚರಣೆ ನಡೆಸುತ್ತಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಸುಮಾರು 150 ಸಗಟು ಮತ್ತು ಚಿಲ್ಲರೆ ಈರುಳ್ಳಿ ಮಳಿಗೆಗಳ ಮೇಲೆ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಪೊಲೀಸರು ಕೃಷಿ ಉತ್ಪನ್ನ ಮಾರುಕಟ್ಟೆಯನ್ನುಶುಕ್ರವಾರ ಸಂಪೂರ್ಣವಾಗಿ ಜಾಲಾಡಿದರು.
ದಾಳಿ ಸಮಯದಲ್ಲಿ ಈರುಳ್ಳಿ ಅಕ್ರಮ ದಾಸ್ತಾನು ಪತ್ತೆಯಾಗಿಲ್ಲ. ವ್ಯಾಪಾರಿಗಳು ಈರುಳ್ಳಿಯ ಅಭಾವ ಸೃಷ್ಟಿಸಿ, ಪರಿಸ್ಥಿತಿಯ ಲಾಭ ಪಡೆಯದಂತೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಸುತ್ತೋಲೆ ಕಳುಹಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
250 ಮೆಟ್ರಿಕ್ ಟನ್‌ಗೆ ಮನವಿ
ಕೇಂದ್ರ ಸರ್ಕಾರ ಈಜಿಪ್ಟ್ ಮತ್ತು ಟರ್ಕಿಯಿಂದ ಆಮದು ಮಾಡಿಕೊಳ್ಳುತ್ತಿರುವ 17 ಸಾವಿರ ಮೆಟ್ರಿಕ್ ಟನ್ ಈರುಳ್ಳಿಯಲ್ಲಿ ರಾಜ್ಯಕ್ಕೆ 250 ಮೆಟ್ರಿಕ್ ಟನ್ ಪೂರೈಸುವಂತೆ ರಾಜ್ಯ ಸರ್ಕಾರ ಪತ್ರ ಬರೆದಿದೆ.
ವಿದೇಶಿ ಈರುಳ್ಳಿ ಡಿಸೆಂಬರ್ 15ರ ಬಳಿಕ ರಾಜ್ಯಕ್ಕೆ ಬರಬಹುದು. ಇದರಿಂದ ಬೆಲೆ ನಿಯಂತ್ರಣ ಸಾಧ್ಯವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.
ಈರುಳ್ಳಿ ಮೇಲೂ ಲೋಕಾಯುಕ್ತರ ಕಣ್ಣು!
ಭ್ರಷ್ಟಾಚಾರಿಗಳ ವಿರುದ್ಧ ಚಾಟಿ ಬೀಸುವ ಲೋಕಾಯುಕ್ತದ ಹದ್ದಿನ ಕಣ್ಣು ಈಗ ಈರುಳ್ಳಿ ಕಾಳಸಂತೆಕೋರರ ಮೇಲೂ ಬಿದ್ದಿದೆ.
ತಮ್ಮ ಅಧೀನದಲ್ಲಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳ ಜೊತೆ ಲೋಕಾಯುಕ್ತರು ಸಮಾಲೋಚನೆ ನಡೆಸಿದರು.ಸಿಕ್ಕಾಪಟ್ಟೆ ಏರುತ್ತಿರುವ ಈರುಳ್ಳಿ ಬೆಲೆ ಲೋಕಾಯುಕ್ತರನ್ನು ಚಿಂತೆಗೀಡುಮಾಡಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ತ್ಯಾಗರಾಜನ್ ನೇತೃತ್ವದ ತಂಡ ಎಪಿಎಂಸಿ ಮೇಲೆ ಶುಕ್ರವಾರ ದಾಳಿ ಮಾಡಿತು ಎಂದು ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.