ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘವು ನಿಜವಾದ ಹಿಂದೂ ವಿರೋಧಿ: ಮಹೇಂದ್ರ ಕುಮಾರ್‌

Last Updated 2 ಡಿಸೆಂಬರ್ 2018, 12:53 IST
ಅಕ್ಷರ ಗಾತ್ರ

ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರಿ ಬಿಜೆಪಿ ಅಲ್ಲದೆ ಮತ್ತೇನೂ ಅಲ್ಲ. ಸಂಘದ ವ್ಯಾಪ್ತಿಯಲ್ಲಿರುವ ನೂರಾರು ಸಂಘಟನೆಗಳ ಮೂಲಕ ಕೆಲಸಗಳನ್ನು ಮಾಡಿಸಿಕೊಳ್ಳುತ್ತ ಬಿಜೆಪಿಗೆ ಅಧಿಕಾರ ತಂದುಕೊಡುವುದೇ ಸಂಘದ ಕೆಲಸ.

ಅಧಿಕಾರದಲ್ಲಿರುವವರು ಏನೂ ಕೆಲಸ ಮಾಡದೇ ಸವಲತ್ತುಗಳನ್ನು ಅನುಭವಿಸಿದರೆ, ಕಾರ್ಯಕರ್ತರು ಮೈ ತುಂಬಾ ಕೇಸುಗಳನ್ನು ಹಾಕಿಸಿಕೊಂಡು ಬಳಲುತ್ತಿರುತ್ತಾರೆ ಎಂದು ಜೆಡಿಎಸ್‌ನ ಮಹೇಂದ್ರ ಕುಮಾರ್‌ ಹೇಳಿದರು.

ಅಭಿಮತ ಮಂಗಳೂರು ವತಿಯಿಂದ ನಡೆದ ಜನನುಡಿ ಸಮಾವೇಶದಲ್ಲಿ ಭಾನುವಾರ ಅವರು‘ಹೊರಳುನೋಟ’ ಎಂಬ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿದರು.

ದೇಶದಲ್ಲಿ ಹಿಂದೂ ವಿರೋಧಿಯಾಗಿರುವ ಸಂಘಟನೆಯಿದ್ದರೆ ಅದು ಆರ್‌ಎಸ್‌ಎಸ್‌. ಅದು ಹಿಂದೂ ಸಮಾಜದ ಸಮಸ್ಯೆಗೆ ಔಷಧಿ ಕೊಡುವುದಿಲ್ಲ. ಸಂಘವೆಂದರೆ ಮದ್ಯ ಅಥವಾ ಅಫೀಮು ಇದ್ದಂತೆ. ಅದು ಮತ್ತೇರಿಸುತ್ತದೆಯೇ ಹೊರತು ಪರಿಹಾರ ಕೊಡುವುದಿಲ್ಲ. ದಲಿತಪರ ಧ್ವನಿ ಎತ್ತಿದ ಕೂಡಲೇ ಸಂಘದ ವಿರೋಧಿಗಳು ಎಂದು ಬಿಂಬಿಸಲಾಗುತ್ತದೆ. ಇದೇಕೆ ಹೀಗೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ ಎಂದು ಅವರು ಹೇಳಿದರು.

ಸಂಘದ ಒಳಗೆ ಇದ್ದಾಗ ಪ್ರಗತಿಪರರೆಲ್ಲ ಸಂಘದ ಭಾರೀ ಶತ್ರುಗಳು ಎಂಬಂತೆ ನನಗೆ ಗೋಚರಿಸುತ್ತಿತ್ತು. ಆದರೆ ಹೊರಗೆ ಬಂದಮೇಲೆ ಈ ಪ್ರಗತಿಪರರು ಯಾರೂ ಒಗ್ಗಟ್ಟಾಗಿ ಇಲ್ಲ ಎನ್ನುವುದು ಅರಿವಿಗೆ ಬರುತ್ತಿದೆ. ಎಲ್ಲರೂ ಒಗ್ಗಟ್ಟಿನಿಂದ ಇದ್ದಾಗ ಸಂಘವನ್ನು ವಿರೋಧಿಸುವುದು ಸಾಧ್ಯ. ಈ ದೇಶದಲ್ಲಿ ದಲಿತರಾಗಿ ಹುಟ್ಟಿದ ಕಾರಣಕ್ಕೆ, ಮುಸ್ಲಿಂ ಆಗಿಹುಟ್ಟಿದ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ದ್ವೇಷ ಮಾಡುವುದು ಸರಿಯಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

‘ಹಿಂದುತ್ವ ಎಂದು ಹೇಳಿಕೊಂಡು ಕೆಲಸ ಮಾಡುವ ಸಂಘವು ನಿಜವಾಗಿಯೂ ದಲಿತಪರವಾಗಿಯೂ ಇಲ್ಲ. ಹಿಂದೂಪರವಾಗಿಯೂ ಇಲ್ಲ. ಸಮಾಜದ ಪರ ಕೆಲಸ ಮಾಡುವವರೇ ನಿಜವಾದ ಹಿಂದುತ್ವವಾದಿಗಳು. ಬಡ ಕಾರ್ಯಕರ್ತರು ಹತ್ಯೆಯಾದಾಗ ಬಿಜೆಪಿಯ, ಸಂಘದ ನಾಯಕರು ಅಧಿಕಾರ ಹಿಡಿಯುವ ಮಾತನಾಡುತ್ತಾರೆ. ಹಾಗಿದ್ದರೆ ಇವರು ಎಂಥಾ ರಕ್ತಪಿಪಾಸುಗಳು ಎಂಬುದು ಅರ್ಥ ಮಾಡಿಕೊಂಡಿದ್ದೇನೆ’ ಎಂದು ಅವರು ತಾವು ಬಜರಂಗ ದಳದ ರಾಜ್ಯ ಸಂಚಾಲಕರಾಗಿದ್ದಾಗ ನಡೆದ ಅನೇಕ ಅನುಭವಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಸುಧೀರ್‌ ಮರೊಳ್ಳಿ, ನಿಕೇತ್‌ ರಾಜ್‌ ಮೌರ್ಯ ಕೂಡ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಡಾ. ಅರುಣ್‌ ಜೋಳದ ಕೂಡ್ಲಿಗಿ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT