ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ‘ಫೈಟ್‌ ಜೋರಾಗೈತೆ, ನೋಡಾನ ಏನಾಯ್ತದೆ...’

ಸುಮಲತಾ ಮೇಲೆ ಪ್ರೀತಿ; ಗೌಡ್ರ ಕುಟುಂಬ ಅಂದ್ರೆ ಇಷ್ಟ * ದಾಖಲೆ ಪ್ರಮಾಣ ತಲುಪಲಿದೆ ಮತದಾನ
Last Updated 24 ಏಪ್ರಿಲ್ 2019, 12:08 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಗದ್ದೆಗಳಲ್ಲಿ ಬೆಳೆದು ನಿಂತ ಕಬ್ಬಿನ ಜಲ್ಲೆಗಳು, ಎಳನೀರು ಗೊನೆಗಳೊಂದಿಗೆ ಓಲಾಡುವ ತೆಂಗಿನ ಮರಗಳು ಹಾಗೂ ಗದ್ದೆಗಳಿಗೆ ನೀರು ಹರಿಸುವ ಕಾಲುವೆಗಳಿಗೆ ಒಂದುವೇಳೆ ಬಾಯಿ ಇದ್ದಿದ್ದರೆ ಸುಮಲತಾ ಹಾಗೂ ನಿಖಿಲ್‌ ಅವರಲ್ಲಿ ಯಾರು ಗೆಲ್ಲೋದು ಅಂತಲೇ ಅವುಗಳು ಸಹ ಚರ್ಚಿಸುತ್ತಿದ್ದವೇನೋ!

ಮಂಡ್ಯದ ಊರು–ಕೇರಿಗಳು ಮಾತ್ರವಲ್ಲದೆ ತೋಟ–ಗದ್ದೆಗಳಲ್ಲೂ ಈಗ ರಾಜಕೀಯದ ಸುಂಟರಗಾಳಿ ಬೀಸುತ್ತಿದೆ. ಕಬ್ಬಿನ ಗದ್ದೆಗಳ ಮರೆಯಲ್ಲಿ ಅಡಗಿ ಕುಳಿತ ಪುಟ್ಟ ಹಳ್ಳಿಗಳನ್ನೂ ಬಿಡದಂತೆ ದಾಂಗುಡಿ ಇಡುತ್ತಿರುವ ತಾರಾ ಮೆರವಣಿಗೆಗಳು ಎಲ್ಲೆಡೆ ಚುನಾವಣಾ ಹವಾ ಎಬ್ಬಿಸಿಬಿಟ್ಟಿವೆ. ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ಹಳ್ಳಿ ಹೈದರೆಲ್ಲ ಮೆರವಣಿಗೆಗಳ ಗಾತ್ರವನ್ನು ಬಲೂನಿನಂತೆ ಉಬ್ಬಿಸುತ್ತಿದ್ದಾರೆ.

ಮೇಲುಕೋಟೆ ದಾರಿಯ ಪಕ್ಕದಲ್ಲಿ ಗದ್ದೆಗೆ ನೀರುಣಿಸುತ್ತಿದ್ದ ಪುಟ್ಟಸ್ವಾಮಿಗೌಡರಿಗೆ ಸಾಲಿನ ಅಂಚಿಗೆ ನೀರು ತಲುಪಿತೋ ಇಲ್ಲವೋ ಎಂಬುದಕ್ಕಿಂತ ಪ್ರಚಾರ ತಂಡಗಳು ಎಲ್ಲಿಯವರೆಗೆ ಬಂದವು ಎನ್ನುವ ವಿಷಯವೇ ಹೆಚ್ಚಾಗಿ ತಲೆ ಕೆಡಿಸಿದಂತಿತ್ತು. ಕಿಸೆಯಲ್ಲಿದ್ದ ಮೊಬೈಲ್‌ ಆಗಾಗ ತೋರಿಸುತ್ತಿದ್ದ ರೋಡ್‌ ಷೋಗಳ ನೇರಪ್ರಸಾರವು ಅವರ ಕುತೂಹಲವನ್ನು ಅಷ್ಟಷ್ಟೇ ತಣಿಸುತ್ತಿತ್ತು.

‘ಏನ್‌ ಗೌಡ್ರೇ, ಯಾವ ಕಡೆ ಬೀಸ್ತಿದೆ ಗಾಳಿ’ ಎಂದು ಕೇಳಿದರೆ, ‘ಫೈಟ್‌ ಜೋರಾಗೈತೆ. ಈಗಿನ ಪ್ರಕಾರ 50–50 ಐತೆ. ಇನ್ನೂ ಹತ್ತು ದಿನ ಟೈಮ್‌ ಐತಲ್ಲ; ಏನಾಯ್ತದೆ ನೋಡಾನ’ ಎಂದು ಉತ್ತರಿಸಿದರು.

ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮದ ಬಸ್‌ ನಿಲ್ದಾಣದಲ್ಲಿ ಮಾತಿಗೆ ಸಿಕ್ಕವರು ಚಿಕ್ಕಸಿದ್ದಯ್ಯ. ‘ಸುತ್ತ ಹತ್ತೂರುಗಳಲ್ಲಿ ಆಯಮ್ಮನಿಗೆ (ಸುಮಲತಾ) ಹೋಪ್‌ ವಸಿ ಜಾಸ್ತಿ ಐತೆ ಬುದ್ಧಿ. ಆದ್ರೆ, ಬೇರೆ ಮೂವರು ಸುಮಲತಾ ನಿಂತು ಕನ್‌ಫ್ಯೂಸ್‌ ಮಾಡವ್ರೇ’ ಎಂದು ಹೇಳಿದರು.

ಪಕ್ಕದ ಊರು ದುದ್ದದ ಕರಿಯಪ್ಪನ ಟೀ ಅಂಗಡಿ ಇಡೀ ಸೀಮೆಯಲ್ಲಿ ಬಲು ಪ್ರಸಿದ್ಧ. ನಿತ್ಯ 150 ಲೀಟರ್‌ ಹಾಲು ಬಳಸುವ ಈ ಅಂಗಡಿಯತ್ತ ಯಾವಾಗ ಹೋದರೂ 40–50 ಮಂದಿ ಹರಟುತ್ತಾ ಕುಳಿತಿರುವುದನ್ನು ಕಾಣಬಹುದು. ದೇಶದ ಆಗು–ಹೋಗುಗಳ ವಿಚಾರಗಳಿಗೆ ಇಲ್ಲಿನ ಚಹಾ ‘ಗೋಷ್ಠಿ’ಗಳು ಮೀಸಲು. ಆದರೆ, ಈಗ ಚರ್ಚೆಯ ವಿಷಯ ಪಕ್ಕಾ ಲೋಕಲ್‌.

‘ದೊಡ್ಡಗೌಡರು ಫೈಟ್‌ ಕೊಟ್ಟಿದ್ದರೆ ಅದು ಬೇರೆ ಮಾತಾಗಿತ್ತು. ಈಗ ಮಂಡ್ಯದ ಸೊಸೆ ಬೇರೆ ಎಲೆಕ್ಷನ್‌ಗೆ ನಿಂತವ್ಳೆ. ಸ್ವಾಭಿಮಾನದ ಪ್ರಶ್ನೆ. ಆಯಮ್ಮನಿಗೇ ನಮ್ಮ ಓಟು’ ಎಂದು ಚರ್ಚೆಗೆ ಕಾವು ತುಂಬಿದರು ದುದ್ದ ಶ್ರೀನಿವಾಸ.

ಪಕ್ಕದಲ್ಲಿ ಕುಳಿತು ಚಹಾ ಆಸ್ವಾದಿಸುತ್ತಿದ್ದ ಟಿ.ಎಸ್‌.ನರಸಿಂಹೇಗೌಡರಿಗೆ ಈ ಮಾತು ಸಿಟ್ಟು ತರಿಸಿತು. ‘ಇಂಥ ಜನಗಳ ಮಾತು ಕಟ್ಕೊಂಡು ಏನಾಯ್ತದೆ? ಜೆಡಿಎಸ್‌ನ ಭದ್ರಕೋಟೆ ಸಾಮಿ ಈ ಮಂಡ್ಯ. ಬಣ್ಣದ ಮಾತಿಗೆ ಇಲ್ಲಿ ಕಿಮ್ಮತ್ತಿಲ್ಲ. ಸಣ್ಣಗೌಡರು ಗೆಲ್ಲೋದು ಗ್ಯಾರಂಟಿ’ ಎಂದು ಒಂದೇ ಉಸಿರಿಗೆ ಹೇಳಿದರು.

‘ಸಂಪೂರ್ಣ ಸಾಲಮನ್ನಾ ಅಂದಿ ದಕ್ಕೆ ಅಲ್ವಾ, ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಕುಮಾರಣ್ಣನಿಗೆ ಸಪೋರ್ಟ್‌ ಮಾಡಿದ್ದು. ನಮ್ಮೂರಿನ ಯಾರ ಸಾಲವೂ ಇದು ವರೆಗೆ ಮನ್ನಾ ಆಗಿಲ್ಲ. ಈಗ ಬುಡ್ತೀವಾ, ಬುದ್ಧಿ ಕಲಿಸ್ತೀವಿ ಕಣಣ್ಣ’ ಎಂದು ಎಲ್‌.ಮಂಜು ಮಾರುತ್ತರ ನೀಡಿದರು. ಕರಿಯಪ್ಪನ ಅಂಗಡಿಯ ಒಲೆ ಮೇಲೆ ಕುದಿಯುತ್ತಿದ್ದ ಚಹಾದ ರೀತಿಯಲ್ಲೇ ಚರ್ಚೆಯೂ ಬಿಸಿ ಏರಿಸಿಕೊಳ್ಳುತ್ತಿತ್ತು.

ನಾಟಿಕೋಳಿ ನಂಜೇಗೌಡರ ಮಾತು: ಪಾಂಡವಪುರ ತಾಲ್ಲೂಕಿನ ಜಕ್ಕನಳ್ಳಿ ಕ್ರಾಸ್‌ನಲ್ಲಿ ಏನೋ ಗಡಿಬಿಡಿ. ಯಾವುದೋ ಸಭೆಗೆ ಸಿದ್ಧತೆ ನಡೆದಿರುವುದು ಎದ್ದು ಕಾಣು ತ್ತಿತ್ತು. ಗುಂಪಿನಲ್ಲಿದ್ದ ವ್ಯಕ್ತಿಗಳಲ್ಲಿ ಬೋಳೇನಹಳ್ಳಿಯ ನಾಟಿಕೋಳಿ ನಂಜೇಗೌಡರೂ ಒಬ್ಬರು. ತಮ್ಮೂರಿನ ಬಹುತೇಕ ರಾಜಕೀಯ ಔತಣಕೂಟಗಳ ಹೊಣೆ ಹೊರುವುದರಿಂದ ನಂಜೇಗೌಡರ ಹೆಸರಿನ ಹಿಂದೆ ‘ನಾಟಿಕೋಳಿ’ ಎಂಬ ವಿಶೇಷಣ ಅಂಟಿಕೊಂಡಿದೆಯಂತೆ.

‘ಎಂಎಲ್‌ಎ ಎಲೆಕ್ಷನ್‌ ಆದಾಗ ನಮ್ಮೂರ ಹೊನ್ನಮ್ಮದೇವಿ ದೇವಸ್ಥಾನ ಕಟ್ಟಾಕೆ 35 ಲಕ್ಷ (ರೂಪಾಯಿ) ಬಂದೈತೆ. ಕನಗನಮರಡಿಯಲ್ಲಿ ಬಸ್‌ ನೀರಿಗೆ ಬಿದ್ದು, ಜನ ಸತ್ತಾಗ ಕುಮಾರಣ್ಣ ತಲೆಗೆ ಐದು ಲಕ್ಷದಂತೆ ಕೊಟ್ಟವ್ರೆ. ಎಲ್ಲಾ ರೋಡ್‌ಗಳಿಗೆ ಟಾರು ಹಾಕವ್ರೆ. ನಮ್ಮಂತ ಮುದುಕ ಮೂದೇವಿಗಳಿಗೆ ಪೆನ್ಶನ್‌ ಜಾಸ್ತಿ ಮಾಡವ್ರೆ. ನೀವೇ ಹೇಳಿ ಸಾಮಿ, ಯಾರಿಗೆ ಓಟು ಹಾಕಾಣ’ ಎಂದು ಪ್ರಶ್ನೆ ಹಾಕಿದರು.

ಸಂಗಾಪುರದ ಸುರೇಶ್, ‘ಹುರಳಿ ಬಿತ್ತೋ ಹೊಲದಲ್ಲಿ ತೊಗರಿ ಬಿತ್ತಾಕೆ ಆತ್ತದಾ ಸಾಮಿ. ಬರ್ಕಳ್ಳಿ, ಗೆಲ್ಲೋದು ನಮ್‌ ಗೌಡ್ರೇ’ ಎಂದು ತಾಕೀತು ಮಾಡಿದರು.

ಕೆ.ಆರ್‌.ಪೇಟೆ ಎಳನೀರು ಮಂಡಿಯು ಮೂರು ತಾಲ್ಲೂಕುಗಳ ರೈತರು ಸೇರುವಂತಹ ಜಾಗ. ಲೋಡ್‌ ಗಟ್ಟಲೆ ಎಳನೀರು ತರುವವರನ್ನೂ ಚುನಾವಣಾ ಜ್ವರ ಕಾಡದೆ ಬಿಟ್ಟಿಲ್ಲ. ಅಪ್ಪಿ–ತಪ್ಪಿ ‘ಯಾರು ಗೆಲ್ತಾರೆ’ ಎಂದು ಕೇಳೀರಿ, ರೈತರೆಲ್ಲ ಎರಡು ಗುಂಪುಗಳಾಗಿ ವಾದ–ಪ್ರತಿವಾದಕ್ಕೆ ಇಳಿದು ಬಿಡುತ್ತಾರೆ. ಎರಡೂ ಅಭ್ಯರ್ಥಿಗಳ ನಡುವಿನ ಸಮಬಲದ ಪೈಪೋಟಿಗೆ ಸಾಕ್ಷ್ಯವನ್ನೂ ಕೊಡುತ್ತಾರೆ.

‘ಜಾತಿ ಹಾಗೂ ಹಣ ಎರಡೇ ಮಂಡ್ಯ ಚುನಾವಣೆ ಹೆಗ್ಗುರುತುಗಳು. ನೋಡಿ, ಜಿಲ್ಲೆಯಲ್ಲಿ ನಡೆದ ರೈತರ ಸರಣಿ ಆತ್ಮಹತ್ಯೆಗಳು ಈಗ ಯಾರನ್ನೂ ಕಾಡುತ್ತಿಲ್ಲ. ಬಂದ್‌ ಆಗಿರುವ ಸಕ್ಕರೆ ಕಾರ್ಖಾನೆಗಳನ್ನು ಶುರು ಮಾಡಬೇಕೆಂಬ ಉಮೇದು ಕೂಡ ಕಾಣುತ್ತಿಲ್ಲ. ಗೌಡರ ಸೊಸೆ ಅನ್ನೋರು ಒಬ್ರು, ಅವರು ನಾಯ್ಡು ಅನ್ನೋರು ಇನ್ನೊಬ್ರು’ ಎಂದು ಬೇಸರಿಸಿಕೊಂಡವರು ಶ್ರೀರಂಗಪಟ್ಟಣದ ಕೆ.ನಾಗರಾಜು.

ಸಚಿವ ಡಿ.ಸಿ. ತಮ್ಮಣ್ಣ ಹಾಗೂ ಅಂಬರೀಷ್‌ ಇಬ್ಬರೂ ಮದ್ದೂರು ತಾಲ್ಲೂಕಿನ ದೊಡ್ಡರಸಿನಕರೆ ಗ್ರಾಮ ದವರು. ಮದ್ದೂರು ಹಾಗೂ ಮಳವಳ್ಳಿ ತಾಲ್ಲೂಕುಗಳಲ್ಲಿ ಅಂಬರೀಷ್‌ ಅವರ ಪ್ರಭಾವ ಸುಮಲತಾ ಅವರ ಕೈಹಿಡಿಯಲಿದೆ ಎಂಬ ಅಭಿಪ್ರಾಯವಿದೆ. ‘ಅಸೆಂಬ್ಲಿಗೆ ತಮ್ಮಣ್ಣನವರನ್ನು ಕಳಿಸೀವಿ. ಪಾರ್ಲಿಮೆಂಟ್‌ಗೆ ನಮ್ಮೂರಿನ ಸೊಸೆ ಸುಮಲತಾ ಅವರನ್ನು ಕಳಿಸ್ತೀವಿ’ ಎಂದರು ಜೆಡಿಎಸ್‌ ಕಾರ್ಯಕರ್ತ ಡಿ.ಸಿ. ಮಂಜುನಾಥ್‌.

ಭಾರತೀನಗರದ ವಸಂತಾ ನರಸಿಂಹಯ್ಯ, ‘ಮಹಿಳೆ ಮನೆಯಿಂದ ಹೊರಗೆ ಬಂದು ಹೋರಾಟಕ್ಕೆ ಧುಮುಕಿದಾಗ ಸಹಿಸುವ ತಾಳ್ಮೆ ಬೇಕಲ್ಲವೇ? ಸುಮಲತಾ ಕುರಿತು ಕೆಲವರು ಮಾತನಾಡುವ ರೀತಿ ಬೇಸರ ತರಿಸಿದೆ’ ಎಂದು ಅಭಿಪ್ರಾಯಪಟ್ಟರು. ಇಂತಹದ್ದೇ ನಿಲುವು ತಾಳಿರುವ ದೊಡ್ಡ ಸಂಖ್ಯೆಯ ಮಹಿಳೆಯರು ತಮ್ಮ ‘ತಾಲ್ಲೂಕಿನ ಸೊಸೆ’ಗಾಗಿ ಕೆಲಸ ಮಾಡುತ್ತಿದ್ದಾರೆ.

ಮಂಡ್ಯ ಕ್ಷೇತ್ರಕ್ಕೆ ಸೇರಿದ ಮೈಸೂರು ಜಿಲ್ಲೆ ಕೆ.ಆರ್‌.ನಗರ ಸದ್ಯಕ್ಕೆ ಮುಗುಮ್ಮಾಗಿದೆ.

ಮಂಡ್ಯದ ಪ್ರತೀ ಹಳ್ಳಿಯಲ್ಲೂ ಹತ್ತಾರು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿವೆ. ಒಂದೊಂದು ಗುಂಪಿನಲ್ಲಿ 50 ಜನ ಸದಸ್ಯೆಯರು. ಅವರ ಜತೆಗಿನ ಪರಿವಾರ ಸೇರಿದರೆ ಪ್ರತೀ ಗುಂಪು ಒಂದು ದೊಡ್ಡ ಮತಗುಚ್ಛ. ಈ ಗುಂಪುಗಳಿಗೆ ಸಿಗುವ ಧನಸಹಾಯದ ಪ್ರಮಾಣ ಹೆಚ್ಚಾದಷ್ಟೂ ಮತಗುಚ್ಛಗಳು ಬುಟ್ಟಿಗೆ ಬಂದು ಬೀಳುವುದು ಸಲೀಸು. ಆಣೆ–ಪ್ರಮಾಣ ಮಾಡಿ ಹಣ ಪಡೆದವರಿಗೆ ದೈವದ ಭಯ. ಓಟುಗಳು ನಿಯತ್ತಾಗಿ ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗುತ್ತವೆ ಎನ್ನುವುದು ಬಹುತೇಕರು ಕೊಡುವ ಮತ ಲೆಕ್ಕಾಚಾರ.

ಮಳೆಗಾಲದಲ್ಲಿ ಶಿಂಶಾ ನದಿ ತುಂಬಿ ಹರಿಯುವಾಗ ಅರಿವಿಗೆ ಬಾರದು ಅದರ ಒಳಸುಳಿಗಳು. ಅಂತೆಯೇ ಕೊನೆಯ ಮೂರು ದಿನಗಳಲ್ಲಿ ಚುನಾವಣೆ, ‘ಪ್ರವಾಹ’ದ ಸ್ವರೂಪ ಪಡೆದಾಗ ಮೂಡುವ ಒಳಸುಳಿಗಳು ಯಾರಿಗೆ, ಯಾವ ಪೆಟ್ಟು ನೀಡುವುವೋ ಎನ್ನುವುದು ಪರಸ್ಪರ ತೊಡೆ ತಟ್ಟಿ ನಿಂತಿರುವ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವಿನ ಸಮಾನ ಆತಂಕ.

ಕಬ್ಬರಸರ ಕರಾಮತ್ತು:ಪಾಂಡವಪುರ ತಾಲ್ಲೂಕು ಹಾದನೂರಿನ ಹಾಲು ಉತ್ಪಾದಕರ ಸಂಘದಿಂದ ಆಚೆ ಬರುತ್ತಿದ್ದ ರೇವಣ್ಣ ಅವರನ್ನು ಮಾತಿಗೆಳೆದಾಗ, ‘ಈಗ ಏನೇನೂ ಗೊತ್ತಾಗಾಕಿಲ್ಲ ಬುಡಿ. ಕಡೇ ಮೂರು ದಿನಗಳಲ್ಲಿ ಬೂತ್‌ಮಟ್ಟದ ಕಾರ್ಯಕರ್ತರು ಹಾಗೂ ಕೆಲವು ಕಬ್ಬರಸರ (ಆಲೆಮನೆಗಳ ಒಡೆಯರು) ಕರಾಮತ್ತು ಎಲ್ಲಾ ಲೆಕ್ಕಾಚಾರ ಬುಡಮೇಲು ಮಾಡ್ತದೆ’ ಎಂದು ಗುಟ್ಟೊಂದನ್ನು ಬಿಟ್ಟುಕೊಟ್ಟರು. ‘ದರ್ಶನ್‌ (ಪುಟ್ಟಣಯ್ಯ)ಗೆ ಲಕ್‌ ಉಲ್ಟಾ ಹೊಡೆದಿದ್ದೇ ಕಡೇ ಮೂರು ದಿನಗಳಲ್ಲಿ ಗೊತ್ತಾ’ ಎಂದು ಅವರು ಕೇಳಿದರು.

ಮರಳಿ ಬಂದ ‘ಮುಂಬೈವಾಲಾ’ಗಳು:ಮಂಡ್ಯ ಎಂದೊಡೆನೆ ಇಡೀ ಜಿಲ್ಲೆ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ ಎಂಬ ಚಿತ್ರಣ ಕಣ್ಮುಂದೆ ಬರುತ್ತದೆ. ಆದರೆ, ನಾಗಮಂಗಲ ತಾಲ್ಲೂಕು ಪೂರ್ಣ, ಪಾಂಡವಪುರ ಮತ್ತು ಕೆ.ಆರ್‌.ಪೇಟೆ ತಾಲ್ಲೂಕುಗಳ ಅರ್ಧದಷ್ಟು ಭಾಗಗಳು ಮಳೆಯಾಶ್ರಿತ. ಇಲ್ಲಿನ ಜನ ಜೀವನೋಪಾಯಕ್ಕಾಗಿ ಮುಂಬೈ, ಬೆಂಗಳೂರು, ಊಟಿ ಕಡೆಗೆ ಹೋಗುವುದು ವಾಡಿಕೆ.

ಮಂಡ್ಯದ ಚುನಾವಣಾ ಕಾವು ಬಿಸಿಲಿನ ತಾಪಮಾನವನ್ನು ಮೀರಿಸಿದ್ದೇ ತಡ, ವಲಸೆ ಹೋದ ಸಾವಿರಾರು ಮಂದಿ ಅಲ್ಲಿನ ಕೆಲಸಗಳಿಗೆ ದೀರ್ಘ ರಜೆಹಾಕಿ ಊರು ಸೇರಿದ್ದಾರೆ. ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನಲ್ಲಿ ಮಾತಿಗೆ ಸಿಕ್ಕ ಮಂಜೇಗೌಡ, ‘ಎಲೆಕ್ಷನ್‌ ಟೈಮ್‌ನಲ್ಲೂ ಊರಿಗೆ ಬರ್ದಿದ್ರೆ ಹೆಂಗೆ ಸರ್‌’ ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆ,ಮಂಡ್ಯ ಕಣದ ಬಗ್ಗೆ ಇನ್ನಷ್ಟು...

ಪ್ರಜಾವಾಣಿ ವಿಶೇಷಸಂದರ್ಶನಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT