ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ: ‘ಮಸಾಲೆ’ ಮಾತಿಗೆ ಹಿರಿಯರ ಆಕ್ಷೇಪ

Last Updated 17 ಮಾರ್ಚ್ 2020, 21:36 IST
ಅಕ್ಷರ ಗಾತ್ರ

ಬೆಂಗಳೂರು: ತುರುವೇಕೆರೆ ತಾಲ್ಲೂಕಿಗೆ ಎತ್ತಿನಹೊಳೆ ನೀರನ್ನು ಹರಿಸದಿದ್ದರೆ ಭೂಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂಬ ಬಿಜೆಪಿಯ ಮಸಾಲ ಜಯರಾಮ್‌ ಮಾತಿಗೆ ವಿಧಾನಸಭೆಯಲ್ಲಿ ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಪ್ರಶ್ನೋತ್ತರ ಅವಧಿಯಲ್ಲಿ ಜಯರಾಮ್‌, ‘ಎತ್ತಿನಹೊಳೆ ನೀರನ್ನು ತುರುವೇಕೆರೆ ತಾಲ್ಲೂಕಿಗೆ ಹರಿಸಬೇಕು’ ಎಂದು ಒತ್ತಾಯಿಸಿದರು. ‘ಇದು ಸಮಗ್ರ ಕುಡಿಯುವ ನೀರಿನ ಯೋಜನೆಯಾಗಿದ್ದು, ಕೃಷಿಗೆ ನೀರು ಹರಿಸಲು ಸಾಧ್ಯವಿಲ್ಲ. ವಿಸ್ತೃತ ಯೋಜನಾ ವರದಿಯಲ್ಲಿ ನಿಮ್ಮ ತಾಲ್ಲೂಕು ಸೇರ್ಪಡೆಯಾಗಿಲ್ಲ’ ಎಂದು ಜಲಸಂಪನ್ಮೂಲ ಸಚಿವರ ಪರವಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ‘ಒಂದು ವೇಳೆ ನೀರು ಹರಿಸದಿದ್ದರೆ ಭೂಮಿ ಕಳೆದುಕೊಳ್ಳುವವರ ಪರ ನಾವು ನಿಲ್ಲುತ್ತೇವೆ. ಭೂಮಿ ನೀಡುವುದಿಲ್ಲ’ ಎಂದು ಜಯರಾಮ್‌ ಎಚ್ಚರಿಸಿದರು.

ಕಾಂಗ್ರೆಸ್‌ನ ಕೆ.ಆರ್.ರಮೇಶ್ ಕುಮಾರ್, ‘ಈ ಯೋಜನೆಗೆ ಸಿಗುವುದು 24 ಟಿಎಂಸಿ ಅಡಿ ನೀರು. ಬರದಿಂದ ತತ್ತರಿಸಿರುವ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗೆ 8 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಆದರೆ, ಒಂದೇ ಒಂದು ತೊಟ್ಟು ನೀರು ಇಲ್ಲಿಯವರೆಗೆ ಬಂದಿಲ್ಲ. ಬೆಂಗಳೂರಿನ ಕೊಳಚೆ ನೀರನ್ನಾದರೂ ಶುದ್ಧೀಕರಿಸಿ ಕೊಡಿ ಎಂದು ನಾವು ದಯನೀಯವಾಗಿ ಬೇಡುತ್ತಿದ್ದೇವೆ. ಹೀಗಿದೆ ನಮ್ಮ ಪರಿಸ್ಥಿತಿ. ಆದರೆ, ಯೋಜನೆ ಅನುಷ್ಠಾನಕ್ಕೆ ಮುನ್ನವೇ ಬೇರೆ ಬೇರೆ ಜಿಲ್ಲೆಯವರು ಬೇಡಿಕೆ ಮಂಡಿಸುತ್ತಿದ್ದಾರೆ. ಈ ರೀತಿ ಮಾತನಾಡುವುದು ಸರಿಯಲ್ಲ’ ಎಂದು ಸೂಚ್ಯವಾಗಿ ಹೇಳಿದರು.

ಗೋವಿಂದ ಕಾರಜೋಳ, ‘ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ನಮ್ಮ ಜಿಲ್ಲೆಯ ಜನರು ಜಾಗ ಬಿಟ್ಟುಕೊಟ್ಟಿದ್ದಾರೆ. ನಾವೇನೂ ಈ ರೀತಿ ಬೆದರಿಕೆ ಹಾಕಿದ್ದೇವೆಯೇ? ಶರಾವತಿ ಯೋಜನೆಯಿಂದ ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ಅವರು ಈ ರೀತಿ ಮಾತನಾಡಿದ್ದಾರೆಯೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT