ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್ ತಯಾರಿ ಕಲೆ; ಸೌಹಾರ್ದದ ಅಲೆ

‘ಈಶ್ವರ ಅಲ್ಲಾ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘ’ದ ಕಾರ್ಯ
Last Updated 21 ಮೇ 2020, 21:26 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಸ್ತ್ರೀಶಕ್ತಿ ಸಂಘವೊಂದು ಲಾಕ್‌ಡೌನ್‌ ಸಮಯದಲ್ಲಿ ಮಾಸ್ಕ್‌ಗಳನ್ನು ತಯಾರಿಸುತ್ತಲೇ ಸೌಹಾರ್ದದ ಅಲೆ ಹುಟ್ಟುಹಾಕಿದೆ.

ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದ ‘ಈಶ್ವರ ಅಲ್ಲಾ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘ’ದ ಕೆಲಸ ಹೆಸರಿನಷ್ಟೇ ವಿಶಿಷ್ಟವಾಗಿದೆ. ಈವರೆಗೆ 5,000ಕ್ಕೂ ಹೆಚ್ಚು ಮಾಸ್ಕ್‌ಗಳನ್ನು ಸಿದ್ಧಪಡಿಸಿದೆ. ‘ನಮ್ಮ ಸಂಘದಲ್ಲಿ 10 ಸದಸ್ಯರು ಮುಸ್ಲಿಮರು. 10 ಸದಸ್ಯರು ಹಿಂದೂಗಳು. ಹೀಗಾಗಿ ‘ಈಶ್ವರ ಅಲ್ಲಾ’ ಎಂದು ಹೆಸರಿಟ್ಟಿದ್ದೇವೆ’ ಎನ್ನುತ್ತಾರೆ ಪ್ರತಿನಿಧಿ ಖತ್ಮುನ್ನಿಸಾ.

2000ನೇ ವರ್ಷದಲ್ಲಿ ಆರಂಭವಾದ ಸಂಘದ ಚಟುವಟಿಕೆ ಎಂದರೆ ಹೊಲಿಗೆ, ಶ್ಯಾವಿಗೆ, ಹಪ್ಪಳ–ಸಂಡಿಗೆ ಮಾಡುವುದು, ರೇಷ್ಮೆ ಗೂಡುಗಳ ಹಾರ ತಯಾರಿಕೆ. 10 ಸದಸ್ಯರ ಬಳಿ ಹೊಲಿಗೆ ಯಂತ್ರಗಳಿವೆ. 2014ರಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಚಟುವಟಿಕೆಯ (ಎನ್‌ಆರ್‌ಎಲ್‌ಎಂ) ‘ಸಂಜೀವಿನಿ’ ಯೋಜನೆಯ ಅಡಿ ಒಕ್ಕೂಟಕ್ಕೆ ಸೇರ್ಪಡೆಗೊಂಡಿತು. ಜಿಲ್ಲಾ ಹಾಗೂ ರಾಜ್ಯ ಮಟ್ಟದ ‘ಅತ್ಯುತ್ತಮ ಮಹಿಳಾ ಸ್ವಸಹಾಯ ಸಂಘ’ ಪ್ರಶಸ್ತಿಗೂ ಸಂಘ ಪಾತ್ರವಾಗಿದೆ.

ಹೊಲಿಗೆ ತರಬೇತುದಾರರೂ ಆದ ಖತ್ಮುನ್ನಿಸಾ ಅವರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಅವರಿಂದ ಎನ್‌ಆರ್‌ಎಲ್‌ಎಂ ಯೋಜನೆಯಡಿ ಮಾಸ್ಕ್‌ಗಳನ್ನು ಹೊಲಿಯುವಂತೆ ಪ್ರೋತ್ಸಾಹ ದೊರೆಯಿತು. ಮಾಸ್ಕ್‌ ಹೊಲಿಯುವ ವಿಧಾನವನ್ನು ಸ್ಥಳೀಯ ಭಾಷೆಯಲ್ಲೇ ವಿವರಿಸುವ ವಿಡಿಯೊ ಸಿದ್ಧಪಡಿಸಿ ಜಿಲ್ಲಾ ಪಂಚಾಯಿತಿಗೆ ನೀಡಿದ್ದಾರೆ.

‘ಸಿಂಗಲ್ ಲೇಯರ್ ಮಾಸ್ಕ್‌ಗೆ ತಲಾ ₹ 15, ಡಬಲ್ ಲೇಯರ್‌ಗೆ ₹20 ಎಂದು ದರ ನಿಗದಿ ಮಾಡಲಾಗಿದೆ. ಇದರಿಂದ ತುಂಬಾ ಲಾಭವೇನೂ ಆಗಲಿಲ್ಲ. ಆದರೆ ಸಂಕಷ್ಟದ ಸಮಯದಲ್ಲಿ ಸಮಾಜಸೇವೆಗೆ ಹೆಗಲು ಕೊಟ್ಟ ಖುಷಿ ನಮ್ಮದು’ ಎಂದರು.

ಹರಿಹರ ತಹಶೀಲ್ದಾರರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಗ್ರಾಮ ಪಂಚಾಯಿತಿಗಳ ಪಿಡಿಒಗಳು ಮಾಸ್ಕ್‌ಗಳನ್ನು ಖರೀದಿಸಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತರು, ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರಿಗೆ ಇವುಗಳನ್ನು ವಿತರಿಸಲಾಗಿದೆ.

‘ಸಂಘದ ಯಾವುದೇ ಸದಸ್ಯರಿಗೆ ಕಷ್ಟಗಳು ಬಂದಾಗ ಉಳಿದೆಲ್ಲರೂ ಸ್ಪಂದಿಸಿದ್ದೇವೆ. ಜಾತಿ-ಧರ್ಮಗಳ ಭೇದ ನಮಗೆಂದೂ ಬಂದಿಲ್ಲ. ನಮ್ಮೆಲ್ಲರ ಒಗ್ಗಟ್ಟಿನಿಂದಾಗಿಯೇ ಸಂಘ ಸಶಕ್ತವಾಗಿದೆ’ ಎನ್ನುತ್ತಾರೆ ಸಂಘದ ಸದಸ್ಯೆ ದೇವೀರಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT