ಮೇಕೆದಾಟು: ಪ್ರಾಧಿಕಾರದ ಸಭೆಯಲ್ಲೂ ವಿರೋಧ

7
ಸಾಧ್ಯತಾ ವರದಿಗೆ ಸಮ್ಮತಿ ನಿರ್ಧಾರ ಹಿಂಪಡೆಯುವಂತೆ ತಮಿಳುನಾಡು ಪಟ್ಟು

ಮೇಕೆದಾಟು: ಪ್ರಾಧಿಕಾರದ ಸಭೆಯಲ್ಲೂ ವಿರೋಧ

Published:
Updated:
Deccan Herald

ನವದೆಹಲಿ: ಮೇಕೆದಾಟು ಯೋಜನೆ ಕುರಿತ ತನ್ನ ವಿರೋಧವನ್ನು ಮುಂದುವರಿಸಿರುವ ತಮಿಳುನಾಡು, ಸೋಮವಾರ ಇಲ್ಲಿ ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲೂ ದನಿ ಎತ್ತಿದೆ.

ಮೇಕೆದಾಟು ಯೋಜನೆಯ ಸಾಧ್ಯತಾ ವರದಿಗೆ ಸಮ್ಮತಿ ಸೂಚಿಸಿರುವ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ, ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಅಧ್ಯಕ್ಷರೂ ಆಗಿರುವ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್‌ ಅವರಿಗೆ ತಮಿಳುನಾಡಿನ ನಿಯೋಗ ಸಭೆಯಲ್ಲಿ ಮನವಿ ಮಾಡಿತು.

ಮೇಕೆದಾಟು ಕುರಿತು ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಸಿದ್ಧಪಡಿಸುವಂತೆ ಸಿಡಬ್ಲ್ಯೂಸಿ ಇತ್ತೀಚೆಗೆ ಕರ್ನಾಟಕಕ್ಕೆ ಸೂಚಿಸಿತ್ತು. ಆದರೆ, ಕಾವೇರಿ ನದಿಯ ಕೆಳಹಂತದ ರಾಜ್ಯಗಳ ಅಭಿಪ್ರಾಯವನ್ನೇ ಕೇಳದಿರುವುದು ಸರಿಯಲ್ಲ ಎಂದು ತಮಿಳುನಾಡು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಕೆ. ಪ್ರಭಾಕರನ್‌ ಸಭೆಯಲ್ಲಿ ದೂರಿದರು. ಒಂದೊಮ್ಮೆ ಕರ್ನಾಟಕವು ಯೋಜನೆ ಕೈಗೆತ್ತಿಕೊಂಡರೆ ತಮಿಳುನಾಡಿನ ಲಕ್ಷಾಂತರ ರೈತರ ಜಮೀನಿಗೆ ನೀರು ದೊರೆಯದಿರುವ ಆತಂಕ ಇದೆ ಎಂದು ಅವರು ಹೇಳಿದರು.

ಆಯೋಗವು ಕಾವೇರಿ ಕಣಿವೆಯ ಎಲ್ಲ ರಾಜ್ಯಗಳ ಪ್ರತಿನಿಧಿಗಳ ಸಭೆ ಆಯೋಜಿಸಿ ಸಮಗ್ರವಾಗಿ ಚರ್ಚಿಸಿದ ನಂತರ ಸೂಕ್ತ ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ, ಯೋಜನೆಗೆ ಸಮ್ಮತಿ ಸೂಚಿಸಿ ಏಕಪಕ್ಷೀಪಯವಾಗಿ ತೀರ್ಮಾನ ಕೈಗೊಂಡಿರುವುದು ನಿಯಮಬಾಹಿರ ಎಂದು ಅವರು ಆರೋಪಿಸಿದರು.

ಅನುಮತಿ ನೀಡಿಲ್ಲ:
‘ಮೇಕೆದಾಟು ಯೋಜನೆಗೆ ಸಂಬಂಧಿಸಿದ ಡಿಪಿಆರ್ ಸಲ್ಲಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ. ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿಲ್ಲ’ ಎಂದು ಪ್ರಾಧಿಕಾರದ ಸಭೆಯ ಬಳಿಕ ಅಧ್ಯಕ್ಷ ಮಸೂದ್ ಹುಸೇನ್ ಸುದ್ದಿಗಾರರಿಗೆ ತಿಳಿಸಿದರು.

ಕರ್ನಾಟಕ ಸಲ್ಲಿಸಲಿರುವ ಡಿಪಿಆರ್‌ ಅನ್ನು ಸಿಡಬ್ಲ್ಯೂಸಿ ಪರಿಶೀಲಿಸಲಿದೆ. ನಂತರವಷ್ಟೇ ಈ ವಿಷಯ ಪ್ರಾಧಿಕಾರದ ಎದುರು ಚರ್ಚೆಗೆ ಬರಲಿದೆ. ಆಗ ಸಮಾಲೋಚನೆ ನಡೆಸಿ, ಒಮ್ಮತದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಪ್ರಾಧಿಕಾರದ ಸಭೆಯಲ್ಲಿ ಕಾವೇರಿ ನದಿ ನೀರು ಹಂಚಿಕೆ ಕುರಿತ ಚರ್ಚೆ ನಡೆಯಬೇಕಿತ್ತು. ಮೇಕೆದಾಟು ಯೋಜನೆ ಕುರಿತು ಚರ್ಚಿಸುವುದು ಸಭೆಯ ಕಾರ್ಯಸೂಚಿ ಆಗಿರಲಿಲ್ಲ. ಸಭೆಯಲ್ಲಿ ತಮಿಳುನಾಡು ನಿಯೋಗವು ಯೋಜನೆಗೆ ತನ್ನ ವಿರೋಧ ವ್ಯಕ್ತಪಡಿಸಿದೆ. ಆಯೋಗದ ನಿರ್ಧಾರ ಹಿಂದಕ್ಕೆ ಪಡೆಯುವಂತೆ ಕೋರಿದೆ ಎಂದು ಅವರು ವಿವರಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !