ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ನಿಲ್ದಾಣಕ್ಕೆ ನುಗ್ಗಿ ಟ್ರ್ಯಾಕ್ ಮೇಲೆಯೇ ಓಡಾಡಿದರು...

ಟಿಕೆಟ್‌ ಪಡೆಯದೇ ಒಳಹೋಗಿದ್ದ ಇಬ್ಬರ ಬಂಧನ * ನಿಲ್ದಾಣದ ಸಿಬ್ಬಂದಿಯಿಂದ ಭದ್ರತಾ ಲೋಪ ಆರೋಪ
Last Updated 17 ಮೇ 2019, 20:04 IST
ಅಕ್ಷರ ಗಾತ್ರ

ಬೆಂಗಳೂರು: ಮೆಜೆಸ್ಟಿಕ್‌ನ ಮೆಟ್ರೊ ನಿಲ್ದಾಣಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ಟ್ರ್ಯಾಕ್‌ ಮೇಲೆಯೇ ನಡೆಯುತ್ತ ಸಂಪಿಗೆ ರಸ್ತೆಯ ನಿಲ್ದಾಣದ ಕಡೆಗೆ ತೆರಳುತ್ತಿದ್ದ ಇಬ್ಬರನ್ನು, ನಿಲ್ದಾಣದ ಭದ್ರತಾ ಸಿಬ್ಬಂದಿಯೇ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.

‘ಚಾಮರಾಜನಗರದ ಯದುವೀರ್ (21) ಹಾಗೂ ಹುಬ್ಬಳ್ಳಿಯ ಶಶಿಧರ್ (20) ಎಂಬುವರು ಮೇ 15ರ ರಾತ್ರಿ 7.35ಕ್ಕೆ ನಿಲ್ದಾಣದೊಳಗೆ ಅತಿಕ್ರಮವಾಗಿ ಪ್ರವೇಶಿಸಿ ಆತಂಕ ಸೃಷ್ಟಿಸಿದ್ದರು. ನಿಲ್ದಾಣದ ಕಂಟ್ರೋಲರ್ ರಾಘವೇಂದ್ರ ನೀಡಿರುವ ದೂರಿನಡಿ ಅವರಿಬ್ಬರನ್ನು ಬಂಧಿಸಲಾಗಿದ್ದು, ಪೂರ್ವಾಪರ ತಿಳಿದುಕೊಳ್ಳಲಾಗುತ್ತಿದೆ’ ಎಂದು ಉಪ್ಪಾರಪೇಟೆ ಪೊಲೀಸರು ಹೇಳಿದರು.

ಆಗಿದ್ದೇನು?

‘ಯದುವೀರ್ ಹಾಗೂ ಶಶಿಧರ್ ನಿಲ್ದಾಣದ ಮುಖ್ಯ ಪ್ರವೇಶ ದ್ವಾರದ ಮೂಲಕವೇ ನಿಲ್ದಾಣದೊಳಗೆ ಬಂದಿದ್ದರು. ಆ ಸಮಯದಲ್ಲಿ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಅವರಿಬ್ಬರ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ. ಟಿಕೆಟ್ ಇಲ್ಲದಿದ್ದರೂ ಅವರಿಬ್ಬರೂ ಫ್ಲಾಟ್‌ಫಾರಂ 4ಕ್ಕೆ ಸರಾಗವಾಗಿ ಹೋಗಿದ್ದರು. ಅವರು ಜಿಗಿದು ಒಳಗೆ ಹೋಗಿರುವ ಅನುಮಾನ ಇದೆ’ ಎಂದು ಪೊಲೀಸರು ಹೇಳಿದರು.

‘ಫ್ಲಾಟ್‌ಫಾರಂ ತಲುಪುತ್ತಿದ್ದಂತೆ ಅವರಿಬ್ಬರು, ರೈಲು ಹೋಗುವ ಟ್ರ್ಯಾಕ್‌ ಮೇಲೆಯೇ ನಡೆದುಕೊಂಡು ಸಂಪಿಗೆ ರಸ್ತೆ ನಿಲ್ದಾಣದ ಕಡೆಗೆ ಸುರಂಗ ಮಾರ್ಗದಲ್ಲೇ ಹೊರಟಿದ್ದರು. ಅದು ನಿರ್ಬಂಧಿತ ಪ್ರದೇಶವಾಗಿತ್ತು. ಅವರಿಬ್ಬರನ್ನೂ ಗಮನಿಸಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಸಹೋದ್ಯೋಗಿಗಳ ಜೊತೆಗೆ ಹಳಿ ಪಕ್ಕದ ಕಾಲುದಾರಿಯಲ್ಲಿ ಸಾಗಿ ಅವರಿಬ್ಬರನ್ನು ಹಿಡಿದುಕೊಂಡು ಫ್ಲಾಟ್‌ಫಾರಂಗೆ ವಾಪಸು ಕರೆತಂದಿದ್ದರು’ ಎಂದರು.

‘ಭದ್ರತಾ ಸಿಬ್ಬಂದಿ ಎಷ್ಟೇ ವಿಚಾರಿಸಿದರೂ ಆರೋಪಿಗಳು ಹೆಚ್ಚಿನ ಮಾಹಿತಿ ನೀಡಿರಲಿಲ್ಲ. ನಂತರ ಸಿಬ್ಬಂದಿಯೇ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಹೋದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ಅವರಿಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದರು’ ಎಂದು ಪೊಲೀಸರು ವಿವರಿಸಿದರು.

ಭದ್ರತಾ ಲೋಪ: ‘ಮುಖ್ಯ ಪ್ರವೇಶ ದ್ವಾರದ ಮೂಲಕವೇ ಆರೋಪಿಗಳು ನಿಲ್ದಾಣದೊಳಗೆ ಹೋಗಿದ್ದಾರೆ. ಟಿಕೆಟ್ ಪಡೆಯದಿದ್ದರೂ ಫ್ಲಾಟ್‌ಫಾರಂ ಪ್ರವೇಶಿಸಿದ್ದಾರೆ. ಈ ಘಟನೆಗೆ ನಿಲ್ದಾಣದ ಭದ್ರತಾ ಲೋಪವೇ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಪ್ರವೇಶ ದ್ವಾರದಲ್ಲಿ ಯಂತ್ರಗಳನ್ನು ಅಳವಡಿಸಲಾಗಿದ್ದು, ಅಲ್ಲಿ ಟಿಕೆಟ್ ತೋರಿಸಿಯೇ ಮುಂದಕ್ಕೆ ಹೋಗಬೇಕು. ಟಿಕೆಟ್ ಇಲ್ಲದವರನ್ನು ಭದ್ರತಾ ಸಿಬ್ಬಂದಿ, ಫ್ಲಾಟ್‌ಫಾರಂಗೆ ಸುಲಭವಾಗಿ ಬಿಡುವುದಿಲ್ಲ. ಆದರೆ, ಆರೋಪಿಗಳು ರಾಜಾರೋಷವಾಗಿ ಒಳಗೆ ಹೋಗಿದ್ದಾರೆ. ಭದ್ರತಾ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಬೇಕಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT