ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಅರಮನೆ ರಸ್ತೆಯಲ್ಲಿ ವಲಸೆ ಕಾರ್ಮಿಕರ ಪರದಾಟ

‌ಅರಮನೆ ರಸ್ತೆಯಲ್ಲಿ ಜಮಾಯಿಸಿದ ಸಾವಿರಾರು ಮಂದಿ: ವಾಹನ ವ್ಯವಸ್ಥೆ ಇಲ್ಲದೇ ತೊಂದರೆ
Last Updated 23 ಮೇ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ತಿಂಗಳಿಂದ ಊರಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದ ವಲಸೆ ಕಾರ್ಮಿಕರು ಬೀದಿಗೆ ಇಳಿದು ‘ನಮ್ಮನ್ನು ಊರಿಗೆ ಕಳಿಸಿ’ ಎಂದು ಅಂಗಲಾಚಿದ ದಾರುಣ ಪರಿಸ್ಥಿತಿಗೆ ಇಲ್ಲಿನ ಅರಮನೆ ರಸ್ತೆ ಶನಿವಾರ ಸಾಕ್ಷಿಯಾಯಿತು.

ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ನಡುವೆ ವಾಗ್ಯುದ್ದಕ್ಕೂ ಎಡೆಮಾಡಿಕೊಟ್ಟಿತು.

ಬೆಳಿಗ್ಗೆಯಿಂದಲೇ ನಗರದ ವಿವಿಧೆಡೆಯಿಂದ ಬಂದ ಬಿಹಾರ, ಒಡಿಶಾ, ಜಾರ್ಖಂಡ್‌, ಮಣಿಪುರ ಮತ್ತು ಇತರ ಈಶಾನ್ಯ ರಾಜ್ಯಗಳ ಕಾರ್ಮಿಕರು ರಸ್ತೆಯಲ್ಲೇ ಕುಳಿತರು. ಒಮ್ಮೆಲೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಬಂದಿದ್ದರಿಂದ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.

ಉದ್ಯೋಗ ಅರಸಿ ಬೆಂಗಳೂರಿಗೆ ಬಂದವರುತವರಿಗೆ ಮರಳಲು ಸೇವಾ ಸಿಂಧು ಆ್ಯಪ್‍ನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ಯಶಸ್ವಿಯಾದವರಿಗೆ ಎಸ್‍ಎಂಎಸ್ ರವಾನೆಯಾಗಿತ್ತು. ಈ ಎಸ್‍ಎಂಎಸ್ ಅನ್ನು ಕೆಲವರು ಫಾರ್ವರ್ಡ್‌ ಮಾಡಿದ್ದು, ನೋಂದಣಿ ಆಗದೆ ಇದ್ದವರೂ ಬಂದುದರಿಂದ ಭಾರಿ ಸಂಖ್ಯೆಯಲ್ಲಿ ಜನ ಗುಂಪುಗೂಡುವಂತಾಯಿತು.

‘ಎರಡು ತಿಂಗಳಿಂದ ಕೆಲಸ ಇಲ್ಲ. ಸರ್ಕಾರದಿಂದ ಕೊಟ್ಟಿರುವ ಊಟ ನಮಗೆ ತಲುಪಿಲ್ಲ. ನಮ್ಮ ಬಳಿ ಇದ್ದ ಎಲ್ಲಾ ಹಣ ಖರ್ಚಾಗಿದೆ. ಈಗ ನಮ್ಮನ್ನು ಊರಿಗೆ ಕಳುಹಿಸದಿದ್ದರೆ ಉಳಿಯುವುದೆಲ್ಲಿ, ಊಟಕ್ಕೆ ಏನು ಮಾಡಬೇಕು’ ಎಂದು ಪ್ರಶ್ನಿಸಿದ ಕಾರ್ಮಿಕರು, ‘ಊರಿಗೆ ವಾಪಸ್ ಹೋಗಲು ಏನಾದರೂ ವ್ಯವಸ್ಥೆ ಮಾಡಿ’ ಎಂದು ಬೇಡಿಕೊಂಡರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಸ್ಥಳಕ್ಕೆ ಬಂದು ಕಾರ್ಮಿಕರ ಮನವೊಲಿಸುವ ಪ್ರಯತ್ನ ಮಾಡಿದರು.ಮುಖ್ಯ ಕಾರ್ಯದರ್ಶಿ ಸಹಿತ ಹಿರಿಯ ಅಧಿಕಾರಿಗಳಿಗೆ ಮೊಬೈಲ್‌ನಲ್ಲಿ ಮಾತನಾಡಿ ಗೊಂದಲ ಬಗೆಹರಿಸುವಂತೆ ಸೂಚನೆ ನೀಡಿದರು. ಮೂರ್ಛೆರೋಗದಿಂದ ಅಸ್ವಸ್ಥಗೊಂಡಿದ್ದ ಇರ್ಷಾದ್ ಎಂಬ ಕಾರ್ಮಿಕರೊಬ್ಬರಿಗೆ ಸುಧಾಕರ್ ಅವರೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

‘ಎಲ್ಲರಿಗೂ ಸರ್ಕಾರದ ವೆಚ್ಚದಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ಹೆಚ್ಚುವರಿ ಬೋಗಿಗಳನ್ನು ಒದಗಿಸಲು ರೈಲ್ವೆ ಸಚಿವರಿಗೂ ಮನವಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅರಮನೆ ಮೈದಾನದಲ್ಲಿ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ‘ನಿಮ್ಮ ಕೈಯಲ್ಲಿ ಆಗುತ್ತಾ, ಇಲ್ವಾ ಹೇಳಿ. ನಿಮ್ಮ ಕೈಯಲ್ಲಿ ಆಗಲ್ಲ ಅಂದ್ರೆ, ಅವರನ್ನೆಲ್ಲ ರೈಲಿನ ಮೂಲಕ ಕಳುಹಿಸಲು ನಾನು ಸಿದ್ಧನಿದ್ದೇನೆ’ ಎಂದು ಮುಖ್ಯಮಂತ್ರಿ ಅವರಿಗೇ ಸವಾಲು ಹಾಕಿದರು.

ವಲಸೆ ಕಾರ್ಮಿಕರನ್ನು ಊರಿಗೆ ಬಿಟ್ಟು ಬರಲು ನಿಮ್ಮಿಂದ ಸಾಧ್ಯ ಇಲ್ಲವೆಂದಾದರೆ ನಾನು ಚೆಕ್ ಕೊಡುತ್ತೇನೆ. ಊರಿಗೆ ಬಿಟ್ಟು ಬನ್ನಿ. ಇಲ್ಲದಿದ್ದರೆ ನನಗೆ ಬಿಡಿ ಎಂದುಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಚಪಲಕ್ಕೆ ಟೀಕೆ ಮಾಡುವುದನ್ನು ಡಿ.ಕೆ. ಶಿವಕುಮಾರ್ ಬಿಡಬೇಕು. ಅವರಿಗೆ ಮಾತ್ರ ಹೃದಯ ಇದೆಯೇ? ಯಡಿಯೂರಪ್ಪನವರಿಗೆ ಇಲ್ಲವೇ? ಎಂದುವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT