ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಿದೆ ನಮ್ಮನೆ...

ಅಕ್ಷರ ಗಾತ್ರ
ADVERTISEMENT
""

ಬೆಂಗಳೂರಿನಿಂದ ಆಂಧ್ರದತ್ತ ಹೊರಡುವ ಬಳ್ಳಾರಿ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದ ವಲಸಿಗರನ್ನು ಮಾತನಾಡಿಸಲು, ನಾವು ಮೂವರು ಗೆಳೆಯರು (ನಾನು, ವಿನಯ್‌ಕುಮಾರ್‌ ಮತ್ತು ಸೆಂಥಿಲ್‌ ಮೋಹನ್‌),ಬೆಳ್ಳಂಬೆಳಿಗ್ಗೆಯೇ ಹೋಗಿದ್ದೆವು. ಸಾವಿರಾರು ಕಿ.ಮೀ. ದೂರದ ಊರಿಗೆ ನಡೆದುಕೊಂಡೇ ಹೋಗುವ ನಿರ್ಧಾರ ಅವರಲ್ಲಿ ಮೂಡಿದ್ದು ಹೇಗೆ ಮತ್ತು ಏಕೆ? ಅವರನ್ನು ಕಾಡುತ್ತಿರುವ ಯೋಚನೆಗಳಾದರೂ ಯಾವುವು ಎಂಬುದನ್ನು ತಿಳಿದುಕೊಳ್ಳುವುದು ನಮ್ಮ ಇಚ್ಛೆಯಾಗಿತ್ತು.

ಕ್ಲಿಫ್ಟನ್‌ ಡಿ’ ರೋಜಾರಿಯೊ

ಮೊದಲಿಗೆ 80 ಜನರಿದ್ದ ಒಂದು ದೊಡ್ಡ ಗುಂಪು ಕಣ್ಣಿಗೆ ಬಿತ್ತು. ಅವರೆಲ್ಲ ಬಾಗ್ಮನೆ ಟೆಕ್‌ ಪಾರ್ಕ್‌ನಲ್ಲಿ ಕಟ್ಟಡ ಕಾರ್ಮಿಕರಾಗಿದ್ದವರು. ಹಲವರು ಬ್ಯಾಗ್‌ಗಳ ಹೊರೆಯನ್ನು ಬೆನ್ನಿಗೇರಿಸಿದ್ದರೆ, ಇನ್ನು ಕೆಲವರು ತಲೆಯ ಮೇಲೆ ಬೆಡ್‌ಶೀಟ್‌, ಚಾಪೆಗಳುಳ್ಳ ಗಂಟು ಹೊತ್ತಿದ್ದರು. ಅವರ ಬಳಿ ಹೆಚ್ಚಿನ ದುಡ್ಡೇನೂ ಇರಲಿಲ್ಲ. ‘ಊಟಕ್ಕೆ ಏನು ಮಾಡುತ್ತೀರಿ’ ಎಂದು ಪ್ರಶ್ನಿಸಿದರೆ, ‘ದಾರಿಯಲ್ಲಿ ಸಿಗುವ ಹಳ್ಳಿಗಳಲ್ಲಿ ಜನರಿಂದಲೇ ಸಹಾಯ ಸಿಕ್ಕೀತು’ ಎನ್ನುವುದು ಅವರ ಉತ್ತರವಾಗಿತ್ತು. ಸ್ವಚ್ಛಗೊಳಿಸಿದ್ದ ಪೇಂಟ್‌ನ‌ ಕ್ಯಾನ್‌ನಲ್ಲಿ ಅವರು ನೀರು ತುಂಬಿಕೊಂಡಿದ್ದರು.

ಶ್ರಮಿಕ ರೈಲಿನಲ್ಲಿ ಹೋಗುವ ಆಸೆಯಿಂದ ‘ಸೇವಾಸಿಂಧು’ ಆನ್‌ಲೈನ್‌ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದ ಅವರು, ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಫಾರ್ಮ್‌ಗಳನ್ನೂ ಸಲ್ಲಿಸಿದ್ದರು. ಲೆಕ್ಕವಿಲ್ಲದಷ್ಟು ಸಲ ಹೋಗಿ ವಿಚಾರಿಸಿಯೂ ನೋಡಿದ್ದರು. ಆದರೆ, ಪೊಲೀಸರು ದಬಾಯಿಸಿ ಕಳುಹಿಸಿದ್ದರು. ‘ಬೇರೆ ದಾರಿಯೇ ತೋರದೆ ನಾವು ನಡೆದುಕೊಂಡೇ ಹೋಗಲು ನಿರ್ಧರಿಸಿದೆವು. ನಾವು ಜಾರ್ಖಂಡ್‌ಗೆ ಹೋಗಬೇಕು’ ಎಂದು ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಹೇಳಿದರು.

ಆಂಧ್ರದತ್ತ ಹೋಗುವ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ನಡೆದು ಹೋಗುತ್ತಿದ್ದ ವಲಸಿಗರ ಗುಂಪುಗಳು ಕಾಣುತ್ತಲೇ ಇದ್ದವು. ನೆತ್ತಿ ಸುಡುವಂತಹ ಬಿಸಿಲಿದ್ದರೂ ಅವರ ಹೆಜ್ಜೆಗಳೇನು ನಿಧಾನವಾಗಿರಲಿಲ್ಲ. ಮತ್ತೆ ಅಂತಹದ್ದೇ ಗಂಟು, ಮೂಟೆಗಳು, ಹಾಸಿಗೆ, ಹೊದಿಕೆಗಳು, ಪೇಂಟ್‌ ಕ್ಯಾನ್‌ಗಳು. ಮಧ್ಯ ಪ್ರದೇಶದ ಮಹಿಳೆಯೊಬ್ಬರು ಮಗುವನ್ನು ಹೊತ್ತು ಸಾಗುತ್ತಿದ್ದರು. ‘ರೈಲಿನಲ್ಲಿ ಊರಿಗೆ ಹೋಗಲು ಏನೇನೋ ಪ್ರಯತ್ನ ಮಾಡಿದೆವು. ಯಾವುದೂ ಸಾಧ್ಯವಾಗಲಿಲ್ಲ. ಹೀಗಾಗಿ ನನ್ನ ಪತಿ, ಇಬ್ಬರು ಮಕ್ಕಳೊಂದಿಗೆ ಹೊರಟುಬಂದೆ. ದಾರಿಯಲ್ಲಿ ಇನ್ನೂ ನಾಲ್ವರು ನಮ್ಮೊಂದಿಗೆ ಸೇರಿಕೊಂಡರು’ ಎಂದು ಆಕೆ ವಿವರಿಸಿದರು. ಹೊಸಕೋಟೆಯಲ್ಲಿ ಕಟ್ಟಡ ನಿರ್ಮಾಣ ಯೋಜನೆಯೊಂದರಲ್ಲಿ ಈ ದಂಪತಿ ಕಾರ್ಮಿಕರಾಗಿ ದುಡಿಯುತ್ತಿದ್ದರು.

ಮಧ್ಯ ಪ್ರದೇಶದ ಮಂಡ್ಲಾ ಅವರೂರು. ಈ ದಂಪತಿ ಜತೆಗಿದ್ದ ಉಳಿದ ನಾಲ್ವರು ನಂಜನಗೂಡಿನಿಂದ ಬಂದವರು. ಎಷ್ಟು ದಿನಗಳ ಹಿಂದೆ ಅಲ್ಲಿಂದ ಹೊರಟರು ಎಂಬುದು ಅವರಿಗೆ ಸರಿಯಾಗಿ ನೆನಪಿಲ್ಲ. ಸುಮಾರು 8–10 ದಿನಗಳ ಹಿಂದೆಯೇ ಹೊರಟಿರಬಹುದು ಎಂದು ಅವರು ಹೇಳಿದರು. ಅವರೆಲ್ಲ ಬಿಹಾರದವರು. ಒಬ್ಬರಿಗೊಬ್ಬರು ನೆರವಾಗುತ್ತಾ ಈ ಗುಂಪು ಊರಿನತ್ತ ಹೆಜ್ಜೆ ಹಾಕುತ್ತಿತ್ತು. ಇನ್ನೂ ಸ್ವಲ್ಪ ಮುಂದೆ ಹೋದಾಗ ಸೈಕ್ಲಿಸ್ಟ್‌ಗಳ ತಂಡವೊಂದು ಕಣ್ಣಿಗೆ ಬಿತ್ತು. ಒಂಬತ್ತು ಜನರಿದ್ದ ಅವರ ತಂಡ ಬಿಹಾರದ ಮೋತಿಹಾರಿಗೆ ಹೊರಟಿತ್ತು. ಆಗತಾನೆ ಒಣ ನೂಡಲ್ಸ್‌ ತಿಂದು, ವಿಶ್ರಾಂತಿ ಪಡೆಯುತ್ತಿದ್ದ ಅವರನ್ನು ಮಾತಿಗೆ ಎಳೆದಾಗ, ‘ನಮ್ಮನ್ನು ಊರಿಗೆ ಕಳುಹಿಸಲು ಅಗತ್ಯವಾದ ರೈಲು ವ್ಯವಸ್ಥೆಯನ್ನು ಮಾಡುವುದು ಸರ್ಕಾರಕ್ಕೆ ಅಷ್ಟೊಂದು ಕಷ್ಟವೇ’ ಎಂದು ಪ್ರಶ್ನಿಸಿದರು.

‘ಎರಡು ತಿಂಗಳಿನಿಂದ ನಾವು ನಯಾಪೈಸೆಯಷ್ಟೂ ಸಂಪಾದನೆ ಮಾಡಿಲ್ಲ. ಸೇವಾಸಿಂಧು ಮೂಲಕ ನೋಂದಣಿ ಮಾಡಿಕೊಳ್ಳುವುದೂ ಸೇರಿದಂತೆ ಅಧಿಕಾರಿಗಳು ಹೇಳಿದ್ದನ್ನೆಲ್ಲನಾವು ಮಾಡಿದ್ದೆವು. ನಮ್ಮನ್ನು ಯಾವಾಗ ಕಳಿಸುತ್ತೀರಿ ಎಂದು ಪೊಲೀಸ್‌ ಠಾಣೆಗೆ ಕೇಳಲು ಹೋದರೆ ಬಡಿದು ಕಳುಹಿಸಿದರು. ದುಡ್ಡಿಲ್ಲದೆ ನಾವು ಹೇಗೆ ಉಳಿಯುವುದು? ಕಾದಿದ್ದು ಸಾಕಾಯಿತು. ಈಗ ರೈಲಿಗೆ ಕೊಡಲೂ ನಮ್ಮ ಬಳಿ ಹಣವಿಲ್ಲ. ಹೀಗಾಗಿ ಸೈಕಲ್‌ ಮೂಲಕವೇ ಊರಿನತ್ತ ಹೊರಟಿದ್ದೇವೆ’ ಎಂದು ಅವರು ಹೇಳಿದರು. ಪಂಪ್‌ ಮತ್ತು ಸೈಕಲ್‌ ರಿಪೇರಿಗೆ ಬೇಕಾದ ಕೆಲವು ಸಾಧನಗಳೂ ಅವರ ಬಳಿಯಿದ್ದವು. ‘ಊಟಕ್ಕೆ ಏನು ಮಾಡುತ್ತೀರಿ’ ಎಂಬ ಪ್ರಶ್ನೆಗೆ ಅವರು ಬ್ಯಾಗ್‌ನಲ್ಲಿದ್ದ ಒಣ ನೂಡಲ್‌ನ ಪ್ಯಾಕ್‌ಗಳನ್ನು ತೋರಿಸಿದರು. ಗುಂಪಿನಲ್ಲಿದ್ದವರಲ್ಲಿ ಒಬ್ಬರು, ‘ಕರ್ನಾಟಕ ಮುಗಿದ ಮೇಲೆ ಯಾವ ರಾಜ್ಯ ಬರುತ್ತದೆ’ ಎಂದು ಪ್ರಶ್ನಿಸಿದರು. ನಾವು ‘ಆಂಧ್ರ ಪ್ರದೇಶ’ ಎಂದು ಹೇಳಿದೆವು. ಧನ್ಯವಾದ ಹೇಳಿದ ಅವರು, ಇತರರೊಡನೆ ಸೈಕಲ್‌ ಏರಿದರು.

ವೆಂಕಟಗಿರಿಕೋಟೆಯ ಚೆಕ್‌ ಪಾಯಿಂಟ್‌ಗೆ ನಾವು ಹೋದೆವು. ಅಲ್ಲಿ ಸುಮಾರು 70–80 ವಲಸೆ ಕಾರ್ಮಿಕರನ್ನು ಪೊಲೀಸರು ತಡೆದಿದ್ದರು. ಬಿಹಾರದ ಸೈಕ್ಲಿಸ್ಟ್‌ ತಂಡವೂ ಅಲ್ಲಿಯೇ ನಿಂತಿತ್ತು. ನಡೆದು ಹೋಗುವವರನ್ನು ಇಲ್ಲವೆ ಸೈಕಲ್‌ ಮೇಲೆ ಬರುವವರನ್ನು ಬಿಡಬಾರದು ಎಂಬ ಆದೇಶವಿದೆ ಎಂದು ಅಲ್ಲಿದ್ದ ಪೊಲೀಸರು ಹೇಳುತ್ತಿದ್ದರು.

ಬಿಹಾರದ ಸೈಕ್ಲಿಸ್ಟ್‌ ತಂಡವನ್ನು ವ್ಯಾನ್‌ವೊಂದರಲ್ಲಿ ಹತ್ತಿಸಿ, ಬೆಂಗಳೂರಿನತ್ತ ವಾಪಸ್‌ ಕಳುಹಿಸಿದರು. ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಹೋಗಿ ದಾಖಲಾಗುವಂತೆ ಅವರಿಗೆ ತಾಕೀತು ಮಾಡಿದರು.

ಹೆದ್ದಾರಿಯುದ್ದಕ್ಕೂ ವಲಸಿಗರ ಗುಂಪುಗಳು ನಡೆದು ಹೋಗುತ್ತಲೇ ಇದ್ದವು. ಯಾರು, ಯಾವಾಗ ಮನೆ ಸೇರುತ್ತಾರೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಕೆಲವರಿಗಂತೂ ತಾವು ಹಿಡಿದ ಹಾದಿ ಸರಿಯಾಗಿದೆಯೇ, ಅದು ತಮ್ಮೂರನ್ನು ತಲುಪಿಸಲಿದೆಯೇ ಎನ್ನುವುದೂ ತಿಳಿದಿರಲಿಲ್ಲ. ಯಾವ ನೆರವನ್ನೂ ಕೇಳದೆ ಮೌನವಾಗಿ ನಡೆದು ಹೋಗುತ್ತಿದ್ದ ಕಾರ್ಮಿಕರ ಗುಂಪುಗಳು ಅವಾಗಿದ್ದವು. ಅದರಲ್ಲಿದ್ದೊಬ್ಬ ವ್ಯಕ್ತಿ ‘ಸರ್ಕಾರಕ್ಕಿಂತ ನನ್ನ ಕಾಲುಗಳ ಮೇಲೆಯೇ ನನಗೆ ನಂಬಿಕೆ ಹೆಚ್ಚು’ ಎಂದು ವಿಶ್ವಾಸದಿಂದ ಹೇಳಿದರು.

ಹೀಗೆ ನಡೆದು ಹೋಗುವ ಬಹುತೇಕ ಕಾರ್ಮಿಕರಿಗೆ ತಮ್ಮನ್ನು ಎಲ್ಲಿ ಇದೇ ಊರಿನಲ್ಲಿ ಉಳಿಸಿಬಿಡುತ್ತಾರೇನೋ ಎಂಬ ಭಯ. ತಮ್ಮನ್ನು ಊರಿಗೆ ಕಳುಹಿಸುವುದೇ ಇಲ್ಲವೇನೋ ಎಂಬ ಆತಂಕ. ಆದ್ದರಿಂದಲೇ ಅವರಲ್ಲಿ ಅಂತಹ ಧಾವಂತ. ಅವರ ಇಚ್ಛೆಯಂತೆ ಸರ್ಕಾರ ನಡೆದುಕೊಳ್ಳುತ್ತದೆ ಎನ್ನುವ ವಿಶ್ವಾಸವನ್ನು ಅವರಲ್ಲಿ ತುಂಬಬೇಕಿರುವುದು ತುರ್ತಾಗಿ ಆಗಬೇಕಿರುವ ಕೆಲಸ. ಬಲವಂತವಾಗಿ ಇಟ್ಟುಕೊಳ್ಳದೆ, ಅವರನ್ನು ಸುರಕ್ಷಿತವಾಗಿ ತವರಿಗೆಕಳಿಸಬೇಕಿರುವುದು ಇಂದಿನ ಅಗತ್ಯ.

ತಾವು ಎಲ್ಲಿ ಇಲ್ಲಿಯೇ ಬಂದಿಯಾಗುತ್ತೇವೋ ಎಂಬ ಭಯದಿಂದ ಕಾರ್ಮಿಕರು ನಡೆದುಕೊಂಡೇ ಸಾವಿರಾರು ಕಿ.ಮೀ. ದೂರದ ಊರಿಗೆ ಹೊರಟದ್ದು...

ವಲಸಿಗರಿಗೆ ಊರು ತಲುಪಲೂ ಅವಕಾಶ ನೀಡದೆ ಲಾಕ್‌ಡೌನ್‌ ಘೋಷಿಸಿದ್ದು ಭಾರಿ ಪೆಟ್ಟು ನೀಡಿತು

1.40 ಲಕ್ಷಕಾರ್ಮಿಕರು ಹೋಟೆಲ್‌ಗಳಲ್ಲಿ ದುಡಿಯುತ್ತಿದ್ದರು

80 ಸಾವಿರ ಕಾರ್ಮಿಕರು ಸೆಕ್ಯೂರಿಟಿ ಗಾರ್ಡ್‌ಗಳಾಗಿದ್ದರು

10 ಸಾವಿರಕಾರ್ಮಿಕರು ಮೆಟ್ರೊ ಕಾಮಗಾರಿಯಲ್ಲಿ ದುಡಿಯುತ್ತಿದ್ದರು

ಲೇಖಕ: ವಕೀಲ, ಕಾರ್ಮಿಕ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT