ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃ ಇಲಾಖೆಗೆ ಅಧಿಕಾರಿಗಳನ್ನು ಕಳಿಸಿ: ಸಹಕಾರ ಸಚಿವರ ಸೂಚನೆ

Last Updated 24 ಮೇ 2020, 19:04 IST
ಅಕ್ಷರ ಗಾತ್ರ

ಬೆಂಗಳೂರು: ಸಹಕಾರ ಇಲಾಖೆ ಮತ್ತು ಲೆಕ್ಕ ಪರಿಶೋಧನಾ ಇಲಾಖೆಗೆ ನೇಮಕಗೊಂಡು ಇತರ ಇಲಾಖೆಗಳಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವಾಪಾಸು ಕರೆಸಿಕೊಳ್ಳುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಸೂಚಿಸಿದ್ದಾರೆ.

ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಂದರ್ಭದಲ್ಲಿ ಇಲಾಖೆಗೆ ನೇಮಕಗೊಂಡ ಉಪ ನಿಬಂಧಕರು, ಉಪ ನಿರ್ದೇಶಕರು, ಜಂಟಿ ನಿಬಂಧಕರು, ಜಂಟಿ ನಿರ್ದೇಶಕರು, ಹೆಚ್ಚುವರಿ ನಿಬಂಧಕರು ಮತ್ತು ಹೆಚ್ಚುವರಿ ನಿರ್ದೇಶಕರು ಸೇರಿದಂತೆ ಅಧಿಕಾರಿಗಳು ಹಲವು ವರ್ಷಗಳಿಂದ ಇತರ ಇಲಾಖೆಗಳಲ್ಲಿ ನಿಯೋಜನೆ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಸಚಿವರ ಗಮನಕ್ಕೆ ಬಂದಿದೆ. ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ ನೀಗಿಸುವ ಉದ್ದೇಶದಿಂದ ಇತರ ಇಲಾಖೆಗಳಿಗೆ ನಿಯೋಜನೆಗೊಂಡವರನ್ನು ಮರಳಿ ಕರೆಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ.

ಸಹಕಾರ ಮತ್ತು ಲೆಕ್ಕ ಪರಿಶೋಧನಾ ಇಲಾಖೆಗೆ ನೇಮಕಗೊಂಡವರು ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ವಿವಿಧ ಜಿಲ್ಲೆಗಳಲ್ಲಿರುವ ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯಿತಿ ಸೇರಿದಂತೆ ಅನೇಕ ಕಡೆ ಇದ್ದಾರೆ. ಕೆಲವು ಅಧಿಕಾರಿಗಳು ಹಲವು ವರ್ಷಗಳಿಂದ ಆಯಕಟ್ಟಿನ ಜಾಗಗಳಲ್ಲಿ ನೆಲೆಯೂರಿದ್ದಾರೆ. ಅವರನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಗೆ ಸಚಿವರು ಚಾಲನೆ ನೀಡಿದ್ದಾರೆ.

ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಅವರ ಆಪ್ತ ಕಾರ್ಯದರ್ಶಿ ಟಿ.ಎಚ್‌. ವಿಶ್ವನಾಥ್ (ಇದೇ 31ರಂದು ನಿವೃತ್ತಿ), ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಪಿ. ರೇಣುಕಾಚಾರ್ಯ ಅವರ ಆಪ್ತ ಕಾರ್ಯದರ್ಶಿ ರಾಜಪ್ಪ, ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ಹಾಗೂ ನಿಯಮ 32 ಅಡಿ ಪದೋನ್ನತಿಗೊಂಡವರೂ ಸೇರಿ ಒಟ್ಟು 18 ಜಂಟಿ ನಿರ್ದೇಶಕರು ಮತ್ತು ನಾಲ್ವರು ಉಪ ನಿರ್ದೇಶಕರು ನಿಯೋಜನೆಯ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಪಟ್ಟಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT