ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ ಇಲಾಖೆ: 13 ಯೋಜನೆಗಳಿಗೆ ಕತ್ತರಿ

ಇಲಾಖೆಗೆ ₹ 744.09 ಕೋಟಿ ಕಡಿತ
Last Updated 10 ಮಾರ್ಚ್ 2020, 20:04 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಜೆಡಿಎಸ್‌– ಕಾಂಗ್ರೆಸ್‌ ‘ಮೈತ್ರಿ’ ಸರ್ಕಾರದ ಅವಧಿಯಲ್ಲಿ ನಿಗದಿಪಡಿಸಿದ ಅನುದಾನಕ್ಕಿಂತ ಆಡಳಿತರೂಢ ಬಿಜೆಪಿ ಸರ್ಕಾರ ₹ 744.09 ಕೋಟಿ ಕಡಿಮೆ ಮೀಸಲಿಟ್ಟಿದೆ. ಇದರಿಂದಾಗಿ 13 ಯೋಜನೆಗಳಿಗೆ ಕತ್ತರಿ ಬಿದ್ದಿದೆ.

ಮುಸ್ಲಿಮರು, ಕ್ರೈಸ್ತರು, ಜೈನರು, ಸಿಖ್ಖರು, ಬೌದ್ಧರು, ಪಾರ್ಸಿ ಸಮುದಾಯಗಳು ಈ ಇಲಾಖೆಯಡಿ ಬರುತ್ತವೆ. ಈ ಸಮುದಾಯಗಳ ವಿದ್ಯಾರ್ಥಿಗಳ ಶಿಕ್ಷಣ ಆಧಾರಿತ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ಅನುದಾನದಲ್ಲಿ ಮಾತ್ರ ₹300 ಕೋಟಿಯಷ್ಟು ಕಡಿತಗೊಳಿಸಲಾಗಿದೆ.

ವಿದ್ಯಾರ್ಥಿಗಳ ಶಿಷ್ಯವೇತನ ಮತ್ತು ಶುಲ್ಕ ಮರು ಪಾವತಿಗೆ ಈ ಹಿಂದಿನ ಸಾಲಿನಲ್ಲಿ ₹ 275 ಕೋಟಿ ನೀಡಿದ್ದರೆ, ಪ್ರಸಕ್ತ ವರ್ಷ ಕೇವಲ ₹100 ಕೋಟಿ ಮೀಸಲಿಡಲಾಗಿದೆ. ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಇಲಾಖೆಗೆ ಈ ಹಿಂದೆ ₹ 90 ಕೋಟಿ ನೀಡಲಾಗಿದ್ದು, ಇದನ್ನು ₹55 ಕೋಟಿಗೆ ಇಳಿಸಲಾಗಿದೆ.

2017–18ನೇ ಸಾಲಿನ ಆಯವ್ಯಯದಲ್ಲಿ ಇಲಾಖೆಗೆ 2,221.20 ಕೋಟಿ ಹಣ ನೀಡಲಾಗಿತ್ತು. 2018–19ರಲ್ಲಿ ₹ 2,216.73 ಕೋಟಿ ನೀಡಿದ್ದರೆ, ‘ಮೈತ್ರಿ’ ಸರ್ಕಾರ 2019–20ನೇ ಸಾಲಿನಲ್ಲಿ ₹ 2,020.41 ಕೋಟಿ ನೀಡಿತ್ತು. ಆದರೆ, ಪ್ರಸಕ್ತ ವರ್ಷ 1,276.32 ಕೋಟಿಗೆ ಕಡಿತ ಮಾಡಲಾಗಿದೆ.

ಕೈಬಿಟ್ಟ ಕಾರ್ಯಕ್ರಮಗಳಲ್ಲಿ ಶಾದಿಭಾಗ್ಯ, ಕೌಶಲ ತರಬೇತಿ, ಸೇನೆಯಲ್ಲಿ ನೇಮಕಾತಿ ಪಡೆಯಲು ಪೂರ್ವಭಾವಿ ತರಬೇತಿ, ಎಂಜಿನಿಯರ್‌ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ಟಡಿ ಕಿಟ್‌, ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಪತ್ರಿಕೋದ್ಯಮ ಮತ್ತು ಸಂವಹನ ತರಬೇತಿಗೆ ಪ್ರೋತ್ಸಾಹಧನ, ವಿದ್ಯಾರ್ಥಿ ನಿಲಯಗಳ ಮೂಲಸೌಕರ್ಯ, ಉದ್ಯೋಗ ಮಹಿಳೆಯರ ಹಾಸ್ಟೆಲ್‌ಗಳ ಮೂಲಸೌಕರ್ಯ, ಉರ್ದು ಸರ್ಕಾರಿ ಶಾಲೆಗಳಿಗೆ ಹೆಚ್ಚುವರಿ ಕೊಠಡಿ, ಶೌಚಾಲಯ ನಿರ್ಮಾಣ ಕಾಮಗಾರಿ, ಮುಖ್ಯಮಂತ್ರಿಗಳ 9 ಅಂಶ ಕಾರ್ಯಕ್ರಮ, ವಿದ್ಯಾರ್ಥಿ ವೇತನ, ಅಲ್ಪಸಂಖ್ಯಾತರ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯಧನ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT