ಬುಧವಾರ, ಸೆಪ್ಟೆಂಬರ್ 18, 2019
22 °C
ಕೈಗಾರಿಕೆ ಸ್ಥಾಪನೆಯೂ ಇಲ್ಲ, ರೈತರಿಗೆ ಭೂಮಿಯೂ ಇಲ್ಲ

ಮಿತ್ತಲ್ ಕಂಪನಿಯಿಂದ ರಾಜ್ಯ ಹೆದ್ದಾರಿ ಬಂದ್!

Published:
Updated:
Prajavani

ಬಳ್ಳಾರಿ: ತಾಲ್ಲೂಕಿನ ಹರಗಿನಡೋಣಿ– ಕುಡುತಿನಿಯ ನಡುವಿನ ದೂರ 7 ಕಿ.ಮೀ ಆದರೆ ಅಲ್ಲಿಗೆ ತಲುಪಲು ಗ್ರಾಮಸ್ಥರು 40 ಕಿ.ಮೀ ಸುತ್ತುಬಳಸಿ ಸಂಚರಿಸಬೇಕಾಗಿದೆ. ಮೂರು ವರ್ಷಗಳಿಂದಲೂ ಈ ಗ್ರಾಮಸ್ಥರು ಬಳ್ಳಾರಿ ಬಳಸಿಕೊಂಡು ಸಂಚರಿಸುತ್ತಿದ್ದಾರೆ.

ಕಾರಣ, ಉಕ್ಕು ಕಾರ್ಖಾನೆ ಸ್ಥಾಪಿಸುವುದಾಗಿ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ ಅರ್ಸೆಲರ್‌ ಮಿತ್ತಲ್‌ ಇಂಡಿಯಾ ಕಂಪನಿಯು 4,900 ಎಕರೆ ಜಮೀನನ್ನು 7 ವರ್ಷಗಳ ಹಿಂದೆಯೇ ಖರೀದಿಸಿತ್ತು. ಈ ಜಮೀನಿನ ಬಳಿಯೇ ರಾಜ್ಯ ಹೆದ್ದಾರಿ ಹಾದು ಹೋಗುತ್ತದೆ. ಮೂರು ವರ್ಷಗಳ ಹಿಂದೆ ತನ್ನ ಜಮೀನು ಸೇರಿಸಿ, ರಾಜ್ಯ ಹೆದ್ದಾರಿಗೇ ಗೇಟ್‌ ಹಾಕಿ ಸಂಚಾರವನ್ನು ಬಂದ್‌ ಮಾಡಿದೆ.

ಈವರೆಗೆ ಕಾರ್ಖಾನೆಯನ್ನೂ ಸ್ಥಾಪಿಸಿಲ್ಲ. ರಸ್ತೆಗೆ ಅಡ್ಡಲಾಗಿ ಹಾಕಿರುವ ಗೇಟ್‌ ಅನ್ನೂ ಸಂಚಾರಕ್ಕೆ ಮುಕ್ತಗೊಳಿಸಿಲ್ಲ. ಕುಡುತಿನಿ ಹಾಗೂ ಹರಗಿನಡೋಣಿ ಗ್ರಾಮದವರು ಒಳ ರಸ್ತೆಯಿಂದ ಹೋದರೂ 15 ಕಿ.ಮೀ ಬಳಸಿ ಪ್ರಯಾಣಿಸಲೇಬೇಕು.

‘ರಸ್ತೆಯನ್ನು ಸೇರಿಸಿ ಜಮೀನು ಖರೀದಿಸಿರುವುದರಿಂದ ನಿಮಗೆ ಇಲ್ಲಿ ಸಂಚರಿಸಲು ಅವಕಾಶವಿಲ್ಲ ಎಂದು ಭದ್ರತಾ ಸಿಬ್ಬಂದಿ ಹೇಳುತ್ತಾರೆ. ಪರ್ಯಾಯ ರಸ್ತೆ ಮಾಡಿಕೊಡುವುದಾಗಿ ಜಿಲ್ಲಾಡಳಿತ ನೀಡಿದ ಭರವಸೆಯೂ ಈಡೇರಿಲ್ಲ’ ಎಂದು ಗ್ರಾಮದ ದೊಡ್ಡನಗೌಡ ‘ಪ್ರಜಾವಾಣಿ’ಯೊಂದಿಗೆ ಅಸಹಾಯಕತೆ ತೋಡಿಕೊಂಡರು.

‘ವೇಣಿವೀರಾಪುರ ಮಾರ್ಗದ ಮೂಲಕ ಕುಡುತಿನಿಗೆ ಸಂಚರಿಸುವ ಖಾಸಗಿ ಬಸ್‌ ಬಿಟ್ಟರೆ ನಾವು, ಬಳ್ಳಾರಿಗೆ ಬಂದೇ ಕುಡುತಿನಿ, ಹೊಸಪೇಟೆ ಕಡೆಗೆ ತೆರಳಬೇಕಾಗಿದೆ. ನಮಗೇಕೆ ಈ ಕಷ್ಟ ಕೊಟ್ಟಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ’ ಎಂದರು.

ಸಭೆಗೆ ನಾಲ್ಕು ತಿಂಗಳು: ಜನವರಿ 10ರಂದು ನಗರದಲ್ಲಿ ನಡೆದಿದ್ದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಹರಗಿನಡೋಣಿಯ ನಿವಾಸಿಗಳು ಈ ಸಮಸ್ಯೆಯ ಬಗ್ಗೆ ಸಂಸದ ವಿ.ಎಸ್‌.ಉಗ್ರಪ್ಪ ಅವರ ಗಮನ ಸೆಳೆದಿದ್ದರು.

‘ಜಮೀನಿನಲ್ಲಿ ಕೈಗಾರಿಕೆಯನ್ನೂ ಸ್ಥಾಪಿಸದೇ, ರೈತರಿಗೆ ಜಮೀನು ವಾಪಸ್‌ ಕೊಡದೆ, ಹೆದ್ದಾರಿಯಲ್ಲಿ ಸಂಚರಿಸುವುದಕ್ಕೂ ಅವಕಾಶ ಕೊಡದ ಕಂಪನಿಯ ನಿಲುವು ಸರಿಯಲ್ಲ, ಇದನ್ನು ನೋಡಿಕೊಂಡು ಜಿಲ್ಲಾಡಳಿತ ಇಷ್ಟು ವರ್ಷ ಹೇಗೆ ಸುಮ್ಮನಿದೆ’ ಎಂದು ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

24 ಗಂಟೆ ಗಡುವು: ‘24 ಗಂಟೆಯೊಳಗೆ ರಾಜ್ಯ ಹೆದ್ದಾರಿಯನ್ನು ಜನರ ಸಂಚಾರಕ್ಕೆ ತೆರೆಯಬೇಕು. ಹೆದ್ದಾರಿಗೆ ಗೇಟು ಅಳವಡಿಸಿರುವ ಕಂಪನಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಸಂಸದರು, ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ ಅವರಿಗೆ ಸೂಚಿಸಿದ್ದರು. ಆದರೆ ಸಭೆ ನಡೆದು ನಾಲ್ಕು ತಿಂಗಳಾದರೂ ಹೆದ್ದಾರಿ ಜನರ ಬಳಕೆಗೆ ದೊರಕಿಲ್ಲ.

**
ಕೂಡಲೇ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗೆ ಸೂಚನೆ ನೀಡಲಾಗುವುದು. ಹೆದ್ದಾರಿಯನ್ನು ಮುಕ್ತಗೊಳಿಸಲಾಗುವುದು.
–ಡಾ.ವಿ.ರಾಮಪ್ರಸಾದ್‌ ಮನೋಹರ್‌, ಜಿಲ್ಲಾಧಿಕಾರಿ

Post Comments (+)