ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಬೇಡಿಕೆಗಳಿಗೆ ಮೋದಿ ಸ್ಪಂದಿಸಿದ್ದಾರೆ: ಸಿಎಂ ಯಡಿಯೂರಪ್ಪ ಸ್ಪಷ್ಟನೆ

ವೇದಿಕೆಯಲ್ಲಿ ಅನುದಾನ ಕೇಳಿದ್ದನ್ನೇ ಮುಂದಿಟ್ಟು ಕೆಲ ಮಾಧ್ಯಮಗಳು ವಿಷಯ ತಿರುಚಿವೆ ಎಂದು ಮಾಧ್ಯಮಗಳ ವಿರುದ್ಧ ಅಸಮಾದಾನ ವ್ಯಕ್ತಪಡಿಸಿದ ಬಿಎಸ್‌ವೈ
Last Updated 3 ಜನವರಿ 2020, 12:23 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವೇದಿಕೆಯಲ್ಲಿ ಅನುದಾನ ಕೇಳಿದ್ದನ್ನೇ ಮುಂದಿಟ್ಟುಕೊಂಡುವಾಸ್ತವ ಸಂಗತಿಗಳನ್ನು ಮರೆಮಾಚಿ, ಜನರಿಗೆ ತಪ್ಪು ಸಂದೇಶ ನೀಡುವ ಕೆಲವು ಮಾಧ್ಯಮಗಳ ಧೋರಣೆ ಸರಿಯಲ್ಲ,’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ನೆರೆ, ಬರಪರಿಹಾರ, ನೀರಾವರಿಗೆ ಅನುದಾನ ಬಿಡುಗಡೆಯೂ ಸೇರಿದಂತೆ ರಾಜ್ಯಕ್ಕೆ ಬರಬೇಕಾದ ಅನುದಾನಗಳನ್ನು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಗುರುವಾರ ತುಮಕೂರಿನ ರೈತ ಸಮಾವೇಶದಲ್ಲಿ ಮೋದಿ ಎದುರಲ್ಲೇ ಆಗ್ರಹಿಸಿದ್ದರು. ಆದರೆ ಮೋದಿ ಭಾಷಣದಲ್ಲಿ ಅನುದಾನ, ನೆರವಿನ ಕುರಿತು ಯಾವುದೇ ವಿಚಾರ ಪ್ರಸ್ತಾಪಿಸರಲಿಲ್ಲ.ಈ ಕುರಿತ ಮಾಧ್ಯಮ ವರದಿಗಳ ಸಂಬಂಧಶುಕ್ರವಾರ ಮಾಧ್ಯಮ ಹೇಳಿಕೆಗೆ ಬಿಡುಗಡೆ ಮಾಡಿರುವ ಸಿಎಂ ಬಿಎಸ್‌ವೈ, ‘ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳಿಗೆಪ್ರಧಾನಿ ಸ್ಪಂದಿಸಿದ್ದಾರೆ,’ ಎಂದು ಹೇಳಿದ್ದಾರೆ.

‘ರೈತ ಸಮಾವೇಶ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ನಮ್ಮ ಅಹವಾಲನ್ನು ಪ್ರಧಾನಮಂತ್ರಿಗಳಲ್ಲಿ ಪ್ರಾಮಾಣಿಕವಾಗಿ ಸಲ್ಲಿಸಿದ್ದೇನೆ.ಆದರೆ ಕೆಲವು ಮಾಧ್ಯಮಗಳಲ್ಲಿ ವಿಷಯವನ್ನು ತಿರುಚಿ ‘ಪ್ರಧಾನಮಂತ್ರಿಗಳು ನಮ್ಮ ಬೇಡಿಕೆಗೆ ಮೌನವಹಿಸಿದ್ದರು, ಅವರು ಮುನಿಸಿಕೊಂಡಿದ್ದಾರೆ, ಅವರಿಗೆ ಅಸಮಾಧಾನವಾಗಿದೆ’ ಎಂದು ವಾಸ್ತವ ಸಂಗತಿಗಳನ್ನು ತಿಳಿಯುವ ಗೋಜಿಗೂ ಹೋಗದೆ, ತಮ್ಮ ಕಪೋಲಕಲ್ಪಿತ ವ್ಯಾಖ್ಯಾನಗಳನ್ನು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇಂತಹ ಸುದ್ದಿಗಳು ಸತ್ಯಕ್ಕೆ ದೂರವಾದವುಗಳು ಎನ್ನುವುದನ್ನು ನಾನು ಅತ್ಯಂತ ಸ್ಪಷ್ಟವಾಗಿ ಹೇಳುತ್ತಿದ್ದೇನೆ,’ ಎಂದಿದ್ದಾರೆ.

‘ನಮ್ಮ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು, ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು, ಪ್ರವಾಹ ಪರಿಹಾರ ಕಾರ್ಯಗಳಿಗಾಗಿ 50 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಪ್ರಧಾನಮಂತ್ರಿಗಳಲ್ಲಿ ಮನವಿಯನ್ನು ರೈತ ಸಮಾವೇಶದ ವೇದಿಕೆಯಿಂದ ಮತ್ತೊಮ್ಮೆ ಅರಿಕೆ ಮಾಡಿಕೊಳ್ಳುವುದು ಸಮಂಜಸ ಎನ್ನುವ ಕಾರಣಕ್ಕೆ ಅಲ್ಲಿ ಅದನ್ನು ಉಲ್ಲೇಖಿಸಿದ್ದೇನೆ. ಮನವಿಗೆ ಪ್ರಧಾನಮಂತ್ರಿಗಳು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಈ ಬಗ್ಗೆ ದೆಹಲಿಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲು ಮತ್ತು ಇಲಾಖಾವಾರು ಕೇಂದ್ರ ಸಚಿವರುಗಳಿಗೆ ಪ್ರಸ್ತಾವನೆ ಸಲ್ಲಿಸಲು ಪ್ರಧಾನಮಂತ್ರಿ ಸೂಚಿಸಿದ್ದಾರೆ. ಅವರೇಈ ವಿಷಯದ ಬಗ್ಗೆ ಖುದ್ದಾಗಿ ನನ್ನೊಂದಿಗೆ ಮಾತನಾಡಿದ್ದಾರೆ,’ ಎಂದು ತಿಳಿಸಿದ್ದಾರೆ.

‘ವಾಸ್ತವ ಸಂಗತಿಗಳನ್ನು ಮರೆಮಾಚಿ, ಜನರಿಗೆ ತಪ್ಪು ಸಂದೇಶ ನೀಡುವ ಕೆಲವು ಮಾಧ್ಯಮಗಳ ಧೋರಣೆ ಸರಿಯಲ್ಲ ಎನ್ನುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ರಾಜ್ಯದ ಹಿತದೃಷ್ಟಿಯಿಂದ ನಮ್ಮ ಪ್ರಯತ್ನಗಳನ್ನು ಬೆಂಬಲಿಸಿ ಮತ್ತು ವಿಷಯಗಳಿಗೆ ತಪ್ಪು ವಾಖ್ಯಾನ ಮಾಡದಿರಿ ಎಂದು ಎಲ್ಲ ವಿದ್ಯುನ್ಮಾನ ಮತ್ತು ಸುದ್ದಿ ಮಾಧ್ಯಮಗಳಲ್ಲಿ ನಾನು ಕೋರಿಕೊಳ್ಳುತ್ತಿದ್ದೇನೆ’ ಎಂದು ಬಿಎಸ್‌ವೈ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT