ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ‘ಪುನರ್ವಸು’ವಿನ ಸಿಂಚನ: ಪ್ರಮುಖ ಜಲಾಶಯಗಳ ಒಳಹರಿವು ಹೆಚ್ಚಳ

ಕೊಡಗು ಜಿಲ್ಲೆಯಲ್ಲಿ ತಗ್ಗಿದ ಮಳೆಯ ಅಬ್ಬರ
Last Updated 9 ಜುಲೈ 2019, 19:48 IST
ಅಕ್ಷರ ಗಾತ್ರ

ಬೆಂಗಳೂರು: ಮಲೆನಾಡು ಭಾಗದಲ್ಲಿ ಮುಂಗಾರು ಬಿರುಸಾಗಿದೆ. ಮುಂದಿನ ಮೂರು ದಿನಗಳಲ್ಲಿ ಕರಾವಳಿ ಭಾಗದಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ವಿವಿಧೆಡೆ ಮಂಗಳವಾರವೂ ಉತ್ತಮ ಮಳೆಯಾಗಿದೆ. ಮೂಡಿಗೆರೆಯಲ್ಲಿ ಧಾರಾಕಾರ ಮಳೆಯಿಂದ ಜನಜೀವನ ತತ್ತರಿಸಿದೆ.

ಮೂಡಿಗೆರೆ ತಾಲ್ಲೂಕಿನಲ್ಲಿ ಬಹುತೇಕ ಗದ್ದೆ, ಬಯಲುಗಳು ಜಲಾವೃತವಾಗಿವೆ. ಹಲವೆಡೆ ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಸ್ಥಗಿತದಿಂದಾಗಿ ಸರ್ಕಾರಿ ಕಚೇರಿಗಳಿಗೆ ಅಡ್ಡಿಯಾಗಿದೆ. ಬಹುತೇಕ ಕಾಫಿ ತೋಟಗಳಲ್ಲಿ ಕೃಷಿ ಚಟುವಟಿಕೆ ಸ್ಥಗಿತವಾಗಿದ್ದು, ಕಟ್ಟಡ ನಿರ್ಮಾಣ ಕಾಮಗಾರಿಗಳು ನಿಂತಿವೆ. ಮಳೆ ಬಿಡುವು ನೀಡದ ಕಾರಣ ಜನರು ಮನೆಯಿಂದ ಹೊರ ಬರುತ್ತಿಲ್ಲ. ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ಭಾಗದಲ್ಲಿ ಮಳೆ ಅಬ್ಬರಿಸಿದೆ.

ಹೇಮಾವತಿ, ತುಂಗಾ, ಭದ್ರಾ ನದಿಗಳ ಹರಿವಿನಲ್ಲಿ ಕೊಂಚ ಏರಿಕೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದ್ದು, ಮಡಿಕೇರಿಯಲ್ಲಿ ಮಂಗಳವಾರ ಮಧ್ಯಾಹ್ನದ ಬಳಿಕ ಬಿಟ್ಟುಬಿಟ್ಟು ಮಳೆಯಾಗಿದೆ. ನಾಪೋಕ್ಲು, ಭಾಗಮಂಡಲ, ತಲಕಾವೇರಿ ಭಾಗದಲ್ಲೂ ಆಗಾಗ ಮಳೆ ಬೀಳುತ್ತಿದೆ.

ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹದವಾದ ಮಳೆ ಸುರಿಯಿತು. ಮಧ್ಯಾಹ್ನ ಆರಂಭವಾದ ತುಂತುರು ಮಳೆ ನಂತರ ಜೋರಾಗಿ ಸುರಿಯಿತು. ಸಂತೇಬೆನ್ನೂರು, ಮಲೆಬೆನ್ನೂರು, ತ್ಯಾವಣಗಿ, ಹೊನ್ನಾಳಿ, ನ್ಯಾಮತಿಯಲ್ಲಿ ಉತ್ತಮ ಮಳೆಯಾಯಿತು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ಹೊಳಲ್ಕೆರೆ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಜೋರು ಮಳೆಯಾಗಿದ್ದು,ಶಿವಮೊಗ್ಗ ನಗರ, ತೀರ್ಥಹಳ್ಳಿ, ಸಾಗರ, ಶಿಕಾರಿಪುರ, ಸೊರಬ ಹಾಗೂ ಭದ್ರಾವತಿಯಲ್ಲಿ ಸಾಧಾರಣಮಳೆಯಾಗಿದೆ.

ಶಿವಮೊಗ್ಗ 16 ಮಿ.ಮೀ., ಭದ್ರಾವತಿ 5.20 ಮಿ.ಮೀ., ತೀರ್ಥಹಳ್ಳಿ 48.40 ಮಿ.ಮೀ., ಸಾಗರ 71 ಮಿ,ಮೀ., ಶಿಕಾರಿಪುರ 5.40 ಮಿ.ಮೀ., ಸೊರಬ 22 ಮಿ.ಮೀ. ಹಾಗೂ ಹೊಸನಗರ 148.60 ಮಿ.ಮೀ. ಮಳೆಯಾಗಿದೆ.

ಮೈದುಂಬಿದ ಕೃಷ್ಣೆ: ಸತತ ಮಳೆಯಿಂದಾಗಿ ಕೃಷ್ಣೆ ಮೈದುಂಬಿ ಹರಿಯುತ್ತಿದ್ದು, ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚುತ್ತಿದೆ. ಮಂಗಳವಾರ ಸಂಜೆ ಹೊತ್ತಿಗೆ ತುಂಗಭದ್ರಾ ಜಲಾಶಯಕ್ಕೆ ಒಂದು ಟಿಎಂಸಿ ಅಡಿಗೂ ಅಧಿಕ ನೀರು ಹರಿದು ಬಂದಿದೆ.

ಆಲಮಟ್ಟಿಯಲ್ಲಿ 80 ಸಾವಿರ ಕ್ಯುಸೆಕ್‌ ನೀರಿನ ಹರಿವಿದ್ದು, ನಾಳೆ ವೇಳೆಗೆ ಅದು ಲಕ್ಷ ಕ್ಯುಸೆಕ್‌ಗೆ ಏರುವ ಸಾಧ್ಯತೆ ಇದೆ. ಜಲವಿದ್ಯುತ್‌ ಉತ್ಪಾದನೆಗೆ ಚಾಲನೆ ಸಿಕ್ಕಿದ್ದು, ಎರಡೂ ಘಟಕಗಳಿಂದ 16.80 ಲಕ್ಷ ಯುನಿಟ್‌ ವಿದ್ಯುತ್ ಉತ್ಪಾದಿಸಲಾಗಿದೆ.

ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದೆ. ಕೃಷ್ಣಾ, ದೂಧ್‌ಗಂಗಾ, ವೇದಗಂಗಾ ಉಕ್ಕಿ ಹರಿಯುತ್ತಿವೆ. ರಾಜಾಪುರ ಬ್ಯಾರೇಜ್‌ನಿಂದ 61,310 ಕ್ಯುಸೆಕ್‌ ನೀರು ಕೃಷ್ಙೆಗೆ ಬರುತ್ತಿದೆ. ಖಾನಾಪುರ, ಗೋಕಾಕ ಹಾಗೂ ಬೈಲಹೊಂಗಲ ತಾಲ್ಲೂಕುಗಳ ತಲಾ ಒಂದು;ಚಿಕ್ಕೋಡಿ ತಾಲ್ಲೂಕಿನ 6 ಸೇತುವೆಗಳು ಜಲಾವೃತ ಸ್ಥಿತಿಯಲ್ಲಿಯೇ ಇವೆ.

ಕರಾವಳಿಯಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ
ಮಂಗಳೂರು:ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮೂರು ದಿನಗಳ ಕಾಲ ಭಾರಿ ಮಳೆ ಬೀಳಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಮಂಗಳವಾರದಿಂದ ಗುರುವಾರದವರೆಗೆ ಕರಾವಳಿಯಲ್ಲಿ ಭಾರಿ ಮಳೆ ಸುರಿಯಲಿದೆ. ಮೊದಲ ದಿನ ಮಳೆಯ ತೀವ್ರತೆ ಹೆಚ್ಚಿರಲಿದೆ. ನಂತರದ ಎರಡು ದಿನಗಳ ಸ್ವಲ್ಪ ಕಡಿಮೆಯಾಗಲಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಮಂಗಳವಾರ ಮತ್ತು ಬುಧವಾರ ಭಾರಿ ಪ್ರಮಾಣದ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

ಮಂಗಳೂರಿನಿಂದ ಕಾರವಾರದವರೆಗಿನ ಕಡಲ ತೀರದಲ್ಲಿ ಅಲೆಗಳ ಉಬ್ಬರ ಹೆಚ್ಚಿದ್ದು, ಬೃಹದಾಕಾರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ. ಮಂಗಳವಾರ ಸಂಜೆ 5.30ರಿಂದ ಗುರುವಾರ ತಡರಾತ್ರಿಯವರೆಗೆ ಈ ಪ್ರದೇಶದಲ್ಲಿ 3.5 ಮೀಟರ್‌ನಿಂದ 4 ಮೀಟರ್‌ ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸಲಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನೀಡಿರುವ ಮುನ್ನೆಚ್ಚರಿಕೆಯಲ್ಲಿ ಇಲಾಖೆ ಹೇಳಿದೆ.

ಕರಾವಳಿಯಲ್ಲಿ ನೈರುತ್ಯ ದಿಕ್ಕಿಗೆ ಪ್ರತಿ ಗಂಟೆಗೆ 40ರಿಂದ 50 ಕಿಲೋ ಮೀಟರ್‌ ವೇಗದಲ್ಲಿ ಗಾಳಿ ಬೀಸುತ್ತಿದೆ. ಮುಂದಿನ ಮೂರು ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

ಮಣ್ಣು ಕುಸಿತ: ರೈಲು ಮಾರ್ಗ ಬದಲು
ಮಂಗಳೂರು:
ಸುಬ್ರಹ್ಮಣ್ಯ–ಸಕಲೇಶಪುರ ರೈಲು ಮಾರ್ಗದ ಸಿರಿಬಾಗಿಲು ಬಳಿ ಹಳಿ ಮೇಲೆ ಮಣ್ಣು ಕುಸಿದಿದ್ದು, ಈ ಮಾರ್ಗದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬುಧವಾರದ (ಜುಲೈ 10) ಕಾರವಾರ –ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಕಾರವಾರದ ಬದಲಾಗಿ ಮಂಗಳೂರಿನಿಂದ ಹೊರಡಲಿದೆ.

ಕಣ್ಣೂರು/ಕಾರವಾರ –ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು, ಯಶವಂತಪುರ– ಮಂಗಳೂರು ಸೆಂಟ್ರಲ್‌ ರೈಲು ಹಾಗೂ
ಕೆಎಸ್‌ಆರ್ ಬೆಂಗಳೂರು– ಕಾರವಾರ/ಕಣ್ಣೂರು ರೈಲುಗಳ ಮಾರ್ಗವನ್ನು ಸುಬ್ರಹ್ಮಣ್ಯ –ಸಕಲೇಶಪುರ ಮಾರ್ಗದ ಬದಲಾಗಿ, ಶೋರಾಪುರ್–ಪಾಲಕ್ಕಾಡ್‌ ಜಂಕ್ಷನ್– ಸೇಲಂ– ಜೋಲಾರಪಟ್ಟಿಗೆ ಬದಲಾವಣೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT