ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ ತಹಶೀಲ್ದಾರ್ ಕೊಲೆ, ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ

Last Updated 9 ಜುಲೈ 2020, 17:43 IST
ಅಕ್ಷರ ಗಾತ್ರ
ADVERTISEMENT
""

ಕೋಲಾರ: ವಿವಾದಿತ ಜಮೀನಿನ ಸರ್ವೆ ಕಾರ್ಯಕ್ಕೆ ಹೋಗಿದ್ದ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ತಹಶೀಲ್ದಾರ್‌ ಬಿ.ಕೆ.ಚಂದ್ರಮೌಳೇಶ್ವರ (53) ಅವರನ್ನು ಸಾರ್ವಜನಿಕವಾಗಿ ಪೊಲೀಸರ ಸಮ್ಮುಖದಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಬಂಗಾರಪೇಟೆ ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳವಂಚಿ ಗ್ರಾಮದ ರಾಮಮೂರ್ತಿ ಮತ್ತು ವೆಂಕಟಾಚಲಪತಿ ಎಂಬುವರ ನಡುವೆ ಸರ್ವೆ ನಂಬರ್‌ 5/4ರ ಜಮೀನಿನ ವಿಚಾರವಾಗಿ ವಿವಾದವಿತ್ತು. ಈ ಸಂಬಂಧ ರಾಮಮೂರ್ತಿ ತಹಶೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿ ಜಮೀನಿನ ಸರ್ವೆ ಮಾಡುವಂತೆ ಕೋರಿದ್ದರು.

ಹೀಗಾಗಿ ತಹಶೀಲ್ದಾರ್‌ ಚಂದ್ರಮೌಳೇಶ್ವರ ಸಿಬ್ಬಂದಿಯೊಂದಿಗೆ ಸರ್ವೆ ಮಾಡಲು ಕಳವಂಚಿ ಗ್ರಾಮದ ವಿವಾದಿತ ಜಮೀನಿಗೆ ಹೋಗಿದ್ದರು. ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸಿದ ವೆಂಕಟಾಚಲಪತಿ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಾನೆ. ಅಲ್ಲದೇ, ಅರ್ಜಿದಾರರು ಮತ್ತು ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ವಿರೋಧದ ನಡುವೆಯೂ ಅಧಿಕಾರಿಗಳು ಪೊಲೀಸ್‌ ಭದ್ರತೆಯಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿದರು.

ಬಳಿಕ ತಹಶೀಲ್ದಾರ್‌ ತಮ್ಮ ವಾಹನದ ಬಳಿ ಹೋಗಿ ಸ್ಥಳದಿಂದ ನಿರ್ಗಮಿಸುವ ಯತ್ನದಲ್ಲಿದ್ದರು. ಆಗ ಜಮೀನಿನ ದಾಖಲೆಪತ್ರ ತೋರಿಸುವ ನೆಪದಲ್ಲಿ ವಾಹನದ ಬಳಿಗೆ ಹೋದ ವೆಂಕಟಾಚಲಪತಿ ದಾಖಲೆಪತ್ರಗಳ ಜತೆ ಪ್ಲಾಸ್ಟಿಕ್‌ ಕವರ್‌ನಲ್ಲಿ ಅಡಗಿಸಿ ಇಟ್ಟಿಕೊಂಡಿದ್ದ ಚಾಕು ಹೊರ ತೆಗೆದು ತಹಶೀಲ್ದಾರ್‌ ಎದೆಗೆ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದ ತಹಶೀಲ್ದಾರ್‌ರನ್ನು ಆಂಬುಲೆನ್ಸ್‌ನಲ್ಲಿ ಜಿಲ್ಲಾ ಕೇಂದ್ರದ ಜಾಲಪ್ಪ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದರು. ಆರೋಪಿ ವೆಂಕಟಾಚಲಪತಿ ನಿವೃತ್ತ ಶಿಕ್ಷಕನಾಗಿದ್ದಾನೆ. ಕಾಮಸಮುದ್ರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆತನ ಪತ್ತೆ ಕಾರ್ಯ ಆರಂಭಿಸಿದ್ದಾರೆ.

ತಹಶೀಲ್ದಾರ್‌ ಬಿ.ಕೆ.ಚಂದ್ರಮೌಳೇಶ್ವರ ಅವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು.

ಮೃತ ತಹಶೀಲ್ದಾರ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ

ಬೆಂಗಳೂರು: ಬಂಗಾರಪೇಟೆ ತಾಲ್ಲೂಕು ತಹಶೀಲ್ದಾರ್‌ ಚಂದ್ರಮೌಳೇಶ್ವರ ಅವರ ಹತ್ಯೆ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಘಾತ ವ್ಯಕ್ತಪಡಿಸಿದ್ದಾರೆ.

ಮೃತರ ಅಂತ್ಯಕ್ರಿಯೆ ಪೊಲೀಸ್‌ ಗೌರವಗಳೊಂದಿಗೆ ನಡೆಯಲಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅವರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲಾಗುವುದು. ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಲು ಸೂಚನೆ ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಸಾಂಕೇತಿಕ ಪ್ರತಿಭಟನೆ ಇಂದು: ತಹಶೀಲ್ದಾರ್ ಹತ್ಯೆ ಕೃತ್ಯವನ್ನು ಖಂಡಿಸಿ ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲು ಸರ್ಕಾರಿ ನೌಕರರ ಸಂಘ ನಿರ್ಧರಿಸಿದೆ.

ಸಂಘದ ಆಯಾ ಹಂತಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ಸಂಘ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT