ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬನ್ನಿ’ ಮುಡಿದು ಬಂಗಾರದ ಅಂಬಾರಿ ಏರಿದ ದೇವಿ

ಮೈಸೂರಿನಲ್ಲಿ ಜಂಬೂಸವಾರಿ ವೈಭವ; ಸಂಭ್ರಮಕ್ಕೆ ಸಾಕ್ಷಿಯಾದ ಲಕ್ಷಾಂತರ ಜನ
Last Updated 8 ಅಕ್ಟೋಬರ್ 2019, 20:03 IST
ಅಕ್ಷರ ಗಾತ್ರ

ಮೈಸೂರು: ನವರಾತ್ರಿಗಳಲ್ಲಿ ವಿದ್ಯುದ್ದೀಪಗಳ ಬೆಳಕಿನಲ್ಲಿ ಮಿಂದೆದ್ದ ಮೈಸೂರು ನಗರಿಯು, ಮಂಗಳವಾರ ವಿಜಯದಶಮಿಯ ಮೆರವಣಿಗೆ ಹೊರಟ ದೇವಿ ಚಾಮುಂಡೇಶ್ವರಿಯ ಪ್ರಭಾವಳಿಯಲ್ಲಿ ದೇದಿಪ್ಯಮಾನವಾಗಿ ಬೆಳಗಿತು. ಆ ಬೆಳಕಿನ ಬೆರಗಿಗೆ ಲಕ್ಷಾಂತರ ಜನ ಸಾಕ್ಷಿಯಾದರು.

ಆನೆ ’ಅರ್ಜುನ’ ಹೊತ್ತ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿಯ ಮೆರವಣಿಗೆಯನ್ನು ಕಣ್ತುಂಬಿಕೊಂಡ ಜನ ಭಕ್ತಿಪರವಶರಾದರು.

ಅರಮನೆ ಆವರಣದಲ್ಲಿ, ಮಧ್ಯಾಹ್ನ 4.17ಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯದಶಮಿಯ ಮೆರವಣಿಗೆಗೆ ಚಾಲನೆ ನೀಡಿದರು. ಆದರೆ, ಮುಹೂರ್ತ ನಿಗದಿಯಾಗಿದ್ದು 4.31ರಿಂದ 4.57ಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ. ನಾಡಹಬ್ಬ ಉದ್ಘಾಟನೆ ಕೂಡ ಮುಹೂರ್ತಕ್ಕಿಂತ ಮೊದಲೇ ನಡೆದಿತ್ತು.

ಮೆರವಣಿಗೆಯುದ್ದಕ್ಕೂ ವಿವಿಧ ಕಲಾತಂಡಗಳು ಪ್ರಸ್ತುತಪಡಿಸಿದ ನೃತ್ಯ–ನಾದವೈಭವು ಒಮ್ಮೆ ದುಷ್ಟ ಶಿಕ್ಷೆಯ ಎಚ್ಚರಿಕೆಯಂತೆ ತೋರಿದರೆ, ಮತ್ತೊಮ್ಮೆ ಶಿಷ್ಟರ ರಕ್ಷಣೆಗೈದ ತಾಯಿಯ ಸ್ತುತಿಗೆ ಮೀಸಲಾದಂತೆ ಭಾಸವಾದವು.

ಮಹಾನವಮಿಯ ಘಟ್ಟದ ನಂದಾದೀಪದ ಬೆಳಕಿನಲ್ಲಿ, ತನ್ನದೇ ಪುರಾಣವನ್ನು ಕೇಳಿ ಸಂಪ್ರೀತಳಾಗುವ ದೇವಿ ನಾಡಿನ ಉತ್ತರ ಭಾಗದಲ್ಲಿ ಕ್ಷಮಯಾಧರಿತ್ರಿಯಾಗಿ ಈ ದಿನ ‘ಬನ್ನಿ ಬಂಗಾರ’ ಪಡೆಯುತ್ತಾಳೆ. ಅದೇ ತಾಯಿ, ಇತ್ತ ಮೈಸೂರಿನಲ್ಲಿ ಬೆಟ್ಟದಿಂದ ಇಳಿದುಬಂದು ಉತ್ಸವಮೂರ್ತಿಯಾಗಿ ಅರಮನೆಯ ಆವರಣದಲ್ಲಿ ಚಿನ್ನದ ಅಂಬಾರಿ ಏರಿದ ಪರಿ ದೇವಿಭಕ್ತರಿಗೆ ಮತ್ತೆ ಸೋಜಿಗವಾಗಿಯೇ ಉಳಿಯಿತು.

ಅರಮನೆಯ ಬಲರಾಮದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಾಂಪ್ರದಾಯಿಕ ದಿರಿಸಿನಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೇಯರ್‌ ಪುಷ್ಪಲತಾ ಜಗನ್ನಾಥ ಭಾಗವಹಿಸಿದ್ದರು.

ಮೆರವಣಿಗೆಗೆ ಮೆರುಗು ತಂದ 38 ಸ್ತಬ್ಧಚಿತ್ರಗಳ ಪೈಕಿ, ಅತಿವೃಷ್ಟಿ ಹಾಗೂ ಪ್ರವಾಹದಿಂದ ನಲುಗಿದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಸ್ಥಿತಿಯನ್ನು ಬಿಂಬಿಸಿದ ಸ್ತಬ್ಧಚಿತ್ರಗಳು ಜನರ ಮನಸ್ಸಿಗೆ ಕಾಡಿದವು. ಗುಡ್ಡಕುಸಿತದ ಬಗ್ಗೆ ಕೊಡಗಿನ ಸ್ತಬ್ಧಚಿತ್ರ ಜಾಗೃತಿ ಮೂಡಿಸಿತು. ಜಯಚಾಮರಾಜ ಒಡೆಯರ್‌ ಅವರ ಜನ್ಮಶತಮಾನೋತ್ಸವ ಆಚರಣೆಯ, ತುಮಕೂರಿನ ಸಿದ್ಧಗಂಗಾಶ್ರೀಗಳ, ಆದಿಚುಂಚನಗಿರಿಯ ಸಂಸ್ಥಾನಮಠ ಹಾಗೂ ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಶ್ರೀಗಳ ಸಾಮಾಜಿಕ ಕೊಡುಗೆಗಳ, ಆ ಚೇತನಗಳಿಗೆ ಮತ್ತೊಮ್ಮೆ ಮಗದೊಮ್ಮೆ ಶರಣೆನ್ನುವಂತಿದ್ದವು. ಹೆಣ್ಣುಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಿದ ಚಿತ್ರದುರ್ಗ ಜಿಲ್ಲೆಯ ಹಾಗೂ ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಮೂಡಿಬಂದ ಮೈಸೂರಿನ ಸ್ತಬ್ಧಚಿತ್ರಗಳು ಗಮನಸೆಳೆದವು.

ನಿಶಾನೆ ಆನೆಗಳು, ಒಂಬತ್ತನೇ ಬಾರಿ (ಸತತವಾಗಿ ಎಂಟು ಸಲ) 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತಿದ್ದ ‘ಅರ್ಜುನ’, ಆತನ ಎಡಬಲದಲ್ಲಿ ಸಾಗಿದ ‘ಕಾವೇರಿ’ ಮತ್ತು ‘ವಿಜಯಾ’ ಆನೆಗಳು, ಪೊಲೀಸ್‌ ಅಶ್ವದಳ, ಇಂಗ್ಲಿಷ್‌ ಬ್ಯಾಂಡ್‌ ಆಕರ್ಷಿಸಿದವು.

ನಾಡಿನ ಮೂಲೆಮೂಲೆಯಿಂದಲೂ ನಗರಕ್ಕೆ ಬಂದಿದ್ದ ಭಕ್ತಸಾಗರ, ಜನ ಸಾಗರ, ಪ್ರವಾಸಿಗರ ದಂಡು ಈ ಉತ್ಸವವನ್ನು ಅಕ್ಷರಶಃ ನಾಡಹಬ್ಬವಾಗಿ ಕಟ್ಟಿಕೊಟ್ಟಿತು. ಉರಿಬಿಸಿಲಿನಲ್ಲಿಯೂ ಅರಮನೆಯ ಆವರಣ ಕಿಕ್ಕಿರಿದು ತುಂಬಿತ್ತು. ಆಸನ ಸಿಗದವರು ಕಾರ್ಯಕ್ರಮದ ಕೊನೆಯವರಿಗೆ ಕೊಡೆ ಹಿಡಿದು ನಿಂತುಕೊಂಡೇ ಇದ್ದರು. ಇಲ್ಲಿಂದ ಬನ್ನಿಮಂಟಪ ಮೈದಾನಕ್ಕೆ ಸಾಗುವ ಮಾರ್ಗದ ಇಕ್ಕೆಲದಲ್ಲಿ ಬೆಳಿಗ್ಗೆಯಿಂದಲೇ ಕಾದುನಿಂತಿದ್ದ ಪ್ರವಾಸಿಗರು, ಇಳಿಸಂಜೆಯಲ್ಲಿ ಜಂಬೂಸವಾರಿಯ ವೈಭವವನ್ನು ಕಣ್ತುಂಬಿಕೊಂಡರು.

ಬನ್ನಿಮಂಟಪ ಮೈದಾನದಲ್ಲಿ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮುದ ನೀಡಿದರೆ, ವಿವಿಧ ಸಾಹಸ ಪ್ರದರ್ಶನಗಳು ರೋಮಾಂಚನ ತಂದವು. ವೈಭವದ ದಸರೆಗೆ ಮಹಾ ದೀಪದಾರತಿ ಎಂಬಂತೆ ಭಾಸವಾದ ಪಂಜಿನ ಕವಾಯತಿನೊಂದಿಗೆ ದಸರಾ ಸಂಪನ್ನಗೊಂಡಿತು.

ಅರಮನೆ ಆವರಣದಲ್ಲಿ ಮಂಗಳವಾರ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಂಬೂಸವಾರಿಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಅಭಿರಾಂ ಶಂಕರ್‌, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಮೇಯರ್ ಪುಷ್ಪಲತಾ ಜಗನ್ನಾಥ್‌ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ : ಅನೂಪ್ ರಾಘ್‌. ಟಿ.
ಅರಮನೆ ಆವರಣದಲ್ಲಿ ಮಂಗಳವಾರ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಂಬೂಸವಾರಿಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಅಭಿರಾಂ ಶಂಕರ್‌, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಮೇಯರ್ ಪುಷ್ಪಲತಾ ಜಗನ್ನಾಥ್‌ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ : ಅನೂಪ್ ರಾಘ್‌. ಟಿ.

ಮರದ ರೆಂಬೆ ಬಿದ್ದು ವ್ಯಕ್ತಿಗೆ ಗಾಯ
ಮೈಸೂರು: ಜನರ ಭಾರ ತಾಳದೇ, ಇಲ್ಲಿನ ಸಯ್ಯಾಜಿರಾವ್ ರಸ್ತೆಯಲ್ಲಿನ ಮರದ ಕೊಂಬೆಯೊಂದು ಮುರಿದು ಬಿದ್ದು, ಪ್ರಕಾಶ್‌ ಎಂಬುವವರು ಗಾಯಗೊಂಡಿದ್ದಾರೆ.

ಜಂಬೂಸವಾರಿ ವೀಕ್ಷಣೆಗೆಂದು ಹಲವಾರು ಜನರು ಮರವೇರಿ ಕುಳಿತಿದ್ದರು. ಭಾರ ಹೆಚ್ಚಾಗುತ್ತಲೇ ರೆಂಬೆಯು ಮುರಿದಿದೆ. ಈ ವೇಳೆ ಕೆಲ ಯುವಕರು ಜಿಗಿದು ಪಾರಾಗಿದ್ದಾರೆ. ಕೆಳಗೆ ಹಾಕಿದ್ದ ಶಾಮಿಯಾನ ಅಡಿ ಇದ್ದ ಪ್ರಕಾಶ್‌ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬನ್ನಿಮಂಟಪದಲ್ಲಿ ನಡೆದ ಪಂಜಿನ ಕವಾಯತಿನಲ್ಲಿ ಜಬಲ್ಪುಪುರದ ಡೇರ್‌ ಡೆವಿಲ್ಸ್‌ ಮಿಲಿಟರಿ ತಂಡ ನಡೆಸಿದ ಸಾಹಸ ಪ್ರದರ್ಶನ –ಪ್ರಜಾವಾಣಿ ಚಿತ್ರ
ಬನ್ನಿಮಂಟಪದಲ್ಲಿ ನಡೆದ ಪಂಜಿನ ಕವಾಯತಿನಲ್ಲಿ ಜಬಲ್ಪುಪುರದ ಡೇರ್‌ ಡೆವಿಲ್ಸ್‌ ಮಿಲಿಟರಿ ತಂಡ ನಡೆಸಿದ ಸಾಹಸ ಪ್ರದರ್ಶನ –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT