ಬುಧವಾರ, ಫೆಬ್ರವರಿ 26, 2020
19 °C

ಜಿಲ್ಲೆಗೊಬ್ಬರು ಮುಖ್ಯಮಂತ್ರಿ ಬೇಡಿಕೆ ಬರಬಹುದು: ಸಂತೋಷ್ ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ರಾಜ್ಯದಲ್ಲಿ ಈಗ ಮೂವರು ಉಪ ಮುಖ್ಯಮಂತ್ರಿಗಳು ಇದ್ದಾರೆ. ಇನ್ಬಷ್ಟು ಶಾಸಕರು ಆಕಾಂಕ್ಷಿಗಳು ಇದ್ದಾರೆ. ಪರಿಸ್ಥಿತಿ ಹೀಗೆಯೆ ಮುಂದುವರೆದರೆ  ಜಿಲ್ಲೆಗೊಬ್ಬರು ಮುಖ್ಯಮಂತ್ರಿ ಮಾಡಿ ಎಂದು ಕೇಳುವ ಕಾಲ ಬರಬಹುದು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭವಿಷ್ಯ ನುಡಿದರು.

ದಾವಣಗೆರೆಯಲ್ಲಿ ಭಾನುವಾರ ನಡೆದ ರೋಟರಿ 36ನೇ ಜಿಲ್ಲಾ ಸಮ್ಮೇಳನದಲ್ಲಿ ಅವರು ಮಾತನಾಡಿ, ಶಾಸಕರಾಗಿ ಆಯ್ಕೆಯಾದ ವ್ಯಕ್ತಿಗೆ ಉಪ ಮುಖ್ಯಮಂತ್ರಿ ಆಗುವಾಸೆ. ಡಿಸಿಎಂ ಇದ್ದವರು ಸಿಎಂ ಆಗಲು ಬಯಸುತ್ತಾರೆ. ಹಾಗಾಗಿಯೇ ಈ ಬಾರಿ ರಾಜ್ಯದಲ್ಲಿ ಮೂವರು ಡಿಸಿಎಂಗಳನ್ನು ನೋಡುತ್ತಿದ್ದೇವೆ. ಮುಂದೊಂದು ದಿನ ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಹೀಗೆ ಜಿಲ್ಲೆಗೊಬ್ಬರನ್ನು ಮುಖ್ಯಮಂತ್ರಿ ಮಾಡಿ ಎಂದು ಒತ್ತಡ ಹೇರುವ ದಿನಗಳೂ ಬರಬಹುದು ಎಂದರು.

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ಬದುಕುತಿದ್ದರೂ ರಾಜಪ್ರಭುತ್ವ ನಮ್ಮನ್ನು ಬಿಟ್ಟು ಹೋಗಿಲ್ಲ ಇದಕ್ಕೆ ಝೀರೋ ಟ್ರಾಫಿಕ್ ವ್ಯವಸ್ಥೆಯೇ ಉದಾಹರಣೆ. ನಮ್ಮಿಂದ ಚುನಾಯಿಸಲ್ಪಟ್ಟ ಜನಪ್ರತಿನಿಧಿಗಳು ಹೋಗುವವರೆಗೆ ಕೈಕಟ್ಟಿ ನಿಲ್ಲಬೇಕಾ ಇದೊಂದು ಪ್ರಜಾಪ್ರಭುತ್ವನಾ? ರಾಜಪ್ರಭುತ್ವದ ಸಿಂಹಾಸನ ಈಗಲೂ ಇದೆ. ಆದರೆ ಅದರಲ್ಲಿ ರಾಜರ ಬದಲು ಜನಪ್ರತಿನಿಧಿಗಳು ಕುಳಿತುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಯಾವುದೇ ವ್ಯಕ್ತಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಪ್ರಚೋದನಾಕಾರಿ ಹೇಳಿಕೆ ನೀಡಬಾರದು. ಪ್ರತಿಭಟನೆ ಮಾಡುವುದು ತಪ್ಪಲ್ಲ ಆದರೆ ಅದು ಹಿಂಸಾತ್ಮಕವಾಗಿರಬಾರದು ಎಂದು ಸಲಹೆ ನೀಡಿದರು.

ನಿರ್ಭಯಾ ಪ್ರಕರಣ ನ್ಯಾಯ ವಿಳಂಬವಾಗುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಫಟಾಫಟ್ ಆಗಿ ಪ್ರಕರಣಗಳು ಇತ್ಯರ್ಥವಾದರೆ ನ್ಯಾಯಾಂಗದ ಮೇಲಿನ ಗೌರವ ಕಡಿಮೆಯಾಗುತ್ತದೆ. ಅವಸರದ ನ್ಯಾಯ ಹೂತುಹೋಗುತ್ತದೆ. ನ್ಯಾಯದಾನ ಶೀಘ್ರವೂ ಆಗಬಾರದು. ವಿಳಂಬವೂ ಆಗಬಾರದು. ವಿಳಂಬವಾದರೆ ಗೆದ್ದವನು ಸೋತ. ಸೋತವನು ಸತ್ತ ಎಂಬಂತೆ ಆಗುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು