ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯ ಪಕ್ಷದ ಪ್ರಮುಖರ ಸ್ವಾಗತಕ್ಕೆ ಅಣಿ: ಬಿಜೆಪಿ ಕಡೆ ನಾಯಕರ ವಲಸೆ ?

ಕಮಲ ಪಡೆಗೆ ಆತಂಕ ತಂದ ಬಿಎಸ್‌ವೈ ಹೇಳಿಕೆ
Last Updated 17 ಜನವರಿ 2020, 3:43 IST
ಅಕ್ಷರ ಗಾತ್ರ

ಬೆಂಗಳೂರು: ‘ಅನ್ಯ ಪಕ್ಷಗಳ ಹಲವು ನಾಯಕರು ಬಿಜೆಪಿ ಸೇರಲು ಸಾಲುಗಟ್ಟಿದ್ದಾರೆ. ನಮ್ಮ ಕುರ್ಚಿಗೆ ಎಲ್ಲಿ ಧಕ್ಕೆ ಬರುತ್ತದೆಯೋ ಎಂಬ ಭಯ ಬಿಟ್ಟು ನಾವು ಅವರನ್ನು ಗೌರವದಿಂದ ಬರ ಮಾಡಿಕೊಳ್ಳಬೇಕು’ ಎಂಬ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆ ಬಿಜೆಪಿಯಲ್ಲಿ ನಾನಾ ಬಗೆಯ ವಿಶ್ಲೇಷಣೆಗೆ ಕಾರಣವಾಗಿದೆ.

ನಗರದ ಅರಮನೆ ಮೈದಾನದಲ್ಲಿಗುರುವಾರ ನಡೆದ ಪಕ್ಷದ ನೂತನ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಅವರ ಅಭಿನಂದನಾ ಸಮಾರಂಭದಲ್ಲಿ ಯಡಿಯೂರಪ್ಪ ಆಡಿದ ಮಾತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಕಾಂಗ್ರೆಸ್, ಜೆಡಿಎಸ್‌ ತೊರೆದು ಈಗಾಗಲೇ ಪಕ್ಷ ಸೇರಿರುವವರು ಹಾಗೂ ಉಪಚುನಾವಣೆಯಲ್ಲಿ ಗೆದ್ದವರಿಗೆ ಯಾವುದೇ ಸ್ಥಾನ ನೀಡಲು ಸಾಧ್ಯವಾಗಿಲ್ಲ. ಉ‍‍ಪ ಚುನಾವಣೆ ಫಲಿತಾಂಶ ಬಂದು ತಿಂಗಳು ಕಳೆದರೂ ಬಿಜೆಪಿ ಸರ್ಕಾರ ರಚನೆಗೆ ನೆರವಾದವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲೂ ಆಗಿಲ್ಲ. ಇಂತಹ ಹೊತ್ತಿನಲ್ಲಿ ಮತ್ತೆ ಕೆಲವರು ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ, ಪಕ್ಷದ ನಾಯಕರು ಹಾಗೂ ನೂತನ ಶಾಸಕರಲ್ಲಿ ಆತಂಕ ಸೃಷ್ಟಿಸಿದೆ.

ಯಡಿಯೂರಪ್ಪ ಹೇಳಿದ್ದೇನು: ‘ಬಿಜೆಪಿಯತ್ತ ಅನ್ಯ ಪಕ್ಷಗಳ ಇನ್ನೂ ಹಲವು ನಾಯಕರು ಮುಖ ಮಾಡಿದ್ದು, ಅವರನ್ನು ಪಕ್ಷಕ್ಕೆ ತೆಗೆದುಕೊಳ್ಳಲು ಹಿಂಜರಿಕೆ ಬೇಕಿಲ್ಲ. ಇದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲಲು ಸಾಧ್ಯ’ ಎಂದು ಯಡಿಯೂರಪ್ಪ ಹೇಳಿದರು.

ಪಕ್ಷದ ತಳಹದಿಯನ್ನು ಇನ್ನಷ್ಟು ವಿಸ್ತಾರಗೊಳಿಸಲು ಎಲ್ಲ ವರ್ಗ ಮತ್ತು ಸಮುದಾಯದ ನಾಯಕರನ್ನು ಕರೆದುಕೊಂಡು ಮುಂದಕ್ಕೆ ಹೋಗಲೇಬೇಕಾಗುತ್ತದೆ ಎಂದರು.

‘ಅನ್ಯ ಪಕ್ಷಗಳ ನಾಯಕರನ್ನು ಕರೆದುಕೊಂಡು ಬಂದರೆ, ನಮ್ಮ ರಾಜಕೀಯ ಭವಿಷ್ಯವನ್ನು ಬಲಿಕೊಡಬೇಕಾಗುತ್ತದೆ. ಈಗಾಗಲೇ 17 ಮಂದಿ ಬಂದಿದ್ದಾರೆ. ಉಪಚುನಾವಣೆಯಲ್ಲಿ 11 ಮಂದಿ ಗೆದ್ದಿದ್ದರೂ, 15 ಜನಕ್ಕೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಡ ಇದೆ. ಸರ್ಕಾರ ರಚಿಸಲಿಕ್ಕಾಗಿ ಈ ಪ್ರಯತ್ನವನ್ನು ಒಪ್ಪಬಹುದಾದರೂ ಹೊಸತಾಗಿ ಇನ್ನಷ್ಟು ಜನರಿಗೆ ಮಣೆ ಹಾಕಿ ಕರೆದುಕೊಂಡು ಬರುವ ಅಗತ್ಯವಿಲ್ಲ’ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದರು.

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಇನ್ನಷ್ಟು ಶಾಸಕರು ವಲಸೆ ಬಂದರೆ, ಸರ್ಕಾರದ ಮಟ್ಟದಲ್ಲಿ ಮಾತ್ರವಲ್ಲ, ಸ್ಥಳೀಯ ಮಟ್ಟದಲ್ಲೂ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತೀವ್ರ ಅಸಮಾಧಾನಗೊಳ್ಳುತ್ತಾರೆ. ಹಲವು ವರ್ಷಗಳಿಂದ ಹಗಲಿರುಳು ಕೆಲಸ ಮಾಡಿಕೊಂಡು ಬಂದಿರುವ ಕಾರ್ಯಕರ್ತರನ್ನು ಕಡೆಗಣಿಸಿದಂತಾಗುತ್ತದೆ’ ಎಂದು ಅವರು ತಿಳಿಸಿದರು.

‘ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನಗೊಳಿಸಿ, ಈಗ ವನವಾಸ ಅನುಭವಿಸುತ್ತಿದ್ದೇವೆ, ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುತ್ತಲೇ ಇದೆ. ನಮ್ಮ ಜತೆ ಬಂದು ಉಪ ಚುನಾವಣೆಯಲ್ಲಿ ಸೋತ ಎಚ್‌.ವಿಶ್ವನಾಥ್‌ ಮತ್ತು ಎಂ.ಟಿ.ಬಿ.ನಾಗರಾಜ್‌ ಅವರ ಭವಿಷ್ಯ ಇನ್ನೂ ನಿರ್ಧಾರ ಆಗಿಲ್ಲ. ಮುನಿರತ್ನ ಮತ್ತು ಪ್ರತಾಪ್‌ ಗೌಡ ಪಾಟೀಲ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿರುವ ಪ್ರಕರಣವನ್ನು ಪಕ್ಷ ಹಿಂದಕ್ಕೆ ಪಡೆದಿಲ್ಲ. ಇನ್ನೂ ಬರುವವರು ಇದ್ದಾರೆ ಎಂದರೆ, ಅವರು ಯಾವ ಧೈರ್ಯದಲ್ಲಿ ಬರುತ್ತಾರೆ’ ಎಂದು ನೂತನ ಶಾಸಕರೊಬ್ಬರು ಪ್ರಶ್ನಿಸಿದರು.

ಮೂರು ವರ್ಷನಳಿನ್‌ ಅಧ್ಯಕ್ಷ

ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್ ಕಟೀಲ್‌ ಅವರು ಮೂರು ವರ್ಷಗಳ ಅವಧಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಪಕ್ಷದ ಕಚೇರಿಯಲ್ಲಿ ಬೆಳಿಗ್ಗೆ ನಳಿನ್‌ ಅವರ ಆಯ್ಕೆಯನ್ನು ಚುನಾವಣಾ ವೀಕ್ಷಕ ಸಿ.ಟಿ.ರವಿ ಘೋಷಿಸಿದರು. ಇಲ್ಲಿಯವರೆಗೆ ನಳಿನ್‌ ಹಂಗಾಮಿ ಅಧ್ಯಕ್ಷರಾಗಿದ್ದರು.

****
ಬೇರೆ ಪಕ್ಷಗಳಲ್ಲಿ ಹಣ ಬಲ, ರಟ್ಟೆ ಬಲ ಮತ್ತು ಜಾತಿ ಬಲ ಇದ್ದವರಷ್ಟೇ ಅಧ್ಯಕ್ಷರಾಗುತ್ತಾರೆ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನೂ ಅಧ್ಯಕ್ಷನಾಗಬಲ್ಲ.
-ನಳಿನ್‌ ಕುಮಾರ್‌ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT