ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮ್ಯುನಿಸ್ಟ್ ಚಳವಳಿಯ ಹಿರಿಯ ಮುಖಂಡ ನರಸಿಂಹನ್ ನಿಧನ: ಬಡವಾದ ಕಾರ್ಮಿಕ ವರ್ಗ

Last Updated 10 ಜೂನ್ 2020, 18:58 IST
ಅಕ್ಷರ ಗಾತ್ರ

ಬೆಂಗಳೂರು:ಕಮ್ಯುನಿಸ್ಟ್ ಚಳವಳಿಯ ಸಂಗಾತಿಗಳ ಮಧ್ಯೆ ಕಾಮ್ರೇಡ್ ಎಂಸಿಎನ್ ಎಂದೇ ಚಿರಪರಿಚಿತರಾಗಿದ್ದ ಎಂ.ಸಿ. ನರಸಿಂಹನ್ ವಿದ್ಯಾರ್ಥಿ ದೆಸೆಯಿಂದಲೇ ಶೋಷಣೆಯ ವಿರುದ್ಧ ಹೋರಾಟ ನಡೆಸಿ ಸಮಾಜವಾದಿ ಸಮಾಜ ನಿರ್ಮಾಣದ ಕನಸು ಕಂಡವರು.

1942ರ ಸಂದರ್ಭದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅವರು ಎಂಜಿನಿಯರಿಂಗ್ ಶಿಕ್ಷಣವನ್ನು ಕೊನೆ ವರ್ಷದಲ್ಲಿ ಕೈಬಿಟ್ಟು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಪೂರ್ಣಾವಧಿ ಕಾರ್ಯಕರ್ತರಾಗಿ ಕೋಲಾರದ ಚಿನ್ನದ ಗಣಿ ಕಾರ್ಮಿಕರನ್ನು ಸಂಘಟಿಸಲು ಕೆಜಿಎಫ್‍ಗೆ ತೆರಳಿದರು.

ನಂತರ ಹಲವಾರು ಹೋರಾಟಗಳ ಮೂಲಕ ಕಾರ್ಮಿಕ ನಾಯಕರಾಗಿ ಬೆಳೆದ ಅವರು, 1957ರಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಕೆಜಿಎಫ್ ಕ್ಷೇತ್ರದಿಂದ ಮೈಸೂರು ವಿಧಾನಸಭೆಗೆ ಚುನಾಯಿತರಾದರು. 1962ರ ಚೀನಾ ಮಹಾಯುದ್ಧದ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ ಅವರು 1962ರಿಂದ 1967ರವರೆಗೂ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.

ಶಾಸನ ಸಭೆಗಳಲ್ಲಿ ದುಡಿಯುವ ಜನರ ಧ್ವನಿಯಾಗಿದ್ದ ಅವರು ರೈತ-ಕಾರ್ಮಿಕರ ಹಿತಾಸಕ್ತಿಯನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಿದ್ದರು.

ತದನಂತರ ಮದ್ರಾಸ್ ವಿಶ್ವವಿದ್ಯಾನಿಲಯದ ಕಾನೂನು ವಿದ್ಯಾರ್ಥಿಯಾಗಿ ಉನ್ನತ ಶ್ರೇಣಿಯಲ್ಲಿ ಕಾನೂನು ಪದವಿ ಪಡೆದ ಅವರು ರಾಜ್ಯದ ಸಮರ್ಥ ವಕೀಲರಾಗಿ ಕಾನೂನು ಸಮರದಲ್ಲಿ ಕಾರ್ಮಿಕ ವರ್ಗದ ಪರ ಕಾನೂನು ಹೋರಾಟ ನಡೆಸಿದರು.

ರಾಜ್ಯ ಹೈಕೋರ್ಟ್‍ನ ನ್ಯಾಯಮೂರ್ತಿಯಾಗುವ ಅವಕಾಶವನ್ನು ಎರಡು ಬಾರಿ ವಿನಯವಾಗಿಯೇ ನಿರಾಕರಿಸಿದ್ದರು. ಕಳೆದ 2-3 ವರ್ಷಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗುವವರೆಗೂ ಕಾರ್ಮಿಕರ ಪರವಾದ ಕೇಸುಗಳನ್ನು ನಡೆಸಿದರು.

ಸಂವಿಧಾನದ ಪ್ರಬಲ ಸಮರ್ಥಕರಾಗಿ ಸಾಂವಿಧಾನಿಕ ಕಾನೂನಿನ ಉತ್ಕೃಷ್ಟ ಪಂಡಿತರಾಗಿ ಹಲವಾರು ಪ್ರಕರಣಗಳಲ್ಲಿ ಕಾರ್ಮಿಕರ ಪರ ಕಾನೂನು ರಚನೆಯಾಗಲು ನ್ಯಾಯಾಲಯಗಳಲ್ಲಿ ಶ್ರಮಿಸಿದ ಕೀರ್ತಿ ನರಸಿಂಹನ್‌ ಅವರಿಗೆ ಸಲ್ಲುತ್ತದೆ.

‘ರಾಜಪ್ಪ ವಿರುದ್ಧ ಬೆಂಗಳೂರು ಜಲಮಂಡಳಿ’ ಪ್ರಕರಣದಲ್ಲಿ ಕೈಗಾರಿಕೆಯ ವಿಸ್ತೃತ ವ್ಯಾಖ್ಯಾನ ನೀಡುವುದರೊಂದಿಗೆ ಎಲ್ಲ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ನ್ಯಾಯ ನೀಡಿಕೆಯಲ್ಲಿ ಒಂದು ಕ್ರಾಂತಿಕಾರಿಯಾದ ಚರಿತ್ರೆಯನ್ನೇ ನಿರ್ಮಿಸಿದ ಶ್ರೇಯಸ್ಸು ಅವರದ್ದು.

ಕನಿಷ್ಟ ಕೂಲಿ ವಿಷಯದಲ್ಲಿ ಆಳವಾದ ಅಧ್ಯಯನ ಮಾಡಿದ್ದ ಅವರು ರಾಷ್ಟ್ರ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ಬದುಕಿಗೆ ಬೆಳಕಾಗಿದ್ದರು. ಕಾರ್ಮಿಕ ಕಾನೂನಿನ ಕ್ಷೇತ್ರಕ್ಕೆ, ಕಾರ್ಮಿಕ ಚಳವಳಿಗೆ ಕಾಮ್ರೇಡ್‌ ಎಂ.ಸಿ.ಎನ್. ಅವರ ಕೊಡುಗೆ ಅನನ್ಯವಾದುದು.

ಕಾರ್ಮಿಕರ ಧ್ವನಿ ಕ್ಷೀಣವಾಗಿರುವ ಇಂದಿನ ದಿನಗಳಲ್ಲಿ ಎಂ.ಸಿ.ಎನ್ ಅವರಂತಹ ಕಾರ್ಮಿಕ ವರ್ಗದ ಪಕ್ಷಪಾತಿಯ ನಿಧನದಿಂದ ಕಾರ್ಮಿಕ ವರ್ಗ ಇನ್ನಷ್ಟು ಬಡವಾಗಿದೆ.

ಲೇಖಕ:‌ಎಐಟಿಯುಸಿಪ್ರಧಾನ ಕಾರ್ಯದರ್ಶಿ

***

ಇಂದು ಸಂಜೆ ನಿಧನ
ಬೆಂಗಳೂರು:ಹೈಕೋರ್ಟ್ ನ ಹಿರಿಯ ವಕೀಲರೂ ಮಾಜಿ ಶಾಸಕರು ಹಾಗೂ ಎಐಟಿಯುಸಿ ರಾಜ್ಯ ಸಮಿತಿ ಪೋಷಕರಾಗಿದ್ದ ಕಾಮ್ರೇಡ್ ಎಂ.ಸಿ. ನರಸಿಂಹನ್ (98) ಅವರು ಬುಧವಾರ ಸಂಜೆ 5 ಗಂಟೆಗೆ ನಿಧನರಾದರು.

ಬಸವೇಶ್ವರ ನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಮೂವರು ಪುತ್ರಿಯರಿದ್ದಾರೆ.

ರಾಜ್ಯದಕಮ್ಯುನಿಸ್ಟ್ ಚಳವಳಿಯ ಹಿರಿಯ ಮುಖಂಡರು ಮತ್ತು ಕಾರ್ಮಿಕ ನಾಯಕರೂ ಆಗಿದ್ದ ನರಸಿಂಹನ್ ಅವರು 1957ರಿಂದ 1962ರವರೆಗೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಸಿಪಿಐ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅಂತೆಯೇ, 1962ರಿಂದ 1967ರವರೆಗೆ ವಿಧಾನ ಸಭೆಯಿಂದ ಪರಿಷತ್ ಗೆ ಆಯ್ಕೆಯಾಗಿದ್ದರು.

ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ಸೇರಿದಂತೆ ದುಡಿಯುವ ವರ್ಗದ ಜನರ ಕಲ್ಯಾಣಕ್ಕೆ ಉಪಯೋಗವಾಗುವಂತಹ ಹಲವು ಕಾನೂನುಗಳು ರೂಪುಗೊಳ್ಳಲು ನರಸಿಂಹನ್ ಕಾರಣರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT