ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ ತಾಲ್ಲೂಕಿನ ಬಂಡಿವಾಳ ಗ್ರಾಮ: ಚಿರೆಕಲ್ಲು ತೆಗೆಯುವಾಗ ಜಲಮಾರ್ಗ ಪತ್ತೆ

ಗ್ರಾಮಸ್ಥರ ಕುತೂಹಲಕ್ಕೆ ಕಾರಣವಾದ ಸುರಂಗ
Last Updated 20 ಮೇ 2019, 14:11 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ ಬಂಡಿವಾಳ ಗ್ರಾಮದ ಲಿಂಗಪ್ಪ ತಿಮ್ಮಣ್ಣ ಹೆಬ್ಬಾರ ಅವರ ಜಮೀನಿನಲ್ಲಿ ಭಾನುವಾರ ಚಿರೆಕಲ್ಲು ತೆಗೆಯುವಾಗ ಸುರಂಗದಂಥ ಬೃಹತ್ ರಚನೆ ಕಂಡುಬಂದಿದೆ.ಸುಮಾರು ಎಂಟು ಅಡಿ ಆಳದಲ್ಲಿ ನೀರಿನ ಹರಿವಿನ ದಾರಿ ಇದಾಗಿದೆ.

ಮಳೆಗಾಲದಲ್ಲಿ ಬೆಟ್ಟದಿಂದ ಹರಿದು ಬರುವ ನೀರು, ಕೆಳಭಾಗದಲ್ಲಿರುವ ತೋಟದ ಅಂಚಿಗೆ ಬೃಹತ್ ಪ್ರಮಾಣದಲ್ಲಿ ಹರಿಯುತ್ತದೆ. ಚಿರೆಕಲ್ಲು ತೆಗೆಯುವಾಗ ಈ ಸುರಂಗಪತ್ತೆಯಾಯಿತು. ಹೊಂಡದೊಳಕ್ಕೆ ಇಳಿದರೆ ಎರಡೂ ದಿಕ್ಕಿಗೆ ಸುಮಾರು 12 ಅಡಿ ದೂರ ಮಾತ್ರ ಹೋಗಬಹುದು. ಇನ್ನೂ ಮುಂದೆ ಹೋದರೆ ತಲೆಗೆ ಕಲ್ಲು ಬಂಡೆ ತಗಲುತ್ತದೆ. ಇದರ ಮೇಲ್ಪದರ ಪೂರ್ತಿ ಬಂಡೆಯಿಂದ ಆವೃತವಾಗಿದೆ. ಹಾಗಾಗಿ ಮಣ್ಣು ಮೆತ್ತಗಾಗಿ ಸುಲಭದಲ್ಲಿ ಕುಸಿಯುವ ಸಾಧ್ಯತೆ ಕಡಿಮೆಯಿದೆ.

ಹೊರಗೆ ಸುಡು ಬಿಸಿಲಿದ್ದರೂ ಚಿರೆಕಲ್ಲಿನಬಂಡೆಯ ಮೇಲ್ಪದರ ರಕ್ಷಣೆಯಿಂದ ಒಳಗೆ ಮಣ್ಣು ಕೈಯಲ್ಲಿ ಉಂಡೆ ಕಟ್ಟುವಷ್ಟು ಮೆತ್ತಗಿದೆ. ನಾಲ್ಕಾರು ಜನರು ಒಟ್ಟಿಗೆ ಹೊಂಡದೊಳಕ್ಕೆ ಇಳಿದರೆ ಆಮ್ಲಜನಕದ ಕೊರತೆಯಿಂದ ಉಸಿರಾಟ ಸಮಸ್ಯೆ ಉಂಟಾಗುತ್ತದೆ.

‘ಇಲ್ಲಿಯೇ ಕೊಂಚ ಎತ್ತರ ಪ್ರದೇಶದಲ್ಲಿ ಇನ್ನೊಂದು ಕಲ್ಲು ಮಡಲಸು ಇದೆ. ಹಿಂದೆ ಇಲ್ಲಿಗೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದವರು ಮುಳ್ಳು ಹಂದಿ ಬೇಟೆಗಾಗಿ ಗುಹೆಯೊಳಗೆ ಹೊಗೆ ಹಾಯಿಸಿದ್ದರು. ಮುಳ್ಳು ಹಂದಿ ಸಿಗಲಿಲ್ಲ. ಆದರೆ, ಸುಮಾರು200 ಮೀಟರ್ ದೂರದಲ್ಲಿ ನೀರು ಹೊರ ಬೀಳುವ ಜಾಗದಲ್ಲಿ ಹೊಗೆ ಹೊರಗೆ ಬಂದಿತ್ತು’ ಎಂದು ಲಿಂಗಪ್ಪ ಹೆಬ್ಬಾರ ಅವರ ಮಗ ವಿಷ್ಣುಮೂರ್ತಿ ಹೆಬ್ಬಾರ ತಿಳಿಸಿದರು.

‘ಮುನ್ನೆಚ್ಚರಿಕೆಯಾಗಿ ಬೇಲಿ ನಿರ್ಮಾಣ’:‘ಇಲ್ಲಿ ಸುತ್ತಲೂ ಅರಣ್ಯ ಪ್ರದೇಶವಿದೆ. ಕೆಳಭಾಗದಲ್ಲಿ ನಮ್ಮ ಮೂರು ಎಕರೆ ಜಾಗವಿದೆ. ಅಲ್ಲಿ ಎರಡು ಹಾಸು ಚಿರೆಕಲ್ಲು ತೆಗೆದೆವು. ನಂತರ ಡಬ್ ಡಬ್ ಎಂದು ಸದ್ದು ಬರತೊಡಗಿತು. ಸದ್ದು ಬಂದ ಜಾಗದಲ್ಲಿ ಹಾರೆಯಿಂದ ಅಗೆದಾಗ ದೊಡ್ಡ ರಂಧ್ರ ಕಂಡಿತು. ಅದನ್ನುಬಿಡಿಸಿ ಕೆಳಗೆ ನೋಡಿದಾಗ ಆಳ ಗೋಚರಿಸಿತು’ ಎಂದು ವಿಷ್ಣುಮೂರ್ತಿ ಹೆಬ್ಬಾರ ತಿಳಿಸಿದರು.

ಇದು ಮೇಲಿನಿಂದ ನೀರು ಹರಿದುಬಂದು ಕೆಳಗೆ ಮಾರ್ಗದ ಮಧ್ಯೆ ಇರುವ ಗುಹೆಯಂಥ ಪ್ರದೇಶ ಎಂಬುದು ಖಚಿತವಾಯಿತು. ಬಂಡೆಗಲ್ಲಿನ ಪ್ರದೇಶದಲ್ಲಿ ನೀರು ಹರಿದು ನೆಲದಡಿ ಇಂಥ ಜಲಮಾರ್ಗ ನಿರ್ಮಾಣವಾಗಿದೆ. ಈಗ ಇಲ್ಲಿ ಚಿರೆಕಲ್ಲು ತೆಗೆಯುವ ಕೆಲಸ ನಿಲ್ಲಿಸಿ ಆಳದಲ್ಲಿ ದನ, ನಾಯಿ ಬೀಳದಂತೆ ಬೇಲಿ ಹಾಕಬೇಕಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT