ಬೆಂಗಳೂರು: ತೆಂಗಿನ ಉಪ ಉತ್ಪನ್ನ ‘ನೀರಾ’ವನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸುವುದಕ್ಕಾಗಿರೈತರ ಕಂಪನಿಗಳಿಗೆ ಅನುಮತಿ ನೀಡುವಲ್ಲಿ ಕೇಂದ್ರದ ತೆಂಗು ಅಭಿವೃದ್ಧಿ ಮಂಡಳಿ (ಸಿಡಿಬಿ) ತಾರತಮ್ಯ ಧೋರಣೆ ತಳೆದಿದೆ ಎಂಬ ಬಲವಾದ ಆರೋಪ ಕೇಳಿಬಂದಿದೆ.
ಕಂಪನಿಗೆ ನೀರಾ ಇಳಿಸಲು ಅನುಮತಿ ನೀಡುವಂತಿಲ್ಲ,ಸೊಸೈಟಿಗಳ ಒಕ್ಕೂಟದ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಮಂಡಳಿ ಹೇಳುತ್ತದೆ. ಆದರೆ ಕರ್ನಾಟಕ ಸೊಸೈಟಿ ಕಾಯ್ದೆ ಪ್ರಕಾರ ಒಂದು ಸೊಸೈಟಿಯು ಇನ್ನೊಂದು ಸೊಸೈಟಿಯ ಸದಸ್ಯನಾಗುವುದು ಸಾಧ್ಯವಿಲ್ಲ. ಹೀಗಾಗಿ ಈ ನಿಯಮ ಸಡಿಲಿಸಬೇಕು ಎಂಬ ಬೇಡಿಕೆ ಇದೆ.
‘ಕಂಪನಿಯೊಂದಕ್ಕೆ ನೀರಾ ಉತ್ಪಾದಿಸಲು ಅನುಮತಿ ನೀಡಬೇಕಿದ್ದರೆ ಗರಿಷ್ಠ ಷೇರು ಬಂಡವಾಳ ₹1 ಕೋಟಿ ಹಾಗೂ ಪಾವತಿ ಬಂಡವಾಳ ₹50 ಲಕ್ಷ ಇರಬೇಕು ಎಂಬ ನಿಯಮ ರೂಪಿಸಲಾಗಿದೆ. ಆದರೆ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಈ ನಿಯಮದಲ್ಲಿ ಸಡಿಲಿಕೆ ಮಾಡಿ, ಕ್ರಮವಾಗಿ ₹20 ಲಕ್ಷ ಮತ್ತು ₹ 10 ಲಕ್ಷಕ್ಕೆ ತಗ್ಗಿಸಲಾಗಿದೆ’ ಎಂದು ಮಲೆನಾಡ್ ನಟ್ಸ್ ಆ್ಯಂಡ್‌ಸ್ಪೈಸಸ್‌ಪ್ರೊಡ್ಯೂಸರ್ ಕಂಪನಿ ಸಂಸ್ಥಾಪಕ ಮನೋಹರ ಮಸ್ಕಿ ತಿಳಿಸಿದರು.
‘ಸಬ್ಸಿಡಿ ವಿಷಯದಲ್ಲೂ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ.ಹಲವು ಖಾಸಗಿ ಕಂಪನಿಗಳಿಗೆ ಸಬ್ಸಿಡಿ ನೀಡಲಾಗಿದೆ. ಆದರೆ ನಮ್ಮ ಕಂಪನಿ ಎಲ್ಲ ಮಾನದಂಡಗಳನ್ನು ಹೊಂದಿದ್ದರೂ ಸುಮಾರು ₹50 ಲಕ್ಷದಷ್ಟು ಸಬ್ಸಿಡಿ ನೀಡದೆ ಸತಾಯಿಸಲಾಗುತ್ತಿದೆ’ ಎಂದರು.
ಈ ಬಗ್ಗೆ ಬೆಂಗಳೂರಿನಸಿಡಿಬಿ ನಿರ್ದೇಶಕರನ್ನು ಸಂಪರ್ಕಿಸಿದಾಗ, ‘ನಿಜವಾದ ತೆಂಗು ಬೆಳೆಗಾರ ಸಂಘಕ್ಕೆ ಅಥವಾ ಕಂಪನಿಗೆ ಮಾತ್ರ ಮಂಡಳಿಯ ಮಾನ್ಯತೆ ಕೊಡಲಾಗುತ್ತಿದೆ, ನೀರಾ ಇಳಿಸುವ ಪರವಾನಗಿ ನೀಡುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ’ ಎಂದರು.
***
ಸಿಡಿಬಿ ತಾರತಮ್ಯ ನೀತಿ ಸರಿಯಿಲ್ಲ. ಈ ಹಿಂದೆ ನಾಲ್ವರು ಸಿಬಿಐ ತನಿಖೆಗೆ ಒಳಪಟ್ಟು ಅಮಾನತುಗೊಂಡಿದ್ದನ್ನು ಮರೆತಿಲ್ಲ
-ಮನೋಹರ ಮಸ್ಕಿ, ಮಲನಾಡ್ ನಟ್ಸ್ ಕಂಪನಿಯ ಸಂಸ್ಥಾಪಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.