ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರನಿಂದ ಹೊಸರಸ್ತೆ ರಿಪೇರಿ!

ಎಸ್‌.ಎಸ್.ಪುರದ 8ನೇ ಅಡ್ಡರಸ್ತೆ 1ನೇ ಮುಖ್ಯರಸ್ತೆಯ ನಿವಾಸಿಗಳಿಗೆ ಕಾಡಿದ್ದ ದೂಳಿನ ಕಾಟ: ಗುಣಮಟ್ಟದ ಕಾಮಗಾರಿಗೆ ಸ್ಥಳೀಯರ ಒತ್ತಾಯ
Last Updated 24 ಜನವರಿ 2020, 15:01 IST
ಅಕ್ಷರ ಗಾತ್ರ

ತುಮಕೂರು: ‘ಕಳಪೆ ಕಾಮಗಾರಿಯ ಸಿ.ಸಿ. ರಸ್ತೆಯಿಂದಾಗಿ ಮೈ ಮತ್ತು ಮನೆಗಳಿಗೆ ದೂಳಿನ ಮಜ್ಜನ ಆಗುತ್ತಿದೆ’ ಎಂಬ ಆರೋಪದಿಂದ ಎಚ್ಚೆತ್ತುಕೊಂಡಿರುವ ಗುತ್ತಿಗೆದಾರರೊಬ್ಬರು ರಸ್ತೆಗೆ ಟ್ಯಾಂಕರ್‌ಗಟ್ಟಲೇ ನೀರು ಸುರಿಸಿ, ತೊಳೆದರು. ಆಗಲೂ ದೂಳು ನಿಲ್ಲಲಿಲ್ಲ. ಈಗ ಆ ರಸ್ತೆಯ ಮೇಲೆ ಮತ್ತೊಂದು ಪದರವನ್ನು(ಸರ್ಫೆಸ್‌ ಟ್ರೀಟ್‌ಮೆಂಟ್‌) ಹಾಸುತ್ತಿದ್ದಾರೆ.

ಎಸ್‌.ಎಸ್.ಪುರದ 8ನೇ ಅಡ್ಡರಸ್ತೆಯ 1ನೇ ಮುಖ್ಯರಸ್ತೆಯನ್ನು ಕಳೆದ ಡಿಸೆಂಬರ್‌ನಲ್ಲಿಯೇ ಅಭಿವೃದ್ಧಿಪಡಿಸಲಾಗಿತ್ತು. ಆ ಕೆಲಸವನ್ನು ತೋಂಟದ ಆರಾಧ್ಯ ಎಂಬುವರು ಗುತ್ತಿಗೆ ಪಡೆದಿದ್ದರು. ರಸ್ತೆ ಕಾಮಗಾರಿ ‘ಕಳಪೆ’ಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು.

ಸ್ಥಳೀಯ ನಿವಾಸಿಗಳ ಮಾತಿಗೆ ಸಾಕ್ಷಿ ಎಂಬಂತೆ ಒಂದೂವರೆ ತಿಂಗಳ ಹಿಂದೆಯಷ್ಟೆ ನಿರ್ಮಾಣಗೊಂಡ ಈ ರಸ್ತೆಯಲ್ಲಿ ಜಲ್ಲಿ ಕಲ್ಲುಗಳನ್ನು ಎದ್ದು ಕಾಣುತ್ತಿದ್ದವು. ಅದರ ಮೇಲಿರಬೇಕಾದ ಸಿಮೆಂಟ್‌ ಮತ್ತು ಎಂ.ಸ್ಯಾಂಡ್‌ನ ಮಿಶ್ರಣದ ಪದರ ಮಾಯವಾಗಿದೆ.

ಸಿಮೆಂಟ್‌ ಮತ್ತು ಜಲ್ಲಿಗಿಂತ ಎಂ.ಸ್ಯಾಂಡ್‌(ಕಲ್ಲಿನ ಮರಳು)ಅನ್ನೆ ಕಾಮಗಾರಿಗೆ ಹೆಚ್ಚು ಬಳಸಿದ್ದಾರೆ. ವಾಹನಗಳು ಓಡಾಡಿದಾಗ ಇಲ್ಲಿ ದೂಳು ಹೆಚ್ಚು ಏಳುತ್ತದೆ. ಅದರಿಂದ ಆರೋಗ್ಯ ಕೆಡುತ್ತಿದೆ. ಕೆಮ್ಮು–ನೆಗಡಿ ಬರುತ್ತಿದೆ ಎಂದು ಸ್ಥಳೀಯರಾದ ಎಚ್‌.ಸುಗುಣ ದೂರಿದ್ದರು.

ರಸ್ತೆಯೆನೋ ಸಮತಟ್ಟಾಗಿ ಮಾಡಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಸಿಮೆಂಟ್‌, ಜಲ್ಲಿ, ಮರಳು ಮಿಶ್ರಣ ಮಾಡಿಲ್ಲ. ರಸ್ತೆ ಒಣಗಿದಾಗ ಹೊಗೆಯ ರೀತಿಯಲ್ಲಿ ದೂಳು ಏಳುತ್ತದೆ. ಈ ಬಗ್ಗೆ ದೂರಿದರೆ, ಅವರು ಮತ್ತೊಂದು ಬಜೆಟ್‌ನಲ್ಲಿ ಮತ್ತೊಮ್ಮೆ ರಸ್ತೆ ಮಾಡುತ್ತಾರೆ. ಅದರಿಂದ ನಮ್ಮ ಹಣವೇ ಪೋಲಾಗುತ್ತದೆ ಅಲ್ಲವೆ ಎಂದು ದೋಬಿಘಾಟ್‌ನ ನಿವಾಸಿ ಎಂ.ಎಚ್‌.ಚೇತನಾ ಪ್ರಶ್ನಿಸಿದರು.

‘ಕ್ಯೂರಿಂಗ್‌ ಮುನ್ನ ಸಂಚಾರ: ರಸ್ತೆಗೆ ಹಾನಿ’

ನೀರು ಸಿಂಪಡಿಸಿ ರಸ್ತೆಯನ್ನು ಗಟ್ಟಿಮುಟ್ಟು ಮಾಡುವ (ಕ್ಯೂರಿಂಗ್‌) ಮುನ್ನವೇ ಸಾರ್ವಜನಿಕರು ಈ ರಸ್ತೆಯಲ್ಲಿ ವಾಹನಗಳನ್ನು ಓಡಿಸಲು ಶುರು ಮಾಡಿದರು. ಇದರಿಂದ ರಸ್ತೆಯ ಸ್ವಲ್ಪ ಕಡೆ ಮಾತ್ರ ಜಲ್ಲಿಗಳು ಕಾಣುತ್ತಿದ್ದವು ಎಂದು ತುಮಕೂರು ನಗರ ಪಾಲಿಕೆಯ ಸ್ಥಳೀಯ ಸದಸ್ಯೆ (25ನೇ ವಾರ್ಡ್‌) ಮಂಜುಳಾ ಆದರ್ಶ ಅವರು ಹೇಳಿದರು.

ದೂಳಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಲು ನೀರು ಹಾಕಿಸಲಾಗುತ್ತಿತ್ತು ಎಂದು ಅವರು ತಿಳಿಸಿದರು.

‘ಜನವರಿ 19 ಮತ್ತು 20ರಂದು ರಸ್ತೆಯಲ್ಲಿನ ಎಂ.ಸ್ಯಾಂಡ್‌ನಿಂದ ಏಳುತ್ತಿದ್ದ ದೂಳನ್ನು ವೈಜ್ಞಾನಿಕವಾಗಿ ತೆಗೆದಿದ್ದೇವೆ. ರಸ್ತೆಯನ್ನು ಮತ್ತಷ್ಟು ಗಟ್ಟಿಮುಟ್ಟುಮಾಡಲು ರಾಸಾಯನಿಕಗಳ ಮಿಶ್ರಿತ ಚುರುಕಿ ಹಾಕುತ್ತಿದ್ದೇವೆ. ಈ ಮರು ಕಾಮಗಾರಿಗೆ ಅಂದಾಜು ₹1.5 ಲಕ್ಷ ತಗುಲಬಹುದು. ಇದನ್ನು ಗುತ್ತಿಗೆದಾರರೇ ಭರಿಸಲಿದ್ದಾರೆ’ ಎಂದು ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶೋಕ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ದೂಳಿನಿಂದ ಡಸ್ಟ್ ಅಲರ್ಜಿ ಆಗುತ್ತಿದೆ. ಈ ಬಗ್ಗೆ ಪಾಲಿಕೆಯ ಸ್ಥಳೀಯ ಸದಸ್ಯರಿಗೆ ಎಷ್ಟು ಬಾರಿ ಹೇಳಿದರೂ ಸಮಸ್ಯೆ ಪರಿಹಾರ ಆಗಿರಲಿಲ್ಲ. ಈಗ ಏನೋ ಮಾಡುತ್ತಿದ್ದಾರೆ.

ಚಂದ್ರಕಲಾ, ಸ್ಥಳೀಯರು

ದೂಳಿನಿಂದಾಗಿ ಬಹುತೇಕ ಮನೆಗಳ ಕಿಟಕಿ–ಬಾಗಿಲುಗಳು ಸದಾ ಮುಚ್ಚಿರುತ್ತವೆ. ಸ್ವಲ್ಪ ಬಾಗಿಲು ತೆರೆದರು ದೂಳು ಮನೆ ಸೇರುತ್ತಿತ್ತು.

ಜಿ.ವೈ.ನಟರಾಜ್ , ಸ್ಥಳೀಯರು

ಅಂಕಿ–ಅಂಶ

200 ಮೀಟರ್ರಸ್ತೆಯ ಉದ್ದ

4.5 ಮೀಟರ್‌ -ರಸ್ತೆಯ ಅಗಲ

100 ಮಿಲಿಮೀಟರ್‌ -ರಸ್ತೆಯಲ್ಲಿ ಹಾಕಿದ್ದ ಕಾಂಕ್ರೀಟ್‌ ಪದರದ ದಪ್ಪ

₹4.33 ಲಕ್ಷ -ರಸ್ತೆ ನಿರ್ಮಾಣದ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT