ಶನಿವಾರ, ಜೂನ್ 6, 2020
27 °C
ಕೊಡಗು ಜಿಲ್ಲೆ ವೈನ್ಸ್‌ಗಳಲ್ಲಿ ಖಾಲಿ ಆಯಿತೇ ದಾಸ್ತಾನು?, ಕುಶಾಲನಗರದ ಎರಡು ವೈನ್ಸ್ ಪರವಾನಗಿ ರದ್ದಿಗೆ ಶಿಫಾರಸು

ಕಾಳಸಂತೆಯಲ್ಲಿ ಮದ್ಯ: ದೌರ್ಬಲ್ಯವೇ ಬಂಡವಾಳ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯಲ್ಲೂ ಮಾರ್ಚ್‌ 19ರ ಜನತಾ ಕರ್ಫೂ ದಿನದಿಂದಲೇ ಮದ್ಯ ಮಾರಾಟಕ್ಕೆ ನಿಷೇಧ ಬಿದ್ದಿದ್ದು ಸುಮಾರು 45 ದಿನಗಳ ಬಳಿಕ ಅಂದರೆ ಸೋಮವಾರ ಜಿಲ್ಲೆಯಲ್ಲಿ ಮದ್ಯದ ಅಂಗಡಿಗಳು ಬಾಗಿಲು ತೆರೆಯುವ ಸಾಧ್ಯತೆಯಿದೆ.

ಕೇಂದ್ರ ಸರ್ಕಾರವು ಮೇ 4ರಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ, ಕೊಡಗು ಅಬಕಾರಿ ಇಲಾಖೆಗೆ ರಾಜ್ಯ ಸರ್ಕಾರದಿಂದ ಮದ್ಯಂಗಡಿ ತೆರೆಯುವ ಸಂಬಂಧ ಯಾವುದೇ ಸ್ಪಷ್ಟ ನಿರ್ದೇಶನ ಬಂದಿಲ್ಲ. ನಿರ್ದೇಶನ ಬಂದ ಕೂಡಲೇ ಮಾರಾಟಕ್ಕೆ ಅನುಮತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಅಬಕಾರಿ ಅಧಿಕಾರಿಗಳು ಹೇಳಿದರು.

ಆದರೆ, ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿರೂ ಹಲವು ವೈನ್ಸ್‌ಗಳಲ್ಲಿ ಮದ್ಯ ಲಭ್ಯವಿದೆಯೇ ಎಂಬ ಪ್ರಶ್ನೆ ಎದ್ದಿದೆ. ಅದಕ್ಕೆ ಕಾರಣ ಲಾಕ್‌ಡೌನ್‌ ಅವಧಿಯಲ್ಲಿ ವೈನ್ಸ್‌ ಶಾಪ್‌ಗಳಿಗೆ ಅಬಕಾರಿ ಸೀಲ್‌ ಮಾಡಿದ್ದರೂ, ಅಕ್ರಮವಾಗಿ ಮದ್ಯ ಮಾರಾಟ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಕೆಲವರಿಗೆ ಮದ್ಯ ಸಿಕ್ಕಿದ್ದು ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ.

ಮಾರ್ಚ್‌ ಕೊನೆ ಹಾಗೂ ಏಪ್ರಿಲ್‌ 15ರ ತನಕ ಜಿಲ್ಲೆಯಲ್ಲಿ ದುಪ್ಪಟ್ಟು ದರಕ್ಕೆ ಒಳ್ಳೆಯ ಬ್ರ್ಯಾಂಡ್‌ ಮದ್ಯದ ಬಾಟಲಿಗಳು ಮಾರಾಟವಾಗಿವೆ. ಸ್ಥಿತಿವಂತರು ಕಾಳಸಂತೆಯಲ್ಲಿ ಮದ್ಯ ಖರೀಸಿದ್ದರು. ಅದಕ್ಕೆ ಹಲವರು ಬೆಂಬಲವಾಗಿದ್ದರು. ಮದ್ಯ ಕುಡಿಯುವ ಅಭ್ಯಾಸವುಳ್ಳವರ ದೌರ್ಬಲವನ್ನೇ ಕೆಲವರು ಬಂಡವಾಳ ಮಾಡಿಕೊಂಡು ಹಣ ದೋಚಿದ್ದಾರೆ ಎಂಬ ಆರೋಪವಿದೆ. ದಾಸ್ತಾನು ವ್ಯತ್ಯಾಸ ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ಹಲವು ಗಣ್ಯರು ಹಾಗೂ ಹೋರಾಟಗಾರರು ಆಗ್ರಹಿಸಿದ್ದಾರೆ.

‘ಹೆಚ್ಚು ದುಡ್ಡು ಕೊಟ್ಟವರಿಗೆ ಸಿಕ್ಕಿದೆ’ ಮೇಲ್ವರ್ಗ ಮದ್ಯಪ್ರಿಯರಿಗೆ ಮದ್ಯದ ಕೊರತೆ ಆಗಿಲ್ಲ. ಅಬಕಾರಿ ಇಲಾಖೆಯವರ ಕೃಪಾಕಟಾಕ್ಷದಿಂದಲೇ ಅದು ಅವರ ಮನೆ ಬಾಗಿಲು ತಲುಪಿದೆ. ಮದ್ಯದಂಗಡಿಯ ಕೀಲಿ ಕೈ ಅಬಕಾರಿ ಇಲಾಖೆಯವರ ಬಳಿಯಿದ್ದರೂ ಬೀಗ ತೆಗೆಯುವುದಕ್ಕೆ ಸಮಸ್ಯೆ ಏನೂ ಆಗದು.

-ಎಚ್.ಆರ್.ಶಿವಕುಮಾರ್‌, ತಿತಿಮತಿ ಗ್ರಾಮ ‌

***

‘ದುಪ್ಪಟ್ಟು ಹಣಕ್ಕೆ ಮಾರಾಟ’

ಲಾಕ್‌ಡೌನ್ ಅವಧಿಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಕಳ್ಳಬಟ್ಟಿ ದಂಧೆ ನಡೆದಿದೆ. ಕಾಳಸಂತೆಯಲ್ಲಿ ಅನೇಕ ಬ್ರ್ಯಾಂಡ್‌ನ ಮದ್ಯ ಹೇರಳವಾಗಿ ದೊರೆಯುವುದರೊಂದಿಗೆ, ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಲಾಗುತ್ತಿದ್ದು. ಉನ್ನತಮಟ್ಟದ ತನಿಖೆ ನಡೆಸಬೇಕು. ಲಾಕ್‌ಡೌನ್ ನಿರ್ಬಂಧ ಉಲ್ಲಂಘಿಸಿರುವವರ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿರುವ ಅಬಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಬಕಾರಿ ಮತ್ತು ಪೊಲೀಸ್‌ ಇಲಾಖೆಗಳು ಈ ಅಕ್ರಮವನ್ನು ಹತ್ತಿಕ್ಕುವಲ್ಲಿ ಸಂಪೂರ್ಣ ಎಡವಿದ್ದು, ಲಾಕ್‌ಡೌನ್ ಅವಧಿಯನ್ನೇ ತಮ್ಮ ಭ್ರಷ್ಟಾಚಾರದ ಮೂಲಕ ಅದಾಯದ ವೃದ್ಧಿಗೆ ರಹದಾರಿ ಮಾಡಿಕೊಂಡಿರುವುದು ದುರಾದೃಷ್ಟಕರ.

-ವಿ.ಪಿ.ಶಶಿಧರ್, ಜಿ.ಪಂ ಮಾಜಿ‌ ಸದಸ್ಯ, ಕುಶಾಲನಗರ

***
ಸಾರ್ವಜನಿಕರ ಜೇಬಿಗೂ ಕತ್ತರಿ...

ಮದ್ಯ ಕಾಳಸಂತೆಯಲ್ಲಿ ಮಾರಾಟವಾಗಿದೆ. ಇದು ಹೇಗೆ ಬಂತು ಅನ್ನುವುದೇ ನನ್ನ ಪ್ರಶ್ನೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಆಗಬೇಕು. ವೈನ್‌ಶಾಪ್ ಬಂದ್ ಮಾಡಿರುವ ಸಮಯದಲ್ಲಿ ಅಲ್ಲಿದ್ದ ಸ್ಟಾಕ್ ಇದೆಯಾ ಅಂತ ಪರಿಶೀಲಿಸಬೇಕು. ಅದಕ್ಕೆ ಇಲಾಖೆಯಲ್ಲಿ ಕೆಲವು ಮಾನದಂಡಗಳಿವೆ. ಅದನ್ನು ಪಾಲಿಸಲೇಬೇಕು. ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದವರ ವಿರುದ್ಧವೂ ಕ್ರಮ ಆಗಬೇಕು.

-ವೆಂಕಟೇಶ ಪೂಜಾರಿ, ಜಿಲ್ಲಾ ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ, ಕುಶಾಲನಗರ
***
ಕಿಸೆ ತುಂಬಿಸಿಕೊಂಡ ಹಲವರು...

ಲಾಕ್‌ಡೌನ್ ಸಂದರ್ಭದಲ್ಲಿ ಮದ್ಯದ ಅಂಗಡಿಗಳನ್ನು ಬಂದ್ ಮಾಡಿದ್ದರೂ ಕೆಲವು ವ್ಯಾಪಾರಿಗಳು ಮೂರುಪಟ್ಟು ಹೆಚ್ಚು ಬೆಲೆಗೆ ಮದ್ಯ ಮಾರಾಟ ಮಾಡಿದ್ದಾರೆ. ಅಧಿಕಾರಿಗಳೂ ಕೂಡ ಕಾರ್ಯೋನ್ಮುಕ ಆಗಿರಲಿಲ್ಲ. ಲಾಕ್‌ಡೌನ್‌ ಲಾಭವನ್ನು‌ ಪಡೆದು ಕೆಲವು ಮದ್ಯ ವ್ಯಾಪಾರಿಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡಿ ಕಿಸೆಯನ್ನು ತುಂಬಿಸಿಕೊಂಡಿದ್ದಾರೆ.

-ಪಿ.ಆರ್‌.ಭರತ್, ಕಾರ್ಮಿಕ ಹೋರಾಟಗಾರ
***
ಕಾರ್ಮಿಕರ ಸುಲಿಗೆ... 

ಲಾಕ್‌ಡೌನ್ ಆರಂಭವಾದ ದಿನದಿಂದಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗಿದೆ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ದುಡಿದ ಹಣವನ್ನು ದುಬಾರಿ ಬೆಲೆ ನೀಡಿ ಮದ್ಯಕ್ಕೆ ವೆಚ್ಚ ಮಾಡಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು, ಪ್ರತಿ ದಿನವೂ ಕಾರ್ಯಾಚರಣೆ ನಡೆಸುತ್ತಿದ್ದರೂ ಮದ್ಯ ಮಾರಾಟ ಮಾಡಿರುವುದು ಕಂಡುಬಂದಿಲ್ಲ ಎಂಬುದೇ ವಿಪರ್ಯಾಸ.

-ಸುನಿತಾ ಮಂಜುನಾಥ್, ಜಿ.ಪಂ ಸದಸ್ಯೆ
***
ಪರಿಶೀಲಿಸಿದರೆ ಬಣ್ಣ ಬಯಲು

ಜನತಾ ಕರ್ಫ್ಯೂ ಘೋಷಣೆ ಮಾಡಿದ ಕ್ಷಣದಲ್ಲಿಯೇ ಬಹಳಷ್ಟು ಮದ್ಯದ ಅಂಗಡಿಯ ಮಾಲೀಕರು, ವ್ಯವಸ್ಥಾಪಕರು ಬೇರೊಂದು ಸ್ಥಳದಲ್ಲಿ ಮದ್ಯ ಇಟ್ಟರು. ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಲೆಕ್ಕವನ್ನು ಪರಿಶೀಲಿಸಿದರೆ, ನಿಜ ಸ್ವರೂಪ ತಿಳಿಯುತ್ತದೆ.

-ಆರ್.ಸುದರ್ಶನ ನಾಯ್ಡು, ಕಾರ್ಯದರ್ಶಿ, ರಾಮ ಸೇವಾ ಸಮಿತಿ, ಸುಂಟಿಕೊಪ್ಪ
***
ದೊಡ್ಡ ದಂಧೆಯೇ ನಡೆದಿದೆ...

ದೊಡ್ಡ ದಂಧೆಯೇ ನಡೆದಿದೆ. ₹ 600 ಮೌಲ್ಯದ ಮದ್ಯವನ್ನು ಕಾಳಸಂತೆಯಲ್ಲಿ ₹ 2,000ದಿಂದ ₹ 2,500ಕ್ಕೆ ಮಾರಾಟ ಮಾಡಲಾಗಿದೆ. ಜನಸಾಮಾನ್ಯರ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ದೋಚಲಾಗಿದೆ. ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದರೆ, ಅವರ ವಿರುದ್ಧ ಕ್ರಮ ಆಗಬೇಕು.

ಪಿ.ಎ.ಮಂಜುನಾಥ್‌, ಅಧ್ಯಕ್ಷ, ಜೆಡಿಎಸ್ ನಗರ ಘಟಕ, ವಿರಾಜಪೇಟೆ

***

‘ವಿಡಿಯೊ ಚಿತ್ರೀಕರಿಸಿ ವರದಿ ಸಲ್ಲಿಸಲಿ’

ದಕ್ಷ ಅಧಿಕಾರಿಗಳಿಂದ ಸ್ಟಾಕ್ ಪರಿಶೀಲನೆ ನಡೆಯಲಿ. ಜತೆಗೆ, ಈ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಬೇಕು. ಅಕ್ರಮದಲ್ಲಿ ಪಾಲ್ಗೊಂಡವರ ವಿರುದ್ಧ ಜಿಲ್ಲಾಧಿಕಾರಿ ಸೇರಿದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಪರವಾನಗಿ ರದ್ದು ‍ಪಡಿಸಲಿ.

ಟಿ.ವಿ.ಅನಿಲ್ ಕುಮಾರ್, ಅಧ್ಯಕ್ಷ, ರಕ್ಷಣಾ ವೇದಿಕೆ, ವಿರಾಜಪೇಟೆ

***

ದಾಸ್ತಾನು ಪರಿಶೀಲನೆ ಆರಂಭ: ಬಿಂದುಶ್ರೀ 

ಮಡಿಕೇರಿ: ‘ವೈನ್ಸ್‌ ಶಾಪ್‌ಗಳ ದಾಸ್ತಾನು ಪರಿಶೀಲನೆ ಆರಂಭವಾಗಿದೆ. ಸೇಲ್ಸ್‌ ಬುಕ್‌ನಲ್ಲಿ ನಮೂದು ಮಾಡಿರುತ್ತಾರೆ. ಹಾಗೊಮ್ಮೆ ದಾಸ್ತಾನು ವ್ಯತ್ಯಾಸವಾಗಿದ್ದರೆ ಪರವಾನಗಿ ರದ್ದು ಪಡಿಸುತ್ತೇವೆ. ಕುಶಾಲನಗರದ ಎರಡು ವೈನ್ಸ್‌ ಶಾಪ್‌ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿಕೊಂಡಿದ್ದು ಕಂಡುಬಂದಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರಿಗೆ ವರದಿ ನೀಡಲಾಗಿದೆ. ಕೆಲವರಿಗೆ ನೋಟಿಸ್‌ ಸಹ ನೀಡಲಾಗಿದೆ’ ಎಂದು ಅಬಕಾರಿ ಇಲಾಖೆ ಉಪ ಆಯುಕ್ತೆ ಪಿ.ಬಿಂದುಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಎಂಎಸ್ಐಎಲ್‌, ಎಂಆರ್‌ಪಿ ವೈನ್ಸ್‌ ಶಾಪ್‌, ಕ್ಲಬ್‌, ಪಬ್‌, ರೆಸಾರ್ಟ್‌ ಸೇರಿದಂತೆ ಒಟ್ಟು 255 ಕಡೆ ಮದ್ಯ ಮಾರಾಟಕ್ಕೆ ಪರವಾನಗಿ ಇದೆ. ಅನುಮತಿ ಸಿಕ್ಕರೆ ಯಾವುದಕ್ಕೆಲ್ಲಾ ಮಾರಾಟಕ್ಕೆ ಅವಕಾಶ ನೀಡಬೇಕು ಎಂಬುದರ ಬಗ್ಗೆ ಆದೇಶ ಇನ್ನೂ ಬಂದಿಲ್ಲ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು