ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಜಲಾವೃತ, ತಾತ್ಕಾಲಿಕ ಪರಿಹಾರಕ್ಕೆ ಸೂಚನೆ: ನಿರ್ಮಲಾ

ಬೆಳಗಾವಿ– ಬಾಗಲಕೋಟೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ವೈಮಾನಿಕ ಸಮೀಕ್ಷೆ
Last Updated 10 ಆಗಸ್ಟ್ 2019, 19:34 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರವಾಹ ಬಾಧಿತ ಪ್ರದೇಶ ಗಳಲ್ಲಿ ಮುಳುಗಡೆಯಾಗಿರುವ ಬೆಳೆಗೆ ತಕ್ಷಣವೇ ತಾತ್ಕಾಲಿಕ ಪರಿಹಾರ ನೀಡುವಂತೆ ವಿಮಾ ಕಂಪನಿಗಳಿಗೆ ಸೂಚನೆ ನೀಡಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

‘ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಶನಿವಾರ ಭೇಟಿ ನೀಡಿ, ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬೆಳೆ ವಿಮಾ ಕಂಪನಿಗಳು ಹಾಗೂ ರೈತರ ಪ್ರವಾಹ ಬಾಧಿತ ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಬೇಕು. ಮುಳುಗಡೆಯಾಗಿರುವ ಬೆಳೆಯ ಸಮೀಕ್ಷೆಗೆ ಮುಂದಾಗದೇ, ತಕ್ಷಣವೇ ತಾತ್ಕಾಲಿಕವಾಗಿ ಪರಿಹಾರ ನೀಡಬೇಕು. ಸಮೀಕ್ಷೆ ಹಾಗೂ ಹೆಚ್ಚಿನ ಪರಿಹಾರದ ಬಗ್ಗೆ ನಂತರ ನಿರ್ಧರಿಸುವಂತೆ ಸೂಚಿಸಲಾಗುವುದು’ ಎಂದು ಹೇಳಿದರು.

ವಿಮೆ ಅವಧಿ ವಿಸ್ತರಣೆ: ‘ಪ್ರಧಾನ ಮಂತ್ರಿ ಫಸಲ್‌ ವಿಮಾ ಯೋಜನೆಯಡಿಬೆಳೆ ವಿಮೆ ಕಂತು ಪಾವತಿಸುವ ಅವಧಿಯನ್ನು ವಿಸ್ತರಿಸುವಂತೆ ಸಮೀಕ್ಷೆ ವೇಳೆ ರೈತರು ಮನವಿ ಮಾಡಿದ್ದಾರೆ. ವಿಮೆ ಕಂತು ಪಾವತಿಸಲು ಆಗಸ್ಟ್‌ 15 ಕೊನೆಯ ದಿನವಾಗಿತ್ತು. ಅದನ್ನು ವಿಸ್ತರಣೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದಾಗ ಪ್ರವಾಹದಿಂದ ನೇಕಾರರ ಕುಟುಂಬಗಳು ಸಂಕಷ್ಟಕ್ಕೀಡಾಗಿರುವುದು ಕಂಡುಬಂದಿದೆ. ನೇಕಾರರ ಮಗ್ಗಗಳು ಮತ್ತು ಕಚ್ಚಾ ವಸ್ತುಗಳು ಪ್ರವಾಹದಿಂದ ಹಾನಿ ಯಾಗಿವೆ. ಸಂತ್ರಸ್ತರು ತೊಂದರೆಯಲ್ಲಿದ್ದಾರೆ. ಹೀಗಾಗಿ, ನೇಕಾರರು ಹಾಗೂ ಸಂತ್ರಸ್ತರಿಗೆ ಮೈಕ್ರೋ ಫೈನಾನ್ಸ್‌ಗಳು ಸಾಲ ಪಾವತಿಸುವಂತೆ ಕಿರುಕುಳ ಕೊಡ ಬಾರದು. ಈ ಬಗ್ಗೆ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು’ ಎಂದು ಹೇಳಿದರು.

‘ವೈಮಾನಿಕ ಸಮೀಕ್ಷೆ ನಡೆಸಿ ದಾಗ ಪ್ರವಾಹ ತೀವ್ರವಾಗಿರುವುದು ಕಂಡು ಬಂದಿದೆ. ಕೃಷ್ಣಾ, ಘಟ ಪ್ರಭಾ ಮತ್ತು ಮಲಪ್ರಭಾ ನದಿ ತೀರದ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಅನೇಕ ಸೇತುವೆಗಳು ಮುಳುಗಡೆಯಾಗಿದ್ದು, ಜನ-ಜಾನುವಾರುಗಳಿಗೆ ಅಪಾಯವಿದೆ’ ಎಂದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT