ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯೋತ್ಸವ ಕವಿ ನಿಸಾರ್‌ ಅಹಮದ್‌ ನಿಧನಕ್ಕೆ ಕಂಬನಿ ಮಿಡಿದ ನಾಡಿನ ಗಣ್ಯರು

Last Updated 3 ಮೇ 2020, 11:29 IST
ಅಕ್ಷರ ಗಾತ್ರ

ನಿತ್ಯೋತ್ಸವ ಕವಿ ಎಂದೇ ಹೆಸರಾಗಿದ್ದ ಹಿರಿಯ ಸಾಹಿತಿ ನಿಸಾರ್ ಅಹಮದ್ (84) ಅವರು ಭಾನುವಾರ ಬೆಂಗಳೂರಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ನಿಧನರಾದರು. ಅವರ ನಿಧನಕ್ಕೆ ರಾಜಕೀಯ ನಾಯಕರು, ಕವಿಗಳು, ಸಿನೆಮಾ ನಟರು, ಸಾಹಿತ್ಯಾಸಕ್ತರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

‘ನಿಸಾರ್ ಅಹಮದ್ ನಿಧನದ ಸುದ್ದಿ ನೋವಿನ ಸಂಗತಿಯಾಗಿದ್ದು ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಆ ದೇವರು ಕರುಣಿಸಲಿ’ ಎಂದುಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಟಿ.ಎಸ್. ನಾಗಾಭರಣ ಸಂತಾಪ ಸೂಚಿಸಿದ್ದಾರೆ.

ನಿಸಾರ್‌ ಅಹಮದ್‌ ಅವರ ನಿಧನಕ್ಕೆ ಟ್ವೀಟ್‌ ಮೂಲಕ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, 'ಹಿರಿಯ ಸಾಹಿತಿ ಕೆ ಎಸ್ ನಿಸಾರ್ ಅಹಮದ್ ಅವರ ನಿಧನ ದುಃಖ ತಂದಿದೆ. ಅವರು ಪ್ರಾಧ್ಯಾಪಕರಾಗಿ, ಭೂ ವಿಜ್ಞಾನಿಯಾಗಿಯೂ ಸೇವೆ ಸಲ್ಲಿಸಿದ್ದರು. ಸಂವೇದನಾಶೀಲ ಲೇಖಕರಾಗಿ, ಜನಪ್ರಿಯ ಕವಿಯಾಗಿ ಅವರು ಗುರುತಿಸಿಕೊಂಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು, ಅವರ ಕುಟುಂಬ ಸದಸ್ಯರು, ಅಭಿಮಾನಿಗಳಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ತಿಳಿಸಿದ್ದಾರೆ.

ಕವಿ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಿಬಾರದ ನಷ್ಟ ಎಂದು ತಿಳಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,'ಯಾವ ಪಂಥ-ಪಂಗಡಕ್ಕೆ ಕಟ್ಟಿಕೊಳ್ಳದೆ ಸ್ಚಚ್ಛಂದವಾಗಿ ಹಕ್ಕಿಯಂತೆ ಕಾವ್ಯಕಟ್ಟುತ್ತಾ‌ ಸರ್ವಜನ ಪ್ರಿಯರಾಗಿದ್ದ ನಿಸಾರ್ ಅಹ್ಮದ್ ಅವರ ಕಾಯ ಅಳಿದರೂ ಅವರ ಕಾವ್ಯದ ಮೂಲಕ ನಮ್ಮ ನೆನಪಲ್ಲಿ ಸದಾ ಜೀವಂತ. ನನ್ನ ಗೌರವಪೂರ್ಣ ಸಂತಾಪಗಳು' ಎಂದಿದ್ದಾರೆ.

ನಿತ್ಯೋತ್ಸವದ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು' ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಇವು ನಿಸಾರ್ ಅವರ ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ. ಇವರ ನಿಧನದಿಂದ ಬಹುಮುಖ ಪ್ರತಿಭೆಯ ಸಾಹಿತ್ಯ ಪ್ರಭೆ ಮುಸುಕಾದಂತಾಗಿದೆ' ಎಂದು ಕಂಬನಿ ಮಿಡಿದಿದ್ದಾರೆ.

ಕೆ.ಎಸ್ ನಿಸಾರ್ ಅಹಮದ್ ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಹೇಳಿರುವ ಕರ್ನಾಟಕ ಕಾಂಗ್ರೆಸ್‌ ಪಕ್ಷವು, 'ತಮ್ಮ ಭಾವಗೀತೆಗಳ ಮೂಲಕ ಕನ್ನಡಿಗರ ಮನೆಮಾತಾಗಿದ್ದ, 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ, ಹಿರಿಯ ಸಾಹಿತಿ, ನಿತ್ಯೋತ್ಸವದ ಕವಿ, ನಾಡೋಜ ಕೆ.ಎಸ್ ನಿಸಾರ್ ಅಹಮದ್ ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬವರ್ಗ, ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ' ಎಂದು ತಿಳಿಸಿದೆ.

ಸಾಹಿತ್ಯಲೋಕಕ್ಕೆ ನಿಸಾರ್‌ ಅಹಮದ್‌ ಅವರ ಕೊಡುಗೆ ಅಜರಾಮರ ಎಂದಿರುವ ನಟ ಪುನೀತ್‌ ರಾಜ್‌ಕುಮಾರ್‌, 'ನಿತ್ಯೋತ್ಸವ ಸಾಲುಗಳು ನೀಡಿದ ಕನ್ನಡದ ಮಹಾನ್ ಕವಿ ಪದ್ಮಶ್ರೀ ಕೆ. ಎಸ್. ನಿಸಾರ್ ಅಹಮದ್ ಸರ್ ಇನ್ನಿಲ್ಲ! ಸಾಹಿತ್ಯಲೋಕಕ್ಕೆ ಅವರ ಕೊಡುಗೆ ಅಜರಾಮರ!' ಎಂದು ಹೇಳಿದ್ದಾರೆ.

ನಿಸಾರ್ ಅಹಮದ್ ನಿಧನದಿಂದ ತೀವ್ರ ಆಘಾತವಾಗಿದೆ ಎಂದಿರುವ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ, 'ನಿತ್ಯೋತ್ಸವದ ಕವಿ, ಕನ್ನಡ ಕಾವ್ಯ ಜಗತ್ತಿಗೆ ನವೋಲ್ಲಾಸ ತಂದುಕೊಟ್ಟ ಉತ್ಸಾಹದ ಚಿಲುಮೆ ಪ್ರೊ. ಕೆ ಎಸ್ ನಿಸಾರ್ ಅಹಮದ್ ನಿಧನದಿಂದ ನನಗೆ ತೀವ್ರ ಆಘಾತವಾಗಿದೆ. ಅವರ ಕುಟುಂಬಕ್ಕೆ, ಸಾರಸ್ವತ ಲೋಕಕ್ಕೆ ಇವರ ಅಗಲಿಕೆಯನ್ನು ಭರಿಸುವ ಶಕ್ತಿ ದೊರೆಯಲಿ. ಪ್ರೊ. ನಿಸಾರರಿಗೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ!' ಎಂದಿದ್ದಾರೆ.

ನಿಸಾರ್ ಅಹಮದ್ ಅವರ ನಿಧನದ ಸುದ್ದಿ ನನಗೆ ಅತ್ಯಂತ ದುಃಖ ತಂದಿದೆ ಎಂದಿರುವ ಸಚಿವ ಸಿ ಟಿ ರವಿ, 'ಮನಸು ಗಾಂಧಿಬಜಾರು ಕವನ ಸಂಕಲನ, ಬೆಣ್ಣೆ ಕದ್ದ ನಮ್ಮ ಕೃಷ್ಣದಂತಹ ಕವನ ನಮಗೆ ಕೊಟ್ಟು, ಜೋಗದ ಸಿರಿ ಬೆಳಕಿನ ಮೂಲಕ ನಿತ್ಯೋತ್ಸವವನ್ನು ವರ್ಣಿಸಿದ ಶ್ರೇಷ್ಠ ಕವಿ ಕೆ.ಎಸ್ ನಿಸಾರ್ ಅಹಮದ್ ಅವರ ನಿಧನದ ಸುದ್ದಿ ನನಗೆ ಅತ್ಯಂತ ದುಃಖ ತಂದಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ,ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ' ಎಂದು ತಿಳಿಸಿದ್ದಾರೆ.

ನಿಸಾರ್ ಅಹಮದ್ ಅವರನ್ನು ಕಳೆದುಕೊಂಡಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ್‌ ಖರ್ಗೆ, '6 ದಶಕಗಳಿಂದ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮೇರು ಸಾಹಿತಿ, ಪ್ರಾಧ್ಯಾಪಕರು ಹಾಗೂ ನಿತ್ಯೋತ್ಸವ ಕವಿ ಕೆ.ಎಸ್ ನಿಸಾರ್ ಅಹಮದ್ ಅವರನ್ನು ಕಳೆದುಕೊಂಡಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ಹಿತೈಷಿಗಳು & ಕುಟುಂಬ ವರ್ಗಕ್ಕೆ ದೇವರು ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT