ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಂದಿನ ವರ್ಷದಿಂದ ಕಡ್ಡಾಯ ವರ್ಗಾವಣೆ ಇಲ್ಲ’

ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಸಚಿವ ಸುರೇಶ್‌ ಕುಮಾರ್ ಭರವಸೆ
Last Updated 28 ಸೆಪ್ಟೆಂಬರ್ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾಶಿಕ್ಷಕರ ಕಡ್ಡಾಯ ವರ್ಗಾವಣೆ ಎಂಬ ಪ್ರಕ್ರಿಯೆಯನ್ನೇ ಮುಂದಿನ ಸಾಲಿನಿಂದ ಸ್ಥಗಿತಗೊಳಿಸಲಾಗುವುದು, ಯಾವುದೇ ಶಿಕ್ಷಕರೂ ಆತಂಕಕ್ಕೆ ಒಳಗಾಗಬಾರದು ಎಂದು ಪ್ರಾಥಮಿಕಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಹುಬ್ಬಳ್ಳಿಯ ಆನಂದನಗರದ ಸರ್ಕಾರಿ ಶಾಲಾ ಶಿಕ್ಷಕ ಸುಭಾಷ್‌ತರಲಘಟ್ಟ ಎಂಬುವವರು ವರ್ಗಾವಣೆಗೆ ಹೆದರಿ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿರುವ ಅವರು, ಮುಂದಿನ ವರ್ಗಾವಣೆ ಅವಧಿಗೆ ಶಿಕ್ಷಕ‌ ಸ್ನೇಹಿಯಾದ, ಸರಳವಾದ ವರ್ಗಾವಣೆ ಪ್ರಕ್ರಿಯೆಯನ್ನು ಖಂಡಿತಾ ರೂಪಿಸಲಾಗುವುದು. ಈಗಾಗಲೇ ಈ ಕುರಿತು ಕರಡು ಮಸೂದೆ ರಚನೆಗೆ ಚಾಲನೆ‌ ನೀಡಲಾಗಿದೆ ಎಂದು ತಿಳಿಸಿದ್ದಾರೆ.

‘ಜವಾಬ್ದಾರಿಯುತವಾದ, ವಿವೇಕವಂತ ವ್ಯಕ್ತಿಗಳನ್ನು ರೂಪಿಸುವ ಅತ್ಯಂತ ಪವಿತ್ರ ವೃತ್ತಿ ತಮ್ಮದು ಎಂಬುದನ್ನು ಪ್ರತಿ ಶಿಕ್ಷಕ ಅರಿತು ಕೆಲಸ ಮಾಡಿದಲ್ಲಿ ನಿಜಾರ್ಥದಲ್ಲಿ ಸಮಾಜ ಸೇವೆ ಸಲ್ಲಿಸಲು ಸಾಧ್ಯ’ ಎಂದು ಅವರು ಹೇಳಿದ್ದಾರೆ.

ಬೇರೆಲ್ಲೂ ಇಲ್ಲ: ಬೇರೆ ಯಾವ ಇಲಾಖೆಯಲ್ಲೂ ಇಲ್ಲದ ಕಡ್ಡಾಯ ವರ್ಗಾವಣೆ ವ್ಯವಸ್ಥೆ ಇರುವುದು ಶಿಕ್ಷಣ ಇಲಾಖೆಯಲ್ಲಿ ಮಾತ್ರ. 2017ರಿಂದ ಇದು ಜಾರಿಗೆ ಬಂದಿದ್ದು, ಇದೇ ಕಾರಣಕ್ಕೆ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಕಾರ್ಯಗತಗೊಳ್ಳದೆ ಉಳಿದಿದೆ. ಈ ಬಾರಿ ಈಗಾಗಲೇ ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್ ಕೊನೆಗೊಂಡಿದ್ದು, ಎ ವಲಯದಲ್ಲಿ ಖಾಲಿಯಾಗುವ ಸ್ಥಾನಗಳು ಭರ್ತಿಯಾಗದೆ ಇದ್ದರೆ ಶಿಕ್ಷಣ ಗುಣಮಟ್ಟಕ್ಕೆ ಬಹಳ ದೊಡ್ಡ ಏಟು ಬೀಳುವ ಸಾಧ್ಯತೆ ಕಂಡುಬಂದಿದೆ.

‘ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಶಿಕ್ಷಕರ ಅನುಪಾತ 98:2ರಷ್ಟಿದೆ. ಅಂದರೆ ಕಡ್ಡಾಯ ವರ್ಗಾವಣೆ ಮಾಡಿದರೂ ಗ್ರಾಮೀಣ ಭಾಗದಲ್ಲಿನ ಎಲ್ಲರಿಗೂ ನಗರ ಪ್ರದೇಶಗಳಲ್ಲಿ ಕೆಲಸ ಮಾಡಲು ಸಾಧ್ಯವೇ ಇಲ್ಲ. 10 ವರ್ಷಕ್ಕಿಂತ ಅಧಿಕ ಸೇವೆ ಸಲ್ಲಿಸಿದವರು ತಮ್ಮ ನಿಯಂತ್ರಣಕ್ಕೆ ಸಿಗುವುದಿಲ್ಲ ಎಂಬ ದುರುದ್ದೇಶದಿಂದ ಕೆಲವು ಜನಪ್ರತಿನಿಧಿಗಳು ಸೇರಿಕೊಂಡು ಮಾಡಿದ ನಿಯಮ ಇದು. ಕಡ್ಡಾಯ ವರ್ಗಾವಣೆಯನ್ನು ತೆಗೆದುಹಾಕಿದರೆ ಶಿಕ್ಷಣ ಇಲಾಖೆಗೆ ಏನೂ ತೊಂದರೆ ಇಲ್ಲ. ಇದರಿಂದ ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡಿ ಶಿಕ್ಷಣದ ಗುಣಮಟ್ಟ ಹೆಚ್ಚುವುದು ಸಾಧ್ಯ’ ಎಂದು‍‍ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT